“24 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ವಿಶ್ವದ ಸುರಕ್ಷಿತ ನಗರ ಪಟ್ಟಿ

1.

ಸುದ್ಧಿಯಲ್ಲಿ ಏಕಿದೆ ?ಅಮೆರಿಕ ಮೂಲದ ಟ್ರಿಬ್ಯೂನ್ ಪತ್ರಿಕೆಯ ಸೋದರ ಸಂಸ್ಥೆ ‘ದಿ ಡೇಲಿ ಮೇಲ್’ ನಡೆಸಿದ ವಿಶ್ವದ ಸುರಕ್ಷಿತ ನಗರಗಳ ಸಮೀಕ್ಷೆಯಲ್ಲಿ ಭಾರತದಿಂದ ಮಂಗಳೂರು ಮಾತ್ರವೇ ಸ್ಥಾನ ಪಡೆದುಕೊಂಡಿದೆ.

 • 1ರಿಂದ 100ರ ವರೆಗೆ ಅಂಕೆಯ ಸ್ಕೇಲ್​ನಲ್ಲಿ ಗರಿಷ್ಠ ಅಂಕ ಗಳಿಸಿದ ನಗರ ಅತಿ ಸುರಕ್ಷಿತ ಎಂದು ತಿಳಿಸಲಾಗಿದೆ.
 • ಟಾಪ್-50 ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಕತಾರ್​ನ ದೋಹಾ ಪಡೆದಿದ್ದರೆ, ಎರಡನೇ ಸ್ಥಾನವನ್ನು ಅಬುಧಾಬಿ ಪಡೆದಿದೆ. ಮಂಗಳೂರು 31ನೇ ಸ್ಥಾನದಲ್ಲಿದೆ.

ಕ್ರಿಯಾ ಸಮಾಧಿ

2.

ಸುದ್ಧಿಯಲ್ಲಿ ಏಕಿದೆ ?ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಕ್ರಿಯಾ ಸಮಾಧಿ ಮಾಡಲಾಗಿದೆ.

ಏನಿದು ಕ್ರಿಯಾ ಸಮಾಧಿ ?

 • ಕ್ರಿಯಾ ಸಮಾಧಿ ಹಲವು ವಿಧಿವಿಧಾನಗಳನ್ನು ಹೊಂದಿದ್ದು, ಶವವನ್ನು ಶಿವವಾಗಿಸುವ ಕ್ರಿಯೆಯಾಗಿದೆ. ಲಿಂಗಾಯತ ಸಂಪ್ರದಾಯದ ಈ ಪರಂಪರೆಯಲ್ಲಿ ಲಿಂಗಧಾರಣೆ ಮಾಡಿ, ಇಷ್ಟಲಿಂಗ ಪೂಜೆ ಮಾಡುವ ಆಧ್ಯಾತ್ಮ ಸಾಧಕರಿಗೆ ಅಂತಿಮವಾಗಿ ಕ್ರಿಯಾ ಸಮಾಧಿ ಮಾಡಲಾಗುತ್ತದೆ.
 • ಶಿವೈಕ್ಯರಾದವರ ದೇಹವನ್ನು ಮಣ್ಣಿನ ಬದಲು ವಿಭೂತಿ ಮತ್ತು ಉಪ್ಪಿನಿಂದ ಮುಚ್ಚಿ, ಆ ಸ್ಥಳದಲ್ಲಿ ಗದ್ದುಗೆ ನಿರ್ವಿುಸಲಾಗುತ್ತದೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಈ ಗದ್ದುಗೆಯನ್ನು ಪೂಜಿಸಲಾಗುತ್ತದೆ.

ಪದ್ಮಾಸನ ಸ್ಥಿತಿಯಲ್ಲಿ ಮೆರವಣಿಗೆ

 • ಸಮಾಧಿ ಮಾಡುವ ಗೋಡೆಯ ಒಳ ಭಾಗವನ್ನು ನಯಗೊಳಿಸಿದ ಬಳಿಕ ಸುಣ್ಣ, ವಿಭೂತಿ ಹಚ್ಚಲಾಗುತ್ತದೆ. ಬಳಿಕ ಪೂಜೆ ಸಲ್ಲಿಸಲಾಗುತ್ತದೆ. ಶಿವೈಕ್ಯರಾದವರಿಗೆ ನಾಡಿನ ವಿವಿಧ ನದಿಗಳ ಪವಿತ್ರ ಜಲದಿಂದ ಅಂತಿಮ ಪುಣ್ಯಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಲಾಗುತ್ತದೆ. ಪದ್ಮಾಸನದಲ್ಲಿ ಕೂರಿಸಿ, ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಮೆರವಣಿಗೆ ಮೂಲಕ ಕ್ರಿಯಾಸಮಾಧಿ ನಡೆಯುವ ಸ್ಥಳಕ್ಕೆ ಶಿವೈಕ್ಯರಾದವರನ್ನು ತರಲಾಗುತ್ತದೆ.

ಗದ್ದುಗೆ ವಿಧಿ

 • ಭಕ್ತಿ, ಗೌರವ ಮತ್ತು ವಿಶ್ವಾಸದಿಂದ ಜೀವನವಿಡೀ ಆರಾಧಿಸಿದ ಇಷ್ಟಲಿಂಗಕ್ಕೆ ಅಭಿಷೇಕ ನೆರವೇರಿಸಿ ಪೂಜಿಸಲಾಗುತ್ತದೆ. ಬಳಿಕ ಮೃತರ ತೋಳಿಗೆ ಅಥವಾ ಕುತ್ತಿಗೆಗೆ ಕಟ್ಟಲಾಗುತ್ತದೆ. ‘ಓಂ ನಮಃ ಶಿವಾಯ’ ಪಂಚಾಕ್ಷರಿ ಮಂತ್ರ ಬರೆದ 108 ತಾಮ್ರದ ಯಂತ್ರಗಳನ್ನು ಸಮಾಧಿಯ ನಾಲ್ಕು ಗೋಡೆಗೆ ಬಡಿಯಲಾಗುವುದು. ಒಂದನ್ನು ಪಾರ್ಥಿವ ಶರೀರದ ನಾಲಿಗೆಯ ಮೇಲೆ ಇಡಲಾಗುವುದು.

ಯಾರು ಅರ್ಹರು?

 • ಇಷ್ಟಲಿಂಗ ಪೂಜೆಯನ್ನು ತಪಸ್ಸಿನಂತೆ ಆಚರಿಸಿಕೊಂಡು ಬಂದ ಆಧ್ಯಾತ್ಮ ಸಾಧಕರು ಮಾತ್ರ ಕ್ರಿಯಾ ಸಮಾಧಿಗೆ ಅರ್ಹರಾಗಿರುತ್ತಾರೆ.

ಮೂರು ಹಂತದ ಮೆಟ್ಟಿಲು

 • ಕ್ರಿಯಾ ಸಮಾಧಿಗೆ ಯಾವ ಸ್ಥಳ ಯೋಗ್ಯ ಎಂದು ಮೊದಲೇ ಗುರುತಿಸಲಾಗಿರುತ್ತದೆ. ಪಾರ್ಥಿವ ಶರೀರವನ್ನು ಕೂರಿಸಲು ಗದ್ದುಗೆಯೊಳಗೆ ತ್ರಿಕೋನಾಕೃತಿಯಲ್ಲಿ ಗೂಡು ನಿರ್ವಿುಸಲಾಗಿರುತ್ತದೆ. ಇದಕ್ಕೆ ಮೂರು ಹಂತದಲ್ಲಿ ಮೆಟ್ಟಿಲುಗಳು ಇರುತ್ತವೆ. ಕ್ರಿಯಾ ವಿಧಾನಗಳು ನಡೆಯುವ ಸಂದರ್ಭ ದೀಪ ಹಚ್ಚಿಡಲು ಪಕ್ಕದಲ್ಲಿಯೇ ಪುಟ್ಟ ಗೂಡು ಸಹ ಇರಲಿದೆ.

ಉತ್ತರಾಧಿಕಾರಿ ಹೊಣೆ ವರ್ಗಾವಣೆ

 • ವಿಭೂತಿ ಮತ್ತು ಉಪ್ಪಿನಿಂದ ಮುಚ್ಚುವ ಮುನ್ನ ಉತ್ತರಾಧಿಕಾರಿಗೆ ಪಾರ್ಥಿವ ಶರೀರದ ಮೇಲಿಟ್ಟ ಪೇಟ ತೊಡಿಸಲಾಗುತ್ತದೆ. ಪೇಟ ತೊಟ್ಟ ಉತ್ತರಾಧಿಕಾರಿ ಕೊನೆಯದಾಗಿ ಪೂಜೆ ಸಲ್ಲಿಸಿ, ‘ಶ್ರೀಮಠದ ಜವಾಬ್ದಾರಿಯನ್ನು ನಿಮ್ಮ ಆಶಯಗಳಿಗೆ ಧಕ್ಕೆ ಬಾರದಂತೆ ಸರಿದೂಗಿಸಿಕೊಂಡು ಹೋಗುವೆ’ ಎಂದು ನೆರೆದವರ ಸಮ್ಮುಖದಲ್ಲಿ ಪ್ರಮಾಣ ಮಾಡುತ್ತಾರೆ.

ವಿಸ್ತೀರ್ಣ?

 • 9 ಪಾದ ಉದ್ದ ಮತ್ತು 5 ಪಾದ ಅಗಲ ಕ್ರಿಯಾ ಸಮಾಧಿ ನಡೆಯುವ ಸ್ಥಳದ ವಿಸ್ತೀರ್ಣವಾಗಿದೆ. ಮೃತರ ಹೆಬ್ಬೆರಳಿನಿಂದ ಹಿಮ್ಮಡಿವರೆಗಿನ ಉದ್ದವನ್ನು ಒಂದು ಪಾದ ಎಂದು ಲೆಕ್ಕ ಹಾಕಲಾಗುತ್ತದೆ.

ಹಿರಿಯ ಸ್ವಾಮೀಜಿಗೆ ಕ್ರಿಯಾಮೂರ್ತಿ ಗೌರವ

 • ಕ್ರಿಯಾ ವಿಧಿವಿಧಾನವನ್ನು ಸಮರ್ಪಕವಾಗಿ ನಡೆಸಲು ಓರ್ವ ಹಿರಿಯ ಸ್ವಾಮೀಜಿಗೆ ಕ್ರಿಯಾಮೂರ್ತಿಗಳ ಗೌರವ ನೀಡಲಾಗುತ್ತದೆ. ಗಣಪತಿ ಪೂಜೆ, ಪಂಚ ಕಳಶ ಸ್ಥಾಪನೆ, ಅಷ್ಟ ದಿಕ್ಪಾಲಕರ ಪೂಜೆ, ನವಗ್ರಹ ಪೂಜೆಗಳು ನಡೆಯುತ್ತವೆ. ಶಿವನ ಪಂಚಮುಖಗಳ ಸಂಕೇತವಾಗಿ ಐದು ಕಳಶ, ವರ್ಣ ಮತ್ತು ವಾಸ್ತು ದೇವತೆಗಳ ಎರಡು ಕಳಶ ಸ್ಥಾಪನೆ ಮಾಡಲಾಗುತ್ತದೆ.
 • ಸ್ಥಳದಲ್ಲಿರುವ ಒಟ್ಟು ಏಳು ಕಳಶಗಳಿಗೆ ಪುಣ್ಯಾಹ ಎನ್ನುತ್ತಾರೆ. ನಾಂದಿ ಕಳಶ ಸ್ಥಾಪನೆಯೊಂದಿಗೆ ಹಿರಿಯರು, ಗುರುಗಳನ್ನು ನೆನಪಿಸಿಕೊಳ್ಳಲಾಗುತ್ತದೆ. ಇದಕ್ಕೆ ಶಿವನ ಏಕೋವಿಂಶತಿ ಮಹೇಶ್ವರ ಪೂಜೆ ಎನ್ನುತ್ತಾರೆ.

ಮೇಕೆದಾಟು ಯೋಜನೆ

3.

ಸುದ್ಧಿಯಲ್ಲಿ ಏಕಿದೆ ?ಮೇಕೆದಾಟು ಅಣೆಕಟ್ಟಿಗೆ ಸಂಬಂಧಪಟ್ಟಂತೆ ಕರ್ನಾಟಕ ಸರ್ಕಾರ ಸಮಗ್ರ ಯೋಜನಾ ವರದಿಯಲ್ಲಿ ಕೇಂದ್ರ ಜಲ ಆಯೋಗಕ್ಕೆ ಜ.18ರಂದು ಸಲ್ಲಿಸಿದೆ.

ಹಿನ್ನಲೆ

 • ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಒಪ್ಪಿಗೆ ನೀಡಿತ್ತು. ಹಾಗೇ ಕೇಂದ್ರ ಜಲ ಆಯೋಗ ಮೇಕೆದಾಟು ಯೋಜನೆಯ ಸಮಗ್ರ ವರದಿ (DPR) ನೀಡುವಂತೆ ಸೂಚಿಸಿತ್ತು. ಅದರ ಅನ್ವಯ ಈಗ ರಾಜ್ಯ ಸರ್ಕಾರ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಕೇಂದ್ರ ಜಲ ಆಯೋಗದ ಯೋಜನಾ ಮೌಲ್ಯಮಾಪನ ಸಂಸ್ಥೆಯ ಮುಖ್ಯ ಇಂಜಿನಿಯರ್​ಗೆ ವರದಿ ಸಲ್ಲಿಸಿದ್ದಾರೆ. ಕೇಂದ್ರ ಜಲ ಆಯೋಗ ಅದನ್ನು ಸ್ವೀಕರಿಸಿದೆ.
 • ಈ ವರದಿ ಪ್ರತಿಗಳನ್ನು ತಮಿಳುನಾಡು, ಪುದುಚೇರಿ, ಕೇರಳಗಳಿಗೂ ಕಳಿಸಲಾಗಿದ್ದು ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವೆಂದು ಕರ್ನಾಟಕ ಕೇಂದ್ರ ಜಲ ಆಯೋಗಕ್ಕೆ ಬರೆದ ಪತ್ರದಲ್ಲಿ ತಿಳಿಸಿದೆ.
 • ಮೇಕೆದಾಟು ಯೋಜನೆ ಸಮಗ್ರ ವರದಿಯನ್ನು ಕಾವೇರಿ ಜಲನಿರ್ವಹಣಾ ಪ್ರಾಧಿಕಾರ ಪರಿಶೀಲನೆ ನಡೆಸಿ ಅನುಮೋದನೆ ನೀಡಿದ ಬಳಿಕ ಕೇಂದ್ರ ಜಲಸಂಪನ್ಮೂಲ ಇಲಾಖೆಯ ಸಲಹಾ ಸಮಿತಿ ಎದುರು ವರದಿಯನ್ನು ಇಡಲಾಗುತ್ತದೆ.

ಗಣರಾಜ್ಯೋತ್ಸವಕ್ಕೆ ಮಹಾತ್ಮ ಗಾಂಧೀಜಿ ಸ್ತಬ್ಧಚಿತ್ರ

4.

ಸುದ್ಧಿಯಲ್ಲಿ ಏಕಿದೆ ?ಹೊಸದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಈ ಬಾರಿ ಕರ್ನಾಟಕದ ವತಿಯಿಂದ ಮಹಾತ್ಮ ಗಾಂಧೀಜಿ-ಬೆಳಗಾವಿ ಕಾಂಗ್ರೆಸ್‌ ಅಧಿವೇಶನವಿಷಯಾಧಾರಿತ ಸ್ತಬ್ಧಚಿತ್ರ ಸಾಗಲಿದೆ.

 • ಮಹಾತ್ಮ ಗಾಂಧಿ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಈ ಸ್ತಬ್ಧಚಿತ್ರ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪ್ರದರ್ಶಿಸಲಾಗುತ್ತದೆ.
 • 1924ರ ಡಿ.26 ಮತ್ತು 27ರಂದು ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನ ಒಂದು ಐತಿಹಾಸಿಕ ಘಟನೆಯಾಗಿದೆ.
 • ಜತೆಗೆ, ಜವಾಹರಲಾಲ್‌ ನೆಹರೂ, ಸರೋಜಿನಿ ನಾಯ್ಡು, ವಲ್ಲಭಾಬಾಯಿ ಪಟೇಲ್‌ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಅಧಿವೇಶನದಲ್ಲಿ ಕನ್ನಡ ನಾಡು ಮತ್ತು ಕನ್ನಡ ಭಾಷೆಯ ಇತಿಹಾಸ ಮತ್ತು ಸಂಸ್ಕೃತಿ ಬಿಂಬಿಸುವ ಕಾರ್ಯ ಸಹ ನಡೆಯಿತು. ಇದರ ಅಂಗವಾಗಿ, ಹುಯಿಲುಗೋಳ ನಾರಾಯಣರಾವ್‌ ಅವರ ಉದಯವಾಗಲಿ ಚೆಲುವ ಕನ್ನಡ ನಾಡುಗೀತೆಯನ್ನು ಹಾಡಲಾಗಿತ್ತು.
 • ಹಾಗಾಗಿ, ಈ ಬಾರಿ ಕಲಾವಿದ ಶಶಿಧರ ಅಡಪ ಅವರು ವಿನ್ಯಾಸಗೊಳಿಸಿರುವ ಮಹಾತ್ಮ ಗಾಂಧೀಜಿ-ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಎಂಬ ವಿಷಯಾಧಾರಿತ ಸ್ತಬ್ಧಚಿತ್ರ ರಾಜ್ಯವನ್ನು ಪ್ರತಿನಿಧಿಸಲಿದೆ. ಸಂಗೀತ ನಿರ್ದೇಶಕ ಪ್ರವೀಣ್‌ ಡಿ.ರಾವ್‌ ಅವರು ಉದಯವಾಗಲಿ ಚೆಲುವ ಕನ್ನಡ ನಾಡುಗೀತೆಗೆ ಸ್ವರ ಸಂಯೋಜಿಸಿದ್ದಾರೆ. ಪಥಸಂಚಲನದ ವೇಳೆ ಈ ಗೀತೆಯನ್ನು ಸಹ ಪ್ರಸಾರ ಮಾಡಲಾಗುತ್ತದೆ.

ಪ್ರಥಮಗಳಿಗೆ ಮುನ್ನುಡಿ ಬರೆಯಲಿರುವ ಗಣ ಪರೇಡ್‌

 • ಇದೇ ಮೊದಲ ಬಾರಿಗೆ ಪುರುಷ ತುಕಡಿಯ ಸಾರಥ್ಯವನ್ನು ಮಹಿಳಾ ಅಧಿಕಾರಿಯೊಬ್ಬರು ವಹಿಸಲಿದ್ದಾರೆ. ಹೈದರಾಬಾದ್‌ ಮೂಲದ ಲೆಫ್ಟಿನೆಂಟ್‌ ಭಾವನಾ ಕಸ್ತೂರಿ ಅವರು 144 ಪುರುಷ ಯೋಧರನ್ನು ಒಳಗೊಂಡಿರುವ ತುಕಡಿಯ ನೇತೃತ್ವ ವಹಿಸಲಿದ್ದಾರೆ. ಇವರು ಎರಡೂವರೆ ವರ್ಷಗಳ ಹಿಂದಷ್ಟೇ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದಾರೆ.
 • ಗಣರಾಜ್ಯೋತ್ಸವದಲ್ಲಿ ಮೊಟ್ಟಮೊದಲ ಬಾರಿಗೆ ಎಂ777 ಅಲ್ಟ್ರಾಲೈಟ್‌ ಹಾವಿಟ್ಜರ್‌ ಫಿರಂಗಿಗಳು ಪ್ರದರ್ಶನಗೊಳ್ಳಲಿವೆ. ಇದು ಅಮೆರಿಕದಿಂದ ಕಳೆದ ವರ್ಷ ಭಾರತೀಯ ಸೇನೆಗೆ ಸೇರ್ಪಡೆಯಾಗಿದೆ. ಅಲ್ಲದೇ ದಕ್ಷಿಣ ಕೊರಿಯಾ ಮೂಲದ ಕೆ9 ವಜ್ರಾ ಸ್ವಯಂಚಾಲಿತ ಗನ್‌ಗಳ ಪ್ರದರ್ಶನ ನಡೆಯಲಿದೆ.
 • ಜತೆಗೆ ಇದೇ ಮೊದಲ ಬಾರಿಗೆ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ನೆಲದಿಂದ ಆಕಾಶಕ್ಕೆ ನೆಗೆಯುವ ಮಧ್ಯಮ ಶ್ರೇಣಿಯ ಕ್ಷಿಪಣಿಗಳು ಮತ್ತು ಅರ್ಜುನ್‌ ಯುದ್ಧ ಕವಚ ಪುನರ್‌ಸ್ಥಾಪನೆ ಮತ್ತು ದುರಸ್ತಿ ವಾಹನ ಪ್ರದರ್ಶನಗೊಳ್ಳಲಿದೆ. ಅಲ್ಲದೇ ಪರೇಡ್‌ ಸಮಯದಲ್ಲಿ ಜೈವಿಕ ಇಂಧನ ಬಳಸಿ 32 ಸಾರಿಗೆ ವಿಮಾನಗಳು ಹಾರಾಡಲಿವೆ.
 • ಮೊಟ್ಟಮೊದಲ ಬಾರಿಗೆ ಸ್ವಾತಂತ್ರ್ಯ ಹೋರಾಟಗಾರ ಸುಭಾಶ್‌ಚಂದ್ರ ಬೋಸ್‌ ಅವರ ಐಎನ್‌ಎದ ನಾಲ್ವರು ಮಾಜಿ ಸೇನಾಧಿಕಾರಿಗಳು ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ. ಜತೆಗೆ ಇದೇ ಪ್ರಥಮವಾಗಿ ಸೇನೆಯಲ್ಲಿ ಮಹಿಳಾ ಶಕ್ತಿಯ ಪ್ರತಿಬಿಂಬವಾಗಿ ಮಹಿಳೆಯರೇ ಇರುವ ಅರೆಸೇನಾ ಪಡೆಯ ತುಕಡಿ ಪರೇಡ್‌ನಲ್ಲಿ ಪಾಲ್ಗೊಳ್ಳಲಿದೆ. ಅಸ್ಸಾಂ ರೈಫಲ್ಸ್‌ಗೆ ಸೇರಿದ ಈ ತುಕಡಿಯ ಸಾರಥ್ಯವನ್ನು ಮೇಜರ್‌ ಖುಷ್ಬೂ ಕನ್ವಾರ್‌ ವಹಿಸಲಿದ್ದಾರೆ.
 • ಸೇನೆಯಿಂದ ನಡೆಯುವ ಬೈಕ್‌ ಸಾಹಸ ಪ್ರದರ್ಶನಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಪಾಲ್ಗೊಳ್ಳಲಿದ್ದಾರೆ. ಒಂಬತ್ತು ಬೈಕ್‌ಗಳಲ್ಲಿ 33 ಪುರುಷ ಯೋಧರು ಹಾಗೂ ಕ್ಯಾಪ್ಟನ್‌ ಶಿಕ್ಷಾ ಸುರಭಿ ಸಾಹಸ ಪ್ರದರ್ಶಿಸಲಿದ್ದಾರೆ.

ಕಾವೇರಿಗೆ ಹರಿಯಲಿದೆ ಗೋದಾವರಿ ನೀರು:

ಸುದ್ಧಿಯಲ್ಲಿ ಏಕಿದೆ ?ಬಂಗಾಳಕೊಲ್ಲಿ ಸಮುದ್ರದ ಪಾಲಾಗುವ ಗೋದಾವರಿ ನದಿಯ ಹೆಚ್ಚುವರಿ ನೀರನ್ನು ಕೊಳವೆ ಮಾರ್ಗದ ಮೂಲಕ ಕಾವೇರಿ ನದಿಗೆ ಜೋಡಣೆ ಮಾಡುವ ಯೋಜನೆಯನ್ನು ಕೇಂದ್ರ ಸರಕಾರ ಸಿದ್ಧಪಡಿಸಿದೆ.

 • ಪ್ರತಿವರ್ಷ ಸುಮಾರು 1,100 ಟಿಎಂಸಿ ಗೋದಾವರಿ ನದಿ ನೀರು ಸಮುದ್ರ ಸೇರುತ್ತಿದ್ದು, ಇದರ ಸದ್ಬಳಕೆಯ ನಿಟ್ಟಿನಲ್ಲಿ ಗೋದಾವರಿ-ಕಾವೇರಿ ನದಿ ಜೋಡಣೆ ವರದಿ ಸಿದ್ಧಪಡಿಸಲಾಗಿದೆ. ಸಂಪುಟ ಸಭೆ ಒಪ್ಪಿಗೆ ಬಳಿಕ ವಿಶ್ವಬ್ಯಾಂಕ್‌ ಇಲ್ಲವೇ ಏಷ್ಯನ್‌ ಡವಲಪ್‌ಮೆಂಟ್‌ ಬ್ಯಾಂಕ್‌ ಮೂಲಕ 60 ಸಾವಿರ ಕೋಟಿ ರೂ. ಆರ್ಥಿಕ ನೆರವು ಪಡೆಯಲಾಗುವುದು

ಯಾರಿಗೆ ಅನುಕೂಲ ?

 • ಈ ಯೋಜನೆಯಿಂದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಿಗೆ ಅನುಕೂಲವಾಗಲಿದೆ.

ಏನು ಈ ನದಿ ಜೋಡಣೆ ಯೋಜನೆ ?

 • ‘ಮೊದಲು ಆಂಧ್ರದಲ್ಲಿ ಪೊಲಾವರಂ ಅಣೆಕಟ್ಟನ್ನು ನಿರ್ಮಾಣ ಮಾಡಲಾಗುತ್ತದೆ. ಅದರ ಹಿನ್ನೀರನ್ನು ಕೃಷ್ಣಾ ನದಿ, ಪೆನ್ನಾರ್‌ (ಪಿನಾಕಿನಿ) ನದಿಗಳ ಮೂಲಕ ಕಾವೇರಿಗೆ ಕೊಳವೆ ಮಾರ್ಗದಲ್ಲಿ ಹರಿಸಲಾಗುತ್ತದೆ.
 • ನೀರು ಆವಿಯಾಗುವುದನ್ನು ತಡೆಗಟ್ಟುವ ಉದ್ದೇಶದಿಂದ ಇಲ್ಲಿ ಕಾಲುವೆಗಳ ಬದಲಿಗೆ ವಿಶೇಷ ತಂತ್ರಜ್ಞಾನದ ಸ್ಟೀಲ್‌ ಕೊಳವೆಗಳ ಮೂಲಕ ನೀರನ್ನು ಹರಿಸುವ ಉದ್ದೇಶ ಹೊಂದಲಾಗಿದೆ. ಅಮೆರಿಕ ಮೂಲದ ಎಪಿ ಎಂಜಿನಿಯರ್‌ ಕಂಪನಿಯ ನೆರವು ಪಡೆಯಲಾಗುವುದು.”
 • ಈ ನದಿ ಜೋಡಣೆಯಲ್ಲಿ ಎರಡು ಯೋಜನೆಗಳು ಸೇರಿವೆ. ಮುಂದಿನ ದಿನಗಳಲ್ಲಿ ಇದು ನೀರಾವರಿ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಲಿದೆ

ಎರಡು ಯೋಜನೆಗಳು ಯಾವುವು?

 • ಮೊದಲನೆಯದ್ದು : ಪ್ರಾರಂಭಿಕ ಹಂತದಲ್ಲಿ 300 ಟಿಎಂಸಿ ಗೋದಾವರಿ ನದಿ ನೀರನ್ನು ಆಂಧ್ರ ಪ್ರದೇಶದ ನಾಗರ್ಜುನ ಸಾಗರ ಡ್ಯಾಮ್‌ ಮೂಲಕ ಪೋಲಾವರಂ ಯೋಜನೆಗೆ ಬೆಸೆದು ಬಳಿಕ ಕೃಷ್ಣಾ ನದಿಗೆ ತರುವುದು. ಅಲ್ಲಿಂದ ಮುಂದೆ ಪೆನ್ನಾರ್‌ ನದಿಗೆ ನಿರ್ಮಿಸಲಾಗಿರುವ ಸೋಮಸಿಲಾ ಅಣೆಕಟ್ಟೆಗೆ ತಂದು ಶೇಖರಿಸಿ, ಅದನ್ನು ಮುಂದೆ ಗ್ರ್ಯಾಂಡ್‌ ಅಣೆಕಟ್‌ ಡ್ಯಾಮ್‌ ಮೂಲಕ ಕಾವೇರಿ ನದಿಗೆ ಸೇರಿಸುವುದು.
 • ಇಲ್ಲಿ ಸ್ಟೀಲ್‌ ಕೊಳವೆ ಮಾರ್ಗದ ಮೂಲಕವೇ ನೀರು ಹರಿದುಬರಲಿದೆ. ಈ ಪ್ರಾಜೆಕ್ಟ್ನಿಂದ ಕಾವೇರಿ ನದಿಗೆ ಹೆಚ್ಚುವರಿಯಾಗಿ 100 ಟಿಎಂಸಿ ನೀರು ಸೇರಲಿದ್ದು, ಕರ್ನಾಟಕ ಮತ್ತು ತಮಿಳುನಾಡಿಗೆ ಅನುಕೂಲವಾಗಲಿದೆ.
 • ಎರಡನೇಯದ್ದು : ಗೋದಾವರಿಯ ಉಪನದಿಯಾಗಿರುವ ಇಂದ್ರಾವತಿ ನದಿ (ಮಧ್ಯ ಭಾರತ) ನೀರನ್ನು ನಾಗರ್ಜುನ ಡ್ಯಾಮ್‌ಗೆ ತಂದು, ಅಲ್ಲಿಂದ ಮುಂದೆ ಮತ್ತೆ ಸೋಮಸಿಲಾ ಅಣೆಕಟ್ಟೆಗೆ ಸಂಪರ್ಕಿಸಿ, ಬಳಿಕ ಅದನ್ನು ಕರ್ನಾಟಕದ ಸಂಪರ್ಕಕ್ಕೆ ಬಾರದೇ ನೇರವಾಗಿ ಕಾವೇರಿ ನದಿಗೆ ಜೋಡಿಸುವುದು ಎರಡನೇ ಯೋಜನೆ. ಇದರಿಂದ ತಮಿಳುನಾಡಿನ ಹಲವು ಭಾಗದ ರೈತರಿಗೆ ಅನುಕೂಲವಾಗಲಿದೆ.
 • 30 ನದಿ ಜೋಡಣೆ: ದೇಶದಲ್ಲಿ ಒಟ್ಟು 30 ನದಿ ಜೋಡಣೆ ಯೋಜನೆಗಳನ್ನು ಕೇಂದ್ರ ಸರಕಾರ ಕೈಗೊಂಡಿದೆ. ಆ ಪೈಕಿ ಗೋದಾವರಿ- ಕಾವೇರಿ, ಕೆನ್‌-ಬೆತ್ವಾ, ದಮನ್‌ ಗಂಗಾ- ಪಿಂಜಲ್‌, ತಾಪಿ- ನರ್ಮದಾ ಸೇರಿ 5 ಯೋಜನೆಗಳು ಮುಂಚೂಣಿಯಲ್ಲಿವೆ.

ಭಿನ್ನ ಧರ್ವಿುಯ ವಿವಾಹ ಅಮಾನ್ಯ

6.

ಸುದ್ಧಿಯಲ್ಲಿ ಏಕಿದೆ ?ಹಿಂದು ಮಹಿಳೆ ಮತ್ತು ಮುಸ್ಲಿಂ ಪುರುಷ ವಿವಾಹ ಅಮಾನ್ಯ, ಆದರೆ, ಈ ದಂಪತಿಗೆ ಜನಿಸಿದ ಮಗುವಿಗೆ ತಂದೆಯ ಆಸ್ತಿಯಲ್ಲಿ ಸಂಪೂರ್ಣ ಹಕ್ಕಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ತೀರ್ಪಿನ ಮುಖ್ಯ ಅಂಶಗಳು

 • ಇಂಥ ಮದುವೆ ಕಾನೂನಿನಲ್ಲಿ ಅಮಾನ್ಯವಾದರೂ ಮಹಿಳೆ, ಪತಿಯ ಸ್ವಂತಗಳಿಕೆ ಆಸ್ತಿ ಪಡೆಯಬಹುದು. ಆದರೆ, ಗಂಡನಿಗೆ ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿಯಲ್ಲಿ ಪಾಲಿರುವುದಿಲ್ಲ.
 • ಈ ದಂಪತಿಗೆ ಜನಿಸಿದ ಮಗುವಿಗೆ ತನ್ನ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕಿದೆ ಎಂದು ಹೇಳಿದೆ.

ಹಿನ್ನಲೆ

 • ಹಿಂದು ಯುವತಿ ಮತ್ತು ಮುಸ್ಲಿಂ ಯುವಕನ ಮದುವೆ ವ್ಯಾಜ್ಯ ಮತ್ತು ಆಸ್ತಿ ಹಕ್ಕಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕೇರಳದ ಹೈಕೋರ್ಟ್ ನೀಡಿದ್ದ (ಮಗುವಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕಿದೆ) ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.

ತೀರ್ಪಿಗೆ ಕಾರಣ

 • ಹಿಂದುಗಳು ಮೂರ್ತಿ ಪೂಜಕರು, ಮುಸ್ಲಿಮರು ನಿರಾಕಾರದ ಆರಾಧಕರು. ಭಿನ್ನಧರ್ವಿುಯರು ವಿವಾಹವಾದರೆ ಇದು ಕಾನೂನುಬಾಹಿರವೇ ಆಗುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಸುಭಾಷ್ ಚಂದ್ರ ಬೋಸ್ ಮ್ಯೂಸಿಯಂ 

7.

ಸುದ್ಧಿಯಲ್ಲಿ ಏಕಿದೆ ?ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ಅಪ್ರತಿಮ ದೇಶಭಕ್ತ ಸುಭಾಷ್ ಚಂದ್ರ ಬೋಸ್ ಅವರ 122ನೇ ಜನ್ಮದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆ ಸಂಕೀರ್ಣದಲ್ಲಿ ಸುಭಾಷ್ ಚಂದ್ರ ಬೋಸ್ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಿದರು.

 • ಅದರ ಜತೆಗೆ ಯಾದ್-ಇ-ಜಲಿಯನ್ ಮ್ಯೂಸಿಯಂ (ಜಲಿಯನ್‌ವಾಲಾಬಾಗ್ ಮತ್ತು 1 ನೇಮಹಾಯುದ್ಧಕ್ಕೆ ಸಂಬಂಧಿಸಿದ) 1857 ರಲ್ಲಿ ನಡೆದ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ಮ್ಯೂಸಿಯಂ ಮತ್ತು ಭಾರತೀಯ ಕಲೆಗೆ ಸಂಬಂಧಿಸಿದ ದೃಶ್ಯ ಕಲಾ ಮ್ಯೂಸಿಯಂ ಅನ್ನು ಉದ್ಘಾಟಿಸಿದರು.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ವಸ್ತುಸಂಗ್ರಹಾಲಯ:

 • 1857ರಲ್ಲಿ ಸಿಡಿದೆದ್ದ ಭಾರತೀಯರು, ಬ್ರಿಟಿಷರ ವಿರುದ್ಧ ತೋರಿದ ಕೆಚ್ಚೆದೆಯ ಶೌರ್ಯ ಮತ್ತು ಸಾಹಸಗಳ ಕಥಾನಕ ಈ ವಸ್ತುಸಂಗ್ರಹಾಲಯದಲ್ಲಿ ಇದೆ.
 • ಯಾದಿ-ಇ-ಜಲಿಯನ್ ಮ್ಯೂಸಿಯಂ ಏಪ್ರಿಲ್ 13, 1919 ರಂದು ನಡೆದ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಬಗ್ಗೆ ಸಂಪೂರ್ಣ ಬೆಳಕು ಚೆಲ್ಲುತ್ತದೆ. ದುರಂತ ನಡೆದ ಸ್ಥಳದಲ್ಲಿ ನಿರ್ಮಿಸಲಾದ ಸ್ಮಾರಕದ ಪ್ರತಿಕೃತಿಯನ್ನು ಸಹ ಈ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ. 1 ನೇ ಮಹಾಯುದ್ಧದ ಸಂದರ್ಭದಲ್ಲಿ ಭಾರತೀಯ ಯೋಧರು ತೋರಿದ ಶೌರ್ಯ ಮತ್ತು ತ್ಯಾಗವನ್ನು ಸಹ ಮ್ಯೂಸಿಯಂ ಪ್ರದರ್ಶಿಸುತ್ತದೆ.

ಮ್ಯೂಸಿಯಂ ವಿಶೇಷತೆ

 • ಬೋಸ್ ಮತ್ತು ಭಾರತೀಯ ರಾಷ್ಟ್ರೀಯ ಸೇನೆ (INA) ವಸ್ತು ಸಂಗ್ರಹಾಲಯವು ಸುಭಾಷ್ ಚಂದ್ರ ಬೋಸ್ ಮತ್ತು ಐಎನ್ಎಗೆ ಸಂಬಂಧಿಸಿದ ವಿವಿಧ ಕಲಾಕೃತಿಗಳನ್ನು ಒಳಗೊಂಡಿದೆ.
 • ಐಎನ್ಎ ನಾಯಕ ಬಳಸಿದ ಕುರ್ಚಿ, ಕತ್ತಿ, ಪದಕಗಳು, ಬ್ಯಾಡ್ಜ್, ಸಮವಸ್ತ್ರಗಳು ಮತ್ತು ಇತರ ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ.
 • ಬೋಸ್ ಮತ್ತು ಐಎನ್ಎಗಳ ಕುರಿತಾದ ಸಾಕ್ಷ್ಯಚಿತ್ರವು ಮಹಾನ್ ಸ್ವಾತಂತ್ರ್ಯ ಹೋರಾಟಗಾರನಿಗಿದ್ದ ಗುರಿಯ ಬಗ್ಗೆ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಟ ಅಭಿಷೇಕ್ ಬಚ್ಚನ್ ಧ್ವನಿಯಲ್ಲಿ ಈ ಸಾಕ್ಷ್ಯಚಿತ್ರ ಮೂಡಿ ಬಂದಿದೆ.

ಜಲಿಯನ್ವಾಲಾ ಬಾಗ್ ಹತ್ಯಾಕಾಂಡ

 • ರೌಲಟ್ ಆಕ್ಟ್ ವಿರುದ್ಧ ದಂಗೆಗಳು ಮತ್ತು ಪ್ರತಿಭಟನೆಗಳು ನಡೆದಿರುವುದರಿಂದ ಪಂಜಾಬ್ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿತ್ತು .
 • ಪಂಜಾಬ್ ಅನ್ನು ಮಾರ್ಶಿಯಲ್ ಕಾನೂನಿನಡಿಯಲ್ಲಿ ಇರಿಸಲಾಯಿತು, ಇದರರ್ಥ 4 ಕ್ಕಿಂತಲೂ ಹೆಚ್ಚಿನ ಜನರು ಒಂದು ಸ್ಥಳದಲ್ಲಿ ಒಟ್ಟುಗೂಡುವುದು ಕಾನೂನುಬಾಹಿರ.
 • ಆ ಸಮಯದಲ್ಲಿ ಪಂಜಾಬ್ನ ಲೆಫ್ಟಿನೆಂಟ್-ಗವರ್ನರ್ ಮೈಕೆಲ್ ಒ‘ಡೈಯರ್ ಮತ್ತು ಭಾರತದ ವೈಸ್ರಾಯ್ ಲಾರ್ಡ್ ಚೆಮ್ಸ್ಫೊರ್ಡ್  ಆಗಿದ್ದರು .
 • 13 ಏಪ್ರಿಲ್ 1919 ರಂದು ಬೈಸಾಖಿಯ ಉತ್ಸವದ ದಿನದಂದು ಅಮೃತಸರದಲ್ಲಿರುವ ಸಾರ್ವಜನಿಕ ತೋಟವಾದ ಜಲಿಯನ್ವಾಲಾ ಬಾಗ್ನಲ್ಲಿ ಅಹಿಂಸಾತ್ಮಕ ಪ್ರತಿಭಟನಾಕಾರರು ಒಟ್ಟುಗೂಡಿದರು.ಅವರಲ್ಲಿ ಪ್ರೇ ಬೈಸಾಖಿಯನ್ನು ಆಚರಿಸಲು ಬಂದಿದ್ದ ಯಾತ್ರಿಗಳು ಸಹ ಇದ್ದರು .
 • ಜನರಲ್ ಡೈಯರ್ ತನ್ನ ಸೇನೆಯೊಂದಿಗೆ ಅಲ್ಲಿಗೆ ಬಂದು ಉದ್ಯಾನಕ್ಕೆ ಇದ್ದ ಕೇವಲ ಕಿರಿದಾದ ಪ್ರವೇಶವನ್ನು ನಿರ್ಬಂಧಿಸಿದರು.ನಂತರ, ಯಾರಿಗೂ ಎಚ್ಚರಿಕೆ ನೀಡದೆ , ಅವರು ತಮ್ಮ ಸೈನಿಕರಿಗೆ ಶಸ್ತ್ರಾಸ್ತ್ರಗಳಿಂದ ಗುಂಡನ್ನು ಹಾರಿಸುವಂತೆ ಆದೇಶಿಸಿದರು.
 • ವಿವೇಚನಾರಹಿತವಾದ ಈ ಪ್ರಕ್ರಿಯೆಯು ಸುಮಾರು 10 ನಿಮಿಷಗಳ ಕಾಲ ನಡೆಯಿತು, ಇದು ಕನಿಷ್ಠ 1000 ಜನರ ಸಾವಿಗೆ ಕಾರಣವಾಯಿತು ಮತ್ತು 1500 ಕ್ಕಿಂತ ಹೆಚ್ಚು ಜನರು ಗಾಯಗೊಂಡರು.
 • ಈ ದುರಂತವು ಭಾರತೀಯರಿಗೆ ಅಸಹಜ ಆಘಾತವಾಗಿತ್ತು ಮತ್ತು ಬ್ರಿಟೀಷ್ ವ್ಯವಸ್ಥೆಯ ನ್ಯಾಯದಲ್ಲಿ ತಮ್ಮ ನಂಬಿಕೆಯನ್ನು ಸಂಪೂರ್ಣವಾಗಿ ನಾಶಗೊಳಿಸಿತು.
 • ಹತ್ಯಾಕಾಂಡಕ್ಕೆ ವಿಚಾರಣೆ ನಡೆಸಲು ಸರ್ಕಾರವು ಹಂಟರ್ ಆಯೋಗವನ್ನು ಸ್ಥಾಪಿಸಿತು. ಈ ಆಯೋಗವು ಡೈಯರ್ರಿಂದ ಆಪಾದನೆಯನ್ನು ಖಂಡಿಸಿದರೂ, ಅದು ಅವನ ವಿರುದ್ಧ ಯಾವುದೇ ಶಿಸ್ತಿನ ಕ್ರಮವನ್ನು ವಿಧಿಸಲಿಲ್ಲ.

‘ಬೇಟಿ ಬಚಾವೋ, ಬೇಟಿ ಪಡಾವೋ’

8.

ಸುದ್ಧಿಯಲ್ಲಿ ಏಕಿದೆ ?2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಮುನ್ನೆಲೆಗೆ ತಂದ ‘ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ’ಯ ಪ್ರಚಾರಕ್ಕೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ಕಾರ್ಯಗತಗೊಳಿಸಲು ಕೊಡದಿರುವುದು ಬೆಳಕಿಗೆ ಬಂದಿದೆ.

 • ಮೋದಿ ಸರಕಾರ ಚಾಲನೆ ನೀಡಿದ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಪ್ರಚಾರ ಮತ್ತು ಜಾಹೀರಾತು ಸಂಬಂಧಿಸಿದ ಚಟುವಟಿಕೆಗಳಿಗೆ ನಿಧಿಯ ಶೇ.56ರಷ್ಟು ಹಣವನ್ನು ಉಪಯೋಗಿಸಿದೆ. ಆದರೆ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಶೇ.25ಕ್ಕಿಂತ ಕಡಿಮೆ ಹಣವನ್ನು ವ್ಯಯಿಸುವ ಮೂಲಕ ಪ್ರತಿಪಕ್ಷಗಳ ಟೀಕೆಗೆ ಮತ್ತೊಮ್ಮೆ ಗುರಿಯಾಗಿದೆ.

ಏನಿದು ಭೇಟಿ ಬಚಾವೋ ಭೇಟಿ ಪಡಾವೋ ಯೋಜನೆ ?

 • ಭಾರತ ಸರ್ಕಾರವು ಭೇಟಿ ಬಚಾವೋ ಭೇಟಿ ಪಡಾವೋ (ಬಿಬಿಬಿಪಿ) ಯೋಜನೆಯೊಂದನ್ನು ಹೆಣ್ಣು ಮಗುವಿನ ಬದುಕುಳಿಯುವಿಕೆ, ರಕ್ಷಣೆ ಮತ್ತು ಶಿಕ್ಷಣಕ್ಕಾಗಿ ಪರಿಚಯಿಸಿದೆ. ಇದು ಸಾಮಾಜಿಕ ಮನಸ್ಸನ್ನು ಬದಲಿಸುವ ಉದ್ದೇಶದಿಂದ ದೇಶದಾದ್ಯಂತ ಸಾಮೂಹಿಕ ಅಭಿಯಾನದ ಮೂಲಕ ಕ್ಷೀಣಿಸುತ್ತಿರುವ ಮಕ್ಕಳ ಸೆಕ್ಸ್ ಅನುಪಾತ (CSR) ಸಮಸ್ಯೆಯನ್ನು ಪರಿಹರಿಸಲು ಮತ್ತು ಸಮಸ್ಯೆಯ ವಿಷಮಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ
 • ಈ ಯೋಜನೆಯು 100 ಜಿಲ್ಲೆಗಳಲ್ಲಿ ಕಡಿಮೆ ಮಕ್ಕಳ ಸೆಕ್ಸ್ ಅನುಪಾತದೊಂದಿಗೆ ಮಧ್ಯಸ್ಥಿಕೆ ಮತ್ತು ಬಹು-ವಲಯ ಕಾರ್ಯವನ್ನು ಕೇಂದ್ರೀಕರಿಸಿದೆ.
 • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಜಂಟಿ ಉಪಕ್ರಮವಾಗಿದೆ ಭೇಟಿ ಬಚಾವೋ ಭೇಟಿ ಪಡಾವೋ ಯೋಜನೆ.

ಗುಜರಾತ್​ನಲ್ಲಿ ಒಂಟೆ ಹಾಲು ಮಾರುಕಟ್ಟೆಗೆ!

9.

ಸುದ್ಧಿಯಲ್ಲಿ ಏಕಿದೆ ?ಪೌಷ್ಟಿಕಾಂಶಗಳಿಂದ ಕೂಡಿದ ಒಂಟೆ ಹಾಲನ್ನು ಅಮುಲ್ ಸಂಸ್ಥೆ ಇದೇ ಮೊದಲ ಬಾರಿಗೆ ಮಾರುಕಟ್ಟೆಗೆ ಪರಿಚಯಿಸಿದ್ದು, ಗುಜರಾತ್​ನ ಗಾಂಧಿನಗರ, ಅಹಮದಾಬಾದ್ ಮತ್ತು ಕಛ್​ನಲ್ಲಿ ದೊರೆಯುತ್ತಿದೆ.

 • ಒಂಟೆ ಹಾಲಿನಿಂದ ತಯಾರಿಸಿದ ಚಾಕೊಲೇಟ್​ಗೆ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಒಂಟೆ ಹಾಲನ್ನೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
 • ಅರ್ಧ ಲೀಟರ್​ನ ಬಾಟಲ್​ಗೆ ರೂ. 50 ದರವಿದ್ದು, ಈ ಹಾಲು ಮೂರು ದಿನಗಳವರೆಗೂ ಕೆಡುವುದಿಲ್ಲ ಎಂದು ಅಮುಲ್ ಹೇಳಿದೆ.
 • ಸದ್ಯ ಗುಜರಾತ್​ನ ಮೂರು ನಗರಗಳಲ್ಲಿ ಮಾತ್ರ ಈ ಹಾಲು ದೊರೆಯುತ್ತಿದ್ದು, ಹಂತ ಹಂತವಾಗಿ ಎಲ್ಲೆಡೆಗೆ ವಿಸ್ತರಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಒಂಟೆ ಹಾಲಿನ ವಿಶೇಷತೆ

 • ಜೀವಸತ್ವ, ಖನಿಜಾಂಶ ಮತ್ತು ಇಮ್ಯುನೊಗ್ಲೋಬಿನ್​ಗಳಿಂದ ಕೂಡಿರುವ ಒಂಟೆ ಹಾಲು ಆರೋಗ್ಯಕ್ಕೆ ಉತ್ತಮ ಪೇಯ.
 • ಹಸುವಿನ ಹಾಲಿಗಿಂತ ಮೂರು ಪಟ್ಟು ಹೆಚ್ಚು ವಿಟಮಿನ್ ಸಿ ಮತ್ತು 10 ಪಟ್ಟು ಅಧಿಕ ಕಬ್ಬಿಣಾಂಶ.
 • ಗೋವಿನ ಹಾಲಿಗಿಂತ ಹೆಚ್ಚಿನ ಮಟ್ಟದಲ್ಲಿ ಪೊಟ್ಯಾಷಿಯಂ, ಮೆಗ್ನಿಸಿಯಂ, ತಾಮ್ರ, ಮ್ಯಾಂಗನೀಸ್, ಸೋಡಿಯಂ.
 • ಹಸು, ಎಮ್ಮೆ, ಮೇಕೆ ಹಾಲಿಗಿಂತ ಕಡಿಮೆ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಇರುವ ಕಾರಣ ಬೇಗ ಜೀರ್ಣವಾಗುತ್ತದೆ.
 • ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ಸಮತೋಲನ ಮಾಡುವ ಇದು, ಮಧುಮೇಹಿಗಳಿಗೆ ಆರೋಗ್ಯದಾಯಕ.
 • ಗರಿಷ್ಠ ಪೋಷಕಾಂಶ ಹೊಂದಿರುವ ಇದು ಅಪೌಷ್ಟಿಕತೆ ಯಿಂದ ಬಳಲುವ ಮಕ್ಕಳ ಚೇತರಿಕೆಗೆ ರಾಮಬಾಣ.

ಇ-ಪಾಸ್​ಪೋರ್ಟ್ ಸೇವೆ

ಸುದ್ಧಿಯಲ್ಲಿ ಏಕಿದೆ ?ಭಾರತದಲ್ಲಿ ಶೀಘ್ರವೇ ಇ-ಪಾಸ್​ಪೋರ್ಟ್ ಸೇವೆ ಆರಂಭಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 • ದೇಶ, ವಿದೇಶಗಳಲ್ಲಿರುವ ರಾಯಭಾರ ಕಚೇರಿಗಳಲ್ಲಿನ ದಾಖಲೆಗಳನ್ನು ಡಿಜಟಲೀಕರಣಗೊಳಿಸಿ ಕೇಂದ್ರೀಕೃತ ವ್ಯವಸ್ಥೆ ರೂಪಿಸಲಾಗುತ್ತಿದೆ.
 • ಬಳಿಕ ಪ್ರತಿ ಪಾಸ್​ಪೋರ್ಟ್​ಗೆ ಚಿಪ್ ಅಳವಡಿಕೆ ಮಾಡಿ ಇ-ಪಾಸ್​ಪೋರ್ಟ್ ವಿತರಿಸಲಾಗುವುದು.
 • ಭದ್ರತೆ, ವ್ಯವಹಾರದ ಉದ್ದೇಶದಿಂದ ಸಾರ್ವಜನಿಕರಿಗೆ ಲಾಭವಾಗಲಿದೆ
 • ಈಗಾಗಲೇ ಭಾರತದಲ್ಲಿ ಇ-ವೀಸಾ ವ್ಯವಸ್ಥೆಯಿದೆ. ಇದರ ಜತೆಗೆ ಪಿಐಒ ಹಾಗೂ ಒಸಿಐ ಕಾರ್ಡ್​ಗಳ ವಿತರಣೆ ಕೂಡ ಸರಳೀಕರಿಸಲಾಗಿದೆ.
 • ಇನ್ನಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ ಅನಿವಾಸಿ ಭಾರತೀಯರ ಜತೆಗೆ ರ್ಚಚಿಸಲಾಗುತ್ತಿದೆ.

E-Passport ಎಂದರೇನು?

 • ಇ-ಪಾಸ್ಪೋರ್ಟ್ ಎಂಬುದು ಒಂದು ಬಯೋಮೆಟ್ರಿಕ್ ಪಾಸ್ಪೋರ್ಟ್ ಆಗಿದ್ದು, ಇದು ಚೀಪ್ ಅನ್ನು ಒಳಗೊಂಡಿರುತ್ತದೆ, ಇದನ್ನು ಬಾರ್ಡರ್ ಫೋರ್ಸ್ ಅಧಿಕಾರಿ ಪರಿಶೀಲಿಸುವ ಅಗತ್ಯವಿರುವುದಿಲ್ಲ ಬದಲಾಗಿ  ಸ್ವಯಂಚಾಲಿತ ಇಪಾಸ್ಪೋರ್ಟ್ ಗೇಟ್ಗಳಲ್ಲಿ ಬಳಸಬಹುದು.
 • ಪಾಸ್ಪೋರ್ಟ್ನ ಡೇಟಾ ಪುಟದಲ್ಲಿ ಮುದ್ರಿಸಲಾದ ಅದೇ ಮಾಹಿತಿಯನ್ನು ಚಿಪ್ ಹೊಂದಿದೆ: ಹೊಂದಿರುವವರ ಹೆಸರು, ಹುಟ್ಟಿದ ದಿನಾಂಕ, ಮತ್ತು ಇತರ ಮಾಹಿತಿ. ಜರ್ಮನಿ ಸೇರಿದಂತೆ ಕೆಲವು ದೇಶಗಳಲ್ಲಿ, ಇಪಸ್ಪೋರ್ಟ್ಸ್ನಲ್ಲಿ ಎರಡು ಬೆರಳಚ್ಚುಗಳು ಸೇರಿವೆ.
 • ಇಪಾಸ್ಪೋರ್ಟ್ಗಳು ಭದ್ರತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲ್ಪಟ್ಟಿವೆ, ಇದರಿಂದಾಗಿ ಪಾಸ್ಪೋರ್ಟ್ನಲ್ಲಿ ದಾಖಲಾದ ಡೇಟಾವನ್ನು ಬದಲಾಯಿಸಲು ಕಷ್ಟವಾಗುತ್ತದೆ ಮತ್ತು ಆದ್ದರಿಂದ ಮೋಸದ ಸಾಧ್ಯತೆಯನ್ನು ಸೀಮಿತಗೊಳಿಸುತ್ತದೆ

ಭಾರತೀಯ ಸೇನೆಗೆ ಫ್ರಾನ್ಸ್‌ನಿಂದ ಟ್ಯಾಂಕ್‌ ಪ್ರತಿರೋಧಿ ಕ್ಷಿಪಣಿ

11

ಸುದ್ಧಿಯಲ್ಲಿ ಏಕಿದೆ ?ಸೇನೆಯ ಪದಾತಿದಳವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಫ್ರಾನ್ಸ್‌ನಿಂದ 1,000 ಕೋಟಿ ರೂ. ವೆಚ್ಚದಲ್ಲಿ 3,000ಕ್ಕೂ ಅಧಿಕ ಮಿಲನ್‌ –2ಟಿಟ್ಯಾಂಕ್‌ ಪ್ರತಿರೋಧಕ ಪಥ ನಿರ್ದೇಶಿತ ಕ್ಷಿಪಣಿಗಳನ್ನು (ಆ್ಯಂಟಿ ಟ್ಯಾಂಕ್‌ ಗೈಡೆಡ್‌ ಮಿಸೈಲ್‌-ಎಟಿಜಿಎಂ) ಖರೀದಿಸಲು ಭಾರತೀಯ ಸೇನೆ ಮುಂದಾಗಿದೆ.

 • ಫ್ರೆಂಚ್‌ ಸಂಸ್ಥೆಯ ಸಹಯೋಗದಲ್ಲಿ ಭಾರತ್‌ ಡೈನಾಮಿಕ್ಸ್‌ ಲಿಮಿಟೆಡ್‌ (ಬಿಡಿಎಲ್‌) ಸಂಸ್ಥೆಯು ಈ ಕ್ಷಿಪಣಿಗಳನ್ನು ತಯಾರಿಸಲು ಅನುಮತಿ ಪಡೆದಿದೆ.
 • ಭಾರತೀಯ ಸೇನೆಗೆ ವಿವಿಧ ಬಗೆಯ ಸುಮಾರು 7,000 ಟ್ಯಾಂಕ್‌ ಪ್ರತಿರೋಧಕ ಪಥ ನಿರ್ದೇಶಿತ ಕ್ಷಿಪಣಿಗಳ ಅಗತ್ಯವಿದೆ. ಜತೆಗೆ ಸುಮಾರು 850 ವಿವಿಧ ನಮೂನೆಯ ಲಾಂಚರ್‌ಗಳ ಅಗತ್ಯವೂ ಇದೆ. ಆದರೆ, ಭಾರತೀಯ ಸೇನೆ ಮೂರನೇ ತಲೆಮಾರಿನ ‘ಎಟಿಜಿಎಂ’ಗಳನ್ನು ಖರೀದಿಸಲು ಬಯಸಿದೆ.

3ನೇ ತಲಮಾರಿಗೆ ಬೇಡಿಕೆ:

 • ಪ್ರಸ್ತುತ ಡಿಆರ್‌ಡಿಒ, 3ನೇ ತಲೆಮಾರಿನ ಹಾಗೂ ಸುಲಭವಾಗಿ ಒಂದೆಡೆಯಿಂದ ಮತ್ತೊಂದೆಡೆಗೆ ಕೊಂಡೊಯ್ಯಬಹುದಾದ ‘ಎಟಿಜಿಎಂ’ಗಳನ್ನು ತಯಾರಿಸುವ ಜವಾಬ್ದಾರಿ ಹೊತ್ತಿದ್ದು, ಇವುಗಳ ಪ್ರಯೋಗಿಕ ಪರೀಕ್ಷೆ ನಡೆಯುತ್ತಿದೆ.
 • ಪ್ರಸ್ತುತ ಸೇನೆಯ ಬಳಿ ಇರುವ ಮಿಲನ್‌ 2ಟಿಮತ್ತು ಕಾಂಕರ್ಸ್‌ ಕ್ಷಿಪಣಿಗಳಿಗಿಂತ ಹೆಚ್ಚಿನ ವ್ಯಾಪ್ತಿ ಹೊಂದಿರುವ ಮೂರನೇ ತಲೆಮಾರಿನ ಎಟಿಜಿಎಂಗಳು ಹೆಚ್ಚು ಪರಿಣಾಮಕಾರಿ ಹಾಗೂ ಅಧಿಕ ದಾಳಿ ಸಾಮರ್ಥ್ಯದವುಗಳೂ ಆಗಿರುತ್ತವೆ. ಆದರೆ, ಇವು ಸೇನೆಯ ಬತ್ತಳಿಕೆ ಸೇರುವವರೆಗೂ ಪರ್ಯಾಯವಾಗಿ ಫ್ರಾನ್ಸ್‌ನಿಂದ 3000 ಎಟಿಜಿಎಂಗಳನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 • ಇಸ್ರೇಲ್‌ನಿಂದ ಪೂರೈಕೆ ಸ್ಥಗಿತ: ಇಸ್ರೇಲ್‌ನಿಂದ ಸ್ಪೈಕ್‌ ಎಟಿಜಿಎಂಗಳನ್ನು ಖರೀದಿಸುವ ಯೋಜನೆಯನ್ನು ಕಳೆದ ವರ್ಷ ಭಾರತ ಸರಕಾರ ರದ್ದುಪಡಿಸಿತ್ತು.

ಭಾರತಕ್ಕೆ’ಥಾಡ್‌’ ಕ್ಷಿಪಣಿ ರಕ್ಷಣಾ ತಂತ್ರಜ್ಞಾನ

12.

ಸುದ್ಧಿಯಲ್ಲಿ ಏಕಿದೆ ?ಅಮೆರಿಕ ಸರಕಾರ ಮೊದಲಿನಿಂದಲೂ ಭಾರತದ ಜತೆ ಹಲವಾರು ಮಿಲಿಟರಿ ಒಪ್ಪಂದಗಳನ್ನು ಮಾಡಿಕೊಂಡಿದೆ. ಸದ್ಯ, ಪೆಂಟಗನ್‌ ಹೊರಡಿಸಿರುವ 81 ಪುಟಗಳ ಮಿಸೈಲ್‌ ಡಿಫೆನ್ಸ್‌ ರಿವ್ಯೂ ವರದಿಯಲ್ಲಿ ಅದು ಹೇಳಿರುವಂತೆ, ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಭಾರತದ ಜತೆಗೆ ಹಂಚಿಕೊಳ್ಳಲು ಅಮೆರಿಕ ಮುಂದಾಗಿದೆ.

ನಿರ್ಧಾರಕ್ಕೆ ಕಾರಣ?

 • ಕ್ಷಿಪಣಿ ದಾಳಿ ಸಾಮರ್ಥ್ಯ ಇಂದು ಕೆಲವೇ ದೇಶಗಳಿಗೆ ಸೀಮಿತವಾಗಿಲ್ಲ. ದಕ್ಷಿಣ ಏಷ್ಯಾದ ಹಲವು ರಾಷ್ಟ್ರಗಳು ಅತ್ಯಾಧುನಿಕ ಮತ್ತು ವೈವಿಧ್ಯಮಯ ದೂರವ್ಯಾಪ್ತಿಯ ಬ್ಯಾಲಿಸ್ಟಿಕ್‌ ಹಾಗೂ ಕ್ರ್ಯೂಸ್‌ ಕ್ಷಿಪಣಿಗಳನ್ನು ಹೊಂದುತ್ತಿವೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ವ್ಯೂಹಾತ್ಮಕವಾಗಿ ಅಮೆರಿಕಕ್ಕೆ ಮಿತ್ರ ಸ್ಥಾನದಲ್ಲಿರುವ ಭಾರತದೊಂದಿಗೆ ಅಮೆರಿಕದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಹಂಚಿಕೊಳ್ಳುವುದು ಅಗತ್ಯವಾಗಿದೆ.

ಹಿನ್ನಲೆ

 • ರಷ್ಯದ ಜತೆ ಒಪ್ಪಂದ ತಂದ ಆತಂಕ: ಪಕ್ಕದ ದೇಶಗಳಾದ ಚೀನಾ ಮತ್ತು ಪಾಕಿಸ್ತಾನ ತಮ್ಮ ಕ್ಷಿಪಣಿ ದಾಳಿ ಬಲವನ್ನು ಇತ್ತೀಚೆಗೆ ಹೆಚ್ಚಿಸಿಕೊಳ್ಳುತ್ತಿರುವುದು ಭಾರತದ ಆತಂಕಕ್ಕೆ ಕಾರಣವಾಗಿತ್ತು.
 • ಈ ಹಿನ್ನೆಲೆಯಲ್ಲಿ, ಅಮೆರಿಕದ ಕ್ಷಿಪಣಿ ರಕ್ಷಣಾ ವ್ಯವಸ್ಥೆ, ಅದರಲ್ಲೂ ಮುಖ್ಯವಾಗಿ ‘ಥಡ್‌ಎಂದೇ ಕರೆಯಲಾಗುವ ಟರ್ಮಿನಲ್‌ ಹೈ ಅಲ್ಟಿಟ್ಯೂಡ್‌ ಏರಿಯಾ ಡಿಫೆನ್ಸ್‌ ವ್ಯವಸ್ಥೆಯನ್ನು ಖರೀದಿಸಲು ಭಾರತ ಆಸಕ್ತಿ ತೋರಿಸಿತ್ತು. ಆದರೆ ಈ ಹಿಂದಿನ ಒಬಾಮ ಸರಕಾರ ಅದನ್ನು ಭಾರತಕ್ಕೆ ನೀಡಲು ಒಲವು ವ್ಯಕ್ತಪಡಿಸಿರಲಿಲ್ಲ.
 • ಇದರಿಂದಾಗಿ ಭಾರತ ಕೆಲವು ತಿಂಗಳ ಹಿಂದೆ, ಸುಮಾರು 500 ಕೋಟಿ ಡಾಲರ್‌ ಮೌಲ್ಯದ ಎಸ್‌-400 ವಾಯು ರಕ್ಷಣಾ ವ್ಯವಸ್ಥೆಯನ್ನು ರಷ್ಯಾ ದೇಶದಿಂದ ಖರೀದಿಸಲು ಮುಂದಾಗಿತ್ತು. ಈ ಒಪ್ಪಂದಕ್ಕೆ ಅಮೆರಿಕ ಅಸಮಾಧಾನ ವ್ಯಕ್ತಪಡಿಸಿತ್ತು. ಪ್ರಸ್ತುತ ಇನ್ನೂ ಮುಂದೆ ಹೋಗಿ ಥಡ್‌ ಅನ್ನು ಹಂಚಿಕೊಳ್ಳಲು ಮುಂದಾಗಿದೆ. ಕೋಟ್ಯಂತರ ಡಾಲರ್‌ ಮೌಲ್ಯದ ಒಪ್ಪಂದ ಕೈತಪ್ಪುವ ಆತಂಕ ಹಾಗೂ ಈ ಪ್ರದೇಶದಲ್ಲಿ ವ್ಯೂಹಾತ್ಮಕ ಭಾಗೀದಾರಿಕೆಯಲ್ಲಿ ಭಾರತ ಭಿನ್ನ ನಿಲುವು ತಾಳುವ ಆತಂಕಗಳು ಅಮೆರಿಕವನ್ನು ಈ ಹೆಜ್ಜೆಗೆ ಪ್ರೇರೇಪಿಸಿವೆ.
 • ರಕ್ಷಣಾ ವ್ಯವಸ್ಥೆ ಜಾಲ: ಪ್ರಸ್ತುತ ಅಮೆರಿಕವು ಜಪಾನ್‌, ದಕ್ಷಿಣ ಕೊರಿಯಾ ಹಾಗೂ ಆಸ್ಪ್ರೇಲಿಯಾದ ಜತೆ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಜಾಲವನ್ನು ಹೊಂದಿದೆ. ಭಾರತದದ ಜತೆ ಒಪ್ಪಂದ ಮಾಡಿಕೊಳ್ಳುವ ಮೂಲಕ, ನಮ್ಮ ದೇಶವೂ ಈ ಜಾಲದೊಳಗೆ ಸೇರಿಕೊಳ್ಳಲಿದೆ.
 • ಈ ಜಾಲದಲ್ಲಿ ಯಾವುದೇ ದೇಶದ ಮೇಲೆ ವೈರಿ ರಾಷ್ಟ್ರಗಳಿಂದ ಆಗುವ ಕ್ಷಿಪಣಿ ದಾಳಿಯನ್ನು ಇನ್ಯಾವುದೇ ರಾಷ್ಟ್ರದ ರಕ್ಷಣಾ ವ್ಯವಸ್ಥೆಯಿಂದ ಎದುರಿಸಬಹುದಾಗಿದೆ. ಕ್ಷಿಪಣಿ ರಕ್ಷಣಾ ತರಬೇತಿ ಕೂಡ ಈ ಜಾಲದ ಇನ್ನೊಂದು ಭಾಗ.

ಥಾಡ್‌ ಅಂದರೇನು?:

 • ಥಾಡ್‌ ಎಂಬುದು ಒಂದು ಕ್ಷಿಪಣಿ ರಕ್ಷಣಾ ತಂತ್ರಜ್ಞಾನ. ಇದು ಸಣ್ಣ ಹಾಗೂ ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳನ್ನು ಮಧ್ಯದಾರಿಯಲ್ಲಿಯೇ ತಡೆದು ನಾಶಗೊಳಿಸುವ ವ್ಯವಸ್ಥೆ. 1987ರಲ್ಲಿ ಇದನ್ನು ವಿನ್ಯಾಸಗೊಳಿಸಲಾಯಿತು ಹಾಗೂ 2008ರಲ್ಲಿ ಇದನ್ನು ಅಂತಿಮಗೊಳಿಸಿ ಪ್ರಯೋಗಿಸಲಾಯಿತು.
 • ಇದನ್ನು ವೈರಿಯ ಮೇಲೆ ದಾಳಿ ಮಾಡಲು ಉಪಯೋಗಿಸುವಂತಿಲ್ಲ. ಆದರೆ ವೈರಿ ದೇಶಗಳ ಕ್ಷಿಪಣಿ ದಾಳಿಯನ್ನು ತಡೆಯಲು ಇದು ಅಗತ್ಯ. ಶಕ್ತಿಯುತ ರೇಡಾರ್‌ ಹೊಂದಿರುವ ಥಾಡ್‌, ಕ್ಷಿಪಣಿಗಳನ್ನು ಮೂಲದಲ್ಲಿಯೇ ಗುರುತಿಸಿ ಉಡಾವಣೆಗೂ ಮುನ್ನ ಅಥವಾ ಆಕಾಶಮಾರ್ಗದಲ್ಲಿ ಸ್ಫೋಟಿಸಿ ನಾಶಗೊಳಿಸುತ್ತದೆ.
 • ಕೊರಿಯಾ ಮತ್ತು ಇಸ್ರೇಲ್‌: 2012ರಲ್ಲಿ ಉತ್ತರ ಕೊರಿಯಾದಲ್ಲಿ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಅಣ್ವಸ್ತ್ರ ಪ್ರಯೋಗ ಮತ್ತು ಶಕ್ತಿಯುತ ಕ್ಷಿಪಣಿ ಪ್ರಯೋಗ ಆರಂಭಿಸಿದಾಗ, ಆತಂಕಗೊಂಡ ದಕ್ಷಿಣ ಕೊರಿಯಾ, ಥಡ್‌ಗಾಗಿ ಅಮೆರಿಕದತ್ತ ಕೈಚಾಚಿತು
 • ಥಡ್‌ನಂಥದೇ ಇನ್ನೊಂದು ಪರಿಣಾಮಕಾರಿ ತಂತ್ರಜ್ಞಾನ ಇಸ್ರೇಲ್‌ನ ಐರನ್‌ ಡೋಮ್‌ನದು. ಪಕ್ಕದ ಪ್ಯಾಲೆಸ್ತೀನ್‌ನ ಗಾಝಾ ಪ್ರದೇಶದಿಂದ ತೂರಿಬರುವ ರಾಕೆಟ್‌ಗಳನ್ನು ಧ್ವಂಸಗೊಳಿಸಲು ಇಸ್ರೇಲ್‌ ತನ್ನ ಗಡಿಯುದ್ದಕ್ಕೂ ಐರನ್‌ ಡೋಮ್‌ಗಳನ್ನು ಉಪಯೋಗಿಸುತ್ತಿದೆ. ಇದು ಶೇ.90ರಷ್ಟು ಪರಿಣಾಮಕಾರಿ ಎನಿಸಿದೆ.
 • ಆದರೆ ಥಡ್‌ಗೆ ಹೋಲಿಸಿದರೆ ಐರನ್‌ ಡೋಮ್‌ನ ವ್ಯಾಪ್ತಿ ಮತ್ತು ಶಕ್ತಿ ಕಡಿಮೆ. ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲ ದೊಡ್ಡ ಬ್ಯಾಲಿಸ್ಟಿಕ್‌ ಕ್ಷಿಪಣಿಗಳನ್ನು ಎದುರಿಸಲು ಥಡ್‌ ಪರಿಣಾಮಕಾರಿ. ಆದರೆ ದಕ್ಷಿಣ ಕೊರಿಯಾದಲ್ಲಿ ಥಡ್‌ ಅಳವಡಿಕೆಯ ಮೂಲಕ ಏಷ್ಯಾ ಉಪಖಂಡದಲ್ಲಿ ಅಮೆರಿಕದ ಹಸ್ತಕ್ಷೇಪ ಹೆಚ್ಚಾಗುತ್ತಿದೆ ಎಂದು ಚೀನಾ ಮತ್ತು ಉತ್ತರ ಕೊರಿಯಾ ಕಳವಳ ವ್ಯಕ್ತಪಡಿಸಿವೆ.
 • ಪೃಥ್ವಿ, ಎಎಡಿ- ಭಾರತದ ತಂತ್ರಜ್ಞಾನ: ಕ್ಷಿಪಣಿಗಳನ್ನು ತಡೆದು ನಾಶಪಡಿಸುವ ತಂತ್ರಜ್ಞಾನವನ್ನು ಭಾರತ ದೇಶೀಯವಾಗಿಯೂ ಅಭಿವೃದ್ಧಿಪಡಿಸಿದೆ. ಎರಡು ಹಂತದಲ್ಲಿ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಒಂದು ಪೃಥ್ವಿ ಏರ್‌ ಡಿಫೆನ್ಸ್‌(ಪಿಎಡಿ)- ಇದು ಹೆಚ್ಚು ಎತ್ತರದ ಕ್ಷಿಪಣಿ ದಾಳಿಯನ್ನು ತಡೆಯುತ್ತದೆ; ಇನ್ನೊಂದು ಅಡ್ವಾನ್ಸ್‌ಡ್‌ ಏರ್‌ ಡಿಫೆನ್ಸ್‌ (ಎಎಡಿ)- ಇದು ಕಡಿಮೆ ಎತ್ತರದ ಕ್ಷಿಪಣಿ ದಾಳಿ ತಡೆ ವ್ಯವಸ್ಥೆ. ಎರಡರಲ್ಲೂ ಆಧುನಿಕ ಟ್ರ್ಯಾಕಿಂಗ್‌ ರೇಡಾರ್‌ಗಳಿದ್ದು, 5000 ಕಿಲೋಮೀಟರ್‌ ದೂರದಿಂದ ಪ್ರಯೋಗಿಸಲ್ಪಡುವ ಕ್ಷಿಪಣಿಗಳನ್ನು ಧ್ವಂಸಗೊಳಿಸಬಲ್ಲುದು.
 • 2006 ಹಾಗೂ 2007ರಲ್ಲಿ ಇವುಗಳನ್ನು ಪರೀಕ್ಷಿಸಲಾಗಿದೆ. ಈ ಮೂಲಕ, ಸ್ವಂತ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಹೊಂದಿದೆ ನಾಲ್ಕನೇ ದೇಶ ಎನಿಸಿದೆ. ಆದರೆ ಇವುಗಳನ್ನು ಇನ್ನೂ ಸಂಪೂರ್ಣ ಬಳಕೆಗೆ ಬಿಟ್ಟಿಲ್ಲ.
 • ರಷ್ಯಾದ ಎಸ್‌-400: ಭಾರತವು ರಷ್ಯಾದಿಂದ ಪಡೆಯಲು ಉದ್ದೇಶಿಸಿರುವ ಎಸ್‌-400 ಕ್ಷಿಪಣಿ ತಡೆ ವ್ಯವಸ್ಥೆಯು ಮುಖ್ಯವಾಗಿ ದೂರವ್ಯಾಪ್ತಿಯ ಏರ್‌ ಡಿಫೆನ್ಸ್‌ ವ್ಯವಸ್ಥೆ. ಇದರ ಪ್ರಯೋಗ ವ್ಯಾಪ್ತಿ ಸುಮಾರು 120 ಕಿ.ಮೀ.ನಿಂದ 400 ಕಿ.ಮೀ.
 • ಒಂದು ಎಸ್‌-400 ಬೆಟಾಲಿಯನ್‌ನಲ್ಲಿ ಎಂಟು ಲಾಂಚರ್‌ಗಳು, ಒಂದು ಕಮಾಂಡ್‌ ಸೆಂಟರ್‌, ಎರಡು ರೇಡಾರ್‌, ಒಂದು ವೇದಿಕೆ ಹಾಗೂ 72 ಕ್ಷಿಪಣಿಗಳಿರುತ್ತವೆ. ಕ್ಷಿಪಣಿ, ವಿಮಾನ, ಯುದ್ಧವಿಮಾನ, ಡ್ರೋನ್‌ಗಳನ್ನು ಉರುಳಿಸಬಲ್ಲುದು. ಗಂಟೆಗೆ 17,000 ಕಿಲೋಮೀಟರ್‌ ವೇಗ ಹೊಂದಿದೆ. ಪ್ರಸ್ತುತ ರಷ್ಯಾದಿಂದ 5 ಬೆಟಾಲಿಯನ್‌ ಖರೀದಿಗೆ ಮಾತುಕತೆ ನಡೆದಿದೆ.
 • ಇದರ ರೇಡಾರ್‌ ಎಷ್ಟು ಶಕ್ತಿಯುತವಾಗಿದೆ
 • ಎಂದರೆ, 360 ಡಿಗ್ರಿ ವ್ಯಾಪ್ತಿಯಲ್ಲಿ ಶತ್ರುವನ್ನು ಗುರುತಿಸಿ, ಅದು ಕ್ಷಿಪಣಿಯೇ ವಿಮಾನವೇ ಎಂದು ವಿಭಾಗಿಸಿ, ಅಗತ್ಯವಿದ್ದಲ್ಲಿ ಅದನ್ನು ನಾಶಪಡಿಸಲು 100ರಿಂದ 300 ಗುರಿಬಿಂದುಗಳನ್ನು ತಕ್ಷಣವೇ ನಿರ್ಧರಿಸುತ್ತದೆ. ದಾಳಿ ಸೂಚನೆಯ ನಿಯಂತ್ರಣ ಕಮಾಂಡ್‌ ಸೆಂಟರ್‌ನಲ್ಲಿರುತ್ತದೆ.

Related Posts
14 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು
ನಕಲಿ ಹೂಡಿಕೆ ಸ್ಕೀಮ್‌ಗಳ ನಿಷೇಧಕ್ಕೆ ವಿಧೇಯಕ ಮಂಡನೆ ಸುದ್ಧಿಯಲ್ಲಿ ಏಕಿದೆ ? ನಕಲಿ ಹೂಡಿಕೆ ಯೋಜನೆಗಳನ್ನು ನಿಷೇಧಿಸುವ ಹಾಗೂ ಇಂಥ ಯೋಜನೆಗಳಲ್ಲಿ ವಂಚಿತರಾಗಿರುವ ಹೂಡಿಕೆದಾರರ ಹಿತಾಸಕ್ತಿ ರಕ್ಷಣೆಗೆ ಸಂಬಂಧಿಸಿದ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಅನಿಯಂತ್ರಿತ ಠೇವಣಿ ಸಂಗ್ರಹ ಸ್ಕೀಮ್‌ಗಳ ನಿಷೇಧ ವಿಧೇಯಕವನ್ನು ಹಣಕಾಸು ಸಚಿವ ಪಿಯೂಷ್‌ ...
READ MORE
” 28 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಡಿಎಲ್, ಆರ್​ಸಿ ಡಿಜಿಟಲ್ ದಾಖಲೆ ಪರೀಕ್ಷಿಸಲು ಮಾರ್ಗಸೂಚಿ ಸುದ್ಧಿಯಲ್ಲಿ ಏಕಿದೆ ?ವಾಹನ ಚಾಲಕರು ಸಲ್ಲಿಸುವ ಡಿಜಿಟಲ್ ಮಾದರಿ ದಾಖಲೆಗಳು ಅಸಲಿಯೋ ನಕಲಿಯೋ ಎಂದು ಪರೀಕ್ಷಿಸಲು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಹಲವು ಮಾರ್ಗಸೂಚಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್- ಎಸ್​ಒಪಿ) ರೂಪಿಸಿದೆ. ಎಸ್​ಒಪಿ ...
READ MORE
“02 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸಾಹಿತ್ಯ ಸಮ್ಮೇಳನಕ್ಕೆ ಪೇಢಾನಗರಿ ಸಜ್ಜು ಸುದ್ಧಿಯಲ್ಲಿ ಏಕಿದೆ ?ಧಾರವಾಡದಲ್ಲಿ ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ 1957ರ ನಂತರ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಆತಿಥ್ಯ ವಹಿಸಿಕೊಂಡಿರುವ ಧಾರವಾಡದಲ್ಲೀಗ ಕನ್ನಡ ಜಾತ್ರೆಯ ವಾತಾವರಣ ನಿರ್ವಣವಾಗಿದೆ. ಧಾರವಾಡ ಜಿಲ್ಲೆಯಲ್ಲಿ ಈವರೆಗೆ 1918ರಲ್ಲಿ ಆರ್. ...
READ MORE
“17 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕಾವೇರಿ ಆನ್‌ಲೈನ್ ಸೇವೆ ಸುದ್ಧಿಯಲ್ಲಿ ಏಕಿದೆ ?ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಭಿವೃದ್ಧಿ ಪಡಿಸಿರುವ ಕಾವೇರಿ-ಆನ್‌ಲೈನ್ ಸೇವೆಗಳಿಗೆ ಚಾಲನೆ ನೀಡಿದರು. ಉದ್ದೇಶ ಸಬ್​ರಿಜಿಸ್ಟ್ರಾರ್ ಕಚೇರಿಗಳಲ್ಲಿ ಬೇರೂರಿರುವ ಮಧ್ಯವರ್ತಿಗಳ ಹಾವಳಿಗೆ ತಿಲಾಂಜಲಿ ಇಡುವ ಉದ್ದೇಶದಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ‘ಕಾವೇರಿ’ ...
READ MORE
“12 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ರಾಷ್ಟ್ರೀಯ ಯುವ ದಿನ ಸುದ್ಧಿಯಲ್ಲಿ ಏಕಿದೆ ?ಸ್ವಾಮಿ ವಿವೇಕಾನಂದರ ಸ್ವರಣಾರ್ಥ ಜ.12ನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ರಾಷ್ಟ್ರೀಯ ಯುವ ದಿನ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. 1984 ರಲ್ಲಿ ಭಾರತ ಸರಕಾರ ದಿನವನ್ನು ರಾಷ್ಟ್ರೀಯ ಯುವ ...
READ MORE
” 14 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೆಳಗಾವಿ-ಯರಗಟ್ಟಿ ರಸ್ತೆ ಸುದ್ಧಿಯಲ್ಲಿ ಏಕಿದೆ ?ಮೇಲ್ದರ್ಜೆಗೇರಿರುವ ಇಲ್ಲಿನ ಬೆಳಗಾವಿ-ಯರಗಟ್ಟಿ ನಡುವಿನ ರಸ್ತೆ, ಅಪಘಾತ ನಿಯಂತ್ರಿಸುವ ದೇಶದ ಮೊದಲ ಮಾದರಿ ರಸ್ತೆಯಾಗಿ ನಿರ್ಮಾಣಗೊಂಡಿದೆ. ಇದಕ್ಕೆ ಅತ್ಯಧಿಕ ರಾರ‍ಯಂಕ್‌ ನೀಡಿರುವ ವಿಶ್ವಬ್ಯಾಂಕ್‌, ಈ ಮಾದರಿ ರಸ್ತೆಯನ್ನು ಅನುಸರಿಸುವಂತೆ ಇತರ ರಾಜ್ಯಗಳಿಗೂ ಸೂಚನೆ ನೀಡಿದೆ. ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿಯಿಂದ ...
READ MORE
“05 ಏಪ್ರಿಲ್  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮತದಾನ ಪದ್ಧತಿ ಹುಟ್ಟಿದ್ದೇ ಮೈಸೂರಲ್ಲಿ ! ಸುದ್ಧಿಯಲ್ಲಿ ಏಕಿದೆ ?ದೇಶದಲ್ಲೇ ಮೊದಲಿಗೆ ಮತದಾನ ವ್ಯವಸ್ಥೆ ಜಾರಿಯಾಗಿದ್ದು ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದ 1951ರಲ್ಲಿ ಅಲ್ಲ. ಅದಕ್ಕೂ 60 ವರ್ಷಗಳ ಮೊದಲೇ ಮೈಸೂರಿನಲ್ಲಿ ಮತದಾನ ನಡೆದಿತ್ತು ! ಆದರೆ ಆಗ ನಡೆದ ಮತದಾನ, ಅಲ್ಲಿನ ...
READ MORE
“08 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ವಿರಾಗಿಯ ಮಹಾಮಜ್ಜನಕ್ಕೆ ಧರ್ಮಸ್ಥಳ ಸಜ್ಜು ಸುದ್ಧಿಯಲ್ಲಿ ಏಕಿದೆ ? ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಶ್ರೀ ಬಾಹುಬಲಿ ಈ ಶತಮಾನದ ಎರಡನೇ ಮಹಾಮಜ್ಜನಕ್ಕೆ ಸಿದ್ಧವಾಗಿದ್ದು, ಧಾರ್ವಿುಕ ಕಾರ್ಯಕ್ರಮಗಳು ಮೇಳೈಸಲಿವೆ. ರತ್ನಗಿರಿ ಬೆಟ್ಟದಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ...
READ MORE
” 29 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಉದ್ಯೋಗ ಖಾತ್ರಿ ಹೆಚ್ಚಳ ಸುದ್ಧಿಯಲ್ಲಿ ಏಕಿದೆ ?ರಾಜ್ಯದಲ್ಲಿ ಉದ್ಭವಿಸಿರುವ ಬರಗಾಲದ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಕಾಯ್ದೆಯಲ್ಲಿ ಫಲಾನುಭವಿಗಳಿಗೆ ನೀಡಲಾಗುವ 100 ದಿನಗಳ ಉದ್ಯೋಗವನ್ನು 150ಕ್ಕೆ ವಿಸ್ತರಿಸಲಾಗಿದ್ದು, ಈ ವರ್ಷ ಮಾನವ ದಿನಗಳ ಸೃಜನೆ ಗುರಿಯನ್ನು 8.5 ಕೋಟಿ ಯಿಂದ 10 ...
READ MORE
“09 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
 ವಾಣಿಜ್ಯ ಸಮರ  ಸುದ್ಧಿಯಲ್ಲಿ ಏಕಿದೆ ?ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ಉತ್ತಮಗೊಳ್ಳುತ್ತಿರುವ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವೆ ವಾಣಿಜ್ಯ ಸಮರ ತೀವ್ರಗೊಳ್ಳುವ ಸಾಧ್ಯತೆ ಇದೆ. ಕಾರಣ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ 2 ಸಾವಿರಕ್ಕೂ ಹೆಚ್ಚು ಉತ್ಪನ್ನಗಳಿಗೆ ನೀಡುತ್ತಿರುವ ಶೂನ್ಯ ತೆರಿಗೆಯನ್ನು ರದ್ದುಗೊಳಿಸುವ ಬಗ್ಗೆ ಅಮೆರಿಕ ...
READ MORE
14 ಫೆಬ್ರವರಿ 2019 ರ ಕನ್ನಡ ಪ್ರಚಲಿತ
” 28 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“02 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“17 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“12 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 14 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“05 ಏಪ್ರಿಲ್ 2019 ರ ಕನ್ನಡ ಪ್ರಚಲಿತ
“08 ಫೆಬ್ರವರಿ 2019 ರ ಕನ್ನಡ ಪ್ರಚಲಿತ
” 29 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“09 ಫೆಬ್ರವರಿ 2019 ರ ಕನ್ನಡ ಪ್ರಚಲಿತ

Leave a Reply

Your email address will not be published. Required fields are marked *