“28 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

ಏರೋ ಇಂಡಿಯಾ ಡ್ರೋನ್ ಒಲಿಂಪಿಕ್ಸ್

1.

ಸುದ್ಧಿಯಲ್ಲಿ ಏಕಿದೆ ?ಏರೋ ಇಂಡಿಯಾ ಇತಿಹಾಸದಲ್ಲಿ ಇದೇ ಮೊದಲ ಬಾರಿ ಡ್ರೋನ್​ಗಳ ಸ್ಪರ್ಧೆ ಏರ್ಪಡಿಸಲಾಗಿದ್ದು, ಅದಕ್ಕೆ ಡ್ರೋನ್ ಒಲಿಂಪಿಕ್ಸ್ ಎಂದು ಹೆಸರಿಡಲಾಗಿದೆ.

 • ವಿಜೇತರಾಗುವವರಿಗೆ ನಗದು ಬಹುಮಾನವನ್ನು ನೀಡಲು ಏರೋ ಇಂಡಿಯಾ ಶೋ ಆಯೋಜಕರು ನಿರ್ಧರಿಸಿದ್ದಾರೆ.
 • ಎರಡು ವಿಭಾಗದಲ್ಲಿ ಸ್ಪರ್ಧೆ: ಡ್ರೋನ್ ಒಲಿಂಪಿಕ್ಸ್ ನಲ್ಲಿ ಫಿಕ್ಸೆಡ್ ವಿಟಿಒಎಲ್ ಮತ್ತು ಎಲೆಕ್ಟ್ರಿಕ್ ಹೈಬ್ರಿಡ್ ಡಿಸೈನ್ ಎಂಬ ಎರಡು ವಿಧದ ಸ್ಪರ್ಧೆಗಳು ನಡೆಯಲಿವೆ. ಪ್ರತಿ ವಿಭಾಗದಲ್ಲಿ ಡ್ರೋನ್​ಗಳ ನಡುವೆ ಹಾರಾಟದ ಸಮಯ, ವಿಡಿಯೋ ಚಿತ್ರೀಕರಣದ ಗುಣಮಟ್ಟ ಹಾಗೂ ಮನುಷ್ಯರನ್ನು ಗುರುತಿಸುವ ಸ್ಪರ್ಧೆ ನಡೆಯಲಿದೆ. ಅಲ್ಲದೆ, 4 ಕೆ.ಜಿ. ಮತ್ತು 4ರಿಂದ 7 ಕೆ.ಜಿ. ಡ್ರೋನ್ ಗಳ ನಡುವೆ ಸ್ಪರ್ಧೆ ಏರ್ಪಡಲಿದೆ.

ಪ್ರಶಸ್ತಿಯನ್ನು ಹೇಗೆ ನಿರ್ಧರಿಸಲಾಗುತ್ತದೆ ?

 • ಮೊದಲೆರಡು ವಿಷಯಗಳಿಗೆ ತಲಾ ಶೇ. 40 ಅಂಕ ಮತ್ತು ಕೊನೆಯ ವಿಷಯಕ್ಕೆ ಶೇ. 20 ಅಂಕ ನೀಡಲಾಗುತ್ತದೆ. ಒಂದು ವೇಳೆ ಎರಡು ಡ್ರೋನ್​ಗಳ ನಡುವೆ ಅಂಕಗಳು ಸಮವಾದರೆ ಹಾರಾಟದ ಸಮಯದಲ್ಲಿ ಹೆಚ್ಚು ಅಂಕ ಪಡೆದಿರುವ ಡ್ರೋನ್​ಗೆ ಮೊದಲ ಸ್ಥಾನ ನೀಡಲಾಗುತ್ತದೆ.
 • ಭಾರ ಎತ್ತಬೇಕು: ಒಲಿಂಪಿಕ್​ನಲ್ಲಿ ಡ್ರೋನ್​ಗಳು ಹಾರಾಟ ನಡೆಸುವ ಜತೆಗೆ ಭಾರ ಹೊತ್ತು ಹಾರಬೇಕಿದೆ. ಪ್ರತಿ ಡ್ರೋನ್ 2 ಕೆ.ಜಿ. ಭಾರವನ್ನು 2 ಕಿ.ಮೀ. ವರೆಗೆ ಹೊತ್ತು ಸಾಗಬೇಕಿದೆ.
 • 3ರಿಂದ 5 ಲಕ್ಷ ರೂ.ವರೆಗೆ ಬಹುಮಾನ: ಒಲಿಂಪಿಕ್ ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತಿದೆ. ಅದರಂತೆ ಪ್ರಥಮ ಬಹುಮಾನ 3ರಿಂದ 5 ಲಕ್ಷ ರೂ., ದ್ವಿತೀಯ ಬಹುಮಾನ 5ರಿಂದ 3 ಲಕ್ಷ ರೂ. ಹಾಗೂ ತೃತೀಯ ಬಹುಮಾನ 50 ಸಾವಿರದಿಂದ 1 ಲಕ್ಷ ರೂ.ವರೆಗೆ ನಿಗದಿ ಮಾಡಲಾಗಿದೆ.

ಸ್ಪರ್ಧಿಗಳಿಗೆ ನಿಬಂಧನೆಗಳು

 • ಡ್ರೋನ್ ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳುವ ಸಂಸ್ಥೆ ತನ್ನ ಬಳಿಯಲ್ಲಿನ ವಿವಿಧ ಮಾದರಿಯ 12 ಡ್ರೋನ್​ಗಳನ್ನು ಸ್ಪರ್ಧೆಗಿಳಿಸಬಹುದಾಗಿದೆ. ಅದರ ಜತೆಗೆ ಡ್ರೋನ್ ಚಲಾಯಿಸುವವರ ವಯಸ್ಸು ಕನಿಷ್ಠ 18 ವರ್ಷಗಳಾಗಿರಬೇಕು ಎಂಬ ನಿಬಂಧನೆ ವಿಧಿಸಲಾಗಿದೆ.

ಬೆಂಗಳೂರಿನಲ್ಲಿ 2ನೇ ಬಾರಿ

 • ಬೆಂಗಳೂರಿನಲ್ಲಿ ಡ್ರೋನ್​ಗಳ ಸ್ಪರ್ಧೆ ಏರ್ಪಡಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಈ ಹಿಂದೆ ಡಿಸೆಂಬರ್​ನಲ್ಲಿ ಬೆಂಗಳೂರು ಟೆಕ್ ಸಮ್ಮೇಳನದಲ್ಲಿ ರಾತ್ರಿ ಡ್ರೋನ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಆಗ 26ಕ್ಕೂ ಹೆಚ್ಚಿನ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ವನ್ಯಜೀವಿಗಳ ಸಂರಕ್ಷಣೆಯಲ್ಲಿ ಕರ್ನಾಟಕ ದೇಶಕ್ಕೆ ನಂ.1

ಸುದ್ಧಿಯಲ್ಲಿ ಏಕಿದೆ ?ವನ್ಯಜೀವಿ ಸಂರಕ್ಷಣೆಯಲ್ಲಿ ರಾಜ್ಯ ದೇಶದಲ್ಲೇ ಮುಂಚೂಣಿಯಲ್ಲಿದೆ. ಹುಲಿ, ಆನೆ, ಚಿರತೆ, ಸಿಂಗಳೀಕ ಪ್ರಾಣಿಗಳ ಸಂಖ್ಯೆಯಲ್ಲಿ ದೇಶದಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಅರಣ್ಯ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

 • ಪರಿಸರ ಸಮತೋಲನ ಕಾಯ್ದುಕೊಳ್ಳಲು ಅರಣ್ಯ ಮತ್ತು ವೃಕ್ಷ ಹೊದಿಕೆಯನ್ನು ಹೆಚ್ಚಿಸಲು ಅರಣ್ಯ ಇಲಾಖೆಯು ಹಲವು ಕಾರ‍್ಯಕ್ರಮಗಳನ್ನು ಹಮ್ಮಿಕೊಂಡಿದೆ.
 • ವರ್ಷದಲ್ಲಿ 80 ಕೋಟಿ ಸಸಿಗಳನ್ನು ನೆಟ್ಟು, 44,289 ಹೆಕ್ಟೇರ್​ ಪ್ರದೇಶದಲ್ಲಿ ನೆಡುತೋಪಗಳನ್ನು ನಿರ್ಮಿಸಲಾಗಿದೆ ಎಂದರು.

ಪ್ರಸ್ತಾಪಿತ ಯೋಜನೆಗಳು:

 • ಅರಣ್ಯ ಇಲಾಖೆಯ ಸಮಗ್ರ ಆಧುನೀಕರಣ ಯೋಜನೆಯಡಿ ಆತ್ಯಾಧುನಿಕವಾಗಿ ಹಾಗೂ ಪ್ರಸ್ತತದ ಪರಿಸ್ಥಿತಿಗೆ ಅನುಗುಣವಾಗಿ ಆಧುನಿಕ ತಂತ್ರಾಂಶ, ಉಪಕರಣ, ಗಣಕೀಕರಣ, ಆಧುನಿಕ ಶಸ್ತ್ರಾಸ್ತ್ರಗಳು, ಡ್ರೋಣ್​ ಇತ್ಯಾದಿಗಳನ್ನು ಬಳಸಿಕೊಂಡು ಅರಣ್ಯ ಸಂರಕ್ಷಣೆ ಮತ್ತು ನಿರ್ವಹಣೆ ಮಾಡುವ ಪ್ರಸ್ತಾವನೆ ಇರುವುದಾಗಿ ಸತೀಶ ಜಾರಕಿಹೊಳಿ ಹೇಳಿದರು.

ಸೆಂಟರ್ ಫಾರ್ ಎಕ್ಸಲೆನ್ಸ ಗಳ ಸ್ಥಾಪನೆ:

 • ಅಳಿವಿನಿಂದ ಉಳಿವಿನೆಡೆಗೆ, ಸ್ವಾಯತ್ತ ಅರಣ್ಯಗಳ ಮೋಜಣಿ ಮತ್ತು ಗಡಿ ಗುರುತಿಸುವಿಕೆ, ಹುಲ್ಲುಗಾವಲು ಪ್ರದೇಶಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು.
 • ಪ್ರಮುಖವಾಗಿ `ಕಪ್ಪತ್ತಗುಡ್ಡ ವನ್ಯಜೀವಿಧಾಮ’, `ಬುಕ್ಕಾಪಟ್ಟಣ ಚಿಂಕಾರ ವನ್ಯಧಾಮ’ `ಕಾಮಸಂದ್ರ ವನ್ಯಜೀವಿಧಾಮ’ `ಮಲೆ ಮಹಾದೇಶ್ವರ ಹುಲಿ ಸಂರಕ್ಷಿತ ಪ್ರದೇಶ ‘ ,`ಗುಡೆಕೋಟೆ ಕರಡಿಧಾಮ’ನ್ನಾಗಿ ಘೋಷಿಸಲು ಅನುಮೋದನೆ ನೀಡಲಾಗಿದೆ.
 • 5,668 ಹೇಕ್ಟೆರ್ ಪ್ರದೇಶವನ್ನು ಮುಳ್ಳಯ್ಯಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ಘೋಷಣೆ ಮಾಡಲು ಅನುಮೋದನೆ ನೀಡಲಾಗಿದೆ. 93,129 ಹೇಕ್ಟೆರ್ ಅರಣ್ಯ ಪ್ರದೇಶವನ್ನು ಶರಾವತಿ ಕಣಿವೆ ಸಿಂಗಳೀಕ ವನ್ಯಧಾಮವೆಂದು ಅ„ಸೂಚನೆ ಹೊರಡಿಸಲು ಅನುಮೋದನೆ ನೀಡಲಾಗಿದೆ.
 • ನಂದಿನಿ ನದಿಮುಖ ಹಾಗೂ ನೇತ್ರಾವತಿ ನಡುಗಡ್ಡೆ ಸಂರಕ್ಷಣಾ ಮೀಸಲು ಪ್ರದೇಶವೆಂದು ಘೋಷಿಸಲು ಅನುಮೋದನೆ ನೀಡಲಾಗಿದೆ.

ರೇರಾ ಜಾರಿಗೆ 5 ಅಂಶಗಳು ಅಡ್ಡಿ

3.

ಸುದ್ಧಿಯಲ್ಲಿ ಏಕಿದೆ ?ಸ್ವಂತದ ಸೂರು ಹೊಂದುವ ಗ್ರಾಹಕರ ಹಿತಕಾಯುವ ದೃಷ್ಟಿಯಿಂದ ಕೇಂದ್ರ ಸರಕಾರ ಜಾರಿಗೊಳಿಸಿರುವ ರಿಯಲ್‌ ಎಸ್ಟೇಟ್‌ ಮತ್ತು ಅಭಿವೃದ್ಧಿ ನಿಯಂತ್ರಣ ಕಾಯಿದೆ ರೇರಾ ಪೂರ್ಣ ಪ್ರಮಾಣದ ಜಾರಿಗೆ ರಾಜ್ಯದಲ್ಲಿ 5 ಅಂಶಗಳು ಅಡ್ಡಿಯಾಗಿವೆ.

ಅಡ್ಡಿಯಾಗುತ್ತಿರುವ ಕಾಯ್ದೆಗಳು ಯಾವುವು ?

 • ಈ ಮೊದಲು ಜಾರಿಯಲ್ಲಿರುವ ಕರ್ನಾಟಕ ನಗರ ಮತ್ತು ಪಟ್ಟಣ ಯೋಜನಾ ಕಾಯಿದೆ, ಕರ್ನಾಟಕ ಅಪಾರ್ಟ್‌ಮೆಂಟ್‌ ಓನರ್ಸ್‌ ಕಾಯಿದೆ, ಕರ್ನಾಟಕ ಓನರ್‌ಶಿಪ್‌ ಫ್ಲಾಟ್ಸ್‌ ಆ್ಯಕ್ಟ್, ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯಿದೆ, ಕರ್ನಾಟಕ ಮುನಿಸಿಪಲ್‌ ಕಾರ್ಪೊರೇಷನ್‌ ಕಾಯಿದೆ ಸೇರಿದಂತೆ ಹಲವು ಕಾಯಿದೆಗಳಲ್ಲಿನ ಕೆಲವು ಅಂಶಗಳಲ್ಲಿ ಬದಲಾವಣೆಗಳಾಗಿಲ್ಲ. ಹಾಗಾಗಿ ರೇರಾ ಕಾಯಿದೆ ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಯಾಗಿಲ್ಲ.

ಆ ಐದು ಅಡ್ಡಿಗಳು ಏನು?

 • ಮೊದಲಿಗೆ ಕೇಂದ್ರ ಸರಕಾರ ರೂಪಿಸಿದ್ದ ರೇರಾ ಕಾಯಿದೆಗೆ ಅನುಗುಣವಾಗಿ ರಾಜ್ಯದಲ್ಲಿ ಕರ್ನಾಟಕ ರಿಯಲ್‌ ಎಸ್ಟೇಟ್‌ ಮತ್ತು ಅಭಿವೃದ್ಧಿ ಕಾಯಿದೆ (ಕೆಆರ್‌ಇಆರ್‌ಎ) ಜಾರಿಗೆ ತರಲಾಗಿದೆ. ಆದರೆ ಸ್ವಾಧೀನಪತ್ರ, ವಾಸಯೋಗ್ಯ ಪತ್ರ, ಭೂಮಿಯ ಅಥವಾ ಜಾಗದ ಒಡೆತನ ಹೊಂದುವುದೂ ಸೇರಿದಂತೆ ಹಲವು ವಿಷಯಗಳಲ್ಲಿ ಹಿಂದಿನಿಂದ ಜಾರಿಯಲ್ಲಿರುವ ಕೆಟಿಸಿಪಿಎ 1961, ಕೆಒಎಫ್‌ಎ 1972, ಕೆಎಒಎ 1972, ಕೆಎಸ್‌ಆರ್‌ಎ 1959, ಕೆಎಂಸಿಎ 1976 ನಲ್ಲಿನ ವ್ಯಾಖ್ಯಾನಗಳು ಬದಲಾಗಿಲ್ಲ. ಅವುಗಳನ್ನು ಬದಲಾಯಿಸದ ಹೊರತು ರೇರಾ ಕಾಯಿದೆ ಜಾರಿಗೊಳಿಸುವುದು ಕಷ್ಟಕರ.
 • ಎರಡನೆಯದಾಗಿ, ಅಪಾರ್ಟ್‌ಮೆಂಟ್‌ಗಳ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಕರ್ನಾಟಕ ಅಪಾರ್ಟ್‌ಮೆಂಟ್‌ ಓನರ್‌ಶಿಪ್‌ ಕಾಯಿದೆ- 1972 ಮತ್ತು ರೇರಾ ಕಾಯಿದೆ ಸೆಕ್ಷನ್‌ 11(4)(ಎಫ್‌) ಮತ್ತು 17(1) ತದ್ವಿರುದ್ಧವಾಗಿವೆ. ಒಂದರಲ್ಲಿ ಅಪಾರ್ಟ್‌ಮೆಂಟ್‌ ಭೂಮಿಯ ಮಾಲೀಕತ್ವ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ ಹೆಸರಿನಲ್ಲಿ ಇರಬೇಕೆಂದರೆ, ಇನ್ನೊಂದರಲ್ಲಿ ಅಪಾರ್ಟ್‌ಮೆಂಟ್‌ ಖರೀದಿಸಿರುವ ಮಾಲೀಕರ ಹೆಸರಿನಲ್ಲಿರಬೇಕೆಂದು ಹೇಳುತ್ತದೆ.
 • ರೇರಾ ಕಾಯಿದೆ ಸೆಕ್ಷನ್‌ 11(4) (ಇ) ಪ್ರಕಾರ, ಅಪಾರ್ಟ್‌ಮೆಂಟ್‌ ಮಾಲೀಕರು ಸಂಘಗಳನ್ನು, ಅಪಾರ್ಟ್‌ಮೆಂಟ್‌ ನಿರ್ಮಾಣ ಸಮಯದಲ್ಲಿಯೇ ರಚಿಸಿಕೊಳ್ಳಬೇಕಾಗಿದೆ. ಆದರೆ ಹಿಂದಿನ ಕರ್ನಾಟಕ ಅಪಾರ್ಟ್‌ಮೆಂಟ್‌ ಕಾಯಿದೆಯಲ್ಲಿ ಫ್ಲಾಟ್‌ ಖರೀದಿ ನಂತರ ಅಸೋಸಿಯೇಷನ್‌ ಮಾಡಿಕೊಳ್ಳುವ ಬಗ್ಗೆ ಉಲ್ಲೇಖವಿದೆ. ಇದು ಮೂರನೇ ಅಡ್ಡಿಯಾಗಿದೆ.
 • ನಾಲ್ಕನೆಯದಾಗಿ ಅಪಾರ್ಟ್‌ಮೆಂಟ್‌ಗಳಲ್ಲಿ ಅಸೋಸಿಯೇಷನ್‌ ರಚನೆ ಬಗ್ಗೆ ಹಾಲಿ ಜಾರಿಯಲ್ಲಿರುವ ನೋಂದಣಿ ಕಾಯಿದೆ ಮತ್ತು ರೇರಾ ಕಾಯಿದೆಯ ಸೆಕ್ಷನ್‌ಗಳಿಗೂ ಹೊಂದಾಣಿಕೆ ಇಲ್ಲ. ಕೊನೆಯದಾಗಿ ರಿಜಿಸ್ಪ್ರೇಷನ್‌ ಆಫ್‌ ಅಗ್ರಿಮೆಂಟ್‌ ಆಫ್‌ ಸೇಲ್‌ಗೆ ಸಂಬಂಧಿಸಿದಂತೆ ರೇರಾ ಕಾಯಿದೆ ಮತ್ತು ಆಸ್ತಿ ವರ್ಗಾವಣೆ ಕಾಯಿದೆ ಸೆಕ್ಷನ್‌ 54 ಮತ್ತು ನೋಂದಣಿ ಕಾಯಿದೆ 1908ರ ಸೆಕ್ಷನ್‌ 17ರ ನಡುವೆ ಸಮನ್ವಯತೆ ಇಲ್ಲ. ಇವುಗಳನ್ನು ನಿವಾರಿಸದ ಹೊರತು ಕಾಯಿದೆ ಪೂರ್ಣ ಪ್ರಮಾಣದ ಅನುಷ್ಠಾನ ಸಾಧ್ಯವಿಲ್ಲ.

ಮುಂದಿನ ಹಾದಿ:

 • ಹಾಲಿ ಇರುವ ಕಾಯಿದೆಗಳಲ್ಲಿ ಸಣ್ಣ ಪುಟ್ಟ ತಿದ್ದುಪಡಿಗಳನ್ನು ಮಾಡಬೇಕು ಎನ್ನುತ್ತಾರೆ ಅಧಿಕಾರಿಗಳು. ಅದಕ್ಕಾಗಿ ನಗರಾಭಿವೃದ್ಧಿ ಇಲಾಖೆ, ವಸತಿ ಇಲಾಖೆ, ರೇರಾ ಪ್ರಾಧಿಕಾರ, ಸಹಕಾರ ಇಲಾಖೆ, ನಗರ ಮತ್ತು ಪಟ್ಟಣ ಯೋಜನಾ ಇಲಾಖೆ ಮತ್ತು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಜೊತೆ ಸಮನ್ವಯತೆ ಅತ್ಯಗತ್ಯ ಎನ್ನುತ್ತಾರೆ.

ಬಡವರ ಸಂಜೀವಿನಿ

4.

ಸುದ್ಧಿಯಲ್ಲಿ ಏಕಿದೆ ?ಉಜ್ವಲ ಅನಿಲ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಈಗಾಗಲೇ 6 ಕೋಟಿ ಸಂಪರ್ಕಗಳನ್ನು ಕಲ್ಪಿಸಿ ದಾಖಲೆ ನಿರ್ವಿುಸಿದೆ.

ಉಜ್ವಲ ಅನಿಲ ಯೋಜನೆ

 • ಕೇಂದ್ರ ಸರ್ಕಾರದ ಹಲವಾರು ಯೋಜನೆಗಳಲ್ಲಿ ಇದೂ ಒಂದು ಆಶಾದಾಯಕ ಸಾಮಾಜಿಕ ಕ್ಷೇಮಾಭಿವೃದ್ಧಿ ಯೋಜನೆ.
 • 2016ರ ಮೇ 1ರಂದು ಅನುಷ್ಠಾನಗೊಂಡ ಈ ಯೋಜನೆ ಹೊಸ ಕ್ರಾಂತಿಯನ್ನೇ ಸೃಷ್ಟಿಸಿತು.
 • ಬಡತನದ ರೇಖೆಯ ಕೆಳಗಿನ ಕುಟುಂಬದವರಿಗೆ ಎಲ್​ಪಿಜಿ ಸಂಪರ್ಕ ಕಲ್ಪಿಸಿಕೊಡುವ ಮೂಲಕ ನೈರ್ಮಲ್ಯರಹಿತ ಅಡುಗೆ ಮನೆಯನ್ನು ನಿರ್ವಿುಸಲಾಗುತ್ತಿದೆ.
 • ಈ ಯೋಜನೆ ಅನುಷ್ಠಾನಗೊಂಡಾಗಿನಿಂದ ಒಂದು ಕುಟುಂಬ ವರ್ಷಕ್ಕೆ ಸರಾಸರಿ 5 ಸಿಲಿಂಡರ್​ಗಳನ್ನು ಬಳಕೆ ಮಾಡುತ್ತಿದೆ ಎಂದು ಅಂದಾಜಿಸಲಾಗಿದೆ.
 • ಯೋಜನೆಯ ಲಾಭ ಬಡತನ ರೇಖೆಯ ಕೆಳಗಿರುವವರಿಗೆ ಲಭಿಸುತ್ತದೆ.
 • ಮನೆಯ ಹೆಣ್ಣುಮಗಳ ಹೆಸರಿನಲ್ಲಿ ಮಾತ್ರ ನೀಡಲಾಗುವದು.
 • 18 ವರ್ಷ ಮೇಲ್ಪಟ್ಟವರಾಗಿದ್ದು, ಈಗಾಗಲೇ ಎಲ್​ಪಿಜಿ ಸಂಪರ್ಕ ಹೊಂದಿರಬಾರದು.

ಯೋಜನೆಯ ಉದ್ದೇಶ

 • ಭಾರತದಲ್ಲಿ ಸುಮಾರು 25 ಕೋಟಿ ಕುಟುಂಬಗಳಿವೆ. ಅವರಲ್ಲಿ 10 ಕೋಟಿ ಕುಟುಂಬಗಳಿಗೆ ಎಲ್​ಪಿಜಿ ಸಂಪರ್ಕ ಇನ್ನೂ ಇಲ್ಲ. ಅಂಥವರು, ಉರುವಲು ಕಟ್ಟಿಗೆ, ಕಲ್ಲಿದಲು, ಸಗಣಿಯ ಬೆರಣಿ, ಜೋಳದ ದಂಟು ಮುಂತಾದವುಗಳನ್ನು ಬಳಸಿ ಒಲೆ ಉರಿಸುತ್ತಾರೆ. ಅಂಥವರಿಗೆ ಆರೋಗ್ಯದಾಯಕ ಇಂಧನವೆಂದು ಅಡುಗೆ ಅನಿಲದ ಸಂಪರ್ಕ ನೀಡುವುದೇ ಈ ಯೋಜನೆಯ ಉದ್ದೇಶ.
 • ಈ ಬಗ್ಗೆ ಕೇಂದ್ರ ಸರ್ಕಾರ ಒಟ್ಟು ರೂ.8000 ಕೋಟಿಯಷ್ಟು ಹಣವನ್ನು ಮಂಜೂರು ಮಾಡಿದೆ. ಪ್ರತಿ ಕುಟುಂಬಕ್ಕೆ ಒಲೆ, ರಿಫಿಲ್ ಮತ್ತು ಇನ್ನಿತರ ಸಲಕರಣೆಗೆಂದು ರೂ.1600 ನೀಡುತ್ತಿದೆ.
 • ಇದರ ಘೊಷವಾಕ್ಯ, ‘ಪ್ರತಿಯೋರ್ವ ಸ್ತ್ರೀ ತನಗೆ ಸಲ್ಲಬೇಕಾದ ಗೌರವ ಮತ್ತು ಘನತೆಯನ್ನು ಪಡೆಯಬೇಕು’ ಎನ್ನುವುದಾಗಿದೆ.

ಉದ್ಯೋಗಾವಕಾಶ ಹೆಚ್ಚಳ

 • ಉಜ್ವಲ ಅನಿಲ ಯೋಜನೆಯಿಂದಾಗಿ ಅರಣ್ಯ ನಾಶಕ್ಕೆ ತೆರೆ ಬೀಳುವ ಜತೆಗೆ, ಗ್ರಾಮೀಣ ಭಾಗದ ಬಡ ಮಹಿಳೆಯರಿಗೆ ಅಡುಗೆ ಮಾಡುವ ಸಮಯದಲ್ಲಿ ಉಳಿತಾಯವಾಗುತ್ತಿದೆ.
 • ಇದರಿಂದ ಅವರು ತಮ್ಮ ಸಮಯವನ್ನು ಇನ್ನಿತರ ಕೆಲಸಗಳ ಕಡೆ ನೀಡಲು ಸಾಧ್ಯವಾಗುತ್ತಿದೆ.
 • ಅಷ್ಟೇ ಅಲ್ಲ, ಗ್ರಾಮೀಣ ಭಾಗದ ಎಲ್​ಪಿಜಿ ಗ್ರಾಹಕರು ಈಗ ಅಡುಗೆಗೆ ಕುಕ್ಕರ್​ಗಳನ್ನು ಬಳಸಲು ಆರಂಭಿಸಿದ್ದಾರೆ. ಹೀಗಾಗಿ, ಕುಕ್ಕರ್​ಗಳಿಗೆ ಬೇಡಿಕೆ ಏರಿ, ಉತ್ಪಾದನೆ ಹೆಚ್ಚುತ್ತಿದೆ. ಈ ಹಿಂದೆ ಪ್ರೆಷರ್ ಕುಕ್ಕರ್​ಗಳಿಗೆ ಕೇವಲ ಶೇ.6ರಷ್ಟು ಬೇಡಿಕೆ ಇತ್ತು. ಈಗ ಅದು ಶೇ.10-11ಕ್ಕೆ ತಲುಪಿದೆ. ಅಂದರೆ ಅವುಗಳ ಬೇಡಿಕೆ ಹಿಂದಿನ ಒಂದಂಕಿಯಿಂದ ಎರಡಂಕಿಗೆ ಏರಿದಂತಾಗಿದೆ.
 • ಉಜ್ವಲ ಅನಿಲ ಯೋಜನೆ ಅನುಷ್ಠಾನಕ್ಕೆ ಬರುವ ಮುನ್ನ ನಗರ ಪ್ರದೇಶದಲ್ಲಿ ಮಾತ್ರ ಕುಕ್ಕರ್​ಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಗ್ರಾಮೀಣ ಪ್ರದೇಶಗಳಲ್ಲಿ ಶೇ.30ರಷ್ಟು ಮಾತ್ರ ಬೇಡಿಕೆ ಇತ್ತು. ಈಗ ಇಲ್ಲಿ ಬೇಡಿಕೆ ಶೇ. 65ರಷ್ಟಾಗಿದೆ. ಜತೆಗೆ, ಸಂಘಟಿತ ವಲಯದ ಕುಕ್ಕರ್ ಉದ್ದಿಮೆಗಿಂತ ಅಸಂಘಟಿತ ವಲಯದ ಕುಕ್ಕರ್ ಉದ್ದಿಮೆ ಅತಿ ವೇಗದಲ್ಲಿ ಬೆಳೆಯುತ್ತಿದೆ. ಆದುದರಿಂದ ಸ್ವಯಂ ಉದ್ಯೋಗಾವಕಾಶಗಳು ಹೆಚ್ಚುತ್ತಲಿವೆ.

ಧ್ಯೇಯಗಳು

 • ಸ್ತ್ರೀ ಶಕ್ತಿಗೆ ಉತ್ತೇಜನ ಮತ್ತು ಅವರ ಆರೋಗ್ಯ ರಕ್ಷಣೆಗೆ ಆದ್ಯತೆ.
 • ಅಸುರಕ್ಷಿತವಾಗಿ ಅಡುಗೆಯಿಂದಾಗುವ ಸಾವು-ನೋವುಗಳನ್ನು ಕಡಿಮೆ ಮಾಡುವುದು.
 • ಸಸ್ಯ ಹಾಗೂ ಪ್ರಾಣಿಜನ್ಯ ತ್ಯಾಜ್ಯ ಬಳಕೆಯಿಂದ ಉಂಟಾಗುವ ದುಷ್ಪರಿಣಾಮ ಕಡಿಮೆ ಮಾಡುವುದು.
 • ದೂಷಿತ ಅಡುಗೆ ಮನೆಯ ಹೊಗೆಯಿಂದಾಗುವ ಶ್ವಾಸಕೋಶ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುವುದು.
 • ಉರುವಲಿಗಾಗಿ ಅವ್ಯಾಹತ ನಡೆಯುತ್ತಿರುವ ಅರಣ್ಯನಾಶಕ್ಕೆ ಮಂಗಲ ಹಾಡುವುದು.

ಖಾದಿ ಖದರ್

5.

ಸುದ್ಧಿಯಲ್ಲಿ ಏಕಿದೆ ?ರಾಷ್ಟ್ರೀಯತೆಯ ಸಂಕೇತವಾಗಿದ್ದ ಖಾದಿಗೆ ಈಗ ಆಧುನಿಕತೆಯ ಸ್ಪರ್ಶ. ಇತ್ತೀಚೆಗೆ ಖಾದಿ ಉತ್ಪನ್ನಗಳ ಮಾರುಕಟ್ಟೆ ದುಪ್ಪಟ್ಟಾಗಿದ್ದು, ಜನಸಾಮಾನ್ಯರಲ್ಲದೆ ಸ್ಥಿತಿವಂತರ ಮನೆ-ಮನಗಳನ್ನೂ ಅಲಂಕರಿಸುತ್ತಿದೆ.

 • 2018ರಲ್ಲಿ ಖಾದಿ ಉದ್ಯಮದ ಮಾರುಕಟ್ಟೆ ಮೌಲ್ಯ ಬರೋಬ್ಬರಿ 50,000 ಕೋಟಿ ರೂಪಾಯಿ ದಾಟಿದೆ. ಬಹುರಾಷ್ಟ್ರೀಯ ಕಂಪನಿಗಳ ಮಾರುಕಟ್ಟೆ ಏದುಸಿರು ಬಿಡುತ್ತಿರುವ ಸಂದರ್ಭದಲ್ಲಿ ಈ ದೇಸಿ ಉದ್ಯಮ ಗರಿಗೆದರಿ ನಿಂತಿರುವುದು ಸೋಜಿಗ.
 • 2018ರಲ್ಲಿ ಖಾದಿ ಉತ್ಪನ್ನಗಳ ಬೇಡಿಕೆ ಎಷ್ಟಿತ್ತೆಂದರೆ, ಜಾಗತಿಕ ಮಾರುಕಟ್ಟೆಯಲ್ಲಿ ಅತಿ ದೊಡ್ಡ ಸ್ಪರ್ಧಿಯಾಗಿರುವ ಹಾಗೂ ಗ್ರಾಹಕರನ್ನು ಸೆಳೆಯಲು ಕೋಟ್ಯಂತರ ರೂಪಾಯಿ ಹಣ ಸುರಿಯುತ್ತಿರುವ ಕಂಪನಿಗಳು ಕೂಡ ಖಾದಿ ಉತ್ಪನ್ನಗಳ ಮಾರಾಟ ಪ್ರಮಾಣದ ಹತ್ತಿರಕ್ಕೂ ಸುಳಿಯಲು ಸಾಧ್ಯವಾಗಿಲ್ಲ.
 • 2017ರ ಆರ್ಥಿಕ ವರ್ಷದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಉದ್ಯಮದಿಂದ 49,991.61 ಕೋಟಿ ರೂಪಾಯಿ ಮೌಲ್ಯದ ಉತ್ಪನ್ನಗಳು ಮಾರಾಟವಾಗಿವೆ. ವರ್ಷದಿಂದ ವರ್ಷಕ್ಕೆ ಶೇಕಡಾ 26ರಷ್ಟು ಬೆಳವಣಿಗೆ ದಾಖಲಾಗಿದೆ. ಇದುವರೆಗೆ ಯಾವುದೇ ಖಾಸಗಿ ಕ್ಷೇತ್ರವೂ ಇಷ್ಟು ಪ್ರಮಾಣದ ಬೆಳವಣಿಗೆ ದರ ಸಾಧಿಸಿಲ್ಲ.

ಖಾದಿಯ ಹಿರಿಮೆ

 • ಖಾದಿ ಆಯೋಗ ದೇಶಾದ್ಯಂತ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗಳ ಮೂಲಕ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ.
 • ಪ.ಜಾತಿ, ಪ.ಪಂಗಡ, ಒಬಿಸಿ, ಅಲ್ಪಸಂಖ್ಯಾತರು, ಅಂಗವಿಕಲರು, ಮಾಜಿ ಯೋಧರು, ನಿರಾಶ್ರಿತರು ಮೊದಲಾದವರಿಗೆ ಉದ್ಯೋಗಾವಕಾಶ ಕಲ್ಪಿಸಿದೆ.
 • ಗ್ರಾಮೀಣ ಕಸುಬುದಾರರಿಗೆ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡುವ ಜತೆಗೆ ಅಗತ್ಯ ತರಬೇತಿ ನೀಡಿ ಅವರ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುತ್ತಿದೆ.
 • ಈ ಮೂಲಕ ಗ್ರಾಮೀಣ ಜನತೆ ನಗರಗಳತ್ತ ವಲಸೆ ಬರುವುದನ್ನು ನಿಯಂತ್ರಿಸುತ್ತಿದೆ.
 • ಹೇರಳ ಮಾನವ ಸಂಪನ್ಮೂಲ ಹೊಂದಿರುವ ಗ್ರಾಮೀಣ ಭಾಗದ ಜನತೆಗೆ ಬೇಸಾಯದ ಜತೆಗೆ ಗ್ರಾಮೋದ್ಯೋಗ ಒದಗಿಸಿ ಗ್ರಾಮಸ್ವರಾಜ್ಯ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತ ಹೆಜ್ಜೆ ಇಟ್ಟಿದೆ.

ಕ್ಷಿಪ್ರ ಬೆಳವಣಿಗೆಗೆ ಕಾರಣಗಳು ಮೂರು

 • ಹೆಚ್ಚು ಉದ್ಯಮಶೀಲರಿಗೆ ಆರ್ಥಿಕ ಸಹಾಯ:ಮೊದಲೆಲ್ಲ ಕೇವಲ ಸಂಸ್ಥೆಗಳಿಗೆ ಧನಸಹಾಯ ಮಾಡುತ್ತಿದ್ದ ಆಯೋಗ ತನ್ನ ಆರ್ಥಿಕ ಸಹಾಯದ ಮಾನದಂಡವನ್ನು ಬದಲಾಯಿಸಿಕೊಂಡಿದೆ.
 • ಪ್ರಸ್ತುತ, ಉತ್ತಮ ಯೋಜನೆಗಳನ್ನು ಪ್ರಸ್ತಾಪಿಸಿದ ಯಾರಿಗೇ ಆದರೂ ಧನಸಹಾಯ ನೀಡುತ್ತಿದೆ. ಅದು ಸರ್ಕಾರೇತರ ಸಂಘಟನೆಯೇ ಆಗಿರಬಹುದು ಅಥವಾ ಗ್ರಾಮೋದ್ಯೋಗ ಸಂಸ್ಥೆಯೇ ಆಗಿರಬಹುದು.
 • ಪ್ರಸ್ತುತ ಆಯೋಗದ ವ್ಯಾಪ್ತಿಯಲ್ಲಿ 2500ಕ್ಕೂ ಹೆಚ್ಚು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
 • ಒಂದು ಯೋಜನೆಗೆ ಗರಿಷ್ಠ 25 ಲಕ್ಷ ರೂಪಾಯಿವರೆಗೂ ಬ್ಯಾಂಕುಗಳ ಮೂಲಕ ಸಾಲ ನೀಡಲಾಗುತ್ತದೆ. ಜತೆಗೆ ಭಾಗಶಃ ಹಣವನ್ನು ಸಹಾಯಧನವಾಗಿ ನೀಡುತ್ತದೆ. ಆದರೆ, ಉದ್ಯಮದಾರ ಒಟ್ಟು ಯೋಜನಾ ವೆಚ್ಚದ ಶೇ.10ರಷ್ಟನ್ನು ಸ್ವತಃ ಹೂಡಿಕೆ ಮಾಡಿರಬೇಕು. ಜತೆಗೆ ಕನಿಷ್ಠ 20 ಜನರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕು.
 • ಸಾಲ ನೀಡುವ ಮಾನದಂಡ ಬದಲಾದ ನಂತರ ಆಯೋಗವು ಪ್ರತಿವರ್ಷ ಕನಿಷ್ಠ 1 ಲಕ್ಷ ಯೋಜನೆಗಳಿಗೆ ಆರ್ಥಿಕ ಸಹಾಯ ಒದಗಿಸುವ ಗುರಿ ಹೊಂದಿತ್ತು. 2019ರ ಆರ್ಥಿಕ ವರ್ಷದಲ್ಲಿ ಈ ಗುರಿ 1, 90,000 ಯೋಜನೆಗಳಿಗೆ ಏರಿಕೆಯಾಗಿದೆ.
 • ಇದಲ್ಲದೆ ದೆಹಲಿ, ಕಾನ್ಪುರ, ಇಂದೋರ್, ಕೋಲ್ಕತ ಮೊದಲಾದ ಮಹಾ ನಗರಗಳಲ್ಲಿ ಬೃಹತ್ ಖಾದಿ ಉತ್ಪನ್ನ ತಯಾರಿಕಾ ಘಟಕಗಳ ಸ್ಥಾಪನೆಗೂ ಆಯೋಗ ಸಹಾಯ ಮಾಡಿದೆ. ಈ ಘಟಕಗಳು ತಮ್ಮದೇ ಬ್ರ್ಯಾಂಡ್​ನ ಖಾದಿ ಉತ್ಪನ್ನಗಳು ಅಮೆಜಾನ್, ಫ್ಲಿಪ್​ಕಾರ್ಟ್ ಮೊದಲಾದ ಆನ್​ಲೈನ್ ಮಾರುಕಟ್ಟೆಗಳಲ್ಲೂ ಲಭ್ಯವಾಗುವಂತೆ ನೋಡಿಕೊಂಡಿವೆ. ಈ ಎಲ್ಲದರ ಪರಿಣಾಮವೇ ಖಾದಿ ಉತ್ಪನ್ನಗಳ ಮಾರಾಟದ ತ್ವರಿತ ಬೆಳವಣಿಗೆ.
 • ರಫ್ತಿನಲ್ಲೂ ಹೆಚ್ಚಳ: ಆಯೋಗವು ಕಳೆದ ನಾಲ್ಕೈದು ವರ್ಷಗಳಿಂದ ಖಾದಿ ಉತ್ಪನ್ನಗಳ ರಫ್ತನ್ನು ಹೆಚ್ಚಿಸಿದೆ. ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಭಾರತದ ಖಾದಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯೂ ಉಂಟಾಗಿದೆ. ಸರ್ಕಾರದ ಸಹಕಾರದೊಂದಿಗೆ ವಿದೇಶಗಳಲ್ಲೂ ಖಾದಿ ತನ್ನ ಛಾಪು ಮೂಡಿಸುತ್ತಿದೆ.
 • ಬ್ರ್ಯಾಂಡ್​ನ ರಕ್ಷಣೆ: ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ವಿಸ್ತರಣೆಗೆ ಮತ್ತೊಂದು ಕಾರಣವೆಂದರೆ, ಖಾದಿ ಬ್ರ್ಯಾಂಡ್​ನ ರಕ್ಷಣೆ. ಖಾಸಗಿ ಕಂಪನಿಗಳ ಬ್ರ್ಯಾಂಡೆಂಡ್ ಸರಕುಗಳ ಸರಿಸಮಾನವಾಗಿ ಖಾದಿ ತನ್ನ ಹೆಸರು ಮತ್ತು ಜನಪ್ರಿಯತೆಗಳನ್ನು ಉಳಿಸಿಕೊಂಡಿದೆ. ಕಳೆದ 5 ವರ್ಷಗಳಿಂದ ಮಾರುಕಟ್ಟೆ ತಂತ್ರಗಳನ್ನೂ ಬದಲಿಸಿಕೊಂಡಿದೆ ಹಾಗೂ ಖಾದಿ ಉತ್ಪನ್ನಗಳನ್ನು ‘ಖಾದಿ ಇಂಡಿಯಾ’ ಬ್ರ್ಯಾಂಡ್ ಹೆಸರಿನಡಿ ಮಾರಾಟ ಮಾಡುತ್ತಿದೆ.
 • ಗ್ರಾಮೋದ್ಯೋಗಗಳ ಕಡೆ ಹೆಚ್ಚು ಗಮನಹರಿಸಿದೆ. 2013ರಲ್ಲಿ ಆಯೋಗವು ಖಾದಿ ಚಿಹ್ನೆಯನ್ನು ಶಾಸನಬದ್ಧಗೊಳಿಸುವ ಮೂಲಕ ಖಾಸಗಿ ಉತ್ಪಾದಕರು ಖಾದಿ ಚಿಹ್ನೆಯನ್ನು ಬಳಸದಂತೆ ನಿಯಂತ್ರಣ ಹೇರಿದೆ.
 • 2014ರಿಂದ ಈ ಚಿಹ್ನೆಯನ್ನು ಖಾದಿ ಉತ್ಪನ್ನಗಳ ಅಂತಾರಾಷ್ಟ್ರೀಯ ಟ್ರೇಡ್​ವಾರ್ಕ್ ಆಗಿ ಬಳಸಲಾಗುತ್ತಿದೆ.
 • ಖಾದಿ ಚಿಹ್ನೆಯನ್ನು ಬಳಸುತ್ತಿದ್ದ ಖಾಸಗಿ ಕಂಪನಿಗಳಾದ ಫ್ಯಾಬ್​ಇಂಡಿಯಾ ಮತ್ತು ಜರ್ಮನ್ ಮೂಲದ ಖಾದಿ ನೇಚರ್​ಪ್ರಾಡಕ್ಟ್ ಜಿಬಿಆರ್ ವಿರುದ್ಧ ಕೇಂದ್ರ ಸರ್ಕಾರ ನ್ಯಾಯಾಲಯದಲ್ಲಿ ದಾವೆ ಹೂಡಿ ನ್ಯಾಯವನ್ನು ತನ್ನ ಪರವಾಗಿಸಿಕೊಂಡಿತು.
 • ವಿಸ್ತೃತ ವಿತರಣೆ: ಸರ್ಕಾರಿ ಕ್ಷೇತ್ರಕ್ಕಷ್ಟೇ ಸೀಮಿತವಾಗಿದ್ದ ಖಾದಿ ಉತ್ಪನ್ನಗಳನ್ನು ಖಾದಿ ಭವನದ ಹೊರಗೆ ತಂದಿದ್ದೇ ಮಾರಾಟ ಹೆಚ್ಚಳಕ್ಕೆ ಮತ್ತೊಂದು ಕಾರಣ. ಕಳೆದ ಮೂರು ವರ್ಷಗಳಿಂದ ಆಯೋಗವು ಮಾರುಕಟ್ಟೆ ತಂತ್ರವನ್ನು ಬದಲಿಸಿದ್ದು, ದೊಡ್ಡ ದೊಡ್ಡ ಮಾಲ್​ಗಳು ಹಾಗೂ ಮುಕ್ತ ಮಾರುಕಟ್ಟೆಯಲ್ಲೂ ಖಾದಿ ಬ್ರ್ಯಾಂಡೆಡ್ ಉತ್ಪನ್ನಗಳು ದೊರೆಯುವಂತೆ ಮಾಡಲಾಯಿತು.
 • ಅಲ್ಲದೆ, ಎಲ್ಲ ವಿದೇಶಿ ದೂತಾವಾಸ (ಎಂಬೆಸಿ) ಕಚೇರಿಗಳಿಗೂ ಖಾದಿ ಉತ್ಪನ್ನಗಳ ಸ್ಯಾಂಪಲ್​ಗಳನ್ನು ಕಳುಹಿಸಿ ಪ್ರಚಾರ ಕೈಗೊಳ್ಳಲಾಗುತ್ತಿದೆ. ಅಷ್ಟೇ ಅಲ್ಲ, ಖಾದಿ ಇಂಡಿಯಾದ ಸೌಂದರ್ಯವರ್ಧಕ ಉತ್ಪನ್ನಗಳು, ನೈಸರ್ಗಿಕ ಉತ್ಪನ್ನಗಳು ಹಾಗೂ ಆಯುರ್ವೆದದ ಉತ್ಪನ್ನಗಳು ಅತಿ ಹೆಚ್ಚು ಬೇಡಿಕೆ ಗಿಟ್ಟಿಸಿಕೊಂಡಿವೆ.

ಸೂತ್ರಧಾರ ಕೆವಿಐಸಿ

 • ಇದ್ದಕ್ಕಿದ್ದಂತೆ ಖಾದಿ ಮಾರುಕಟ್ಟೆ ಬೃಹದಾಕಾರವಾಗಿ ಬೆಳೆಯುತ್ತಿದೆ ಎಂದರೆ, ಅದಕ್ಕೆ ಕಾರಣ ‘ರಾಷ್ಟ್ರೀಯ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ’ (ಖಾದಿ ಆಂಡ್ ವಿಲೇಜ್ ಇಂಡಸ್ಟ್ರೀಸ್ ಕಮಿಷನ್-ಕೆವಿಐಸಿ).
 • ಗಾಂಧಿಯ ಗ್ರಾಮ ಸ್ವರಾಜ್ಯ ಪರಿಕಲ್ಪನೆಯಂತೆ ಸಂವಿಧಾನದ 23ನೇ ವಿಧಿಯಡಿ 1957ರಲ್ಲಿ ರಾಷ್ಟ್ರೀಯ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಸ್ಥಾಪನೆಯಾಯಿತು.
 • ಆರಂಭದಲ್ಲಿ ವೈಯಕ್ತಿಕ ಉದ್ದಿಮೆದಾರರು ಹಾಗೂ ಸಹಕಾರ ಸಂಘಗಳ ಮೂಲಕ ಗುಡಿ (ಖಾದಿ ಗ್ರಾಮೋದ್ಯೋಗ) ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುವುದು ಇದರ ಮೂಲ ಉದ್ದೇಶವಾಗಿತ್ತು.
 • ಪ್ರಸ್ತುತ ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿದೆ. ಎಲ್ಲ ರಾಜ್ಯಗಳಲ್ಲೂ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗಳನ್ನು ಸ್ಥಾಪಿಸಲಾಗಿದೆ.
 • ಕರ್ನಾಟಕದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಅಧಿನಿಯಮ 1956 (ಕರ್ನಾಟಕ ಅಧಿನಿಯಮ 1957)ರಂತೆ 1957ರ ಸೆಪ್ಟೆಂಬರ್ 13ರಂದು ಶಾಸನಬದ್ಧ ಸ್ವಾಯತ್ತ ಹಾಗೂ ಲಾಭರಹಿತ ಸೇವಾ ಸಂಸ್ಥೆಯಾಗಿ ಸ್ಥಾಪನೆಯಾಯಿತು.
 • ತಿದ್ದುಪಡಿ: 1987-88ರಲ್ಲಿ ಕೆವಿಐಸಿ ಕಾಯ್ದೆ ಗೆ ತಿದ್ದುಪಡಿ ತದ್ದು ಗ್ರಾಮೀಣ ಕೈಗಾರಿಕೆಗಳಿಗೆ ವ್ಯಾಖ್ಯಾನ ನೀಡಲಾಯಿತು. ಆಯೋಗವು ಗ್ರಾಮೀಣ ಉದ್ಯಮಶೀಲರಿಗೆ ಹಾಗೂ ದೇಸಿ ಕರಕುಶಲ ಉತ್ಪನ್ನಗಳನ್ನು ಉತ್ಪಾದಿಸುವವರಿಗೆ ಸಾಲದ ರೂಪದಲ್ಲಿ ಆರ್ಥಿಕ ಸಹಾಯ ಒದಗಿಸುವ ಜತೆಗೆ ಸಹಾಯಧನವನ್ನೂ ನೀಡುತ್ತಿದೆ. ಹೊಸದಾಗಿ ನೋಂದಾಯಿಸಿಕೊಂಡ ಖಾದಿ ಮತ್ತು ಗ್ರಾಮೋದ್ಯೋಗ ಘಟಕಗಳನ್ನು ಆಯೋಗದ ಅಧಿಕಾರಿಗಳೇ ಖುದ್ದಾಗಿ ಪರಿಶೀಲಿಸಿ, ಉತ್ಪನ್ನಗಳ ಗುಣಮಟ್ಟವನ್ನು ಖಾತರಿಪಡಿಸುತ್ತಾರೆ.

ಆಧುನಿಕತೆಯ ಸ್ಪರ್ಶ

 • ಪ್ಯಾಕೇಜಿಂಗ್ ಕಡೆಗೂ ಗಮನ ಖಾದಿ ಮತ್ತು ಗ್ರಾಮೋದ್ಯೋಗ ಘಟಕಗಳು ಉತ್ಪಾದಿಸುವ ಉತ್ಪನ್ನಗಳು ಸಹಜವಾಗಿ ಪರಿಸರಸ್ನೇಹಿಯಾಗಿರುತ್ತವೆ. ಆರೋಗ್ಯಕರ, ಉತ್ಕೃಷ್ಟ ಗುಣಮಟ್ಟ ಹಾಗೂ ಜೀವನಾವಶ್ಯಕ ವಸ್ತುಗಳೆಲ್ಲವನ್ನೂ ಈ ಕ್ಷೇತ್ರದಲ್ಲಿ ಉತ್ಪಾದಿಸಲಾಗುತ್ತದೆ.
 • ಇತ್ತೀಚೆಗೆ ಖಾದಿ ಉತ್ಪನ್ನಗಳು ಯುವಕರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿವೆ. ಖಾದಿ ಉದ್ಯಮ ಕೂಡ ಗ್ರಾಹಕರ ಆಕಾಂಕ್ಷೆಗಳನ್ನು ಅರಿತು ಸ್ಪಂದಿಸುತ್ತಿದೆ. ಯುವಜನತೆಯನ್ನು ಆಕರ್ಷಿಸುವ ವಿವಿಧ ವಿನ್ಯಾಸದ ಆಧುನಿಕ ಸಿದ್ಧ ಉಡುಪುಗಳನ್ನು ತಯಾರಿಸುತ್ತಿದೆ. ಖಾದಿ ಉತ್ಪನ್ನಗಳ ಮಾರಾಟ ಮತ್ತು ಪ್ರಚಾರಕ್ಕೆ ಖಾದಿ ಮೇಳ, ವಸ್ತು ಪ್ರದರ್ಶನ, ಖಾದಿ ಉತ್ಸವಗಳಂತಹ ಹಲವಾರು ಸರಳ ತಂತ್ರಗಳನ್ನು ಅನುಸರಿಸಲಾಗುತ್ತಿದೆ.
 • ಎಲ್ಲಕ್ಕಿಂತ ಹೆಚ್ಚಾಗಿ, ಸ್ಪರ್ಧಾತ್ಮಕ ಮಾರುಕಟ್ಟೆ ವ್ಯವಸ್ಥೆಯಲ್ಲಿ ಗ್ರಾಹಕರ ಅಪೇಕ್ಷೆಗಳಿಗೆ ಅನುಸಾರ ವಾಗಿ ಬ್ರ್ಯಾಂಡೆಡ್ ವಸ್ತುಗಳಿಗೆ ಸರಿಸಾಟಿಯಾದ ವಿನೂತನ ಮಾದರಿಯ ಪ್ಯಾಕಿಂಗ್ ತಂತ್ರ ವನ್ನೂ ಅಳವಡಿಸಿಕೊಂಡಿದೆ. ಎಲ್ಲ ಪ್ರಯತ್ನಗಳ ಫಲವಾಗಿ ಉದ್ಯಮ ತ್ವರಿತ ಬೆಳವಣಿಗೆ ಕಾಣುತ್ತಿದೆ.

ವಂದೇ ಭಾರತ್ ಎಕ್ಸ್​ಪ್ರೆಸ್

6.

ಸುದ್ಧಿಯಲ್ಲಿ ಏಕಿದೆ ?ಶತಾಬ್ದಿ ಎಕ್ಸ್​ಪ್ರೆಸ್ ಬದಲಿಗೆ ಹಂತಹಂತವಾಗಿ ಹಳಿಗೆ ಇಳಿಯಲಿರುವ ಟ್ರೇನ್-18ಗೆ ‘ವಂದೇ ಭಾರತ್ ಎಕ್ಸ್​ಪ್ರೆಸ್’ ಎಂದು ನಾಮಕರಣ ಮಾಡಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ.

 • ಈ ರೈಲು ದಿಲ್ಲಿ ಮತ್ತು ವಾರಾಣಸಿ ನಡುವೆ ಗಂಟೆಗೆ ಗರಿಷ್ಠ 160 ಕಿ.ಮೀ ವೇಗದಲ್ಲಿ ಓಡಾಟ ನಡೆಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರವೇ ಹಸಿರು ನಿಶಾನೆ ತೋರಲಿದ್ದಾರೆ.
 • 16 ಕೋಚ್‌ಗಳ ಈ ರೈಲನ್ನು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ 18 ತಿಂಗಳುಗಳಲ್ಲಿ ನಿರ್ಮಿಸಲಾಗಿದೆ.
 • ದೇಶದ ಪ್ರಥಮ ಎಂಜಿನ್ ರಹಿತ ರೈಲು ಎಂಬ ಖ್ಯಾತಿ ಇದರದ್ದಾಗಿದೆ.
 • ಇದು ಸಂಪೂರ್ಣ ಹವಾನಿಯಂತ್ರಿತ ರೈಲಾಗಿದ್ದು, ಕಾನ್ಪುರ ಮತ್ತು ಅಲಹಾಬಾದ್‌ಗಳಲ್ಲಿ ನಿಲುಗಡೆ ಹೊಂದಲಿದೆ.
 • ಅಲ್ಲದೆ ಎರಡು ಎಕ್ಸಿಕ್ಯೂಟಿವ್ ಚೇರ್‌ ಕಾರ್‌ಗಳನ್ನು (ಐಷಾರಾಮಿ) ಹೊಂದಿರುತ್ತದೆ
 • ಟಿಕೆಟ್ ದರ ಶೇ.50 ಹೆಚ್ಚಳ?: ಗಂಟೆಗೆ 160-180 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವ ವಂದೇ ಭಾರತ್ ಎಕ್ಸ್​ಪ್ರೆಸ್ ಪ್ರಯಾಣ ದರ ಶತಾಬ್ದಿಗಿಂತ ಶೇ.40-50 ಹೆಚ್ಚಳವಾಗುವ ಸಾಧ್ಯತೆಯಿದೆ. ಕಡಿಮೆ ಅವಧಿಯಲ್ಲಿ ಹೆಚ್ಚು ದೂರ ಸಾಗುವುದು ಹಾಗೂ ಐಷಾರಾಮಿ ಸೌಕರ್ಯಗಳ ಹಿನ್ನೆಲೆಯಲ್ಲಿ ದರ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಳಿವಿನಂಚಿಲ್ಲಿರುವ ಮೊಸಳೆಗಳ ಸ್ಥಳಾಂತರ!

7.

ಸುದ್ಧಿಯಲ್ಲಿ ಏಕಿದೆ ?ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ವಿಶ್ವದ ಅತಿ ಎತ್ತರದ ‘ಏಕತೆಯ ಪ್ರತಿಮೆ’ಗೆ ಪ್ರವಾಸಿಗರನ್ನು ಸೆಳೆಯಲು ಸೀಪ್ಲೇನ್‌ ಸೇವೆ ಆರಂಭಿಸಲು ಮುಂದಾಗಿರುವ ಗುಜರಾತ್‌ ಸರಕಾರ, ಅಲ್ಲಿನ ಅಳಿವಿನಂಚಿನಲ್ಲಿರುವ ಮೊಸಳೆಗಳನ್ನು ಸ್ಥಳಾಂತರ ಮಾಡುತ್ತಿದೆ.

 • ಸ್ಥಳೀಯವಾಗಿ ಮಗರ್‌ ತಲಾವ್‌ (ಮೊಸಳೆ ಕೊಳ) ಎಂದು ಕರೆಯಲ್ಪಡುವ ಕೊಳದಲ್ಲೇ ಮೊಸಳೆಗಳು ಇಲ್ಲವಾಗಲಿವೆ.
 • ಇಲ್ಲಿರುವ ಮೊಸಳೆಗಳನ್ನು ಹೊರತೆಗೆದು ದೂರದ ಸರೋವರಕ್ಕೆ ಬಿಡಲಾಗುತ್ತಿದೆ.
 • ಸರ್ದಾರ್‌ ಸರೋವರ ಡ್ಯಾಮ್‌ ಪ್ರದೇಶದಲ್ಲಿ ಜೀವಿಸುತ್ತಿದ್ದ ಸುಮಾರು 485 ಮೊಸಳೆಗಳನ್ನು ಒಕ್ಕಲೆಬ್ಬಿಸಲಾಗುತ್ತಿದ್ದು, ಈಗಾಗಲೇ 15 ಮೊಸಳೆಗಳನ್ನು ಸ್ಥಳಾಂತರಿಸಲಾಗಿದೆ.
 • ಸರೋವರದಿಂದ ಹೊರ ತೆಗೆದ ಮೊಸಳೆಗಳ ಪೈಕಿ ಒಂದು ಮೊಸಳೆ ಸುಮಾರು 10 ಅಡಿ ಉದ್ದವಿತ್ತು ಎನ್ನಲಾಗಿದೆ.

ಮಗ್ಗರ್‍‌ ಕ್ರೊಕಡೈಲ್‌ಬಗ್ಗೆ

 • ನರ್ಮದಾ ಸರೋವರದಲ್ಲಿ ಜೀವಿಸುತ್ತಿರುವ ‘ಮಗ್ಗರ್‍‌ ಕ್ರೊಕಡೈಲ್‌’ (Mugger Crocodiles) ಎಂದು ಕರೆಯಲ್ಪಡುವ ಈ ಮೊಸಳೆಗಳು ಅಪಾಯದ ಅಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ.
 • ಮಗ್ಗರ್‌ ಜಾತಿಯ ಮೊಸಳೆಗಳು 10 ಅಡಿಗೂ ಹೆಚ್ಚು ಉದ್ದವಿರುತ್ತವೆ.
 • ಭೂತಾನ್‌ ಮತ್ತು ಮ್ಯಾನ್ಮಾರ್‌ನಲ್ಲಿ ಹೆಚ್ಚಾಗಿ ಕಾಣಸಿಗುತ್ತಿದ್ದ ಮಗ್ಗರ್‌ ಜಾತಿಯ ಮೊಸಳೆಗಳು ಅಳಿವಿನಂಚಿಗೆ ಬಂದಿವೆ.
 • ಮೊಗ್ಗರ್ ಮೊಸಳೆ (ಕ್ರೊಕೊಡೈಲಸ್ ಪ್ಯಾಲಸ್ಟ್ರಿಸ್), ಇದನ್ನು ಮಾರ್ಷ್ ಮೊಸಳೆ, ವಿಶಾಲ-ಮೊನಚಾದ ಮೊಸಳೆ ಎಂದು ಕೂಡ ಕರೆಯುತ್ತಾರೆ.
 • ಮಗ್ಗರ್ ದಕ್ಷಿಣ ಇರಾನ್ ಮತ್ತು ಪಾಕಿಸ್ತಾನದಿಂದ ಭಾರತೀಯ ಉಪಖಂಡಕ್ಕೆ ಮತ್ತು ಶ್ರೀಲಂಕಾದ ಸಿಹಿನೀರಿನ ಆವಾಸಸ್ಥಾನಗಳಿಗೆ ಮೊಸಳೆಯು ಸ್ಥಳೀಯವಾಗಿದೆ. 1982 ರಿಂದ ಐಯುಸಿಎನ್ ರೆಡ್ ಲಿಸ್ಟ್ನಲ್ಲಿ ದುರ್ಬಲ ಎಂದು ಪಟ್ಟಿ ಮಾಡಲಾಗಿದೆ.
 • ಇದು ಸರೋವರಗಳು, ನದಿಗಳು, ಜವುಗು ಮತ್ತು ಕೃತಕ ಕೊಳಗಳಲ್ಲಿ ವಾಸಿಸುವ ಮಧ್ಯಮ ಗಾತ್ರದ ಮೊಸಳೆಯಾಗಿದೆ.
 • ಇದು ಸಮುದ್ರವಾಸಿ ಮೊಸಳೆ (ಸಿ ಪೊರೊಸಸ್) ಮತ್ತು ಘರಿಯಾಲ್ (ಗ್ಯಾವಿಯಾಲಿಸ್ ಗ್ಯಾಂಗ್ಟಿಕಸ್) ಹೊರತುಪಡಿಸಿ, ಭಾರತದ ಮೂರು ಮೊಸಳೆಗಳಲ್ಲಿ ಒಂದಾಗಿದೆ.

ಪೇಟೆಂಟೆಡ್‌ ಔಷಧಗಳ ದೇಶಿ ಉತ್ಪಾದನೆಗೆ ಲೈಸೆನ್ಸ್

8.

ಸುದ್ಧಿಯಲ್ಲಿ ಏಕಿದೆ ?ವಿಪರೀತ ದರ ವಿಧಿಸುವ ಪೇಟೆಂಟೆಡ್‌ ಔಷಧಗಳಿಗೆ ಸಡ್ಡು ಹೊಡೆಯಲು ಅವುಗಳ ದೇಸೀಯ ಉತ್ಪಾದನೆಗೆ ಲೈಸೆನ್ಸ್‌ ನೀಡಿ ದರ ನಿಯಂತ್ರಿಸುವ ಮಹತ್ವ ದ ಚಿಂತನೆ ಸರಕಾರದ ಮಟ್ಟದಲ್ಲಿ ನಡೆದಿದೆ.

 • ಕ್ಯಾನ್ಸರ್‌ ಮತ್ತು ಕೆಲವು ಅಪರೂಪದ ಔಷಧಗಳಿಗೆ ಪೇಟೆಂಟ್‌ ಪಡೆದ ಕಂಪನಿಗಳು ವಿಪರೀತ ದರ ವಿಧಿಸುತ್ತಿವೆ. ಇದನ್ನು ನಿಯಂತ್ರಿಸಲು ಪೇಟೆಂಟೆಡ್‌ ಕಂಪನಿಗಳ ಅನುಮತಿಯನ್ನು ಪಡೆಯದೆಯೇ ಭಾರತೀಯ ಕಂಪನಿಗಳು ಅವುಗಳನ್ನು ಉತ್ಪಾದಿಸಲು ಅನುಕೂಲವಾಗುವಂತೆ ಕಡ್ಡಾಯ ಲೈಸೆನ್ಸ್‌ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸರಕಾರದ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿದೆ.
 • ಇದೇ ವೇಳೆ, ಜೀವರಕ್ಷಕ ಔಷಧಗಳಿಗೆ ಗರಿಷ್ಠ ಮಿತಿಯನ್ನು ವಿಧಿಸಬೇಕೆಂದೂ ಸಲಹೆ ಮಾಡಲಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಖರೀದಿ ಸಾಮರ್ಥ್ಯ ಸಮಾನತೆ‘(ಪಿಪಿಪಿ)ಯನ್ನು ವಿಶ್ಲೇಷಿಸಿ ಔಷಧಗಳ ಗರಿಷ್ಠ ದರ ನಿರ್ಧಾರ ಮಾಡಲಾಗುತ್ತಿದ್ದು, ಅದನ್ನೇ ಇಲ್ಲಿಗೂ ಅನ್ವಯಿಸುವಂತೆ ಸೂಚಿಸಲಾಗಿದೆ.
 • ಕಳೆದ ವರ್ಷದ ಮಾರ್ಚ್‌ನಲ್ಲಿ ಸಲ್ಲಿಕೆಯಾದ ಈ ವರದಿ ಸರಕಾರದ ಪರಿಶೀಲನೆ ಹಂತದಲ್ಲಿದೆ.
 • 30% ಪೇಟೆಂಟೆಡ್‌: ಭಾರತದ ಔಷಧ ಮಾರುಕಟ್ಟೆಯ ವಾರ್ಷಿಕ ವಹಿವಾಟು 3 ಲಕ್ಷ ಕೋಟಿ ರೂ. ಇದರಲ್ಲಿ 30% ಪೇಟೆಂಟ್‌ ಪಡೆದ ಔಷಧಗಳದೇ ಪಾಲುದಾರಿಕೆ.

ಸಲಹೆಗಳೇನು?

 • ಪೇಟೆಂಟ್‌ ಹೊಂದಿದ ಮಧುಮೇಹ ಔಷಧಗಳ ಬೆಲೆ ನಿಯಂತ್ರಣ ಅಗತ್ಯ.
 • ಅನ್ಯ ಕಂಪನಿಗಳಿಗೆ ಲೈಸನ್ಸ್‌ ನೀಡುವಂತೆ ಪೇಟೆಂಟ್‌ ಕಂಪನಿಗಳ ಮನವೊಲಿಕೆ.
 • ಸರಕಾರ ಔಷಧ ಕಂಪನಿಗಳ ಜತೆ ಮಾತುಕತೆ ನಡೆಸಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಹೆಚ್ಚೆಚ್ಚು ಔಷಧಗಳನ್ನು ಕಡಿಮೆ ದರದಲ್ಲಿ ಪೂರೈಸುವ ಪ್ರಯತ್ನ.

ಈಗಿನ ಪರಿಸ್ಥಿತಿ ಹೇಗಿದೆ?

 • ಒಂದು ಕಂಪನಿ ಹೊಸ ಔಷಧವನ್ನು ಅನ್ವೇಷಿಸಿದರೆ ಪೇಟೆಂಟ್‌ ರೂಪದಲ್ಲಿ 20 ವರ್ಷಗಳ ಕಾಲ ಅದಕ್ಕೆ ಬೌದ್ಧಿಕ ಆಸ್ತಿ ಹಕ್ಕನ್ನು ನೀಡಲಾಗುತ್ತದೆ.
 • ಈ 20 ವರ್ಷಗಳ ಅವಧಿಯಲ್ಲಿ ಅದೇ ಔಷಧವನ್ನು ಬೇರೆ ಯಾವುದೇ ಕಂಪನಿ ಉತ್ಪಾದಿಸದಂತೆ ತಡೆಯುವ ಹಕ್ಕು ಅದಕ್ಕಿರುತ್ತದೆ.
 • ಈ ಹಕ್ಕನ್ನು ಬಳಸಿಕೊಂಡು ಬಹುರಾಷ್ಟ್ರೀಯ ಕಂಪನಿಗಳು ಪೇಟೆಂಟೆಡ್‌ ಔಷಧಗಳಿಗೆ ವಿಪರೀತ ದರ ವಿಧಿಸುತ್ತವೆ ಮತ್ತು ಬೇರೆ ಕಂಪನಿಗಳ ಉತ್ಪಾದನೆಯನ್ನು ವಿರೋಧಿಸುತ್ತವೆ.
 • ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಬಳಸುವ ಒಂದು ಇಂಜೆಕ್ಷನ್‌ಗೆ 1 ಲಕ್ಷ ರೂ. ತಗಲುವುದು ಇದೇ ಕಾರಣಕ್ಕೆ.

ಒಂದು ಕಳಪೆ ಔಷಧ ಕಂಡರೆ ಪೂರ್ಣ ಬ್ಯಾಚ್‌ಗೇ ದಂಡ

 • ಮಾರುಕಟ್ಟೆಯಲ್ಲಿರುವ ಒಂದು ಔಷಧ (ಮಾತ್ರೆ/ದ್ರವರೂಪಿ) ಕಳಪೆ ಗುಣಮಟ್ಟದ್ದೆಂದು ಕಂಡುಬಂದರೆ ಅದರ ಜತೆಗೆ ಉತ್ಪಾದನೆಯಾದ ಇಡೀ ಬ್ಯಾಚ್‌ಗೇ ದಂಡ ವಿಧಿಸುವ ಪ್ರಸ್ತಾವನೆಯನ್ನು ಸರಕಾರ ಹೊಂದಿದೆ.
 • ದಂಡದ ಮೊತ್ತವು ಒಂದಿಡೀ ಬ್ಯಾಚ್‌ನ ಅಷ್ಟೂ ಔಷಧಗಳ ಒಟ್ಟು ಮಾರುಕಟ್ಟೆ ದರವಾಗಿರುತ್ತದೆ. ಒಂದು ಬ್ಯಾಚ್‌ನಲ್ಲಿ 10000ದಿಂದ 1 ಲಕ್ಷ ಘಟಕಗಳಿರುತ್ತವೆ.

ಸುರಿನಾಮಿ ಹಿಂದೂ ಸಮುದಾಯ

ಸುದ್ಧಿಯಲ್ಲಿ ಏಕಿದೆ ?ಯುರೋಪಿನಲ್ಲಿ ವಾಸಿಸುತ್ತಿರುವ ಸುರಿನಾಮಿ-ಹಿಂದೂಸ್ತಾನಿ ಸಮುದಾಯಕ್ಕೆ ಸಾಗರೋತ್ತರ ಭಾರತೀಯ ಪೌರತ್ವ ಪಡೆಯುವ ನಿಯಮಾವಳಿಗಳನ್ನು ಭಾರತ ಸರಳಗೊಳಿಸಿದೆ.

 • ಹಿಂದಿನ ನಿಯಮದ ಪ್ರಕಾರ, ಭಾರತದಿಂದ ಸುರಿನಾಮ್‌ಗೆ ವಲಸೆ ಹೋದ ಹಿರಿಯರ ನಾಲ್ಕನೇ ಪೀಳಿಗೆಯವರವರೆಗೆ ಮಾತ್ರ ಭಾರತದ ಸಾಗರೋತ್ತರ ಪೌರತ್ವ ಸಿಗುತ್ತಿದೆ.
 • ನಿಯಮ ಬದಲಾವಣೆ ಬಳಿಕ ಐದು ಮತ್ತು ಆರನೇ ಪೀಳಿಗೆಯವರು ಕೂಡಾ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು. ಸುರಿನಾಮ್‌ನಿಂದ ನೆದರ್ಲೆಂಡ್‌ಗೆ ಹೋದವರಿಗೂ ಪೌರತ್ವಕ್ಕೆ ಅರ್ಜಿ ಸಲ್ಲಿಸುವ ಅವಕಾಶವಿದೆ.
 • 145 ವರ್ಷದ ಹಿಂದೆ ಭಾರತದಿಂದ ಸಾವಿರಾರು ಮಂದಿ ಕಾರ್ಮಿಕರು ಸುರಿನಾಮ್‌ಗೆ ತೆರಳಿದ್ದರು. ಅಲ್ಲೀಗ 2 ಲಕ್ಷದಷ್ಟು ಭಾರತೀಯ ಮೂಲದವರು ಇದ್ದಾರೆ.

ಸುರಿನಾಮ್

 • ಸುರಿನಾಮ್, ದಕ್ಷಿಣ ಅಮೇರಿಕ ಖಂಡದ ಉತ್ತರ ಭಾಗದಲ್ಲಿನ ಒಂದು ದೇಶ. ಮೊದಲು ಡಚ್ ಗಯಾನ ಎಂದು ಕರೆಯಲ್ಪಡುತ್ತಿದ್ದ ಈ ದೇಶದ ಪೂರ್ವಕ್ಕೆ ಫ್ರೆಂಚ್ ಗಯಾನ ಮತ್ತು ಪಶ್ಚಿಮಕ್ಕೆ ಗಯಾನ ದೇಶಗಳಿವೆ. ವಿಸ್ತಾರ ಮತ್ತು ಜನಸಂಖ್ಯೆಯ ಲೆಕ್ಕದಲ್ಲಿ ದಕ್ಷಿಣ ಅಮೇರಿಕದ ಅತೀ ಚಿಕ್ಕ ದೇಶ ಇದು.
 • ರಾಷ್ಟ್ರದ ರಾಜಧಾನಿ ಪರಮಾರಿಬೋ.
 • ಡಚ್ಚರು ಗುಲಾಮಗಿರಿ ವ್ಯವಸ್ಥೆಯನ್ನು ಜಾರಿಯಲ್ಲಿಟ್ಟರು. ಈ ಗುಲಾಮರು ಬಹುತೇಕ ಆಫ್ರಿಕಾ ಮೂಲದವರಾಗಿದ್ದರು. ೧೮೬೩ ರಲ್ಲಿ ಗುಲಾಮಗಿರಿ ವ್ಯವಸ್ಥೆ ರದ್ದಾದ ಬಳಿಕ ಡಚ್ಚರು ಸುರಿನಾಮ್ ನ ಗದ್ದೆ ಹಾಗೂ ತೋಟಗಳಲ್ಲಿ ದುಡಿಯಲು ಇಂಡೋನೇಷ್ಯಾ ಮತ್ತು ಭಾರತದಿಂದ ಕೆಲಸದಾಳುಗಳನ್ನು ಸಾಗಿಸಿದರು. ೧೯೫೩ರಲ್ಲಿ ಸುರಿನಾಮ್ ಜನತೆ ಸ್ವಲ್ಪಮಟ್ಟಿನ ಸ್ವಯಮಾಡಳಿತದ ಅಧಿಕಾರವನ್ನು ಪಡೆದುಕೊಂಡರು. ನಂತರ ನವೆಂಬರ್ ೨೫ ೧೯೭೫ ರಂದು ಸುರಿನಾಮ್ ಪೂರ್ಣವಾಗಿ ಸ್ವತಂತ್ರವಾಯಿತು.
 • ಭೂಮಧ್ಯರೇಖೆಯ ಬಳಿಯಿರುವ ಸುರಿನಾಮ್ ದೇಶದ ೮೦% ಭಾಗವು ಉಷ್ಣವಲಯದ ಮಳೆಕಾಡು ಹಾಗೂ ಸವಾನ್ನಾ ಹುಲ್ಲುಗಾವಲುಗಳಿಂದ ಕೂಡಿದೆ. ಉತ್ತರದ ಅಟ್ಲಾಂಟಿಕ್ ಸಾಗರತೀರದ ಪ್ರದೇಶವು ಬಹುಪಾಲು ಕೃಷಿಭೂಮಿಯಾಗಿದ್ದು ನಾಡಿನ ಬಹುವಾಸಿ ಜನರು ಇಲ್ಲಿಯೇ ನೆಲೆಯಾಗಿದ್ದಾರೆ. ಸುರಿನಾಮ್ ಒಂದು ಹಿಂದುಳಿದ ದೇಶವಾಗಿದೆ. ಬಾಕ್ಸೈಟ್ ಉದ್ಯಮ ದೇಶದ ಆರ್ಥಿಕವ್ಯವಸ್ಥೆಯ ಆಧಾರ. ಬತ್ತ ಹಾಗೂ ಬಾಳೆ ಇಲ್ಲಿಯ ಪ್ರಮುಖ ಬೆಳೆಗಳು.
Related Posts
“04 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಸೇನೆಗೆ ಮಣಿಪಾಲದ ಬೈನಾಕ್ಯೂಲರ್ ಸುದ್ಧಿಯಲ್ಲಿ ಏಕಿದೆ ?ದೇಶದಲ್ಲಿ ಶತಮಾನದ ಹಿಂದಿನ ತಂತ್ರಜ್ಞಾನ ಹೊಂದಿರುವ ಟೆಲಿಸ್ಕೋಪ್ ಮತ್ತು ಬೈನಾಕ್ಯುಲರ್ ಬಳಸಲಾಗುತ್ತಿದೆ. ಅತ್ಯಾಧುನಿಕ ಬೈನಾಕ್ಯುಲರ್ ಬೇಕಾದರೆ ಲಕ್ಷಾಂತರ ರೂ. ವ್ಯಯಿಸಬೇಕಿದ್ದರಿಂದ ಸಂಶೋಧನೆ ಮತ್ತು ಸೈನಿಕ ಕಾರ್ಯಾಚರಣೆಗೆ ತೊಡಕಾಗಿದೆ. ಹೀಗಾಗಿ ಮಣಿಪಾಲದ ಇಂಜಿನಿಯರೊಬ್ಬರು ಕಡಿಮೆ ವೆಚ್ಚದ, ಉತ್ತಮ ...
READ MORE
“04 ಏಪ್ರಿಲ್  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
'ಶ್ರೇಯಸ್‌' ಯೋಜನೆ ಸುದ್ಧಿಯಲ್ಲಿ ಏಕಿದೆ ? ಬಹು ನಿರೀಕ್ಷಿತ 'ಶ್ರೇಯಸ್‌' ಯೋಜನೆ ಜುಲೈನಿಂದ ಜಾರಿಗೆ ಬರಲಿದೆ.ಇದೇ ಮೊದಲ ಬಾರಿಗೆ ತಾಂತ್ರಿಕೇತರ ಪದವೀಧರರಿಗೆ ಜಾರಿಗೊಳಿಸಿರುವ ಅಪ್ರೆಂಟಿಸ್‌ಷಿಪ್‌ ಯೋಜನೆ ಇದಾಗಿದ್ದು, 5 ಲಕ್ಷ ವಿದ್ಯಾರ್ಥಿಗಳಿಗೆ ಆರು ತಿಂಗಳ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ 6,000 ರೂ. ...
READ MORE
“5 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಬೆಳೆ ದರ್ಶಕ ಆ್ಯಪ್ ಸುದ್ಧಿಯಲ್ಲಿ ಏಕಿದೆ ? ರಾಜ್ಯ ಸರ್ಕಾರದ ಬೆಳೆ ದರ್ಶಕ ಆ್ಯಪ್ ಇದೀಗ ರೈತಸ್ನೇಹಿಯಾಗಿದ್ದು, ಅಂಗೈಯಲ್ಲೇ ಜಮೀನು ಹಾಗೂ ಬೆಳೆ ಸಮೀಕ್ಷೆ ಮಾಹಿತಿ ಲಭಿಸಲಿದೆ. ರಾಜ್ಯ ಸರ್ಕಾರದ ಇ-ಆಡಳಿತ ಇಲಾಖೆ 'ಬೆಳೆ ದರ್ಶಕ್' ಆಪ್ ಅನ್ನು ಪರಿಚಯಿಸಿದ್ದು, ಈ 'ಬೆಳೆ ದರ್ಶಕ್' ...
READ MORE
“15 ಏಪ್ರಿಲ್ 2019 ಕನ್ನಡದ ಪ್ರಚಲಿತ ವಿದ್ಯಮಾನಗಳು”
ಚುನಾವಣೆ ಕ್ಷಿಪ್ರ ಪಡೆಗಳ ಸಮನ್ವಯಕ್ಕೆ ವಿಶೇಷಾಧಿಕಾರಿ ನೇಮಕ ಸುದ್ಧಿಯಲ್ಲಿ ಏಕಿದೆ? ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಥಿರ ಕಣ್ಗಾವಲು ತಂಡದ (ಎಸ್‌ಎಸ್‌ಟಿ) ಕ್ಷಿಪ್ರ ಕಾರ್ಯ ಪಡೆ (ಫ್ಲೈಯಿಂಗ್ ಸ್ಕ್ವಾಡ್‌)ಯ ಚಟುವಟಿಕೆಗಳ ಉಸ್ತುವಾರಿಗಾಗಿ ಬಿಬಿಎಂಪಿ ವಿಶೇಷಾಧಿಕಾರಿಯನ್ನು ನೇಮಿಸಿದೆ. ವಿಶೇಷ ಅಧಿಕಾರಿ (ಜಾರಿ) ಯಾಗಿ ಸರ್ವೇ, ಸೆಟಲ್‌ಮೆಂಟ್‌ ಮತ್ತು ...
READ MORE
“26 ಫೆಬ್ರವರಿ  2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಶ್ರೀಗಂಧ ಮಂಡಳಿ ರಚನೆ ಸುದ್ಧಿಯಲ್ಲಿ ಏಕಿದೆ ?ಕರ್ನಾಟಕ ಶ್ರೀಗಂಧ ಮಂಡಳಿ ರಚನೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸ್ಯಾಂಡಲ್ ವುಡ್ ಸೊಸೈಟಿ ಆಪ್ ಇಂಡಿಯಾ ವತಿಯಿಂದ ಏರ್ಪಡಿಸಲಾಗಿದ್ದ ಶ್ರೀಗಂಧದ ಪ್ರಸ್ತುತ ಸ್ಥಿತಿಗತಿ ಮತ್ತು ...
READ MORE
15th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
ಚೀನಾ ಗಡಿ ಬಳಿ ಐತಿಹಾಸಿಕ ಲ್ಯಾಂಡಿಂಗ್ ಆಯಕಟ್ಟಿನ ಗಡಿ ಭಾಗದಲ್ಲಿ ಕಾರ್ಯತಂತ್ರ ಬಲಿಷ್ಠಗೊಳಿಸುತ್ತಿರುವ ಭಾರತೀಯ ವಾಯುಪಡೆ ಚೀನಾ ಗಡಿಯಿಂದ ಕೇವಲ 30 ಕಿ.ಮೀ. ದೂರದಲ್ಲಿರುವ ಅರುಣಾಚಲ ಪ್ರದೇಶದ ಟ್ಯುಟಿಂಗ್​ನಲ್ಲಿ ಅತಿ ದೊಡ್ಡ ಸರಕು ಸಾಗಣೆ ವಿಮಾನ ಸಿ-17 ಗ್ಲೋಬಲ್​ವಾಸ್ಟರ್ ಅನ್ನು ಇಳಿಸುವ ಮೂಲಕ ...
READ MORE
“21 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಕರಾವಳಿ ರಾಜ್ಯಗಳಲ್ಲಿ ಸೈಕ್ಲೋನ್ ಅಪಾಯ ತಡೆಗೆ ಯೋಜನೆ ಸುದ್ಧಿಯಲ್ಲಿ ಏಕಿದೆ ? ಪದೇಪದೆ ಕಾಡುವ ಚಂಡಮಾರುತ ಸುಳಿಯಿಂದ ಪಾರಾಗಲು ಕೇಂದ್ರ ಸರ್ಕಾರದ ನೇತೃತ್ವದಲ್ಲಿ, ಕರ್ನಾಟಕ ಸೇರಿದಂತೆ ಕರಾವಳಿ ರಾಜ್ಯಗಳಲ್ಲಿ ಸೈಕ್ಲೋನ್ ಅಪಾಯ ತಡೆ ಯೋಜನೆ ಕೈಗೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಈ ಯೋಜನೆ ಶೇ.75-25 ಕೇಂದ್ರ-ರಾಜ್ಯ ಸಹಕಾರದಲ್ಲಿ ...
READ MORE
“27 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಏಪ್ರಿಲ್‌ಗೆ ಕರ್ನಾಟಕ ಪೂರ್ತಿ ಉಜ್ವಲ! ಸುದ್ಧಿಯಲ್ಲಿ ಏಕಿದೆ ? ರಾಜ್ಯದಲ್ಲಿ ವಿಸ್ತರಿತ ಪ್ರಧಾನಮಂತ್ರಿ ಉಜ್ವಲ ಯೋಜನೆ-2(ಇಪಿಎಂಯುವೈ) ಅಡಿ ಹೊಸದಾಗಿ ಐದು ಲಕ್ಷ ಬಡ ಕುಟುಂಬಗಳಿಗೆ ಅನಿಲ ಸಂಪರ್ಕ ಕಲ್ಪಿಸಲು ಭಾರತೀಯ ತೈಲ ನಿಗಮ ಮುಂದಾಗಿದೆ. 2019ರ ಜ.1ರಿಂದ ಉಜ್ವಲ-2ರ ಯೋಜನೆಗೆ ಚಾಲನೆ ಸಿಗಲಿದೆ. ಸದ್ಯ ...
READ MORE
” 23 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಮನೆಮನೆಗೂ ಅನಿಲ ಭಾಗ್ಯ ಸುದ್ಧಿಯಲ್ಲಿ ಏಕಿದೆ ? ದೇಶದ 129 ಜಿಲ್ಲೆಗಳಲ್ಲಿ ನಗರ ಅನಿಲ ವಿತರಣಾ ವ್ಯವಸ್ಥೆ(ಸಿಜಿಡಿ) ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಕೊಳವೆಗಳ ಮೂಲಕ ನೈಸರ್ಗಿಕ ಅನಿಲ (ಸಿಎನ್‌ಜಿ) ವನ್ನು ಮನೆಮನೆಗೂ ತಲುಪಿಸುವ ಯೋಜನೆ ಇದು. ನಗರ ಅನಿಲ ...
READ MORE
“16 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
ಶಾಲೆಗೆ ಬನ್ನಿ ಶನಿವಾರ ಶೀಘ್ರ ಪುನಾರಂಭ ಸುದ್ಧಿಯಲ್ಲಿ ಏಕಿದೆ ?ಮೂಲೆಗುಂಪಾಗಿದ್ದ ಶಿಕ್ಷಣ ಇಲಾಖೆಯ ಜನಪ್ರಿಯ ಯೋಜನೆ ‘ಶಾಲೆಗೆ ಬನ್ನಿ ಶನಿವಾರ- ಕಲಿಯಲು ನೀಡಿ ಸಹಕಾರ’ ಮತ್ತೆ ಆರಂಭವಾಗಲಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತವಾಗಿ ಪಾಠ-ಪ್ರವಚನ ಮಾಡಿಸುವ ಉದ್ದೇಶದಿಂದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ...
READ MORE
“04 ಮಾರ್ಚ್ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“04 ಏಪ್ರಿಲ್ 2019 ರ ಕನ್ನಡ ಪ್ರಚಲಿತ
“5 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“15 ಏಪ್ರಿಲ್ 2019 ಕನ್ನಡದ ಪ್ರಚಲಿತ ವಿದ್ಯಮಾನಗಳು”
“26 ಫೆಬ್ರವರಿ 2019 ರ ಕನ್ನಡ ಪ್ರಚಲಿತ
15th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
“21 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“27 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
” 23 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“16 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”

Leave a Reply

Your email address will not be published. Required fields are marked *