“09 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಬೆಳ್ಳಂದೂರು ಕೆರೆ

1.

ಸುದ್ಧಿಯಲ್ಲಿ ಏಕಿದೆ ? ನೊರೆಕಾಟದ ಮೂಲಕ ಸದಾ ಸುದ್ದಿಯಾಗುವ ಬೆಳ್ಳಂದೂರು ಕೆರೆಯಲ್ಲಿ ನೀರಿನ ಪ್ರಮಾಣವೇ ಕಡಿಮೆ ಆಗುತ್ತಿದ್ದು, ಕೆರೆ ಬತ್ತುವ ಆತಂಕ ಸ್ಥಳೀಯರಲ್ಲಿ ತಲೆದೋರಿದೆ. ಆದರೆ, ಈ ಬಗ್ಗೆ ತಜ್ಞರಿಂದ ಹಲವು ವಿಶ್ಲೇಷಣೆಗಳು ವ್ಯಕ್ತವಾಗಿವೆ.

 • ಕೆರೆಯಲ್ಲಿ ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ರಾಸಾಯನಿಕ ಮಿಶ್ರಿತ ಕಪ್ಪು ನೀರು ಕಾಣಿಸಿದ್ದು ಬಿಟ್ಟರೆ ಬಹುಪಾಲು ಬರಡು ಭೂಮಿ ಕಾಣಿಸುತ್ತಿದೆ. ಕಳೆದ 2 ದಶಕಗಳಲ್ಲಿ ಇಂತಹ ಚಿತ್ರಣ ಕಂಡಿರಲಿಲ್ಲ
 • ಕೋಲಾರ-ಚಿಕ್ಕಬಳ್ಳಾಪುರಕ್ಕೆ ನೀರು: ನಗರದಲ್ಲಿ ಪ್ರತಿದಿನ 1,500 ದಶಲಕ್ಷ ಲೀಟರ್ ತ್ಯಾಜ್ಯ ನೀರು ಉತ್ಪತ್ತಿ ಆಗುತ್ತಿದ್ದು, ಈ ಪೈಕಿ ಶೇ.40 ತ್ಯಾಜ್ಯನೀರು ಬೆಳ್ಳಂದೂರು ಕೆರೆಗೆ ಹರಿದುಬರುವ ಅಂದಾಜಿದೆ. ಆದರೆ ಇತ್ತೀಚೆಗೆ ಕೆರೆಗೆ ಒಳಹರಿವು ಕಡಿಮೆ ಆಗಿದೆ.
 • ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗೆ ನಗರದ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಹರಿಸುತ್ತಿರುವುದರಿಂದ ಬೆಳ್ಳಂದೂರು ಕೆರೆಗೆ ಒಳಹರಿವು ಕಡಿಮೆ ಆಗಿರಬಹುದು ಎಂಬ ಅಂದಾಜು ವ್ಯಕ್ತವಾಗಿದೆ. ಆದರೆ ನೈಸರ್ಗಿಕವಾಗಿಯೇ ಬೆಳ್ಳಂದೂರು ಕೆರೆಯ ಒಳಹರಿವು ಕಡಿಮೆ ಆಗಿದ್ದಲ್ಲಿ ಗಂಭೀರವಾಗಿ ಯೋಚಿಸಬೇಕಾಗುತ್ತದೆ ಎಂಬುದು ತಜ್ಞರ ವಿಶ್ಲೇಷಣೆ.

ಪುನಶ್ಚೇತನಕ್ಕೆ ಸಕಾಲ

 • ನಗರದ ದೊಡ್ಡ ಕೆರೆಯಾಗಿರುವ (900 ಎಕರೆ) ಬೆಳ್ಳಂದೂರು ಕೆರೆಯಲ್ಲಿ ಸಂಗ್ರಹಗೊಂಡಿರುವ ನೀರನ್ನು ಹೇಗೆ ಹೊರಹಾಕುವುದು ಎಂಬುದು ಅಧಿಕಾರಿಗಳ ಪ್ರಶ್ನೆ ಆಗಿತ್ತಲ್ಲದೆ, ತಜ್ಞರಿಗೂ ಈ ವಿಚಾರ ಸವಾಲಾಗಿ ಕಾಡಿತ್ತು.
 • ಇದೀಗ ಏಕಾಏಕಿ ನೀರಿನ ಪ್ರಮಾಣ ಕಡಿಮೆ ಆಗುತ್ತಿರುವುದರಿಂದ ಸರ್ಕಾರ ತಕ್ಷಣವೇ ಕೆರೆಯ ಅಧ್ಯಯನ ನಡೆಸಬೇಕು.
 • ಕೆರೆಯಲ್ಲಿನ ನೀರಿನ ಪ್ರಮಾಣ ನೈಜವಾಗಿಯೂ ಕಡಿಮೆಗೊಂಡಿದ್ದಲ್ಲಿ ತಕ್ಷಣವೇ ಅನುದಾನ ಒದಗಿಸಿ ಕೆರೆಯ ಹೂಳು ಎತ್ತಬೇಕೆಂಬುದು ತಜ್ಞರ ಸಲಹೆಯಾಗಿದೆ.
 • ಸ್ಥಳೀಯರು ಕೇವಲ ಅಲ್ಲಿನ ಚಿತ್ರಣ ಕಂಡು ಹೇಳುತ್ತಿದ್ದಾರೆ. ಕೆರೆಯಲ್ಲಿ 30 ಅಡಿಗಳವರೆಗೆ ಹೂಳು ತುಂಬಿರುವ ಅಂದಾಜಿದೆ. ಹೀಗಾಗಿ ಅಲ್ಲಿ ನಡೆಯುವುದಕ್ಕೆ ಸಾಧ್ಯವಿಲ್ಲ. ಕೇವಲ ಮೇಲ್ಮೈಯಲ್ಲಿ ನೀರು ಕಂಡು ಬಂದಿಲ್ಲವಾದರೆ ಅದನ್ನು ಬತ್ತಿದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಸಂಪೂರ್ಣ ಅಧ್ಯಯನ ಮಾಡಿದಾಗ ಮಾತ್ರ ಕೆರೆಯ ನೈಜ ಚಿತ್ರಣ ತಿಳಿದುಬರುತ್ತದೆ. ಅಲ್ಲಿಯವರೆಗೆ ಅದನ್ನು ವಿಶ್ಲೇಷಿಸಲು ಸಾಧ್ಯವಿಲ್ಲ ಎನ್ನುವುದು ಫ್ರೆಂಡ್ಸ್ ಆಫ್ ಲೇಕ್ಸ್​ನ ಮುಖ್ಯಸ್ಥ ರಾಮ್್ರಸಾದ್ ಅಭಿಪ್ರಾಯ.

ಉಚಿತ ಕಾನೂನು ಸೇವೆ

2.

ಸುದ್ಧಿಯಲ್ಲಿ ಏಕಿದೆ ? ಉಚಿತ ಕಾನೂನು ಸೇವೆಗಳು ಯಾರಿಗೆ ಸಿಗುತ್ತವೆ, ಹೇಗೆ ಸಿಗುತ್ತವೆ ಎಂಬ ಬಗ್ಗೆ ಮಾಹಿತಿ ಕೊರತೆಯಿಂದಾಗಿ ಕಾನೂನು ಸೇವಾ ಪ್ರಾಧಿಕಾರದ ಉದ್ದೇಶಗಳು ನಿರೀಕ್ಷಿತ ಮಟ್ಟದಲ್ಲಿ ಈಡೇರುತ್ತಿಲ್ಲ ಎಂಬುದನ್ನು ಮನಗಂಡ ಸುಪ್ರೀಂಕೋರ್ಟ್, ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕಾನೂನು ಸೇವಾ ದಿನ ಆಚರಿಸಲು ನಿರ್ಧರಿಸಿತು.

 • ಸಮಾಜದ ದುರ್ಬಲ ವರ್ಗದವರಿಗೆ ಉಚಿತ ಕಾನೂನು ಸೇವೆಗಳನ್ನು ಒದಗಿಸುವ ಹಾಗೂ ಉಚಿತ ಸೇವೆಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯ ನಿರ್ವಹಿಸುತ್ತಿದೆ.

ಕಾನೂನು ಸೇವಾ ದಿನಾಚರಣೆ ಉದ್ದೇಶ

 • 1995ರಿಂದ ಪ್ರತಿ ವರ್ಷ ನ. 9ರಂದು ಕಾನೂನು ಸೇವಾ ದಿನ ಆಚರಿಸಲಾಗುತ್ತಿದ್ದು, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಅಧೀನದಲ್ಲಿ ಬರುವ ಎಲ್ಲ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳು ಮತ್ತದರ ಅಧೀನದ ಎಲ್ಲ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ದೇಶಾದ್ಯಂತ ಹಲವು ಕಾನೂನು ಸಾಕ್ಷರತೆಯ ಶಿಬಿರಗಳನ್ನು ಆಯೋಜಿಸಲಾಗುತ್ತದೆ.
 • ಪ್ರಾಧಿಕಾರದ ವತಿಯಿಂದ ಸಿಗಬಹುದಾದ ಉಚಿತ ಕಾನೂನು ಸೇವೆಗಳು, ಮತ್ತದರ ಲಾಭಗಳು, ದುರ್ಬಲ ವರ್ಗದವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಕಾನೂನು ಸೇವಾ ದಿನಾಚರಣೆಯ ಪ್ರಮುಖ ಉದ್ದೇಶ. ಈ ಕಾರ್ಯಕ್ರಮಗಳಲ್ಲಿ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳೂ ಪಾಲ್ಗೊಳ್ಳುತ್ತವೆ.

ಪ್ರಾಧಿಕಾರದ ಕಾರ್ಯವಿಧಾನ

 • ಆರ್ಥಿಕವಾಗಿ ಹಿಂದುಳಿದವರು, ಪರಿಶಿಷ್ಟ ವರ್ಗಗಳು, ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ಅಂಗವಿಕಲರು, ನೈಸರ್ಗಿಕ ವಿಕೋಪಕ್ಕೆ ಒಳಗಾದವರು ಸೇರಿ ಸಮಾಜದ ದುರ್ಬಲ ವರ್ಗಗಳಿಗೆ ಅಗತ್ಯ ಕಾನೂನು ನೆರವು ನೀಡುವುದು ಹಾಗೂ ಉಚಿತ ಕಾನೂನು ಸೇವೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೇ ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶವಾಗಿದ್ದು, ಇಲ್ಲಿ ದೊರೆಯುವ ಕಾನೂನು ಸೇವೆಗಳು ಸಂಪೂರ್ಣ ಉಚಿತವಾಗಿರಲಿವೆ.
 • ಇದಲ್ಲದೆ ಕೊಲೆ, ಅತ್ಯಾಚಾರ, ಮಾನವ ಕಳ್ಳಸಾಗಣೆ, ಆಸಿಡ್ ದಾಳಿಯಂಥ ಅಪರಾಧ ಕೃತ್ಯಗಳ ಸಂತ್ರಸ್ತರಿಗೆ ಸಂತ್ರಸ್ತ ಪರಿಹಾರ ಯೋಜನೆ ಪ್ರಕಾರ ಶೀಘ್ರ ಪರಿಹಾರ ಒದಗಿಸುವ ದಿಸೆಯಲ್ಲೂ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯೋನ್ಮುಖವಾಗಿದೆ. ಸಂತ್ರಸ್ತ ಪರಿಹಾರ ಯೋಜನೆಗೆ ರಾಜ್ಯ ಸರ್ಕಾರ ಪ್ರತಿವರ್ಷ ಹಣ ಬಿಡುಗಡೆ ಮಾಡುತ್ತದೆ.

ಸಂತ್ರಸ್ತರಿಗೆ ವರವಾದ ಪರಿಹಾರ ಯೋಜನೆ

 • ಅಪರಾಧ ಕೃತ್ಯಗಳಲ್ಲಿ ಸಂತ್ರಸ್ತರಾದವರಿಗೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ 2012ರಿಂದ ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ ಜಾರಿಗೆ ತಂದಿದೆ. ಅಪರಾಧ ಪ್ರಕರಣಗಳ ಸಂತ್ರಸ್ತರಿಗೆ ಶೀಘ್ರ ಪರಿಹಾರ ಕಲ್ಪಿಸುವ ಜತೆಗೆ ಅವರಲ್ಲಿ ನೈತಿಕ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರಲಾಗಿದ್ದು, ವರ್ಷದಿಂದ ವರ್ಷಕ್ಕೆ ಪರಿಹಾರ ಕೋರಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಯೋಜನೆಯ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಲು ಮುಂದಾಗಿರುವ ಕೆಎಸ್​ಎಲ್​ಎಸ್​ಎ, ಕ್ರಿಮಿನಲ್ ಪ್ರಕರಣದಲ್ಲಿ ದೂರು ನೀಡಲು ಬರುವ ಸಂತ್ರಸ್ತರಿಗೆ ಪರಿಹಾರ ಯೋಜನೆ ಕುರಿತು ಸೂಕ್ತ ಮಾಹಿತಿ ನೀಡುವಂತೆ ಎಲ್ಲ ಪೊಲೀಸ್ ಠಾಣೆಗಳಿಗೆ ಸೂಚಿಸಿದೆ.

ಯಾರಿಗೆ ಉಚಿತ ಕಾನೂನು ಸೇವೆ?

 • ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ, ಮಹಿಳೆಯರು, ಮಕ್ಕಳು, ಕೂಲಿ ಕಾರ್ವಿುಕರು, ಅಂಗವಿಕಲರು, ಮಾನಸಿಕ ಅಸ್ವಸ್ಥರು, ಭೂಕಂಪ, ಪ್ರವಾಹದಂಥ ನೈಸರ್ಗಿಕ ವಿಕೋಪಗಳ ಸಂತ್ರಸ್ತರು, ಗುಂಪು ಘರ್ಷಣೆ, ಜನಾಂಗೀಯ ಗಲಭೆಗಳಲ್ಲಿ ಗಾಯಗೊಂಡವರು, ಮಾನವ ಕಳ್ಳಸಾಗಣೆ ಹಾಗೂ ವೇಶ್ಯಾವಾಟಿಕೆಗೆ ಬಲಿಯಾದವರು, ಆರ್ಥಿಕವಾಗಿ ಹಿಂದುಳಿದವರು ಸೇರಿ ಸಮಾಜದ ಎಲ್ಲ ದುರ್ಬಲ ವರ್ಗದವರಿಗೆ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಉಚಿತ ಕಾನೂನು ನೆರವು ಹಾಗೂ ಸೇವೆಗಳು ದೊರೆಯುತ್ತವೆ.

ಲೋಕ ಅದಾಲತ್

 • ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಶೀಘ್ರ ಇತ್ಯರ್ಥ ಪಡಿಸಲೆಂದೇ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಲೋಕ ಅದಾಲತ್ (ಜನತಾ ನ್ಯಾಯಾಲಯ) ಆಯೋಜಿಸಲಾಗುತ್ತದೆ.
 • ಅಪರಾಧ ಪ್ರಕರಣಗಳು, ಸಿವಿಲ್ ವ್ಯಾಜ್ಯಗಳು, ಮೋಟಾರು ಅಪಘಾತ ಪರಿಹಾರ ಪ್ರಕರಣಗಳು, ಬ್ಯಾಂಕ್ ವ್ಯಾಜ್ಯಗಳು, ವಿಮೆ, ಕೌಟುಂಬಿಕ ಪ್ರಕರಣಗಳು ಸೇರಿ ಹಲವು ಪ್ರಕರಣಗಳಲ್ಲಿ ಎರಡೂ ಕಡೆಯವರನ್ನು ಕರೆಸಿ ರಾಜಿ ಸಂಧಾನ ನಡೆಸಿ ಇತ್ಯರ್ಥಪಡಿಸಲಾಗುತ್ತದೆ. ಇದರಿಂದ ನ್ಯಾಯಾಲಯಗಳ ಸಮಯದ ಜತೆಗೆ ಸಾರ್ವಜನಿಕರ ಹಣವೂ ಉಳಿತಾಯವಾಗಲಿದೆ.

ರಾಜ್ಯದ ಮೀನಿಗೆ ಗೋವಾ ನಿರ್ಬಂಧ

3.

ಸುದ್ಧಿಯಲ್ಲಿ ಏಕಿದೆ ? ಉಡುಪಿ ಸಹಿತ ರಾಜ್ಯದ ಮೀನಿಗೆ ಗೋವಾ ಸರ್ಕಾರ ನಿರ್ಬಂಧ ಹೇರಿದ್ದು, ಮತ್ಸೋದ್ಯಮ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ.

ಹಿನ್ನಲೆ

 • ಫಾರ್ಮಲಿನ್ ಮಿಶ್ರಣ ಆಗಿಲ್ಲ ಎಂಬ ಬಗ್ಗೆ ಆಹಾರ ಸುರಕ್ಷತಾ ಅಧಿಕಾರಿಗಳ ಪ್ರಮಾಣ ಪತ್ರ ಹಾಜರುಪಡಿಸುವುದು ಮತ್ತು ಮೀನು ಸಾಗಾಟ ಲಾರಿಗಳಿಂದ ತ್ಯಾಜ್ಯ ನೀರನ್ನು ರಸ್ತೆಗೆ ಬಿಡಬಾರದು ಎಂಬುದನ್ನು ಕಡ್ಡಾಯ ಮಾಡಿರುವುದರಿಂದ ಒಂದು ವಾರದಿಂದ ಗೋವಾಕ್ಕೆ ಮೀನು ಸಾಗಣೆ ಸಂಪೂರ್ಣ ಸ್ಥಗಿತಗೊಂಡಿದೆ.
 • ಕಳೆದ ಮುಂಗಾರಿನಲ್ಲಿ ಕೇರಳದಿಂದ ಬರುತ್ತಿದ್ದ ಮೀನು ಕೆಡದಿರುವಂತೆ ಫಾರ್ಮಲಿನ್ ವಿಷಯುಕ್ತ ರಾಸಾಯನಿಕ ಬಳಸಲಾಗುತ್ತಿತ್ತು ಎಂಬ ಕಾರಣಕ್ಕೆ ಅಲ್ಲಿನ ಮೀನಿನ ಮೇಲೆ ನಿಷೇಧ ಹೇರಲಾಗಿತ್ತು. ಈಗ ಕರ್ನಾಟಕದಲ್ಲೂ ಫಾರ್ಮಲಿನ್ ಬಳಸುತ್ತಾರೆ ಎಂದು ಮೀನು ಪೂರೈಕೆಗೆ ನಿರ್ಬಂಧ ವಿಧಿಸಲಾಗಿದೆ.
 • ಮಲ್ಪೆ ಬಂದರಿನಿಂದ ಪ್ರತಿದಿನವೂ 6ರಿಂದ 7 ಟನ್‌ಗಳಷ್ಟು ಮೀನುಗಳು 15ರಿಂದ 20 ಲಾರಿಗಳಲ್ಲಿ ಗೋವಾಕ್ಕೆ ಸಾಗಾಟವಾಗುತ್ತಿತ್ತು. ಆದರೆ, ಒಂದು ವಾರದಿಂದ ಗೋವಾದ ಮಜಲಿ ಚೆಕ್‌ಪೋಸ್ಟ್‌ನಲ್ಲಿ ಲಾರಿಗಳನ್ನು ತಡೆಯಲಾಗುತ್ತಿದ್ದು, ಮೀನುಗಾರಿಕೆಗೆ ದೊಡ್ಡ ಹೊಡೆತ ಬಿದ್ದಿದೆ. ಮಂಗಳೂರಿನಿಂದ ಹೆಚ್ಚಾಗಿ ಕೇರಳ, ತಮಿಳುನಾಡು, ಬೆಂಗಳೂರು ಸಹಿತ ಇತರೆಡೆ ಮೀನು ಪೂರೈಕೆಯಾಗುತ್ತದೆ. ಅಪರೂಪಕ್ಕಷ್ಟೇ ಗೋವಾಕ್ಕೆ ಮೀನು ಸಾಗಿಸಲಾಗುತ್ತದೆ. ಆದರೆ, ಮಲ್ಪೆ ಸಹಿತ ಉಡುಪಿ ಜಿಲ್ಲೆಯಿಂದ ಹೆಚ್ಚಿನ ಪ್ರಮಾಣದ ಮೀನು ಗೋವಾಕ್ಕೆ ಪೂರೈಕೆಯಾಗುತ್ತಿತ್ತು. ಗೋವಾಕ್ಕೆ ಪೂರೈಕೆ ಸ್ಥಗಿತಗೊಂಡಿದ್ದರಿಂದ ಇತರ ಕಡೆ ಅದನ್ನು ಪೂರೈಸುವಂತೆಯೂ ಇಲ್ಲ.

ಪರಿಣಾಮಗಳು

 • ನಿಗದಿಗಿಂತ ಹೆಚ್ಚು ಮೀನು ಸರಬರಾಜು ಮಾಡಿದರೆ ನಿರೀಕ್ಷಿತ ಮೌಲ್ಯ ಸಿಗುವುದಿಲ್ಲ.
 • ಸ್ಥಳೀಯ ಮಾರುಕಟ್ಟೆಯಲ್ಲೂ ದರ ಕುಸಿಯುವುದರಿಂದ ಇದು ನೇರವಾಗಿ ಮೀನುಗಾರರ ಮೇಲೆ ಪರಿಣಾಮ ಬೀಳುತ್ತದೆ.
 • ಈ ನಿರ್ಬಂಧದಿಂದ ಸ್ಥಳೀಯ ಮಾರುಕಟ್ಟೆಗೆ ಮೀನುಗಳ ಪೂರೈಕೆ ಹೆಚ್ಚಾಗಿದ್ದು, ಬೆಲೆ ಗಣನೀಯವಾಗಿ ಕುಸಿದಿದೆ ಎಂದು ಮೀನುಗಾರಿಕಾ ಸಂಘಟನೆಗಳು ತಿಳಿಸಿವೆ.

ಪ್ರಮಾಣ ಪತ್ರ ಸಮಸ್ಯೆ ಏನು?

 • ಆಹಾರ ಸುರಕ್ಷತಾ ಅಧಿಕಾರಿಗಳಿಂದ ಫಾರ್ಮಲಿನ್ ಇಲ್ಲ ಎಂಬ ಪತ್ರ ಪ್ರಮಾಣ ಪತ್ರವನ್ನು ಗೋವಾ ಸರ್ಕಾರ ಕಡ್ಡಾಯಗೊಳಿಸಿರುವುದು ಸಮಸ್ಯೆ. ಪ್ರತಿ ಲಾರಿಗಳ ಪ್ರತಿ ಬಾಕ್ಸ್‌ಗಳಿಂದ ಮೀನು ಮಾದರಿ ಪಡೆದು, ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸಿದ ಬಳಿಕ ಬಾಕ್ಸ್‌ಗೆ ಸೀಲ್ ಮಾಡಿ ಅಧಿಕಾರಿಗಳಿಂದ ಪ್ರಮಾಣಪತ್ರ ಪಡೆದುಕೊಳ್ಳಬೇಕು. ಇದು ಸುದೀರ್ಘ ಪ್ರಕ್ರಿಯೆಯಾಗಿದ್ದು, ಎರಡು-ಮೂರು ದಿನ ಬೇಕಾಗುತ್ತದೆ. ಇದರ ವೆಚ್ಚವೂ ಅಧಿಕ. ಪ್ರಾಯೋಗಿಕವಾಗಿ ಕಷ್ಟ ಎಂದು ಮೀನುಗಾರ ಸಂಘಟನೆಗಳು ಹೇಳಿವೆ.

ಫಾರ್ಮಾಲಿನ್

 • ಫಾರ್ಮಾಲ್ಡಿಹೈಡ್ನ ನೀರಿನೊಂದಿಗೆ 30-45% ಜಲೀಯ ದ್ರಾವಣವು ಫಾರ್ಮಾಲಿನ್ ಆಗಿದೆ.
 • ಹೈಡ್ರೋಜನ್, ಆಮ್ಲಜನಕ ಮತ್ತು ಕಾರ್ಬನ್ನಿಂದ ತಯಾರಿಸಿದ ಸರಳ ರಾಸಾಯನಿಕ ಸಂಯುಕ್ತವಾಗಿದೆ ಫಾರ್ಮಾಲ್ಡಿಹೈಡ್.
 • ಎಲ್ಲಾ ಜೀವಿ ರೂಪಗಳು – ಬ್ಯಾಕ್ಟೀರಿಯಾ, ಸಸ್ಯಗಳು, ಮೀನು, ಪ್ರಾಣಿಗಳು ಮತ್ತು ಮಾನವರು – ಜೀವಕೋಶದ ಚಯಾಪಚಯದ ಭಾಗವಾಗಿ ಫಾರ್ಮಾಲ್ಡಿಹೈಡ್ ಅನ್ನು ನೈಸರ್ಗಿಕವಾಗಿ ಉತ್ಪತ್ತಿ ಮಾಡುತ್ತವೆ.
 • ಫಾರ್ಮಾಲ್ಡಿಹೈಡ್ ಬಹುಶಃ ಅದರ ಸಂರಕ್ಷಕ ಮತ್ತು ಬ್ಯಾಕ್ಟೀರಿಯಾ-ವಿರೋಧಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ, ಆದರೆ ಫಾರ್ಮಾಲ್ಡಿಹೈಡ್-ಆಧಾರಿತ ರಸಾಯನಶಾಸ್ತ್ರವನ್ನು ಮೌಲ್ಯ-ವರ್ಧಿತ ಉತ್ಪನ್ನಗಳ ವ್ಯಾಪಕ ಶ್ರೇಣಿಯನ್ನು ಮಾಡಲು ಬಳಸಲಾಗುತ್ತದೆ.
 • ಫಾರ್ಮಾಲಿನ್ ಕಣ್ಣು, ಗಂಟಲು, ಚರ್ಮ ಮತ್ತು ಹೊಟ್ಟೆಯಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತದೆ. ದೀರ್ಘಾವಧಿಯಲ್ಲಿ, ಮುಂದುವರಿದ ಮಾನ್ಯತೆ ಮೂತ್ರಪಿಂಡಗಳು, ಪಿತ್ತಜನಕಾಂಗಕ್ಕೆ ಹಾನಿಯಾಗುತ್ತದೆ ಮತ್ತು ಕ್ಯಾನ್ಸರ್ಗಳಿಗೆ ಕಾರಣವಾಗಬಹುದು.
 • ಮೀನುಗಾರಿಕಾ ಉದ್ಯಮದಲ್ಲಿ, ಫಾರ್ಮಾಲಿನ್ ಅಥವಾ ಫಾರ್ಮಾಲ್ಡಿಹೈಡ್ ಮೀನುಗಳಲ್ಲಿ ಸಿಂಪಡಿಸಲ್ಪಡುತ್ತದೆ ಅಥವಾ ಮೀನುಗಳಿಗೆ ಚುಚ್ಚಲಾಗುತ್ತದೆ ಅಥವಾ ಮೀನುಗಳನ್ನು ದ್ರಾವಣದಲ್ಲಿ ಅದ್ದಿಲಾಗುತ್ತದೆ. ಇದು ದೀರ್ಘಕಾಲದವರೆಗೆ ಮೀನುಗಳನ್ನು ತಾಜಾವಾಗಿಡಲು ಸಹಾಯ ಮಾಡುತ್ತದೆ.

ಫಾರ್ಮಾಲಿನ್ ಅನ್ನು ಏಕೆ ಬಳಸುವುದು?

 • ಸಾಮಾನ್ಯವಾಗಿ, ಮೀನನ್ನು ಖರೀದಿಸುವ ಜನರು ತಾಜಾತನಕ್ಕಾಗಿ ಕಿವಿರುಗಳನ್ನು ಪರೀಕ್ಷಿಸುತ್ತಾರೆ, ಕೆಂಪು ಬಣ್ಣದ್ದಾಗಿದ್ದರೆ ಫಾರ್ಮಾಲಿನ್ ಅನ್ನು ಬಳಸಿದಾಗ ತಾಜಾತನವನ್ನು ಸೂಚಿಸುತ್ತದೆ.
 • ಕೆಲವು ಸಂದರ್ಭಗಳಲ್ಲಿ, ಮೀನುಗಾರರು ಕೆಂಪು ಬಣ್ಣವನ್ನು ಉಳಿಸಿಕೊಳ್ಳಲು ಕುಂಕುಮವನ್ನು ಸಹ ಅನ್ವಯಿಸುತ್ತಾರೆ.

ಮಂಗಳೂರು ವಿಮಾನ ನಿಲ್ದಾಣ 

4.

ಸುದ್ಧಿಯಲ್ಲಿ ಏಕಿದೆ ? ನಿರ್ವಹಣೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಇನ್ನಷ್ಟು ಪರಿಣಾಮಕಾರಿ ರೀತಿಯಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲು ಮಂಗಳೂರು ಸೇರಿದಂತೆ ದೇಶದ ಆರು ವಿಮಾನ ನಿಲ್ದಾಣಗಳನ್ನು ಖಾಸಗಿ ಸಹಭಾಗಿತ್ವಕ್ಕೆ ಒಪ್ಪಿಸಲು ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ.

 • ಅಹಮದಾಬಾದ್‌, ಜೈಪುರ, ಲಖನೌ, ಗುವಾಹಟಿ, ತಿರುವನಂತಪುರ ಮತ್ತು ಮಂಗಳೂರು ವಿಮಾನ ನಿಲ್ದಾಣಗಳನ್ನು ಖಾಸಗಿ ಸಹಭಾಗಿತ್ವಕ್ಕೆ ಒಪ್ಪಿಸಲು ತಾತ್ವಿಕ ಸಮ್ಮತಿ ನೀಡಲಾಗಿದೆ ಎಂದರು.
 • ಈ ವಿಮಾನ ನಿಲ್ದಾಣಗಳ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿ ಹೊಣೆಗಾರಿಕೆಯನ್ನು ಸಾರ್ವಜನಿಕ -ಖಾಸಗಿ ಸಹಭಾಗಿತ್ವ(ಪಿಪಿಪಿ)ಕ್ಕೆ ಒಪ್ಪಿಸುವುದು ಸೂಕ್ತ ಎನ್ನುವ ಸಲಹೆಯನ್ನು ಪಿಪಿಪಿ ಅನುಮೋದನಾ ಸಮಿತಿ ನೀಡಿತ್ತು. ಇದರ ಕೂಲಂಕಷ ಪರಿಶೀಲನೆಯ ಬಳಿಕ ಈ ವಿಷಯ ಸಂಪುಟದ ಮುಂದೆ ಇಡಲಾಗಿತ್ತು.
 • ಸಿಇಒ, ಕಾರ್ಯದರ್ಶಿ ಸಹಿತ ನೀತಿ ಆಯೋಗ, ವಿಮಾನಯಾನ ಸಚಿವಾಲಯ ಕಾರ್ಯದರ್ಶಿ, ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ, ಖರ್ಚು ವೆಚ್ಚಗಳ ಇಲಾಖೆ ಮುಖ್ಯಸ್ಥರನ್ನು ಒಳಗೊಂಡ ಆರ್ಥಿಕ ಸಬಲೀಕರಣ ತಂಡ ಈ ಕುರಿತು ಹಲವು ತಿಂಗಳುಗಳ ಪರಿಶೀಲನೆ ನಡೆಸಿತ್ತು.
 • ಈಗಿರುವ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸುವ ಅಗತ್ಯ ಇದೆ. ಎಲ್ಲ ವಿಮಾನ ನಿಲ್ದಾಣಗಳ ಸವಲತ್ತು ವಿಶ್ವದರ್ಜೆಯ ಮಟ್ಟಕ್ಕೆ ಬಡ್ತಿ ಪಡೆಯಬೇಕಿದೆ. ಇದಕ್ಕೆ ಸರಕಾರದ ಜತೆಗೆ ಖಾಸಗಿ ಕಂಪನಿಗಳು ಕೈಜೋಡಿಸಿದರೆ ಆಧುನೀಕರಣದ ಕೆಲಸ ಸುಲಭವಾಗುತ್ತದೆ ಎನ್ನುವ ಅಭಿಪ್ರಾಯವನ್ನು ತಜ್ಞರ ತಂಡ ವ್ಯಕ್ತಪಡಿಸಿತ್ತು.

ವಿಶ್ವದರ್ಜೆಗೆ ಏರಲಿದೆ ಏರ್‌ಪೋರ್ಟ್‌

 • ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಗಳಲ್ಲಿ ಪಿಪಿಪಿಯು ಸಾರ್ವಜನಿಕ ವಲಯದಲ್ಲಿ ಅಗತ್ಯವಿರುವ ಹೂಡಿಕೆಗಳನ್ನು ಹೆಚ್ಚಿಸುವುದರ ಜತೆಗೆ ಸೇವಾ ವಿತರಣೆ, ಪರಿಣತಿ, ಉದ್ಯಮ ಮತ್ತು ವೃತ್ತಿಪರತೆಗಳಲ್ಲಿ ದಕ್ಷ ತೆ ತರುತ್ತದೆ.
 • ಬೆಂಗಳೂರು, ದಿಲ್ಲಿ ಸೇರಿದಂತೆ ದೇಶದ ಹಲವು ವಿಮಾನ ನಿಲ್ದಾಣಗಳು ಪಿಪಿಪಿ ಮಾದರಿಯಲ್ಲಿ ನಡೆಯುತ್ತಿದ್ದು, ಇವುಗಳ ಕಾರ್ಯನಿರ್ವಹಣೆ ವಿಶ್ವದರ್ಜೆಯ ಮಟ್ಟಕ್ಕೆ ಏರಿಕೆಯಾಗಿದೆ. ಇದು ಉಳಿದ ನಿಲ್ದಾಣಗಳಿಗೂ ಲಭಿಸಬೇಕು ಎನ್ನುವುದು ಸರಕಾರದ ಉದ್ದೇಶ.
 • ಸೇವಾ ಗುಣಮಟ್ಟದ ದೃಷ್ಟಿಯಿಂದ ದೇಶದ ಪಿಪಿಪಿ ಮಾದರಿಯ ಭಾರತದ ವಿಮಾನ ನಿಲ್ದಾಣಗಳು ವಿಶ್ವ ರಾರ‍ಯಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿವೆ. ಸಾರ್ವಜನಿಕ ಒಡೆತನದ ನಿಲ್ದಾಣಗಳು ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಲ್ಲ.

ಪಿಪಿಪಿ ಎಂದರೇನು?

 • ಸಾರ್ವಜನಿಕ ಖಾಸಗಿ ಸಹಭಾಗಿತ್ವವೆಂದರೆ ಒಂದು ಸರಕಾರ / ಕಾನೂನುಬದ್ಧ ಘಟಕದ / ಸರ್ಕಾರಿ ಸ್ವಾಮ್ಯದ ಅಸ್ತಿತ್ವದ ಒಂದು ಬದಿಯ ಮತ್ತು ಇತರರ ಖಾಸಗಿ ವಲಯದ ಘಟಕದ ನಡುವಿನ ವ್ಯವಸ್ಥೆ.
 • ಸಾರ್ವಜನಿಕ ವಲಯಗಳು ಅಥವಾ ಸಾರ್ವಜನಿಕ ಸೇವೆಗಳ ನಿಬಂಧನೆಗೆ ಸಂಬಂಧಿಸಿದಂತೆ, ಖಾಸಗಿ ಬಂಡವಾಳ ಕ್ಷೇತ್ರದಿಂದ ಬಂಡವಾಳ ಹೂಡಿಕೆ ಮಾಡುವಿಕೆ ಮತ್ತು / ಅಥವಾ ನಿರ್ವಹಣೆಯ ಮೂಲಕ ನಿರ್ದಿಷ್ಟ ಸಮಯದವರೆಗೆ ಇದನ್ನು ಅನೇಕವೇಳೆ ಮಾಡಲಾಗುತ್ತದೆ.
 • ಖಾಸಗಿ ವಲಯ ಮತ್ತು ಸಾರ್ವಜನಿಕ ಅಸ್ತಿತ್ವದ ನಡುವಿನ ಅಪಾಯದ ನಿಯೋಜನೆ ಇದೆ.
 • ತೆರೆದ ಸ್ಪರ್ಧಾತ್ಮಕ ಹರಾಜಿನ ಆಧಾರದ ಮೇಲೆ ಆಯ್ಕೆ ಮಾಡಲಾದ ಖಾಸಗಿ ಘಟಕದ ಪ್ರಕಾರ, ಸಾರ್ವಜನಿಕ ಸಂಬಂಧ ಅಥವಾ ಅದರ ಪ್ರತಿನಿಧಿಯಿಂದ ಅಳೆಯಬಹುದಾದ ನಿರ್ದಿಷ್ಟ ಮತ್ತು ಪೂರ್ವ ನಿರ್ಧಾರಿತ ಕಾರ್ಯಕ್ಷಮತೆಯ ಮಾನದಂಡಗಳಿಗೆ (ಅಥವಾ ಬೆಂಚ್ಮಾರ್ಕ್) ಅನುಗುಣವಾದ ಕಾರ್ಯಕ್ಷಮತೆ ಲಿಂಕ್ ಪಾವತಿಗಳನ್ನು ಪಡೆಯುತ್ತದೆ.

ಸಾಮಾನ್ಯವಾಗಿ ಪಿಪಿಪಿ ಗುಣಲಕ್ಷಣಗಳು ಯಾವುವು?

 • ಖಾಸಗಿ ವಲಯವು ಯೋಜನೆಯನ್ನು ನಿರ್ವಹಿಸಲು ಅಥವಾ ಜವಾಬ್ದಾರಿ ನಿರ್ವಹಿಸಲು ವಹಿಸುತ್ತದೆ ಮತ್ತು ಸಂಬಂಧಿತ ಯೋಜನಾ ಅಪಾಯಗಳ ಗಣನೀಯ ಭಾಗವನ್ನು ತೆಗೆದುಕೊಳ್ಳುತ್ತದೆ
 • ಯೋಜನೆಯ ಪಾಲುದಾರ ಜೀವನದಲ್ಲಿ ಖಾಸಗಿ ಪಾಲುದಾರರ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಒಪ್ಪಂದದ ನಿಯಮಗಳನ್ನು ಜಾರಿಗೊಳಿಸುವುದು ಸಾರ್ವಜನಿಕ ವಲಯದಲ್ಲಿನ ಪಾತ್ರವಾಗಿದೆ
 • ಯೋಜನೆಯಿಂದ ಒದಗಿಸಲಾದ ಸೇವೆಗಳ ಬಳಕೆಗೆ ಸಂಬಂಧಿಸಿದ ಆರೋಪಗಳಿಂದ ಖಾಸಗಿ ವಲಯದ ವೆಚ್ಚಗಳನ್ನು ಸಂಪೂರ್ಣ ಅಥವಾ ಭಾಗಶಃ ಮರುಪಡೆಯಬಹುದು, ಮತ್ತು ಸಾರ್ವಜನಿಕ ವಲಯದ ಪಾವತಿಗಳಿಂದ ಮರುಪಡೆಯಬಹುದು
 • ಸಾರ್ವಜನಿಕ ವಲಯದ ಪಾವತಿಗಳು ಒಪ್ಪಂದದ ರೂಪದಲ್ಲಿ ಕಾರ್ಯಕ್ಷಮತೆಯ ಮಾನದಂಡಗಳನ್ನು ಆಧರಿಸಿವೆ
 • ಸಾಮಾನ್ಯವಾಗಿ ಖಾಸಗಿ ವಲಯವು ಯೋಜನೆಯ ಬಹುಪಾಲು ಬಂಡವಾಳ ವೆಚ್ಚವನ್ನು ನೀಡುತ್ತದೆ

ಪಿಪಿಪಿ ಯ ಅನುಕೂಲಗಳು ಯಾವುವು?

 • ಖಾಸಗಿ ವಲಯ ಹಣಕಾಸುಗೆ ಪ್ರವೇಶ
 • ಖಾಸಗಿ ವಲಯ ಕೌಶಲ್ಯಗಳನ್ನು ಬಳಸುವುದರಿಂದ ಮತ್ತು ಅಪಾಯವನ್ನು ಖಾಸಗಿ ವಲಯಕ್ಕೆ ವರ್ಗಾಯಿಸುವುದರಿಂದ ದಕ್ಷತೆಯ ಅನುಕೂಲಗಳು
 • ಸಂಭಾವ್ಯವಾಗಿ ಹೆಚ್ಚಿದ ಪಾರದರ್ಶಕತೆ
 • ಕಾರ್ಯ ನಿರ್ವಹಣೆಯ ಜೀವಿತಾವಧಿಯಲ್ಲಿ ಮೂಲಭೂತ ಸೌಕರ್ಯಗಳ ನಿರ್ವಹಣೆ ಸೇರಿದಂತೆ ಸೇವೆಯ ವಿತರಣೆಯನ್ನು ಮಾತ್ರ ಆಸ್ತಿ ರಚಿಸುವುದರಿಂದ ಗಮನವನ್ನು ಹಿಗ್ಗಿಸುವುದು.
 • ಈ ವಿಶಾಲವಾದ ಗಮನವು ಪೂರ್ಣ ಜೀವನ ಚಕ್ರ ವೆಚ್ಚವನ್ನು ಕಡಿಮೆಗೊಳಿಸಲು ಪ್ರೋತ್ಸಾಹವನ್ನು ಸೃಷ್ಟಿಸುತ್ತದೆ (ಅಂದರೆ, ನಿರ್ಮಾಣ ವೆಚ್ಚಗಳು ಮತ್ತು ಕಾರ್ಯಾಚರಣೆಯ ವೆಚ್ಚಗಳು)

ವೇಟ್ಟನ್‌ಕುಡಿ ಅಭಯಾರಣ್ಯ 

5.

ಸುದ್ಧಿಯಲ್ಲಿ ಏಕಿದೆ ? ಪರಿಸರ ಮಾಲಿನ್ಯ ನಿಯಂತ್ರಿಸಲು ಸುಪ್ರೀಂ ಕೋರ್ಟ್ ಪಟಾಕಿ ಮೇಲೆ ಹಲವಾರು ನಿರ್ಬಂಧಗಳನ್ನು ಹೇರಿದೆ. ಆದರೆ ತಮಿಳುನಾಡಿನಲ್ಲಿರುವ ಪಕ್ಷಿಧಾಮದ ಬಳಿಯ ಕೆಲವು ಗ್ರಾಮಗಳು ವಲಸೆ ಹಕ್ಕಿಗಳ ಮೇಲೆ ದುಷ್ಪರಿಣಾಮ ಬೀರದಿರಲೆಂದು ಸ್ವಯಂ ನಿರ್ಬಂಧವನ್ನು ಹೇರಿಕೊಂಡಿವೆ.

ವೇಟ್ಟನ್‌ಕುಡಿ ಅಭಯಾರಣ್ಯ ಎಲ್ಲಿದೆ ?

 • ಶಿವಗಂಗಾ ಜಿಲ್ಲಯ ತಿರುಪತ್ತೂರು ಸಮೀಪವಿರುವ ವೇಟ್ಟನ್‌ಕುಡಿ ಅಭಯಾರಣ್ಯ ಪ್ರತಿವರ್ಷ ವಿವಿಧ ಬಗೆಯ ವಲಸೆ ಹಕ್ಕಿಗಳಿಗೆ ಆತಿಥ್ಯ ನೀಡುತ್ತದೆ.
 • ಇದು ಪೆರಿಯಾ ಕೊಲ್ಲುಕುಡಿ ಪಟ್ಟಿ, ಚಿನ್ನ ಕೊಲ್ಲುಕುಡಿ ಪಟ್ಟಿ ಮತ್ತು ವೆಟ್ಟಂಗುಗಿಡಿ ಪ್ಯಾಟಿ ನೀರಾವರಿ ಟ್ಯಾಂಕ್ಗಳನ್ನು ಒಳಗೊಂಡಿದೆ
 • ಬರದಿಂದಾಗಿ ಜಲಮೂಲಗಳು ಬತ್ತುತ್ತಿರುವುದರಿಂದ ಇತ್ತೀಚಿನ ವರ್ಷಗಳಲ್ಲಿ ಅವುಗಳ ಸಂಖ್ಯೆ ಕ್ಷೀಣಿಸುತ್ತಿದೆ.
 • ಗ್ರೇ ಹೆರಾನ್, ಡಾರ್ಟರ್, ಸ್ಪೂನ್ ಬಿಲ್ಸ್, ವೈಟ್ ಐಬಿಸ್ ಸೇರಿದಂತೆ ಹಲವು ವಲಸೆ ಹಕ್ಕಿಗಳು ಋತುಮಾನಕ್ಕನುಗುಣವಾಗಿ ಇಲ್ಲಿಗೆ ಆಗಮಿಸುತ್ತವೆ.
 • ಬೃಹತ್ ಸಂಖ್ಯೆಯಲ್ಲಿ ಬರುವ ಹಕ್ಕಿಗಳನ್ನು ಹತ್ತಿರದ ಗ್ರಾಮಸ್ಥರು ಮಂಗಳಕರವಾಗಿ ಪರಿಗಣಿಸುತ್ತಾರೆ. ಪಟಾಕಿ, ಬಾಣ ಬಿರುಸುಗಳಿಂದ ಹಕ್ಕಿಗಳ ಸಂತಾನಾಭಿವೃದ್ಧಿಗೆ, ಗೂಡು ಕಟ್ಟುವಿಕೆಗೆ ತೊಂದರೆಯಾಗುತ್ತದೆ ಎಂಬ ದೃಷ್ಟಿಯಿಂದ ಹಳ್ಳಿಗರು ಕಳೆದ 50 ವರ್ಷಗಳಿಂದ ಪಟಾಕಿಯನ್ನು ಹಚ್ಚುತ್ತಲೇ ಇಲ್ಲ
 • ಉತ್ತರ ಭಾರತ, ಸೈಬೀರಿಯಾ, ಮತ್ತು ಆಸ್ಟ್ರೇಲಿಯಾ ಮೊದಲಾದ ಪ್ರದೇಶಗಳಿಂದ ಹಕ್ಕಿಗಳು ಈ ಅಭಯಾರಣ್ಯಕ್ಕೆ ಬರುತ್ತವೆ.

ಸೌದೀಕರಣ

6.

ಸುದ್ಧಿಯಲ್ಲಿ ಏಕಿದೆ ? ಸೌದಿ ಅರೇಬಿಯಾದಲ್ಲಿ ಮೂರು ಹಂತಗಳಲ್ಲಿ ನಡೆಯುತ್ತಿರುವ ಸೌದೀಕರಣದಿಂದ ಕರಾವಳಿ ತಲ್ಲಣಗೊಂಡಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು ತವರಿಗೆ ಮರಳುತ್ತಿದ್ದಾರೆ.

 • ನ.9ರಂದು ಎರಡನೇ ಹಂತದ ಸೌದೀಕರಣ ನಡೆಯುತ್ತಿದ್ದು, ಮತ್ತೆ ಸಾವಿರಾರು ಮಂದಿ ಕೆಲಸ ಕಳೆದುಕೊಂಡು ಸ್ವದೇಶಕ್ಕೆ ಮರಳಲು ಅಣಿಯಾಗಿದ್ದಾರೆ.

ಕಾರಣಗಳು

 • ಸೌದಿ ಅರೇಬಿಯಾದ ಕಾರ್ಮಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಮತ್ತೆ ಸ್ವದೇಶದ 12 ವಲಯದ ಉದ್ಯೋಗಗಳನ್ನು ಸೌದೀಕರಣ ಮಾಡಲಿದೆ. ಇದರಿಂದ ವಿದೇಶೀಯರು ಮತ್ತೊಮ್ಮೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಎರಡು ವರ್ಷದ ಹಿಂದೆ ಸೌದೀಕರಣ ನಡೆದಾಗ ಸಾವಿರಾರು ಮಂದಿ ಸ್ವದೇಶಕ್ಕೆ ಮರಳಿದ್ದರು. ಆ ಬಳಿಕ ವಿದೇಶೀಯರಿಗೆ ತೆರಿಗೆ ವಿಧಿಸಿದ್ದರಿಂದ ಮಧ್ಯಮ, ಶ್ರೀಮಂತ ವರ್ಗದವರೂ ಸ್ವದೇಶಕ್ಕೆ ಮರಳಲಾರಂಭಿಸಿದರು.
 • ಎಲ್ಲ ಪ್ರಮುಖ ವಾಣಿಜ್ಯ ಮಳಿಗೆಗಳಲ್ಲಿ ಸೌದಿ ಪ್ರಜೆಗಳೇ ಕಾರ್ಯನಿರ್ವಹಿಸಬೇಕಿದ್ದು, ಅವರಿಗೆ ತರಬೇತಿ ಹಾಗೂ ಸಚಿವಾಲಯದಿಂದ ಪ್ರಮಾಣಪತ್ರ ನೀಡಲಾಗುತ್ತಿದೆ. ಅಧಿಕಾರಿಗಳು ದಾಳಿ ಮಾಡುವ ಸಂದರ್ಭದಲ್ಲಿ ದಾಖಲೆಗಳನ್ನು ಪ್ರದರ್ಶಿಸಬೇಕಾಗುತ್ತದೆ. ಸಚಿವಾಲಯ ಆರಂಭದಲ್ಲಿ ಖಾಸಗಿ ವಲಯದಲ್ಲಿ ಶೇ.100 ರಷ್ಟು ಪ್ರಮಾಣದಲ್ಲಿ ಸೌದಿ ಪ್ರಜೆಗಳೇ ಕೆಲಸ ಮಾಡಬೇಕು ಎನ್ನುವ ಆದೇಶವನ್ನು ಪ್ರಸ್ತುತ ಶೇ.70ಕ್ಕೆ ಇಳಿಸಲಾಗಿದೆ
 • ಸೆ.11ರಂದು ಆರಂಭ :ಮೊದಲ ಹಂತದ ಸೌದೀಕರಣ ಸೆ.11ರಿಂದ ಆರಂಭಗೊಂಡಿದೆ. ವಾಹನಗಳ ಶೋರೂಂ, ಆಟೋಮೊಬೈಲ್, ಸಿದ್ಧ ಉಡುಪು, ಪೀಠೋಪಕರಣ ಹಾಗೂ ಮನೆ ಬಳಕೆ ವಸ್ತುಗಳ ಮಾರಾಟ ಮಳಿಗೆಗಳು ಪ್ರಥಮ ಹಂತದಲ್ಲಿ ಸೌದೀಕರಣಕ್ಕೆ ಒಳಪಟ್ಟಿವೆ.
 • ದ್ವಿತೀಯ ಹಂತದಲ್ಲಿ ನ.9ರಿಂದ ಇಲೆಕ್ಟ್ರಿಕ್ ಹಾಗೂ ಇಲೆಕ್ಟ್ರಾನಿಕ್ಸ್, ವಾಚ್ ಅಂಗಡಿಗಳು, ಆಪ್ಟಿಕಲ್ಸ್ ಮತ್ತು ಮೆಡಿಕಲ್ ಶಾಪ್‌ಗಳು ಹಾಗೂ 2019ರ ಜ.7ರಿಂದ ತೃತೀಯ ಹಂತದದಲ್ಲಿ ಕಟ್ಟಡ ಕಾಮಗಾರಿ ವಸ್ತುಗಳ ಮಾರಾಟ ಮಳಿಗೆಗಳು, ವಾಹನದ ಬಿಡಿ ಭಾಗ ಮಾರಾಟ ಮಳಿಗೆ, ಚಾಕಲೇಟ್ ತಯಾರಿ ಅಂಗಡಿಗಳು ಸೌದೀಕರಣಗೊಳ್ಳಲಿವೆ.
 • ಮೊದಲ ಹಂತದಲ್ಲಿ ಸೌದಿಯಿಂದ ಊರಿಗೆ ಮರಳಿದ ಮಂದಿ ಇಲ್ಲಿಯೂ ಸಮರ್ಪಕವಾಗಿ ನೆಲೆ ಕಂಡುಕೊಳ್ಳಲಾಗದೆ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಪರ್ಯಾಯ ಉದ್ಯೋಗ ಮಾಡುವ ಕೌಶಲವೂ ಇಲ್ಲದ ಕಾರಣ ಆರ್ಥಿಕ ತೊಂದರೆಗೆ ಸಿಲುಕಿದ್ದಾರೆ. ಇಲ್ಲಿನ ಸರ್ಕಾರ ಅವರಿಗೆ ಉದ್ಯೋಗ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂಬುದು ಸಂತ್ರಸ್ತರ ಒತ್ತಾಯ.

ಸೌದಿ ಯುವಕ-ಯುವತಿಯರಿಗೆ ತರಬೇತಿ

 • ಸೌದೀಕರಣ ನೀತಿ ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ಸೌದಿ ಯುವಕ-ಯುವತಿಯರಿಗೆ ತರಬೇತಿ ನೀಡಲಾಗುತ್ತಿದೆ. ಎಲ್ಲ ಉದ್ಯೋಗ ವಲಯಗಳಲ್ಲೂ ಸೆ.11ರಿಂದ ಕಟ್ಟುನಿಟ್ಟಿನ ಪರಿಶೀಲನೆ ನಡೆಯಲಿದೆ. ಕಾನೂನು ಉಲ್ಲಂಘನೆ ಮಾಡಿದವರಿಗೆ ಭಾರಿ ದಂಡದೊಂದಿಗೆ ಗಡೀಪಾರು ಶಿಕ್ಷೆ ವಿಧಿಸಲಾಗುವುದು ಎಂದು ಸೌದಿ ಕಾರ್ಮಿಕ ಇಲಾಖೆ ಎಚ್ಚರಿಕೆ ನೀಡಿದೆ

ಚೀನಾ ಸೈಬರ್ ಸೇನೆ ಸಿದ್ಧ

7.

ಸುದ್ಧಿಯಲ್ಲಿ ಏಕಿದೆ ? ಭಾರತೀಯ ಸೇನೆಯ ಮಾಹಿತಿ ಕದಿಯಲು ಚೀನಾ ಸೈಬರ್ ಕುತಂತ್ರಕ್ಕೆ ಮುಂದಾಗಿದ್ದು, ಇದಕ್ಕಾಗಿಯೇ ವಿಶೇಷ ವಿಭಾಗ ಆರಂಭಿಸಿದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆ ಎಚ್ಚರಿಸಿದೆ.

 • ಚೀನಾದ ಪೀಪಲ್ಸ್ ಲಿಬರೇಷನ್ ಆರ್ವಿುಯ ಯುನಿಟ್-61398ನ್ನು ಸೈಬರ್ ಯುದ್ಧಕ್ಕಾಗಿ ಮೀಸಲಿಡಲಾಗಿದೆ. ತಾಂತ್ರಿಕ ಹಿನ್ನೆಲೆ ಹೊಂದಿರುವ ಯೋಧರು ಹಾಗೂ ಹ್ಯಾಕರ್​ಗಳು ಈ ತಂಡದಲ್ಲಿದ್ದಾರೆ.
 • ಶತ್ರು ರಾಷ್ಟ್ರಗಳ ಸೇನೆ ಹಾಗೂ ಪ್ರಮುಖ ಸಂಸ್ಥೆಗಳ ಸೂಕ್ಷ್ಮ ಮಾಹಿತಿ ಕದಿಯುವುದು ಈ ಸೈಬರ್ ತಂಡದ ಕಾಯಕವಾಗಿದೆ.
 • ಗುಪ್ತಚರ ಸಂಸ್ಥೆಯ ವರದಿ ಪ್ರಕಾರ, ಚೀನಾ ಸರ್ಕಾರದ ಕೇಂದ್ರ ಕಚೇರಿ ಇರುವ ಶಾಂಘೈನಲ್ಲಿ ಈ ಸೈಬರ್ ತಂಡದ ಕಚೇರಿಯಿದೆ. ಚೀನಾದ ಭದ್ರತಾ ಇಲಾಖೆ ಹಾಗೂ ಗುಪ್ತಚರ ದಳಕ್ಕೆ ನೇರವಾಗಿ ಈ ತಂಡ ವರದಿ ನೀಡುತ್ತದೆ.
 • ಐಸ್​ಬಗ್, ಟ್ರೋಜಾನ್, ಲಿನಕ್ಸ್ ಹಾಗೂ ಎಪಿಟಿ ಮಾಲ್​ವೇರ್​ಗಳ ಮೂಲಕ ಮಾಹಿತಿ ಕದಿಯಲಾಗುತ್ತಿದೆ.
 • ಭಾರತ ಸೇರಿ ಇತರ ರಾಷ್ಟ್ರಗಳ ಸೇನೆಯ ಸೂಕ್ಷ್ಮ ಮಾಹಿತಿಗಳ ಜತೆಗೆ ಗುಪ್ತಚರ ಇಲಾಖೆ ವರದಿ, ಕೈಗಾರಿಕೆ ಹಾಗೂ ಭದ್ರತಾ ಸಂಶೋಧನೆಗಳ ಮಾಹಿತಿಗೆ ಕನ್ನ ಹಾಕಲು ಚೀನಾ ಹವಣಿಸುತ್ತಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.
 • ಅಮೆರಿಕದ ಜೆಟ್ ವಿಮಾನಗಳ ಎಂಜಿನ್ ಸೇರಿ ಇತರ ಸಂಶೋಧನಾ ಮಾಹಿತಿಯನ್ನು ಚೀನಾ ಕದಿಯುತ್ತಿದೆ ಎಂದು ಆರೋಪಿಸಿ ಅಮೆರಿಕ ಈಗಾಗಲೇ ಕಾನೂನು ಹೋರಾಟ ಆರಂಭಿಸಿದೆ.

‘ಗೇಟ್ ರೆಕಗ್ನಿಷನ್’

8.

ಸುದ್ಧಿಯಲ್ಲಿ ಏಕಿದೆ ? ದೈಹಿಕ ವಿನ್ಯಾಸ ಮತ್ತು ಆಂಗಿಕ ಭಾಷೆಯ ಮೂಲಕ ಜನರನ್ನು ಗುರುತಿಸುವಂತಹ ‘ಗೇಟ್ ರೆಕಗ್ನಿಷನ್’ (ನಡಿಗೆ ಗುರುತಿಸುವಿಕೆ) ತಂತ್ರಜ್ಞಾನ ಚೀನಾದಲ್ಲಿ ಅಭಿವೃದ್ಧಿಪಡಿಸಲಾಗಿದೆ.

 • ಬೀಜಿಂಗ್ ಮತ್ತು ಶಾಂಘೈ ನಗರದ ಪ್ರಮುಖ ರಸ್ತೆಗಳಲ್ಲಿ ಈ ತಂತ್ರಜ್ಞಾನ ಅಳವಡಿಸಲಾಗಿದೆ.
 • ವ್ಯಕ್ತಿ ಮುಖ ಮರೆಮಾಚಿಕೊಂಡಿದ್ದರೂ ಆಂಗಿಕ ಭಾಷೆಯ ಮೂಲಕ ಗುರುತನ್ನು ಪತ್ತೆ ಮಾಡುವುದು ‘ಗೇಟ್ ರೆಕಗ್ನಿಷನ್’ ವಿಶೇಷ.
 • ವ್ಯಕ್ತಿಯ ದೈಹಿಕ ವಿನ್ಯಾಸ ಮತ್ತು ಅವರ ಆಂಗಿಕ ಭಾಷೆಯನ್ನು 50 ಮೀಟರ್ ದೂರದಿಂದಲೇ ಈ ತಂತ್ರಜ್ಞಾನ ಗುರುತಿಸುತ್ತದೆ. ಕ್ರಿಮಿನಲ್​ಗಳನ್ನು ಪತ್ತೆ ಹಚ್ಚಲು ಹೆಣಗಾಡುವ ಪೊಲೀಸರಿಗೆ ಈ ತಂತ್ರಜ್ಞಾನ ಸಹಾಯಕವಾಗಲಿದೆ.

ಉಪಯೋಗಗಳು

 • ಈ ತಂತ್ರಜ್ಞಾನದಲ್ಲಿ ಗುರುತು ಪತ್ತೆಗೆ ಶಂಕಿತರು ಸಹಕರಿಸಬೇಕು ಎಂಬ ಕಟ್ಟಳೆ ಅಗತ್ಯವಿಲ್ಲ.
 • ಶಂಕಿತರ ದೈಹಿಕ ವಿನ್ಯಾಸ ಮತ್ತು ಆಂಗಿಕ ಭಾಷೆಯನ್ನು ಗಮನಿಸಿಯೇ ಕ್ಷಣ ಮಾತ್ರದಲ್ಲಿ ಅವರನ್ನು ಗುರುತಿಸಲು ಸಾಧ್ಯ ಎಂದು ಈ ತಂತ್ರಜ್ಞಾನ ವನ್ನು ಅಭಿವೃದ್ಧಿಪಡಿಸಿರುವ ವ್ಯಾಟ್ರಕ್ಸ್ ಕಂಪನಿ ಹೇಳಿದೆ.
 • ಗುರುತು ಪತ್ತೆಯಾಗಬಾರದೆಂದು ನಾನಾ ರೀತಿಯ ಉಪಾಯ ಮಾಡುವ ಖದೀಮರನ್ನು ಈ ತಂತ್ರಜ್ಞಾನದ ಮೂಲಕ ಸುಲಭವಾಗಿ ಪತ್ತೆ ಮಾಡಬಹುದು ಎಂದು ಬೀಜಿಂಗ್ ಪೊಲೀಸರು ಹೇಳಿದ್ದಾರೆ.
 • ಮುಖ ಗುರುತಿಸುವ ಫೇಶಿಯಲ್ ರಿಕಗ್ನಿಶನ್‌ಗೆ ಹೋಲಿಸಿದರೆ ಇದು ಅಂತಹ ಯಾವುದೇ ಅವಶ್ಯಕತೆಯನ್ನು ಬೇಡುವುದಿಲ್ಲ, ಬದಲಾಗಿ ಓರ್ವ ವ್ಯಕ್ತಿ ಸಹಜವಾಗಿ ನಡೆದು ಹೋಗುತ್ತಿದ್ದರೆ ಆತನ ನಡಿಗೆ ಮತ್ತು ದೇಹದ ಭಾಷೆಯನ್ನು ಗಮನಿಸಿಕೊಂಡು ಅಲ್ಲಿಂದಲೇ ಪತ್ತೆಹಚ್ಚುತ್ತದೆ. ಅದಕ್ಕಾಗಿ ಯಾವುದೇ ಸ್ಕ್ಯಾನಿಂಗ್ ಯಂತ್ರದ ಮೊರೆಹೋಗಬೇಕಿಲ್ಲ. ಜತೆಗೆ ಜನರನ್ನು ಈ ಯಂತ್ರದ ಮೂಲಕ ಪರಿಶೀಲಿಸುವ ಅಗತ್ಯವೂ ಇರುವುದಿಲ್ಲ.

ಅನಾನುಕೂಲಗಳು

 • ‘ಗೇಟ್ ರೆಕಗ್ನಿಷನ್ ತಂತ್ರಜ್ಞಾನ ಉತ್ತಮ ವಾಗಿದೆ. ಆದರೆ, ಇದರಲ್ಲಿ ಸಂಗ್ರಹವಾದ ಮಾಹಿತಿ ಯನ್ನು ಕಂಪ್ಯೂಟರ್​ನಲ್ಲಿ ದಾಖಲಿಸಲು ಹೆಚ್ಚಿನ ಸ್ಥಳಾವಕಾಶ ಬೇಕು. ಏಕೆಂದರೆ ದೃಶ್ಯಗಳ ಅನುಕ್ರಮದ ಸರಣಿಯನ್ನೆ ಶೇಖರಿಸಬೇಕಾಗುತ್ತದೆ.
 • ಬಯೋಮೆಟ್ರಿಕ್ ಡೇಟಾ ಸಂಗ್ರಹಿಸಲು ಇಷ್ಟೊಂದು ಸ್ಥಳಾವಕಾಶ ಬೇಡ ಎಂದು ಬ್ರಿಟನ್​ನ ಸೌತ್​ಹ್ಯಾಂಪ್ಟನ್ ವಿಶ್ವವಿದ್ಯಾಲಯದ ಪ್ರೊ. ಮಾರ್ಕ್ ನಿಕ್ಸನ್ ಅಭಿಪ್ರಾಯಪಟ್ಟಿದ್ದಾರೆ.

ಕೆಲ ದೇಶಗಳಲ್ಲಿ ಗೇಟ್ ತಂತ್ರಜ್ಞಾನ ಬಳಕೆ

 • ‘ಗೇಟ್ ರೆಕಗ್ನಿಷನ್’ ತಂತ್ರಜ್ಞಾನ ಈಗಾಗಲೇ ಜಪಾನ್, ಬ್ರಿಟನ್ ಮತ್ತು ಅಮೆರಿಕಗಳಲ್ಲಿ ಬಳಕೆಯಲ್ಲಿದೆ. ಅಮೆರಿಕ ಈ ತಂತ್ರಜ್ಞಾನವನ್ನು ರಕ್ಷಣಾ ಮಾಹಿತಿ ವ್ಯವಸ್ಥೆಯಲ್ಲಿ ದಶಕದಿಂದ ಬಳಕೆ ಮಾಡುತ್ತಿದೆ.
 • ಜಪಾನ್​ನಲ್ಲಿ ಒಸಾಕಾ ವಿಶ್ವವಿದ್ಯಾಲಯವು ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಜತೆ ಸೇರಿ 2013ರಲ್ಲೆ ‘ಗೇಟ್ ರೆಕಗ್ನಿಷನ್’ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

ಚಂದಿರನಿಗೆ ಇನ್ನೆರಡು ಉಪಗ್ರಹಗಳ ಸಾಥ್‌

9.

ಸುದ್ಧಿಯಲ್ಲಿ ಏಕಿದೆ ? ಭೂಮಿಗೆ ಚಂದ್ರನಲ್ಲದೆ ಇನ್ನೆರಡು ಉಪಗ್ರಹಗಳಿವೆ ಎಂಬ ಅರ್ಧ ಶತಮಾನದ ಹಿಂದಿನ ವಿವಾದಾತ್ಮಕ ಊಹೆ ಈಗ ನಿಜವೆಂದು ಸಾಬೀತಾಗಿದೆ.

 • ಹಂಗೇರಿಯದ ಖಗೋಳ ವಿಜ್ಞಾನಿಗಳು ಮತ್ತು ಭೌತ ವಿಜ್ಞಾನಿಗಳು ತಾವು ಭೂಮಿಯನ್ನು ಸುತ್ತುವ ಇನ್ನೆರಡು ‘ಚಂದ್ರ’ರನ್ನು ಪತ್ತೆ ಹಚ್ಚಿರುವುದಾಗಿ ಹೇಳಿದ್ದಾರೆ.
 • ಅವರ ಪ್ರಕಾರ, ಈ ಎರಡೂ ಆಕಾಶ ಕಾಯಗಳು ಧೂಳಿನ ಕಣಗಳಿಂದ ಮಾಡಲ್ಪಟ್ಟವು.ರಾಯಲ್‌ ಖಗೋಳ ವಿಜ್ಞಾನ ಸೊಸೈಟಿಗೆ ಸಲ್ಲಿಸಿರುವ ಮಾಹಿತಿಯಲ್ಲಿ ಈ ತಂಡ ಭೂಮಿಯಿಂದ 5 ಲಕ್ಷ ಕಿ.ಮೀ. ದೂರದಲ್ಲಿ ಎರಡು ಆಕಾಶಕಾಯಗಳಿವೆ ಎಂದು ಪತ್ತೆ ಹಚ್ಚಿದ್ದಾರೆ. ಚಂದ್ರನಿರುವುದು ಕೂಡಾ ಇಷ್ಟೇ ದೂರದಲ್ಲಿ.

ಹಿನ್ನಲೆ

 • 1961ರಲ್ಲಿ ಪೋಲಂಡ್‌ ಖಗೋಳಜ್ಞ ಕಾಜಿಮೀರ್ಜ್‌ ಕೋರ್ಡಿಲ್‌ವೆಸ್ಕಿ ಅವರು ಭೂಮಿಗೆ ಇನ್ನೆರಡು ನೈಸರ್ಗಿಕ ಉಪಗ್ರಹಗಳಿವೆ ಎಂದು ಪತ್ತೆ ಹಚ್ಚಿದ್ದರು. ಆದರೆ, ಅಂದು ಅದನ್ನು ತೀವ್ರವಾಗಿ ಪ್ರಶ್ನಿಸಲಾಗಿತ್ತು.
 • ಹೆಚ್ಚಿನ ಸಂಶೋಧನೆ ಅಗತ್ಯ: ಹೆಚ್ಚುವರಿ ಚಂದ್ರರ ಪತ್ತೆಯಾಗಿದ್ದರೂ ಧೂಳಿನಿಂದಲೇ ರೂಪಿತವಾಗಿರುವ ಇವುಗಳನ್ನು ಭೂಮಿಯ ನೈಸರ್ಗಿಕ ಉಪಗ್ರಹಗಳೆಂದು ಕರೆಯಬಹುದೇ ಎಂಬ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಾಗಿದೆ.
Related Posts
“10th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಸೂರ್ಯಯಾನಕ್ಕೆ ನಾಸಾ ಸಜ್ಜು ಈವರೆಗೆ ಅಸಾಧ್ಯವಾಗಿದ್ದ ಇಂತಹ ಸಾಹಸಕ್ಕೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕೈ ಹಾಕಿದೆ. ಮನುಕುಲದ ಇತಿಹಾಸದಲ್ಲೇ ಇದೇ ಮೊದಲ ಬಾರಿ ಸೂರ್ಯಯಾನಕ್ಕೆ ಸಜ್ಜಾಗಿರುವ ನಾಸಾ, ಜು.31ರಂದು ಫ್ಲೋರಿಡಾದ ಕೆನಡಿ ಸ್ಪೇಸ್ ಸೆಂಟರ್​ನಿಂದ ಬಾಹ್ಯಾಕಾಶ ನೌಕೆಯನ್ನು ಉಡಾವಣೆಗೊಳಿಸಲಿದೆ. ಪಾರ್ಕರ್ ಸೋಲಾರ್ ...
READ MORE
“5th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಪಶ್ಚಿಮಘಟ್ಟ ಸುದ್ಧಿಯಲ್ಲಿ ಏಕಿದೆ?ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿ ಆರು ರಾಜ್ಯಗಳಲ್ಲಿ ಹಾದುಹೋಗಿರುವ ಪಶ್ಚಿಮ ಘಟ್ಟಗಳ ಸಾಲಿನ 56,825 ಚದರ ಕಿಲೋಮೀಟರ್‌ ವ್ಯಾಪ್ತಿಯ ಜೈವಿಕ ಸೂಕ್ಷ್ಮ ಪ್ರದೇಶದ ವ್ಯಾಪ್ತಿ ಗುರುತಿಸಿ ರೂಪಿಸಲಾಗಿದ್ದ ಕರಡು ಅಧಿಸೂಚನೆಯ ಕುರಿತು ಕೇಂದ್ರ ಸರಕಾರ ಮತ್ತೊಮ್ಮೆ ರಾಜ್ಯಗಳ ಜತೆಗೆ ...
READ MORE
ಪಂಚಾಯತ್ ರಾಜ್ ವ್ಯವಸ್ಥೆಗೆ ಬದಲಾವಣೆ
ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಮಸೂದೆ–2015’ ವಿಧಾನಸಭೆಯಲ್ಲಿಮಂಡನೆ ಇತ್ತೀಚಿನ ವರ್ಷಗಳಲ್ಲೇ ಇದು ಅತ್ಯಂತ ಸುದೀರ್ಘ ಮಸೂದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ, ಅದಕ್ಕೆ ತಕ್ಕ ಸಂಬಳ ಮತ್ತು ಇತರ ಸವಲತ್ತುಗಳು ಸಿಗಲಿವೆ. ಮಸೂದೆಯಲ್ಲಿನ ಪ್ರಮುಖ ಅಂಶಗಳು :  ಗ್ರಾಮಮಟ್ಟದಿಂದ ರಾಜ್ಯ ಮಟ್ಟದ ವರೆಗಿನ ...
READ MORE
“3rd ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಕಾಡು ಹೆಚ್ಚಳ ಸುದ್ಧಿಯಲ್ಲಿ ಏಕಿದೆ?ದಾವಣಗೆರೆ ಜಿಲ್ಲೆಯಲ್ಲಿ ಕಾಡು ಹೆಚ್ಚಳವಾಗಿದ್ದು, ಹಸಿರು ವಲಯ ವಿಸ್ತರಣೆಯಲ್ಲಿ ಬಯಲು ಸೀಮೆ ಜಿಲ್ಲೆಗಳ ಪೈಕಿ ದಾವಣಗೆರೆ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಕೇಂದ್ರದ ಸರ್ವೆ ಆಫ್‌ ಇಂಡಿಯಾ ಕಳೆದ ತಿಂಗಳು ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಬೆಳವಣಿಗೆಯನ್ನು ಉಲ್ಲೇಖಿಸಿದೆ. ಕಳೆದ ಹತ್ತು ವರ್ಷದಲ್ಲಿ ...
READ MORE
“10 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಜಾನಪದ ಅಕಾಡೆಮಿ ಪ್ರಶಸ್ತಿ ಸುದ್ಧಿಯಲ್ಲಿ ಏಕಿದೆ ? ಕರ್ನಾಟಕ ಜಾನಪದ ಅಕಾಡೆಮಿಯ 2018ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ರಾಜ್ಯದ 30 ಹಿರಿಯ ಜಾನಪದ ಕಲಾವಿದರು ಹಾಗೂ ಇಬ್ಬರು ಜಾನಪದ ತಜ್ಞರನ್ನು ಆಯ್ಕೆ ಮಾಡಲಾಗಿದ್ದು, ಡಿ. 27ರಂದು ಬೀದರ್​ನ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ...
READ MORE
“03 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮಲೆನಾಡಿನಲ್ಲಿ ಮಂಗನಕಾಯಿಲೆ: ಸುದ್ಧಿಯಲ್ಲಿ ಏಕಿದೆ ?ಮಹಾಮಾರಿ ಮಂಗನಕಾಯಿಲೆಗೆ ನಾಲ್ವರು ಬಲಿಯಾಗಿದ್ದು, 50ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇಸಿಗೆಯಲ್ಲಿ ತೀರ್ಥಹಳ್ಳಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಮಂಗನ ಕಾಯಿಲೆ ಈ ಬಾರಿ ಬೇಸಿಗೆಗೂ ಮುಂಚೆ ಕಾಣಿಸಿಕೊಂಡಿದೆ. ಜತೆಗೆ ಸಾಗರಕ್ಕೂ ವ್ಯಾಪಿಸಿದೆ. ಮಂಗನಕಾಯಿಲೆ ಹರಡದಂತೆ ಪ್ರತಿವರ್ಷ ಲಸಿಕೆ ಹಾಕಲಾಗುತ್ತಿತ್ತು. ಆದರೆ ...
READ MORE
“31 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಜಡ್ಜ್​ಗಳ ಕೊರತೆ ಪಟ್ಟಿಯಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಸುದ್ಧಿಯಲ್ಲಿ ಏಕಿದೆ ? ನ್ಯಾಯಾಧೀಶರ ಕೊರತೆ ಎದುರಿಸುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು, ಬಿಹಾರ ಮತ್ತು ಮಧ್ಯಪ್ರದೇಶ ರಾಜ್ಯಗಳು 2, 3ನೇ ಸ್ಥಾನದಲ್ಲಿವೆ. ಕರ್ನಾಟಕ 7ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲಿ 1,188 ಹುದ್ದೆಗಳು ...
READ MORE
Karnataka Current Affairs – KAS/KPSC Exams – 9th & 10th April 2018
Only 50,000 trade licences in this booming city Despite rampant commercialisation in the city, the Bruhat Bengaluru Mahanagara Palike (BBMP) has issued just around 50,000 trade licences, which, RTI activists claim, ...
READ MORE
9th & 10th July ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
 ‘ರಾಮಾಯಣ ದರ್ಶನ’ ಸುದ್ಧಿಯಲ್ಲಿ ಏಕಿದೆ? ರಾಮಾಯಣಕ್ಕೆ ಸಂಬಂಧಿಸಿದ ಬಹುತೇಕ ಸ್ಥಳಗಳ ದರ್ಶನವನ್ನು ರೈಲಿನ ಮೂಲಕ ಮಾಡಿಸುವ ವಿನೂತನ ಪ್ರಯೋಗಕ್ಕೆ ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ. ಅಯೋಧ್ಯದಿಂದ ರಾಮೇಶ್ವರ ಮಾರ್ಗವಾಗಿ ಕೋಲೊಂಬೊವರೆಗೆ 16 ದಿನಗಳ ಪ್ರಯಾಣದಲ್ಲಿ ಈ ಸ್ಥಳಗಳ ದರ್ಶನ ಭಾಗ್ಯ ಪ್ರಯಾಣಿಕರಿಗೆ ಸಿಗಲಿದೆ. ‘ಶ್ರೀ ...
READ MORE
20th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಮನೆಗೊಬ್ಬರು ಯೋಗಪಟು ಯೋಜನೆ ದೇಶದ 500 ಗ್ರಾಮಗಳನ್ನು ‘ಸಂಪೂರ್ಣ ಯೋಗ ಗ್ರಾಮ’ಗಳಾಗಿ ರೂಪಿಸುವ ಉಪಕ್ರಮವೊಂದನ್ನು ಆಯುಷ್‌ ಸಚಿವಾಲಯ ಹಮ್ಮಿಕೊಂಡಿದೆ. ಪ್ರತಿ ಮನೆಯ ಕನಿಷ್ಠ ಒಬ್ಬ ವ್ಯಕ್ತಿ ನಿಯಮಿತವಾಗಿ ಯೋಗ ಅಭ್ಯಾಸ ಮಾಡಬೇಕು ಎಂಬುದು ಈ ಯೋಜನೆಯ ತಿರುಳು. ಜೂನ್‌ 21ರ ಅಂತರರಾಷ್ಟ್ರೀಯ ಯೋಗ ದಿನಕ್ಕೂ ...
READ MORE
“10th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“5th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಪಂಚಾಯತ್ ರಾಜ್ ವ್ಯವಸ್ಥೆಗೆ ಬದಲಾವಣೆ
“3rd ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“10 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“03 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“31 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
Karnataka Current Affairs – KAS/KPSC Exams – 9th
9th & 10th July ಜುಲೈ 2018 ಕನ್ನಡ ಪ್ರಚಲಿತ
20th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ

Leave a Reply

Your email address will not be published. Required fields are marked *