ಮಾತೃಪೂರ್ಣ ಯೋಜನೆ
ಸುದ್ಧಿಯಲ್ಲಿ ಏಕಿದೆ ? ಪೌಷ್ಟಿಕ ಆಹಾರ ಒದಗಿಸಿ ತಾಯಿ, ಮಗುವಿನ ಅಪೌಷ್ಟಿಕತೆ ನಿವಾರಿಸುವ ಉದ್ದೇಶದಿಂದ ರಾಜ್ಯದಲ್ಲಿ ಆರಂಭಗೊಂಡ ‘ಮಾತೃಪೂರ್ಣ’ ಯೋಜನೆ ಪೂರ್ಣ ಫಲ ನೀಡುವಲ್ಲಿ ವಿಫಲವಾಗಿದೆ.
ವಿಫಲವಾಗಲು ಕಾರಣ
- ರಾಜ್ಯದಲ್ಲಿ 61 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, ಅಂದಾಜು 25 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಟೆಂಡರ್ ಪ್ರಕ್ರಿಯೆಯಲ್ಲಿನ ಲೋಪದೋಷ, ಅಂಗನವಾಡಿ ಕೇಂದ್ರಗಳಲ್ಲಿನ ಮೂಲಸೌಕರ್ಯದ ಕೊರತೆ ಯೋಜನೆ ಹಳ್ಳಹಿಡಿಯಲು ಕಾರಣವಾಗಿದೆ.
ಗುರಿ ತಲುಪುವಲ್ಲಿ ವಿಫಲ
- 12 ಲಕ್ಷ ಗರ್ಭಿಣಿಯರ ಆರೋಗ್ಯ ಕಾಪಾಡುವ ಉದ್ದೇಶದಿಂದ ಮಾತೃಪೂರ್ಣ ಯೋಜನೆ ಆರಂಭಿಸಲಾಗಿದೆ. ಸರ್ಕಾರ 2017-18ನೇ ಸಾಲಿನಲ್ಲಿ ಯೋಜನೆಗೆ 302 ಕೋಟಿ ರೂ. ಮೀಸಲಿಟ್ಟಿತ್ತು.
- ಮಹಿಳೆ ಗರ್ಭಧರಿಸಿದ ದಿನದಿಂದ ಹೆರಿಗೆಯಾದ 6 ತಿಂಗಳವರೆಗೆ ಮೊಟ್ಟೆ ಅಥವಾ ಮೊಳಕೆಕಾಳು ಸಹಿತ ತಿಂಗಳಿಗೆ 25 ದಿನ ಊಟ ಒದಗಿಸಲಾಗುತ್ತದೆ. ಟೆಂಡರ್ ಪಡೆದವರು ಕಳಪೆ ಗುಣಮಟ್ಟದ ಅಕ್ಕಿ, ಬೇಳೆಕಾಳು, ಸಾಂಬಾರ ಪದಾರ್ಥ ಹಾಗೂ ತರಕಾರಿಯನ್ನು ಪೂರೈಸುತ್ತಿದ್ದಾರೆ. ಹೀಗಾಗಿ ನಿಗದಿತ ಗುರಿ ತಲುಪಲಾಗುತ್ತಿಲ್ಲ.
ವಂಚನೆ ಹೇಗೆ?
- ತಿಂಗಳಲ್ಲಿ 25 ದಿನ ಊಟ ನೀಡುವ ನಿಯಮವಿದ್ದರೂ 30 -31 ದಿನ ಲೆಕ್ಕ ನೀಡಿ ವಂಚನೆ
- ಕಳಪೆ ಗುಣಮಟ್ಟದ ಪದಾರ್ಥದ ಆಹಾರ ನೀಡಿ ಹಣ ಉಳಿಸಿಕೊಳ್ಳುವುದು
- ಶುದ್ಧ ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ ಕಲ್ಪಿಸದಿರುವುದು
- ಪ್ರತಿ ಊಟಕ್ಕೆ 21 ರೂ. ನಿಗದಿಪಡಿಸಿದ್ದರೂ ಅದಕ್ಕಿಂತ ಕಡಿಮೆ ದರದಲ್ಲಿ ಊಟ ಪೂರೈಕೆ
- ತಾಯಂದಿರ ಹೆಸರಿನಲ್ಲಿ ಹೊರಗಿನವರಿಗೆ ಊಟ ಮಾಡಲು ಅವಕಾಶ
- ಅಂಗನವಾಡಿ ಕೇಂದ್ರಕ್ಕೆ ಬರುವ ಕೆಲ ತಾಯಂದಿರು ಮನೆಗೂ ಊಟ ಒಯ್ಯುತ್ತಿದ್ದಾರೆ
ಸಮಸ್ಯೆ, ಸವಾಲು
- ತಾಯಂದಿರನ್ನು ಅಂಗನವಾಡಿಗೆ ಕರೆತರುವುದು ಸವಾಲು
- ಪ್ರತಿನಿತ್ಯ ಕಾರ್ಯಕರ್ತೆಯರೇ ಫೋನ್ ಮಾಡಿ ಖಚಿತಪಡಿಸಿಕೊಳ್ಳುವ ಪರಿಸ್ಥಿತಿ
- ಬಹುತೇಕ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಣೆ.
- ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತರೇ ಅಡುಗೆಗೆ ಸಹಾಯ ಮಾಡಬೇಕಾದ ದುಸ್ಥಿತಿ.
- ಟೆಂಡರ್ ಪಡೆದವರು ತಿಂಗಳಿಗೆ 2 ಬಾರಿ ಮೊಟ್ಟೆ, ತರಕಾರಿ ಪೂರೈಸಲು, ಶೇಖರಿಸಲು ಸಮಸ್ಯೆ
- ತಾಯಂದಿರು ಜತೆಗೆ ಬರುವ ಮೊದಲ ಮಗುವಿಗೂ ಮೊಟ್ಟೆ, ಊಟ ಕೇಳುತ್ತಿರುವುದು.
- ಲೆಕ್ಕ ತೋರಿಸಲು ಮನೆಗೆ ಹೋಗಿ, ತಾಯಂದಿರ ಸಹಿ ಪಡೆಯಬೇಕಾದ ಪರಿಸ್ಥಿತಿ.
ನಿರಾಸಕ್ತಿಗೆ ಕಾರಣಗಳೇನು?
- ಜನ ಏನೆಂದುಕೊಂಡಾರೆಂಬ ಮುಜುಗರದಿಂದ ಕೆಲ ತಾಯಂದಿರು ಬರುತ್ತಿಲ್ಲ
- ಅಂಗನವಾಡಿ ಕೇಂದ್ರಗಳಲ್ಲಿ ಸ್ಥಳಾವಕಾಶದ ಕೊರತೆ, ಗ್ರಾಮೀಣ ಪ್ರದೇಶದಲ್ಲಿ ದೂರದಲ್ಲಿರುವ ಅಂಗನವಾಡಿಗೆ ತೆರಳುವುದು ಕಷ್ಟ.
- ಕೇಂದ್ರ ಸರ್ಕಾರದ ಮಾತೃವಂದನ ಮಾದರಿ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವುದಿಲ್ಲ, ತರಕಾರಿ ಖರೀದಿಸಲು ಓರ್ವ ತಾಯಿಗೆ 2 ರೂ. ಮಾತ್ರ ಹಣ ಬಿಡುಗಡೆ.
ಡಿಡಿ ರೋಶಿನಿ ವಾಹಿನಿಗೆ ಚಾಲನೆ
ಸುದ್ಧಿಯಲ್ಲಿ ಏಕಿದೆ ? ಬಿಬಿಎಂಪಿ ಶಾಲಾಮಕ್ಕಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡಲು ಜಾರಿಗೆ ತರಲಾಗಿರುವ ‘ರೋಶಿನಿ’ ಯೋಜನೆ ಭಾಗವಾಗಿ ದೂರದರ್ಶನ ಹೊಸ ಕಲಿಕಾ ವಾಹಿನಿ ಪ್ರಸಾರಕ್ಕೆ ಚಾಲನೆ ನೀಡಿದೆ.
ಯಾವ ಸಂಸ್ಥೆಯ ಸಹಯೋಗ?
- ಮೈಕ್ರೋಸಾಫ್ಟ್ ಹಾಗೂ ಟೆಕ್ ಅವಾಂತ ಸಂಸ್ಥೆ ಸಹಯೋಗದಲ್ಲಿ ಬಿಬಿಎಂಪಿಯ ಎಲ್ಲ 156 ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ಸೆಟಲೈಟ್ ಶಿಕ್ಷಣ ನೀಡಲಾಗುತ್ತದೆ. ಜತೆಗೆ ಮನೆಯಲ್ಲಿ ಕುಳಿತು ಪಾಠ ಕೇಳುವ ವ್ಯವಸ್ಥೆಗಾಗಿ ದೂರದರ್ಶನ ಸಂಸ್ಥೆ ‘ಕಲಿಕೆಗೆ ಮಿತಿಯಿಲ್ಲ’ ಘೋಷವಾಕ್ಯದೊಂದಿಗೆ ರೋಶಿನಿ ಹೆಸರಿನಲ್ಲಿ ವಾಹಿನಿ ಆರಂಭಿಸಿದೆ.
ಯಾರಿಗಾಗಿ ಈ ವಾಹಿನಿ ?
- ಬಿಬಿಎಂಪಿ ಶಾಲಾ ಮಕ್ಕಳಿಗಷ್ಟೇ ಸೀಮಿತ: ನೂತನ ವಾಹಿನಿಯನ್ನು ಬಿಬಿಎಂಪಿ ಶಾಲಾ ಮಕ್ಕಳು, ಶಿಕ್ಷಕರು ವೀಕ್ಷಿಸಲಷ್ಟೇ ಸೀಮಿತಗೊಳಿಸಲಾಗುತ್ತಿದೆ. ಶಾಲೆಗಳಲ್ಲಿ ಅಳವಡಿಸುವ ಟಚ್ಸ್ಕ್ರೀನ್ ಸೌಲಭ್ಯದ ಟಿ.ವಿ. ಮತ್ತು ಮಕ್ಕಳಿಗೆ, ಶಿಕ್ಷಕರಿಗೆ ನೀಡಲಾಗುವ ಟ್ಯಾಬ್ನಲ್ಲಿ ವಾಹಿನಿ ಪ್ರಸಾರವಾಗುವಂತೆ ತಂತ್ರಾಂಶ ಅಳವಡಿಸಲಾಗುತ್ತಿದೆ. ಶಾಲೆಗೆ ಬರಲಾಗದ ಮಕ್ಕಳು ತಮಗೆ ನೀಡುವ ಟ್ಯಾಬ್ ಮೂಲಕವೇ ಪಾಠ ಕೇಳಬಹುದಾಗಿದೆ.
- ‘ಡಿಡಿ ರೋಶಿನಿ’ ವಾಹಿನಿಯಲ್ಲಿ ಮೂರು ಕ್ಲಾಸ್ಗಳು ನಡೆಯಲಿವೆ. ಬೆಳಗ್ಗೆ 6ರಿಂದ 10 ಗಂಟೆವರೆಗೆ ಪ್ರಿಪರೇಟರಿ ಪಠ್ಯ, ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಿತ್ಯದ ಪಾಠ ಹಾಗೂ ಸಂಜೆ 5ರಿಂದ ರಾತ್ರಿ 10ರವರೆಗೆ ಹಿಂದಿನ ತರಗತಿಗಳ ಮರುಪ್ರಸಾರ ಮಾಡಲಾಗುತ್ತದೆ. ನಿತ್ಯ 18 ಗಂಟೆ ವಾಹಿನಿ ಮಕ್ಕಳ ಕಲಿಕೆಗೆ ವಿವಿಧ ವಿಷಯಗಳನ್ನು ಪ್ರಸಾರ ಮಾಡಲಿದೆ.
- ಸದ್ಯ 1ನೇ ತರಗತಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಾಹಿನಿಗೆ ಚಾಲನೆ ನೀಡಲಾಗಿದೆ. ಏಪ್ರಿಲ್ ವೇಳೆಗೆ 1ರಿಂದ 10ನೇ ತರಗತಿ ಹಾಗೂ ಪ್ರಥಮ, ದ್ವಿತೀಯ ಪಿಯು ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ವಾಹಿನಿ ಪ್ರಸಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.
- ಶಾಲೆ ಮತ್ತು ಕಾಲೇಜುಗಳಲ್ಲಿ ಅಳವಡಿಸಲಾಗುವ ಮೊಬೈಲ್ ಮಾದರಿಯಲ್ಲಿ ಕೆಲಸ ಮಾಡುವ 64 ಇಂಚ್ನ ಟಚ್ ಸ್ಕ್ರೀನ್ ಟಿವಿಯಲ್ಲಿ ಸ್ಕೈಪ್ ಮೂಲಕ ಪಾಠ ಹೇಳಿಕೊಡಲಾಗುತ್ತದೆ.
ಅಭಿವೃದ್ಧಿಯಲ್ಲಿ ಬೆಂಗಳೂರಿಗೆ 3ನೇ ಸ್ಥಾನ
ಸುದ್ಧಿಯಲ್ಲಿ ಏಕಿದೆ ? ಮುಂದಿನ ಒಂದೂವರೆ ದಶಕದಲ್ಲಿ ಅತಿವೇಗವಾಗಿ ಅಭಿವೃದ್ಧಿ ಸಾಧಿಸುವ ವಿಶ್ವದ ನಗರಗಳ ಪೈಕಿ ಅಗ್ರ 10 ಸ್ಥಾನಗಳು ಭಾರತದ ಪಾಲಾಗಿವೆ. ಇದರಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ.
- ಆಕ್ಸ್ಫರ್ಡ್ ಎಕಾನಮಿಕ್ಸ್ ಈ ಪಟ್ಟಿ ಸಿದ್ಧಪಡಿಸಿದೆ.
ವರದಿಯಲ್ಲಿ ಏನಿದೆ ?
- ವಿಶ್ವದ ಇತರ ನಗರಗಳಿಗಿಂತ ಸೂರತ್ ಗರಿಷ್ಠ ಅಭಿವೃದ್ಧಿ ಕಾಣಲಿದೆ. ಈ ನಗರ ವಾರ್ಷಿಕ ಶೇ.17 ವೃದ್ಧಿ ಸಾಧಿಸಲಿದೆ ಎಂದು ವರದಿ ತಿಳಿಸಿದೆ.
- ವಿಶ್ವ ವಿಖ್ಯಾತ ತಾಜ್ ಮಹಲ್ ಇರುವ ಆಗ್ರಾ ಶೇ.58 ವೃದ್ಧಿಯೊಂದಿಗೆ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
- ಭಾರತದ ಸಿಲಿಕಾನ್ ಸಿಟಿ ಹಾಗೂ ಉದ್ಯಾನನಗರಿ ಬೆಂಗಳೂರು ಜಾಗತಿಕ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದೆ. 15 ವರ್ಷಗಳಲ್ಲಿ ಶೇ.5 ವೃದ್ಧಿ ಸಾಧಿಸಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಶೇ. 8.47 ವೃದ್ಧಿಯೊಂದಿಗೆ ಹೈದರಾ ಬಾದ್, ನಾಗ್ಪುರ (ಶೇ.8.41), ತಿರುಪ್ಪೂರ್ (ಶೇ.8. 36), ರಾಜ್ಕೋಟ್ (ಶೇ.8.33), ತಿರುಚಿರಾಪಳ್ಳಿ (ಶೇ.8.29), ಚೆನ್ನೈ (ಶೇ.8.17) ಮತ್ತು ವಿಜಯವಾಡಾ (ಶೇ.8.16) ನಂತರದ ಸ್ಥಾನ ಪಡೆದಿವೆ.
- ಜಿಡಿಪಿ ಹೆಚ್ಚು: ವಿಶ್ವದ ಅತಿದೊಡ್ಡ ಮೆಟ್ರೋಪಾಲಿಟನ್ ನಗರಗಳಿಗೆ ಹೋಲಿಸಿದರೆ ಭಾರತೀಯ ನಗರಗಳ ಆರ್ಥಿಕ ಸಾಧನೆ ತುಂಬಾ ಕಡಿಮೆ. ಆದರೆ, ಸರಾಸರಿ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ವಿಷಯದಲ್ಲಿ ಉತ್ತರ ಅಮೆರಿಕ ಮತ್ತು ಯುರೋಪ್ ಖಂಡದ ನಗರಗಳ ಒಟ್ಟಾರೆ ಸರಾಸರಿ ಜಿಡಿಪಿ ಮಟ್ಟವನ್ನು ಏಷ್ಯಾದ ನಗರಗಳು ಮೀರಿಸಲಿವೆ. 2027ರ ವೇಳೆಗೆ ಇದು ಸಾಧ್ಯವಾಗಲಿದೆ.
- ವಿಶ್ವದ ಅತಿದೊಡ್ಡ ನಗರಗಳ ಸಾಲಿಗೆ ಸೇರುವ ನ್ಯೂಯಾರ್ಕ್, ಟೋಕಿಯೋ, ಲಾಸ್ ಏಂಜಲೀಸ್ ಮತ್ತು ಲಂಡನ್ 2035ರಲ್ಲೂ ತಮ್ಮ ಸ್ಥಾನ ಕಾಯ್ದುಕೊಳ್ಳಲಿವೆ.
- ಆದರೆ, ಅಂದಾಜು 20 ದಶಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಚೀನಾದ ಶಾಂಘೈ ಮತ್ತು ಬೀಜಿಂಗ್, ಈ ಪಟ್ಟಿಯಲ್ಲಿರುವ ಪ್ಯಾರಿಸ್ ಮತ್ತು ಚಿಕಾಗೋ ನಗರಗಳನ್ನು ಕ್ರಮವಾಗಿ ಹಿಂದಿಕ್ಕಲಿವೆ.
- ಆಫ್ರಿಕಾ ಖಂಡದ ಪೈಕಿ ತಾಂಜೇನಿಯಾದ ಡರ್ ಎಸ್ ಸಲಾಂ ನಗರ ಅತಿವೇಗವಾಗಿ ಅಭಿವೃದ್ಧಿ ಹೊಂದುವ ನಗರವೆನಿಸಿದೆ.
ರಾಜಧಾನಿಯಲ್ಲಿ ಶೇ.30 ರಷ್ಟು ವಾಯುಮಾಲಿನ್ಯ ಇಳಿಕೆ ಗುರಿ
ಸುದ್ಧಿಯಲ್ಲಿ ಏಕಿದೆ ? ಮಿತಿ ಮೀರಿರುವ ನಗರದ ವಾಯುಮಾಲಿನ್ಯವನ್ನು 2024ರ ವೇಳೆಗೆ ಶೇ.30 ರಷ್ಟು ಇಳಿಸಬೇಕು ಎಂದು ಕೇಂದ್ರ ಪರಿಸರ ಸಚಿವಾಲಯ ಡೆಡ್ಲೈನ್ ನೀಡಿದೆ.
- ಈ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಗರದಲ್ಲಿ ಹೆಚ್ಚು ಮಾಲಿನ್ಯಕ್ಕೆ ಕಾರಣವಾಗುವ ಮೆಟ್ರೊ ಹಾಗೂ ಇತರೆ ಕಟ್ಟಡಗಳ ನಿರ್ಮಾಣ ಕಾಮಗಾರಿಗಳ ಮೇಲೆ ತೀವ್ರ ನಿಗಾ ಇಡಲು ಹಾಗೂ ವಾಹನಗಳ ಮಾಲಿನ್ಯ ತಗ್ಗಿಸಲು 15 ವರ್ಷ ಮೇಲ್ಪಟ್ಟ ಹಳೆ ವಾಹನಗಳ ಸಂಚಾರ ನಿಷೇಧಿಸುವ ಪ್ರಸ್ತಾವನೆ ಮರು ಪರಿಶೀಲಿಸುವಂತೆ ಸರಕಾರವನ್ನು ಕೋರಲು ಸಿದ್ಧತೆ ನಡೆಸಿದೆ. ಈ ಸಂಬಂಧ ಕ್ರಿಯಾ ಯೋಜನೆ ರೂಪಿಸಲು ಮಂಡಳಿ ಮುಂದಾಗಿದೆ.
ಕಾರಣಗಳು
- ನಿಮ್ಹಾನ್ಸ್, ವಿಕ್ಟೋರಿಯ ಆಸ್ಪತ್ರೆ, ನಗರ ರೈಲು ನಿಲ್ದಾಣ ಸೇರಿದಂತೆ 21 ವಾಯುಗುಣಮಟ್ಟ ತಪಾಸಣಾ ಕೇಂದ್ರಗಳಲ್ಲಿ ಜನರ ಶ್ವಾಸಕೋಶಕ್ಕೆ ಹಾನಿಯಾಗುವ ಮಟ್ಟಿಗೆ ವಾಯುಮಾಲಿನ್ಯ ದಾಖಲಾಗುತ್ತಿದೆ.
- ಒಟ್ಟು ವಾಯುಮಾಲಿನ್ಯದಲ್ಲಿ ಶೇ.40 ರಷ್ಟು ಮಾಲಿನ್ಯ ವಾಹನಗಳ ಹೊಗೆಯಿಂದ ಆಗುತ್ತಿದೆ.
- ಶೇ.20 ಕ್ಕೂ ಅಧಿಕ ಮಾಲಿನ್ಯ ಕಾಮಗಾರಿಯಿಂದ ಎದ್ದೇಳುವ ಧೂಳಿನಿಂದಾಗುತ್ತಿದೆ.
- ವಾಹನಗಳಿಂದಾಗುವ ಮಾಲಿನ್ಯ ಕಡಿಮೆ ಮಾಡಲು ಬೇರೆ ಸಂಸ್ಥೆಗಳ ಸಹಕಾರವೂ ಬೇಕಿದೆ.
ಹಿನ್ನಲೆ
- ಮೆಟ್ರೊದ ಬೈಯ್ಯಪ್ಪನಹಳ್ಳಿ-ವೈಟ್ಫೀಲ್ಡ್, ಆರ್.ವಿ.ರಸ್ತೆ-ಬೊಮ್ಮನಹಳ್ಳಿ, ನಾಯಂಡಹಳ್ಳಿ-ಕೆಂಗೇರಿ ಮಾರ್ಗಗಳ ನಿರ್ಮಾಣಕ್ಕೆ ನಡೆಯುತ್ತಿರುವ ಕಾಮಗಾರಿಯಿಂದ ಧೂಳು ಏಳುತ್ತಿರುವುದರ ಕುರಿತು ಸಾರ್ವಜನಿಕರು ದೂರು ನೀಡಿದ್ದರು. ಈಗ ಪ್ರತಿ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿರುವಾಗಲೇ ನೀರು ಹಾಯಿಸುವುದು, ರಸ್ತೆ ನಿರ್ವಹಣೆ, ಬ್ಯಾರಿಕೇಡ್ ಅಳವಡಿಕೆ ಮೊದಲಾದ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ.
ಹಳೆಯ ವಾಹನಗಳ ನಿಷೇಧ
- ನಗರದಲ್ಲಿ 06 ಲಕ್ಷ ವಾಹನಗಳು ನೋಂದಣಿಯಾಗಿವೆ. ಹೊರಭಾಗಗಳಿಂದ ಸಾವಿರಾರು ವಾಹನಗಳು ನಿತ್ಯ ಬರುತ್ತಿವೆ. ಈ ವಾಹನಗಳು ಬಿಡುವ ಹೊಗೆ ನಿಯಂತ್ರಿಸಲು ಮಂಡಳಿಯು ಸಾರಿಗೆ ಇಲಾಖೆಯೊಂದಿಗೆ ಕಾರ್ಯನಿರ್ವಹಿಸಬೇಕಿದೆ. ಒಟ್ಟು ವಾಹನಗಳಲ್ಲಿ ಶೇ.22 ರಷ್ಟು ವಾಹನಗಳು 15 ವರ್ಷ ಹಳೆಯದಾಗಿವೆ. 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನ ಮತ್ತು 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನ ನಿಷೇಧಿಸಬೇಕೆಂಬ ಪ್ರಸ್ತಾವವನ್ನು ಮಂಡಳಿಯು ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ.
- ಕ್ರಿಯಾಯೋಜನೆ: ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ವಿಶೇಷ ಸಮಿತಿ ರಚನೆಯಾಗಿದೆ. ಇತ್ತೀಚೆಗೆ ನಡೆದ ಸಮಿತಿ ಸಭೆಯಲ್ಲಿ ಕ್ರಿಯಾಯೋಜನೆ ರೂಪಿಸಲು ಸೂಚನೆ ದೊರೆತಿದೆ .
- ಎಷ್ಟಿದೆ ಮಾಲಿನ್ಯ?: ಏರ್ ಕ್ವಾಲಿಟಿ ಇಂಡೆಕ್ಸ್ ಮಟ್ಟ 50 ರೊಳಗಿದ್ದರೆ ವಾಯುಮಾಲಿನ್ಯದ ಪರಿಣಾಮ ಅತಿ ಕಡಿಮೆಯಾಗಿರುತ್ತದೆ. 50ಕ್ಕಿಂತ ಹೆಚ್ಚಿದ್ದರೆ ಶ್ವಾಸಕೋಶಕ್ಕೆ ಹಾನಿಯಾಗುತ್ತದೆ. ಆದರೆ ಒಂದೂ ಕೇಂದ್ರದಲ್ಲಿ ಎಕ್ಯೂಐ ಮಟ್ಟ 50ಕ್ಕಿಂತ ಕಡಿಮೆ ದಾಖಲಾಗುತ್ತಿಲ್ಲ. ಉದಾಹರಣೆಗೆ, ಕಳೆದ ತಿಂಗಳು ಆಮ್ಕೊ ಬ್ಯಾಟರೀಸ್ ಕೇಂದ್ರದಲ್ಲಿ 103 ಎಕ್ಯೂಐ, ವೈಟ್ಫೀಲ್ಡ್ನ ಐಟಿಪಿಎಲ್ ಕೇಂದ್ರದಲ್ಲಿ 104 ಎಕ್ಯೂಐ, ಯಲಹಂಕದ ರೈಲ್ ವೀಲ್ ಫ್ಯಾಕ್ಟರಿಯಲ್ಲಿ 97 ಎಕ್ಯೂಐ ದಾಖಲಾಗಿದೆ. ಈ ಪ್ರಮಾಣವನ್ನು ಶೇ.30 ರಷ್ಟು ಕೆಳಕ್ಕಿಳಿಸುವುದು ದೊಡ್ಡ ಸವಾಲೇ ಆಗಿದೆ.
ದಕ್ಷಿಣ ರಾಜ್ಯಗಳಲ್ಲೇ ಕರ್ನಾಟಕದಲ್ಲಿ ಅಧಿಕ ಮಾಲಿನ್ಯ
- ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಅತ್ಯಧಿಕ ಮಾಲಿನ್ಯ ಇದೆ. ಜತೆಗೆ ದೇಶದಲ್ಲಿ ಪ್ರತಿ 1,00,000 ಮಂದಿಯಲ್ಲಿ 95 ಮಂದಿ ವಾಯುಮಾಲಿನ್ಯ ಸಂಬಂಧಿ ರೋಗಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ ಎಂದು ವರದಿ ಹೇಳಿದೆ. ರಾಜ್ಯದ ನಗರಗಳ ಮಾಲಿನ್ಯವು ಶ್ವಾಸಕೋಶ ಮತ್ತು ಉಸಿರಾಟ ಸಂಬಂಧಿ ಕಾಯಿಲೆಗೆ ಕಾರಣವಾಗುತ್ತಿದ್ದು, ನಿಧಾನಗತಿಯ ವಿಷವಾಗಿ ಪರಿಣಮಿಸಿದೆ.
ಮಾಲಿನ್ಯ ನಿಯಂತ್ರಣ ಮಂಡಳಿ ಧೂಳು ನಿಯಂತ್ರಣಕ್ಕೆ ಕೈಗೊಂಡ ಕ್ರಮ
- ಕಟ್ಟಡ, ಮೆಟ್ರೊ ಕಾಮಗಾರಿಯಾಗುವಾಗ ಧೂಳು ಏಳದಂತೆ ಆಗಾಗ್ಗೆ ನೀರು ಸಿಂಪಡಣೆ
- ಮೆಟ್ರೊ ಕಾಮಗಾರಿ ವೇಳೆ ಸುತ್ತಲಿನ ರಸ್ತೆಯನ್ನು ಸರಿಯಾಗಿ ನಿರ್ವಹಣೆ ಮಾಡುವುದು
- ಮೆಟ್ರೊ ಕಾಮಗಾರಿಯ ಪ್ರದೇಶಗಳಲ್ಲಿ ವಾಯುಗುಣಮಟ್ಟ ತಪಾಸಣಾ ಯಂತ್ರದ ಅಳವಡಿಕೆ
- ಮಣ್ಣು, ಮರಳನ್ನು ಲಾರಿಯಲ್ಲಿ ಒಯ್ಯುವಾಗ ಪ್ಲಾಸ್ಟಿಕ್ ಶೀಟ್ ಮುಚ್ಚುವುದು
- ವಾಹನಗಳ ಹೊಗೆ ನಿಯಂತ್ರಣಕ್ಕೆ ಚರ್ಚೆಯಾಗಿರುವ ಕ್ರಮ
- 15 ವರ್ಷಕ್ಕಿಂತ ಹಳೆಯದಾದ ವಾಹನಗಳ ಸಂಚಾರ ನಿಷೇಧ
- ವಾಹನಗಳ ವಾಯಗುಣಮಟ್ಟ ತಪಾಸಣೆ.
ರಾವಿ ನದಿಗೆ ಅಣೆಕಟ್ಟು
ಸುದ್ಧಿಯಲ್ಲಿ ಏಕಿದೆ ? ಪಾಕಿಸ್ತಾನಕ್ಕೆ ಹೆಚ್ಚುವರಿಯಾಗಿ ಹರಿದುಹೋಗುತ್ತಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಪಂಜಾಬ್ನಲ್ಲಿ ರಾವಿ ನದಿಗೆ ಅಣೆಕಟ್ಟೆ ನಿರ್ಮಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಉಪಯೋಗಗಳು
- ರಾವಿ ನದಿಗೆ ಶಹಾಪುರ್ಖಂಡಿ ಅಣೆಕಟ್ಟು ಕಟ್ಟುವುದರಿಂದ ಪಂಜಾಬ್ ಮತ್ತು ಜಮ್ಮು-ಕಾಶ್ಮೀರ ರಾಜ್ಯಗಳು ನೀರನ್ನು ಬಳಕೆ ಮಾಡಿಕೊಳ್ಳಬಹುದು.
- ಈ ಯೋಜನೆಯಿಂದ ಪಂಜಾಬ್ನ 5 ಸಾವಿರ ಹೆಕ್ಟೇರ್ ಮತ್ತು ಜಮ್ಮು-ಕಾಶ್ಮೀರದ 32,173 ಹೆಕ್ಟೇರ್ ಜಮೀನಿಗೆ ನೀರು ಒದಗಿಸಬಹುದು.
- ಜತೆಗೆ 206 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು.
- ಪಂಜಾಬ್ ಸರ್ಕಾರ ಅಣೆಕಟ್ಟೆ ನಿರ್ಮಿಸಲಿದ್ದು, ಜೂನ್ 2022ರ ವೇಳೆಗೆ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಹಿನ್ನಲೆ
- 1960ರಲ್ಲಿ ಸಹಿ ಹಾಕಲಾಗಿರುವ ಸಿಂಧೂ ಜಲ ಒಪ್ಪಂದದ ಪ್ರಕಾರ ಸಿಂಧೂ ಕೊಳ್ಳದ ನದಿಗಳ ಪೈಕಿ ಪೂರ್ವ ಭಾಗದ ಮೂರು ನದಿಗಳಾದ ಬಿಯಾಸ್, ರಾವಿ ಮತ್ತು ಸಟ್ಲೆಜ್ ನದಿಗಳ ಮೇಲೆ ಭಾರತ ನಿಯಂತ್ರಣ ಹೊಂದಿದೆ.
- ಪಶ್ಚಿಮದ ಮೂರು ನದಿಗಳಾದ ಸಿಂಧೂ, ಚೇನಾಬ್ ಮತ್ತು ಜೇಲಂ ನದಿಗಳ ಮೇಲೆ ಪಾಕಿಸ್ತಾನ ನಿಯಂತ್ರಣ ಹೊಂದಿದೆ.
ರಾವಿ ನದಿ
- ರಾವಿಯು ವಾಯುವ್ಯ ಭಾರತ ಮತ್ತು ಪೂರ್ವ ಪಾಕಿಸ್ತಾನವನ್ನು ಹಾದುಹೋಗುವ ಟ್ರಾನ್ಸ್ಬೌಂಡ್ರಿ ನದಿಯಾಗಿದೆ. ಇದು ಪಂಜಾಬ್ ಪ್ರಾಂತ್ಯದಲ್ಲಿನ ಸಿಂಧುದ ಆರು ನದಿಗಳಲ್ಲಿ ಒಂದಾಗಿದೆ. ರವಿಯ ನೀರನ್ನು ಭಾರತಕ್ಕೆ ಸಿಂಧೂ ಜಲ ಒಪ್ಪಂದದಡಿಯಲ್ಲಿ ಹಂಚಲಾಗುತ್ತದೆ.
- ಇದು ಸಿಂಧೂ ನದಿಯ ಬೇಸಿನ್ ನ ಅವಿಭಾಜ್ಯ ಅಂಗವಾಗಿದೆ ಮತ್ತು ಸಿಂಧೂ ಜಲಾನಯನ ಪ್ರದೇಶದ ಹೆಡ್ವಾಟರ್ಗಳನ್ನು ರೂಪಿಸುತ್ತದೆ. ರವಿ ನದಿ ನೀರಿನಲ್ಲಿ ಪಾಕಿಸ್ತಾನದ ಸಿಂಧೂ ನದಿಯ ಮೂಲಕ ಅರೇಬಿಯನ್ ಸಮುದ್ರಕ್ಕೆ (ಹಿಂದೂ ಮಹಾಸಾಗರ) ಹರಿಯುತ್ತದೆ. ಹಿಮಾಚಲ ಪ್ರದೇಶದ ಕಾಂಗ್ರಾದ ಬಾರಾ ಭಾಂಗಲ್ನಲ್ಲಿ ಈ ನದಿಯು ಹುಟ್ಟಿಕೊಂಡಿದೆ









