ಕಂಬಳ
ಸುದ್ಧಿಯಲ್ಲಿ ಏಕಿದೆ ? ಕಂಬಳ ಹಾಗೂ ಇತರೆ ಗೂಳಿ ಮತ್ತು ಎತ್ತಿನ ಗಾಡಿ ಸ್ಪರ್ಧೆಗಳಿಗೆ ಅನುಮತಿ ನೀಡಿದ್ದ ರಾಜ್ಯ ವಿಧಾನ ಮಂಡಲ ಅಂಗೀಕರಿಸಿದ್ದ ಪ್ರಾಣಿ ಹಿಂಸೆ (ಕರ್ನಾಟಕ ತಿದ್ದುಪಡಿ) ತಡೆ ಕಾಯ್ದೆ – 2017ಕ್ಕೆ ಪೆಟಾ ಮತ್ತೆ ತಗಾದೆ ತೆಗೆದಿದೆ. ರಾಜ್ಯ ಸರಕಾರದ ಕಾಯ್ದೆಯನ್ನು ತಿರಸ್ಕರಿಸಬೇಕೆಂದು ಪ್ರಾಣಿ ದಯಾ ಸಂಘ ಸುಪ್ರೀಂಕೋರ್ಟ್ಗೆ ಮತ್ತೆ ಅರ್ಜಿ ಸಲ್ಲಿಸಿದೆ.
ಹಿನ್ನಲೆ
- ಪೆಟಾ ಅರ್ಜಿ ಹಿನ್ನೆಲೆಯಲ್ಲಿ ಕರ್ನಾಟಕದ ಮುಖ್ಯವಾಗಿ ತುಳುನಾಡಿನ ಕಂಬಳ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಇನ್ನು, ರಾಜ್ಯ ಹೊರಡಿಸಿರುವ ಪ್ರಾಣಿ ಹಿಂಸೆ (ಕರ್ನಾಟಕ ತಿದ್ದುಪಡಿ) ತಡೆ ವಿಧೇಯಕ – 2017ಕ್ಕೆ ಮಾರ್ಚ್ 2018ರಲ್ಲೇ ಪೆಟಾ ತಕರಾರು ಅರ್ಜಿ ಸಲ್ಲಿಸಿತ್ತು. ಆದರೆ, ವಿಧೇಯಕಕ್ಕೆ ರಾಷ್ಟ್ರಪತಿ ಅನುಮತಿ ನೀಡಿದ ಬಳಿಕ ಅದಕ್ಕೆ ಸಾಂವಿಧಾನಿಕ ಮಾನ್ಯತೆ ಸಿಕ್ಕಿದೆ. ಹೀಗಾಗಿ ತಮ್ಮ ಹಿಂದಿನ ತಕರಾರು ಅರ್ಜಿಯನ್ನು ಹಿಂಪಡೆಯಲು ಕೋರ್ಟ್ ಅನುಮತಿ ನೀಡಬೇಕು. ಅಲ್ಲದೆ, ಹೊಸ ಅರ್ಜಿಯನ್ನು ಸ್ವೀಕರಿಸಬೇಕು ಎಂದು ಮನವಿ ಮಾಡಿದೆ.
- ಇನ್ನು, ರಾಜ್ಯ ಸರಕಾರದ ಹೊಸ ಕಾನೂನಿನಿಂದ ಪ್ರಾಣಿಗಳ ಮೇಲೆ ಕ್ರೌರ್ಯ ತಡೆಯುವ 1960 ಕಾಯ್ದೆಯ ಗುರಿ ಮತ್ತು ಉದ್ದೇಶಕ್ಕೆ ವಿರುದ್ಧವಾಗಿದೆ. ಪ್ರಾಣಿಗಳಿಗೆ ಅನಗತ್ಯವಾಗಿ ನೋವು ಮತ್ತು ವೇದನೆಯಿಂದ ತಡೆಯಬೇಕೆಂಬುದು ಕೇಂದ್ರ ಸರಕಾರದ ಕಾಯ್ದೆಯ ಉದ್ದೇಶ ಎಂದು ಸರ್ವೋಚ್ಛ ನ್ಯಾಯಾಲಯಕ್ಕೆ ಪೆಟಾ ಸಲ್ಲಿಸಿರುವ ಮರು ಅರ್ಜಿಯಲ್ಲಿ ತಿಳಿಸಿದೆ. ಅಲ್ಲದೆ, ಇದು ಪ್ರಾಣಿಗಳ ಹಕ್ಕಿನ ಉಲ್ಲಂಘನೆಯಾಗಿದ್ದು, ಸಾಂವಿಧಾನಿಕ ವಿರೋಧಿಯಾಗಿದೆ ಎಂದು ಹೇಳಿದೆ.
- ಮೇ 2014ರಂದು ಸುಪ್ರೀಂಕೋರ್ಟ್ ಜಲ್ಲಿಕಟ್ಟು, ಎತ್ತಿನ ಗಾಡಿ ಸ್ಪರ್ಧೆಗಳು ಹಾಗೂ ಕಂಬಳ ಓಟವನ್ನು ಬ್ಯಾನ್ ಮಾಡಿತ್ತು. ತದನಂತರ ಕಂಬಳ ಪರವಾಗಿ ರೂಪುಗೊಂಡ ಹೋರಾಟ ಮತ್ತು ಜನಾಭಿಪ್ರಾಯಕ್ಕೆ ತಲೆ ಬಾಗಿದ ರಾಜ್ಯ ಸರಕಾರವು ಕಂಬಳ ಮತ್ತು ಎತ್ತಿನಗಾಡಿ ಓಟಗಳಿಗೆ ಅವಕಾಶ ಮಾಡಿಕೊಡುವುದಕ್ಕಾಗಿ ಈ ಕಾಯಿದೆಗೆ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಉಭಯ ಸದನಗಳ ಅಂಗೀಕಾರ ಪಡೆದಿತ್ತು. ಬಳಿಕ ರಾಜ್ಯದ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದರಿಂದ ಈ ವಿಷಯವಾಗಿ ಎದ್ದಿದ್ದ ಗೊಂದಲಗಳಿಗೆ ಶಾಶ್ವತ ತೆರೆ ಎಳೆದಂತಾಗಿತ್ತು.
ಅನಿಮಲ್ ಆಕ್ಟ್ (ಪಿಸಿಎ), 1960 ಕ್ರೂರ ತಡೆಗಟ್ಟುವಿಕೆ ಬಗ್ಗೆ
- ಪ್ರಾಣಿಗಳ ಮೇಲೆ ಅನಗತ್ಯ ನೋವು ಮತ್ತು ನೋವು ಉಂಟಾಗದಂತೆ ತಡೆಯಲು 1960 ರ ಪಿಸಿಎ ಕಾಯಿದೆ ಜಾರಿಗೊಳಿಸಲಾಗಿದೆ. ಪಿಸಿಎ ಆಕ್ಟ್ ಕ್ಯಾಪ್ಟಿವ್ ಮತ್ತು ಸಾಕುಪ್ರಾಣಿಗಳ ಜೊತೆ ವ್ಯವಹರಿಸುತ್ತದೆ.
- ಪ್ರಯೋಗದ ಅಧ್ಯಾಯ IV ಪ್ರಯೋಗದ ನಿಯಂತ್ರಣದೊಂದಿಗೆ ವ್ಯವಹರಿಸುತ್ತದೆ.
- ಅಧ್ಯಾಯ V ಗೆ ಪ್ರಾಣಿಗಳ ಪ್ರದರ್ಶನ ಕಡ್ಡಾಯವಾದ ನೋಂದಣಿ ಅಗತ್ಯವಿದೆ.
- ಪ್ರಾಣಿ ಕಲ್ಯಾಣ ಮತ್ತು ಪ್ರಾಣಿ ಕಲ್ಯಾಣ ಕಾನೂನಿನ ಉತ್ತೇಜನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಕೇಂದ್ರ ಸರಕಾರಕ್ಕೆ ಸಲಹೆ ನೀಡುವಂತೆ ಶಾಸನಬದ್ಧ ದೇಹವೆಂದು ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪಿಸಿದೆ.
ಮಂಡಳಿಯ ಪ್ರಮುಖ ಕಾರ್ಯಗಳು ಹೀಗಿವೆ:
- ಪ್ರಾಣಿ ಕಲ್ಯಾಣ ಸಂಸ್ಥೆಗಳ ಗುರುತಿಸುವಿಕೆ
- ಮಾನ್ಯತೆ ಪಡೆದ ಪ್ರಾಣಿ ಕಲ್ಯಾಣ ಸಂಸ್ಥೆಗಳಿಗೆ ಆರ್ಥಿಕ ಸಹಾಯವನ್ನು ಒದಗಿಸುವುದು (AWOs)
- ಬೋರ್ಡ್ ಪ್ರಾಣಿ ಕಲ್ಯಾಣ ಕಾನೂನುಗಳು ಮತ್ತು ನಿಯಮಗಳ ಬದಲಾವಣೆಗಳನ್ನು ಸೂಚಿಸುತ್ತದೆ
- ಇದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೆಲಸ ಮಾಡುತ್ತದೆ.
- ಪಿಸಿಎ ಆಕ್ಟ್ ಸೆಕ್ಷನ್ 3 ಮತ್ತು ಸೆಕ್ಷನ್ 11 (1) (ಎಮ್) ಪ್ರಕಾರ, ಇದು ಮನರಂಜನೆಯನ್ನು ಒದಗಿಸಲು ದೃಷ್ಟಿಯಿಂದ ಯಾವುದೇ ಪ್ರಾಣಿಗಳನ್ನು ಪ್ರಚೋದಿಸುವ ವ್ಯಕ್ತಿಯ ವಿರುದ್ಧ ಅಪರಾಧವಾಗಿದೆ. ಪಿಸಿಎ ಆಕ್ಟ್, 1960 ರ ವಿಭಾಗ 22, ಪ್ರದರ್ಶನ ಮತ್ತು ಪ್ರಾಣಿಗಳ ಪ್ರದರ್ಶನದ ತರಬೇತಿಯ ಮೇಲೆ ನಿರ್ಬಂಧಗಳನ್ನು ಹೊಂದಿದೆ.
ಕಂಬಳ
- ಕಂಬಳ ಕರ್ನಾಟಕದ ಕರಾವಳಿ ಜಿಲ್ಲೆಗಳ ಜವುಗು ಪ್ರದೇಶಗಳಲ್ಲಿ ನಡೆಯುವ ಒಂದು ಸಾಂಪ್ರದಾಯಿಕ ವಾರ್ಷಿಕ ಎಮ್ಮೆ ರೇಸ್ ಆಗಿದೆ. ಇದನ್ನು ಸಾಂಪ್ರದಾಯಿಕವಾಗಿ ಸ್ಥಳೀಯ ಭೂಮಾಲೀಕರು ಮತ್ತು ಮನೆಗಳ ಪ್ರಾಯೋಜಕತ್ವದಲ್ಲಿ ಅಥವಾ ಗ್ರಾಮದ ಪಟೇಲ್ ಅಡಿಯಲ್ಲಿ ನಡೆಸಲಾಗುತ್ತದೆ. ಜನಾಂಗದ ಋತುವಿನಲ್ಲಿ ಸಾಮಾನ್ಯವಾಗಿ ನವೆಂಬರ್ನಲ್ಲಿ ಪ್ರಾರಂಭವಾಗುತ್ತದೆ ಮತ್ತು ಮಾರ್ಚ್ ವರೆಗೆ ಇರುತ್ತದೆ. ಪ್ರಸ್ತುತ, ಸಣ್ಣ ದೂರದ ಗ್ರಾಮಗಳು ಸೇರಿದಂತೆ ಕರಾವಳಿ ಕರ್ನಾಟಕದಲ್ಲಿ ಸುಮಾರು 45 ಜನಾಂಗದವರು ವಾರ್ಷಿಕವಾಗಿ ನಡೆಸುತ್ತಾರೆ.
ಇಂಡಿಯನ್ ಸೊಸೈಟಿ ಆಫ್ ಏರೋಸ್ಪೇಸ್ ಮೆಡಿಸಿನ್ ಸಮ್ಮೇಳನ
ಸುದ್ಧಿಯಲ್ಲಿ ಏಕಿದೆ ? ಬೆಂಗಳೂರಿನಲ್ಲಿನಡೆಯುತ್ತಿರುವ 57ನೇ ಇಂಡಿಯನ್ ಸೊಸೈಟಿ ಆಫ್ ಏರೋಸ್ಪೇಸ್ ಮೆಡಿಸಿನ್ ಸಮ್ಮೇಳನದಲ್ಲಿ,”ದೀರ್ಘಕಾಲೀನ ನಿದ್ರಾಹೀನತೆಯಿಂದ ಬಳಲುತ್ತಿರುವ ಪೈಲಟ್ಗಳು ಪ್ರತಿದಿನದ ಸವಾಲುಗಳನ್ನು ನಿರ್ವಹಿಸಲು ಪರದಾಡುತ್ತಿದ್ದಾರೆ. ಹೀಗಾಗಿ, ಪೈಲಟ್ಗಳು ವಿಮಾನ ಹಾರಿಸುವ ಮುನ್ನ ಸೂಕ್ತ ನಿದ್ರೆ ಮಾಡಿದ್ದಾರೋ ಇಲ್ಲವೋ ಎನ್ನುವುದನ್ನು ಪತ್ತೆ ಹಚ್ಚುವ ವ್ಯವಸ್ಥೆಯನ್ನು ಕಂಡು ಹಿಡಿಯಬೇಕು” ಎಂದು ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ನ (ಐಎಎಂ) ಅಧಿಕಾರಿಗಳಿಗೆ ಭಾರತೀಯ ವಾಯುಸೇನೆ ಮುಖ್ಯಸ್ಥ ಬೀರೇಂದರ್ ಸಿಂಗ್ ಧನೋಅ ಮನವಿ ಮಾಡಿದರು
ಪರಿಣಾಮ
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಅಗತ್ಯಕ್ಕಿಂತ ಹೆಚ್ಚಿನ ಬಳಕೆಯಿಂದ ಪೈಲಟ್ಗಳ ನಿದ್ರೆ ಮೇಲೆ ಪರಿಣಾಮ ಬಿದ್ದಿದೆ. ಪೈಲಟ್ಗಳ ನೇರ ಸಾಮಾಜಿಕ ಸಂವಹನ ಕೌಶಲ ಕಮ್ಮಿಯಾಗುತ್ತಿದೆ. ಈ ಹಿಂದೆ ಪೈಲಟ್ ಮದ್ಯಪಾನ ಮಾಡಿದ್ದು ಗೊತ್ತಾದರೆ ವಿಮಾನ ಹಾರಾಟಕ್ಕೆ ಅವಕಾಶ ನೀಡುತ್ತಿರಲಿಲ್ಲ. ಈಗ ಮದ್ಯಪಾನ ತಪಾಸಣೆ ಯಂತ್ರಗಳು ಇವೆ. ಆದರೆ, ಈಗ ನಿದ್ರಾಹೀನತೆ ಪತ್ತೆ ಮಾಡಬೇಕಿದೆ
ಡಾಕ್ಟರ್-ಪೈಲಟ್ ಯೋಜನೆ ಜಾರಿ
”ಕಳೆದ ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಜೆಟ್ ಮತ್ತು ಸರಕು ವಿಮಾನ ಹಾರಾಟ ನಡೆಸುವ ಸಾಮರ್ಥ್ಯದ ‘ಡಾಕ್ಟರ್ ಪೈಲಟ್’ ಯೋಜನೆಯನ್ನು ಜಾರಿ ಮಾಡಲು ಭಾರತೀಯ ವಾಯುಸೇನೆ (ಐಎಎಫ್) ನಿರ್ಧರಿಸಿದೆ” ಎಂದು ವಾಯುಸೇನೆ ಮುಖ್ಯಸ್ಥ ಬಿ.ಎಸ್ ಧನೋಅ ಹೇಳಿದರು.
ಮಲ್ಪೆ ಸೇಂಟ್ ಮೇರಿಸ್ ದ್ವೀಪ
ಸುದ್ಧಿಯಲ್ಲಿ ಏಕಿದೆ ? ಮಲ್ಪೆ ಸೇಂಟ್ ಮೇರಿಸ್ ದ್ವೀಪ ಪ್ರಯಾಣ ಸೆ.16ರಿಂದ ಮತ್ತೆ ಆರಂಭಗೊಳ್ಳಲಿದೆ.
- ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಮಲ್ಪೆ ಬೀಚ್ ಎಂದ ಕೂಡಲೇ ಸೇಂಟ್ ಮೇರಿಸ್ ದ್ವೀಪ ಕಣ್ಮುಂದೆ ಬರುತ್ತದೆ. ಮಲ್ಪೆ ಬೀಚ್ ಹೋದರೆ ಸೇಂಟ್ ಮೇರಿಸ್ ನೋಡಲೇ ಬೇಕಾದ ಸ್ಥಳ.
- ಸ್ವಾಭಾವಿಕವಾಗಿ ರಚನೆಗೊಂಡ ಸಮುದ್ರದ ನಡುವಿನ ಈ ದ್ವೀಪ ಪ್ರವಾಸಿಗರ ಆಕರ್ಷಣೆಯ ಕೇಂದ್ರ, ಇಲ್ಲಿಗೆ ದೇಶ, ವಿದೇಶಗಳ ಪ್ರವಾಸಿಗರು ಆಗಮಿಸುತ್ತಾರೆ.
- ಮಲ್ಪೆ ಕಡಲ ಕಿನಾರೆಯಿಂದ ದ್ವೀಪಕ್ಕೆ ತೆರಳುವುದು ರೋಚಕ ಅನುಭವ. ಮಳೆಗಾಲದಲ್ಲಿ ಇಲ್ಲಿಗೆ ತೆರಳುವುದು ಅಸಾಧ್ಯ. ಮಲ್ಪೆ ಟೆಬ್ಮಾ ಹಿಂಬದಿ ಅಥವಾ ಮಲ್ಪೆ ಬೀಚ್ನಿಂದ ಮೀನುಗಾರಿಕೆ ಬಂದರು ಸಂಪರ್ಕಿಸುವ ಕೊಳ ರಸ್ತೆಯಲ್ಲಿ ಒಟ್ಟು ಮೂರು ಬೃಹತ್ ಬೋಟುಗಳು ಇಲ್ಲಿದ್ದು, ಪ್ರವಾಸಿಗರಿಗೆ ಸೇಂಟ್ ಮೇರಿಸ್ ಸಂಪರ್ಕ ಕಲ್ಪಿಸುತ್ತಿದೆ. ಮಲ್ಪೆ ಬೀಚ್ನಿಂದ ನಾಲ್ಕು ಬೋಟುಗಳು ಲಭ್ಯವಿವೆ.
ಸುರಕ್ಷತೆಗೆ ಹೆಚ್ಚಿನ ಆದ್ಯತೆ
- ನಿಷೇಧಿತ ಅವಧಿಯಲ್ಲಿ ಮೂರು ದೊಡ್ಡ ಬೋಟು, ಮಲ್ಪೆ 4 ಬೋಟುಗಳು ರಿಪೇರಿ, ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿಕೊಂಡಿವೆ. ಪ್ರವಾಸಿಗರ ಸುರಕ್ಷತೆಗೆ ಹೆಚ್ಚು ಒತ್ತು ಕೊಡುವಲ್ಲಿ ಲೈಫ್ಜಾಕೆಟ್, ಇತರೆ ಸುರಕ್ಷಾ ಸಲಕರಣೆಗಳು ಮತ್ತು ಜೀವರಕ್ಷಕ ತಂಡ ಇರಲಿದ್ದಾರೆ.
ದ್ವೀಪದಲ್ಲಿ ಜಟ್ಟಿ ಸಮಸ್ಯೆ
- ಸೇಂಟ್ ಮೇರಿಸ್ ದ್ವೀಪದಲ್ಲಿ ಪ್ರವಾಸಿಗರಿಗೆ ಕಾಯಲು ವೈಟಿಂಗ್ಲಾಂಚ್ ಮತ್ತು 3 ಕೋ. ರೂಪಾಯಿ ವೆಚ್ಚದಲ್ಲಿ ಜಟ್ಟಿ ನಿರ್ಮಾಣ ಯೋಜನೆಯನ್ನು ಜಿಲ್ಲಾಡಳಿತ ರೂಪಿಸಿತ್ತು. ಆದರೆ, ಅದು ಇನ್ನು ಕಾರ್ಯರೂಪಕ್ಕೆ ಬಂದಿಲ್ಲ. ಜಟ್ಟಿ ಇಲ್ಲದೆ ಪ್ರವಾಸಿ ಬೋಟ್ನವರು ತ್ರಾಸ ಪಡುವಂತಾಗಿದೆ. ದೊಡ್ಡ ಬೋಟುಗಳು ತೀರ ತಲುಪದ ಕಾರಣ, ಪ್ರವಾಸಿಗರನ್ನು ಮತ್ತೊಂದು ಚಿಕ್ಕ ಬೋಟ್ನಲ್ಲಿ ಇಳಿಸಿ ಸೇಂಟ್ ಮೇರಿಸ್ಗೆ ಬಿಡಬೇಕು. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಪ್ರಸ್ತುತ ಜಟ್ಟಿ ಮತ್ತು ವೇಟಿಂಗ್ ಲಾಂಚ್ನ ತೀರ ಅಗತ್ಯತೆ ಇದೆ.
ಸೇಂಟ್ ಮೇರೀಸ್ ದ್ವೀಪಗಳು
- ಕೊಕೊನಟ್ ದ್ವೀಪ ಮತ್ತು ಥೋನ್ಸೆರ್ ಎಂದೂ ಕರೆಯಲ್ಪಡುವ ಸೇಂಟ್ ಮೇರೀಸ್ ದ್ವೀಪಗಳು ಕರ್ನಾಟಕದ ಉಡುಪಿ , ಮಲ್ಪೆ ಕರಾವಳಿ ತೀರದಲ್ಲಿರುವ ಅರೇಬಿಯನ್ ಸಮುದ್ರದ ನಾಲ್ಕು ಸಣ್ಣ ದ್ವೀಪಗಳ ಒಂದು ಗುಂಪಾಗಿದೆ. ಸ್ತಂಭಾಕಾರದ ಬಸಾಲ್ಟ್ ಲಾವಾ (ಚಿತ್ರ) ದ ವಿಶಿಷ್ಟ ಭೌಗೋಳಿಕ ರಚನೆಗೆ ಅವರು ಹೆಸರುವಾಸಿಯಾಗಿದ್ದಾರೆ
- ಈ ದ್ವೀಪಗಳು ಕರ್ನಾಟಕದ ನಾಲ್ಕು ಭೌಗೋಳಿಕ ಸ್ಮಾರಕಗಳಲ್ಲಿ ಒಂದಾಗಿವೆ, 2001 ರಲ್ಲಿ ಭಾರತದ ಭೂವೈಜ್ಞಾನಿಕ ಸಮೀಕ್ಷೆಯಿಂದ ಘೋಷಿಸಲ್ಪಟ್ಟ 26 ಭೌಗೋಳಿಕ ಸ್ಮಾರಕಗಳಲ್ಲಿ ಒಂದಾಗಿದೆ . ಈ ಸ್ಮಾರಕವನ್ನು “ಜಿಯೋ ಪ್ರವಾಸೋದ್ಯಮ” ಕ್ಕೆ ಪ್ರಮುಖ ಸ್ಥಳವೆಂದು ಪರಿಗಣಿಸಲಾಗಿದೆ.
ಇಂಜಿನಿಯರ್ ದಿನ
ಸುದ್ಧಿಯಲ್ಲಿ ಏಕಿದೆ ? ಪ್ರತಿನಿತ್ಯ ದೇಶ ವಿದೇಶದ ವಿಶೇಷತೆಗಳನ್ನು ಕ್ರಿಯಾತ್ಮಕವಾಗಿ ಫೀಚರ್ ಮಾಡುವ ಗೂಗಲ್ ಡೂಡಲ್, ಇಂದು ಭಾರತದ ಶ್ರೇಷ್ಠ ಇಂಜಿಯರ್ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ 157ನೇ ಜನ್ಮದಿನವನ್ನು ಸ್ಮರಿಸಿದೆ.
- ದೇಶ ಕಂಡ ಅತ್ಯುತ್ತಮ ಇಂಜಿನಿಯರ್ ಸರ್.ವಿ.ವಿಶ್ವೇಶ್ವರಯ್ಯ ಅವರು ಹುಟ್ಟಿದ ದಿನವಾದ ಇಂದು (ಸೆ.15) ಗೂಗಲ್ ತನ್ನ ಮುಖಪುಟದಲ್ಲಿ ಅವರ ಭಾವಚಿತ್ರವನ್ನು ಡೂಡಲ್ಗೆ ಅಳವಡಿಸಿ ನಮನ ಸಲ್ಲಿಸಿದೆ. ಸರ್.ಎಂ.ವಿಗೆ ಗೌರವ ಸಲ್ಲಿಸಲು ಅವರ ಹುಟ್ಟಿದ ದಿನವನ್ನು ದೇಶದಲ್ಲಿ ಇಂಜಿನಿಯರ್ ದಿನ ಎಂದು ಆಚರಿಸಲಾಗುತ್ತಿದೆ.
- ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ಸೆ.15 1861ರಂದು ಮುದ್ದೇನಹಳ್ಳಿಯಲ್ಲಿ ಜನಿಸಿದರು. ಪುಣೆಯ ವಿಜ್ಞಾನ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು, ಮುಂಬೈ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ವೃತ್ತಿಜೀವನ ಆರಂಭಿಸಿದರು. 1912-1918 ಅವಧಿಯಲ್ಲಿ ಮೈಸೂರಿನ ದಿವಾನರಾಗಿ ಸೇವೆ ಸಲ್ಲಿಸಿದ್ದರು.
- ಈ ಸಮಯದಲ್ಲಿ ಬ್ರಿಟಿಷ್ ಸರ್ಕಾರ ಅವರಿಗೆ “ಸರ್” ಎಂಬ ಪದವಿ ನೀಡಿ ಗೌರವಿಸಿತ್ತು.
- 1955ರಲ್ಲಿ ಭಾರತ ಸರ್ಕಾರ ಭಾರತ ರತ್ನ ನೀಡಿ ಗೌರವಿಸಿತ್ತು.
ಆಯುಷ್ಮಾನ್ ಜತೆ ಆರೋಗ್ಯ ಕರ್ನಾಟಕ
ಸುದ್ಧಿಯಲ್ಲಿ ಏಕಿದೆ ? ಕೇಂದ್ರ ಸರ್ಕಾರದ ‘ಆಯುಷ್ಮಾನ್ ಭಾರತ್’ ಹಾಗೂ ರಾಜ್ಯ ಸಕಾರದ ‘ಆರೋಗ್ಯ ಕರ್ನಾಟಕ’ ಯೋಜನೆ ಜಾರಿ ಕುರಿತ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಎರಡೂ ಯೋಜನೆಗಳನ್ನು ಆಯಾ ಹೆಸರಿನಲ್ಲೇ ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
- ಎರಡೂ ಯೋಜನೆ ಗಳಡಿ 21 ಕೋಟಿ ಕುಟುಂಬ ಗಳಿಗೆ ವೈದ್ಯಕೀಯ ಸೇವೆ ಸಿಗಲಿದೆ.
- ಕೇಂದ್ರ ಸರ್ಕಾರದ ಸಾಮಾಜಿಕ ಆರ್ಥಿಕ ಜನಗಣತಿ ಪ್ರಕಾರ ರಾಜ್ಯದ 62 ಲಕ್ಷ ಕುಟುಂಬಗಳು ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ (ಆರ್ಎಸ್ಬಿವೈ)ಗೆ ಒಳಪಡಲಿದ್ದು, ಆ ಕುಟುಂಬಕ್ಕೆ ಮಾತ್ರವೇ ‘ಆಯುಷ್ಮಾನ್ ಭಾರತ್’ ಯೋಜನೆ ಪ್ರಕಾರ ಶೇ.60 ಅನುದಾನ ಲಭ್ಯವಾಗಲಿದೆ. ಇನ್ನುಳಿದ ಶೇ.40 ಅನುದಾನ ರಾಜ್ಯ ಸರ್ಕಾರವೇ ಭರಿಸಲಿದೆ.
- ಆದರೆ, ಕೇಂದ್ರದ ಮಾನದಂಡಗಳಿಗೆ ಒಳಪಡದ 59 ಲಕ್ಷ ಕುಟುಂಬಕ್ಕೆ ಆಯುಷ್ಮಾನ್ ಭಾರತ್ ಯೋಜನೆಯಿಂದ ವಂಚಿತವಾಗಲಿದ್ದು, ಈ ಕುಟುಂಬಗಳು ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕದ ಯೋಜನೆಗೆ ಒಳಪಡಲಿವೆ. ಈ ಕುಟುಂಬಗಳ ವೈದ್ಯಕೀಯ ವೆಚ್ಚ ಹೆಚ್ಚಿಸಲು ರಾಜ್ಯ ಸರ್ಕಾರ ಚಿಂತಿಸಿದೆ.
- ಕೋ-ಬ್ರ್ಯಾಂಡ್ಗೆ ತೀರ್ಮಾನ: ಆಯುಷ್ಮಾನ್ ಭಾರತ್ ಎಂದೇಯೋಜನೆಯನ್ನು ಮುಂದುವರಿಸಲು ಬಹುತೇಕ ರಾಜ್ಯಗಳು ತೀರ್ವನಿಸಿವೆ. ಆದರೆ ಕರ್ನಾಟಕದಲ್ಲಿ ಈ ಯೋಜನೆಯನ್ನು ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಹೆಸರಿನಲ್ಲಿ ಮುಂದುವರಿಸಲು ರಾಜ್ಯ ಸರ್ಕಾರ ತೀರ್ವನಿಸಿದೆ.
- ಕೇಂದ್ರ- ರಾಜ್ಯ ಸರ್ಕಾರಗಳ ಸಾಮಾಜಿಕ, ಆರ್ಥಿಕ ಜನಗಣತಿ ಮಾನದಂಡಗಳು ಬೇರೆ ಇದ್ದಿದ್ದರಿಂದ ಆಯುಷ್ಮಾನ್ ಭಾರತಕ್ಕೆ ಒಳಪಡುವ ಕುಟುಂಬಗಳ ವಿಚಾರ ಗೊಂದಲ ಉಂಟಾಗಿತ್ತು. ಇದೀಗ ರಾಜ್ಯ ಸರ್ಕಾರ ಕೇಂದ್ರದ ಮಾನದಂಡದ ಪ್ರಕಾರ ಬಿಟ್ಟುಹೋಗುವ ಕುಟುಂಬಗಳಿಗೆ ಆರೋಗ್ಯ ಕರ್ನಾಟಕ ಯೋಜನೆಯಡಿ ಸೇವೆ ಒದಗಿಸಲು ನಿರ್ಧರಿಸಿದೆ. ರಾಜ್ಯದಲ್ಲಿ 21 ಕೋಟಿ ಬಿಪಿಎಲ್ ಕುಟುಂಬಗಳಿದ್ದು, ಈ ಪೈಕಿ ಆರ್ಎಸ್ಬಿವೈಗೆ 62 ಲಕ್ಷ ಕುಟುಂಬಗಳು ಒಳಪಡಲಿವೆ. ಇನ್ನುಳಿದ ಅಂದಾಜು 59 ಲಕ್ಷ ಕುಟುಂಬಗಳನ್ನು ಆರೋಗ್ಯ ಕರ್ನಾಟಕ ಯೋಜನೆಗೆ ಒಳಪಡಿಸಲಾಗುತ್ತದೆ. ರಾಜ್ಯದ 4.5 ಕೋಟಿಗೂ ಅಧಿಕ ಜನರಿಗೆ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕದ ಲಾಭ ಸಿಗುವ ಅಂದಾಜಿದೆ.
ಬಿಪಿಎಲ್ ಕುಟುಂಬಗಳಿಗೂ 5 ಲಕ್ಷ
- ಈ ಮೊದಲು ರಾಜ್ಯ ಸರ್ಕಾರ ನೀಡುತ್ತಿದ್ದ 2 ಲಕ್ಷ ರೂ. ವೈದ್ಯಕೀಯ ವೆಚ್ಚವನ್ನು 5 ಲಕ್ಷಕ್ಕೆ ಹೆಚ್ಚಿಸುವ ಚಿಂತನೆ ಇದೆ. ಆಯುಷ್ಮಾನ್ ಭಾರತ ದಿಂದ ಹೊರಗುಳಿಯುವ 59 ಲಕ್ಷ ಕುಟುಂಬಗಳ ವೈದ್ಯಕೀಯ ವೆಚ್ಚವನ್ನು ಸಂಪೂರ್ಣ ವಾಗಿ ರಾಜ್ಯ ಸರ್ಕಾರವೇ ಭರಿಸಲಿದ್ದು, ವೈದ್ಯಕೀಯ ವೆಚ್ಚ 5 ಲಕ್ಷ ರೂ.ವರೆಗೆ ಹೆಚ್ಚಿಸುವ ಸಂಬಂಧ ಸಚಿವ ಸಂಪುಟ ಸಭೆ ಯಲ್ಲಿ ರ್ಚಚಿಸಿ ತೀರ್ವನಿಸಲಾಗುವುದು.
1,620 ವಿವಿಧ ಚಿಕಿತ್ಸೆಗಳಿಗೆ ವೆಚ್ಚ
- ಆರೋಗ್ಯ ಕರ್ನಾಟಕ ಯೋಜನೆಯಡಿ 1,620 ವಿವಿಧ ಚಿಕಿತ್ಸೆಗಳಿಗೆ ಸಹಾಯ ಒದಗಿಸಲಾಗುತ್ತಿತ್ತು. ಇದೀಗ ಆಯುಷ್ಮಾನ್ ಭಾರತ್ದಲ್ಲಿನ ಸಂಗತಿಗಳನ್ನು ಪರಿಶೀಲಿಸ ಲಾಗಿದ್ದು, ಅಲ್ಲಿ ಬಿಟ್ಟು ಹೋಗಿರುವ ಚಿಕಿತ್ಸೆಗಳಿಗೂ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆ ಪ್ರಕಾರ ವೈದ್ಯಕೀಯ ಸಹಾಯ ಸಿಗುವಂತೆ ಯೋಜನೆ ರೂಪಿಸಲಾಗಿದೆ ಎಂದು ಶಿವಾನಂದ ಪಾಟೀಲ ತಿಳಿಸಿದ್ದಾರೆ.
920 ಕೋಟಿ ರೂಪಾಯಿ ವೆಚ್ಚ
- ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಗೆ -ಠಿ;920 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಕೇಂದ್ರದಿಂದ 62 ಲಕ್ಷ ಕುಟುಂಬಕ್ಕೆ ಸಿಗುವ ಶೇ.60 ಅನುದಾನದ ಮೊತ್ತ -ಠಿ;300 ಕೋಟಿ ಆಗಲಿದೆ. ಉಳಿದ ಮೊತ್ತ ರಾಜ್ಯ ಸರ್ಕಾರ ಭರಿಸಬೇಕಿದೆ.
ಆಯುಷ್ಮಾನ್ಗೆ ಲ್ಯಾನ್ಸೆಟ್ ಮೆಚ್ಚುಗೆ
- ನವದೆಹಲಿ: ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿ ಕುರಿತು ಪ್ರಕಟವಾಗುವ ಬ್ರಿಟನ್ ಮೂಲದ ಜರ್ನಲ್ ‘ಲ್ಯಾನ್ಸೆಟ್’ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ‘ಆಯುಷ್ಮಾನ್ ಭಾರತ್’ಗೆ ಮೆಚ್ಚುಗೆ ವ್ಯಕ್ತವಾಗಿದೆ.
ಬೋಧನಾ ಜವಾಬ್ದಾರಿ
ಸುದ್ಧಿಯಲ್ಲಿ ಏಕಿದೆ ? ಸರ್ಕಾರಿ ಶಾಲೆಗಳ ಗುಣಮಟ್ಟ ಕುಸಿಯುತ್ತಿರುವುದನ್ನು ಮನಗಂಡಿರುವ ರಾಜ್ಯ ಸರ್ಕಾರ, ಶಿಕ್ಷಕರಿಗೆ ಬೋಧನಾ ಜವಾಬ್ದಾರಿ ಬಿಟ್ಟು ಉಳಿದೆಲ್ಲ ಕೆಲಸಗಳಿಂದ ಮುಕ್ತಿ ಕೊಡಿಸುವ ಮಹತ್ವದ ನಿರ್ಧಾರಕ್ಕೆ ಬಂದಿದೆ.
- ಶಿಕ್ಷಕರಿಗೆ ಜವಾಬ್ದಾರಿ ಹೆಚ್ಚಾಗುವುದೇ ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಕುಸಿಯಲು ಕಾರಣವೆಂಬ ಆರೋಪಗಳಿವೆ. ಆದ್ದರಿಂದ ಆಡಳಿತಾತ್ಮಕ ವ್ಯವಸ್ಥೆಯನ್ನು ಮಾಹಿತಿ ತಂತ್ರಜ್ಞಾನದ ಮೂಲಕ ನಿರ್ವಹಿಸಿ ಶಿಕ್ಷಕ ರನ್ನು ಕಲಿಕೆಗಷ್ಟೇ ಸೀಮಿತ ಗೊಳಿಸುವ ತೀರ್ವನಕ್ಕೆ ಸರ್ಕಾರ ಬಂದಿದೆ.
- ಹಣ ಸಾಕಾಗುತ್ತಿಲ್ಲ: ಸರ್ಕಾರ ಜಿಡಿಪಿಯ ಶೇ.5ನ್ನು ಶಿಕ್ಷಣಕ್ಕಾಗಿ ವೆಚ್ಚ ಮಾಡುತ್ತಿದೆ. ರಾಜ್ಯದಲ್ಲಿ ಶಿಕ್ಷಣಕ್ಕಾಗಿ 18000 ಕೋಟಿ ರೂ. ಖರ್ಚು ಮಾಡಲಾಗುತ್ತಿದ್ದರೂ ಸರ್ಕಾರಿ ಶಾಲೆಗಳಿಗೆ ಈ ಹಣ ಸಾಲುತ್ತಿಲ್ಲ, ಖಾಸಗಿ ರಂಗ ದುಬಾರಿಯಾಗಿದೆ. ಆದ್ದರಿಂದಲೇ ಗುಣಮಟ್ಟ ಕುಸಿತದಂತಹ ರೋಗ ತಗುಲಿದೆ ಎಂಬುದು ಸರ್ಕಾರ ರೂಪಿಸುತ್ತಿರುವ ನೀತಿಯಲ್ಲಿ ವಿವರಿಸಲಾಗಿದೆ.
- ಶಾಲೆಯಿಂದ ದೂರ: ಸರ್ಕಾರಿ ಶಾಲೆಗಳಲ್ಲಿ ಗುಣ ಮಟ್ಟ ಕುಸಿದಿರುವ ಪರಿಣಾಮ ಶಾಲೆಯಿಂದ ಹೊರಗುಳಿ ಯುವ ಹಾಗೂ ಖಾಸಗಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಗುಣಮಟ್ಟಕ್ಕೆ ಆದ್ಯತೆ ನೀಡಬೇಕಾದಶಿಕ್ಷಕರು ತಮಗೆ ಬೇರೆ ಕೆಲಸಗಳ ಹೊರೆಯೇ ಹೆಚ್ಚಾಗಿದೆ ಎಂಬ ಸಬೂಬು ಹೇಳುತ್ತಿದ್ದಾರೆ.
- ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಪ್ರಾಥಮಿಕ ಶಾಲೆಗಳಿಗೆ ದಾಖಲಾತಿಯ ಪ್ರಮಾಣ ಶೇ. 27 ಅಂದರೆ 56 ಲಕ್ಷದಿಂದ 41 ಲಕ್ಷಕ್ಕೆ ಇಳಿದಿದೆ. ಅದೇ ಕಾಲಕ್ಕೆ ಖಾಸಗಿ ಶಾಲೆಗಳಿಗೆ ದಾಖಲಾತಿಯ ಪ್ರಮಾಣ 28 ಲಕ್ಷದಿಂದ 41 ಲಕ್ಷಕ್ಕೆ ಏರಿಕೆಯಾಗಿದೆ. ನಗರ ಪ್ರದೇಶದಲ್ಲಿ ಶೇ. 80 ಮಕ್ಕಳು ಖಾಸಗಿ ಶಾಲೆಗಳಲ್ಲಿಯೇ ಇರುತ್ತಾರೆ.
ಡ್ರಾಪ್ ಔಟ್
- ಸರ್ಕಾರಿ ಶಾಲೆಯಿಂದ ದೂರ ಉಳಿಯುವ ಮಕ್ಕಳು ಒಂದೆಡೆಯಾದರೆ, ಶಾಲೆಗಳಿಗೆ ಸೇರಿ ಅರ್ಧಕ್ಕೆ ಬಿಡುವ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಒಟ್ಟು 18 ಲಕ್ಷ ಮಕ್ಕಳು ಶಾಲೆಯನ್ನು ಅರ್ಧಕ್ಕೆ ತೊರೆಯುತ್ತಿದ್ದಾರೆ. 1 ರಿಂದ 8 ನೇ ತರಗತಿಯ ತನಕ 5 ಲಕ್ಷ, 8 ರಿಂದ 10 ನೇ ತರಗತಿಯ ತನಕ 3.5 ಲಕ್ಷ ಹಾಗೂ 10 ರಿಂದ 12 ನೇ ತರಗತಿಯ ತನಕ 12 ಲಕ್ಷ ಮಕ್ಕಳು ಶಾಲೆಯನ್ನು ಅರ್ಧದಲ್ಲಿಯೇ ತೊರೆಯುತ್ತಿದ್ದಾರೆ.
ನೀತಿ ರೂಪಿಸಲು ಆದ್ಯತೆ
- ಗುಣಮಟ್ಟ ಹೆಚ್ಚಳದಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಿರುವುದನ್ನು ಸರ್ಕಾರ ಮನಗಂಡಿದೆ. ಆದ್ದರಿಂದಲೇ ಶಿಕ್ಷಕ-ವಿದ್ಯಾರ್ಥಿ ಕೇಂದ್ರಿತ ನೀತಿಯನ್ನು ರೂಪಿಸುವ ಕಡೆ ಗಮನ ಹರಿಸಿದೆ. ಶಿಕ್ಷಕರು ಗುಣಮಟ್ಟ ಹೆಚ್ಚಳದ ಚಾಲಕರಾಗುವ ರೀತಿಯಲ್ಲಿ ಅವರನ್ನು ಸಜ್ಜುಗೊಳಿಸುವ ಕಡೆ ಗಮನ ಕೇಂದ್ರೀಕರಿಸುತ್ತಿದೆ.
ಮೆರಿಟ್ ಆಧಾರದ ಬಡ್ತಿ
- ಶಿಕ್ಷಕರಿಗೆ ಜ್ಯೇಷ್ಠತೆಯಲ್ಲದೇ ಮೆರಿಟ್ ಆಧಾರದಲ್ಲಿ ಬಡ್ತಿ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ. ಇದರಿಂದ ಶಿಕ್ಷಕರಲ್ಲೂ ಸ್ಪರ್ಧೆಯ ಮನೋಭಾವ ಬೆಳೆಯುತ್ತದೆ, ಅದು ಶಿಕ್ಷಣದ ಮೇಲೆ ಪರಿಣಾಮ ಬೀರಿ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಸಹಾಯವಾಗುತ್ತದೆ ಎಂಬುದು ಸರ್ಕಾರದ ಉದ್ದೇಶ. ಕಾಲಕಾಲಕ್ಕೆ ಶಿಕ್ಷಕರಿಗೂ ತರಬೇತಿ ನೀಡುವುದನ್ನು ಕಡ್ಡಾಯ ಮಾಡಲಾಗುತ್ತದೆ ಎಂದು ಮೂಲಗಳು ಹೇಳುತ್ತವೆ.
ಹಳೆಯ ವಿದ್ಯಾರ್ಥಿಗಳ ಬಳಕೆ
- ಶೈಕ್ಷಣಿಕ ಗುಣಮಟ್ಟ ಹೆಚ್ಚಳದ ಬಗ್ಗೆ ಇಲಾಖೆ ಕಾಲಕಾಲಕ್ಕೆ ಆನ್ಲೈನ್ನಲ್ಲಿ ಪರಿಶೀಲನೆ ಮಾಡಲಿದೆ. ಅದರ ಜತೆಗೆ ಶಾಲೆಯ ಅಭಿವೃದ್ಧಿಗೆ ವಿವಿಧ ರೀತಿಯ ಕೊಡುಗೆಗಳನ್ನು ನೀಡಲು ಹಳೆಯ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಗೆ ಒತ್ತುನೀಡುವ ಜತೆಗೆ ಶಾಲಾ ಮೇಲುಸ್ತುವಾರಿ ಸಮಿತಿಗಳನ್ನು ಬಲಪಡಿಸಲು ನಿರ್ಧರಿಸಲಾಗಿದೆ.
ಪರಿಷತ್ ರಚನೆ
- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಡಿ ಯಲ್ಲಿ ಶಿಕ್ಷಣ ತಜ್ಞರು ಹಾಗೂ ವೃತ್ತಿಪರರನ್ನು ಒಳಗೊಂಡಂತೆ ರಾಜ್ಯ ಶಿಕ್ಷಣ ಶಾಲಾ ಪರಿಷತ್ತು ರಚಿಸಿ, ಅದರ ಮೂಲಕ ಪಠ್ಯಕ್ರಮ, ಶಿಕ್ಷಕರ ತಯಾರಿ ಮೊದಲಾದವುಗಳನ್ನು ನಿರ್ಧಾರ ಮಾಡಲಾಗುತ್ತದೆ.
ಎಚ್ಐವಿ ಸೋಂಕು
ಸುದ್ಧಿಯಲ್ಲಿ ಏಕಿದೆ ? ದೇಶದಲ್ಲಿ ಎಚ್ಐವಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು, 21.40 ಲಕ್ಷಕ್ಕೂ ಹೆಚ್ಚು ಜನರಿಗೆ ಈ ಸೋಂಕು ತಗುಲಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ.
- ಎಚ್ಐವಿ/ ಏಡ್ಸ್ನಿಂದಾಗಿ 2017ರಲ್ಲಿ 69 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಮಾರಣಾಂತಿಕ ಸೋಂಕಿನಿಂದ ಬಳಲುತ್ತಿರುವ ಸಂಖ್ಯೆಯಲ್ಲಿ ಮಹಾರಾಷ್ಟ್ರ ಪ್ರಥಮ (30 ಲಕ್ಷ), ಆಂಧ್ರಪ್ರದೇಶ ದ್ವಿತೀಯ (2.70 ಲಕ್ಷ), ಕರ್ನಾಟಕ ತೃತೀಯ (2.47 ಲಕ್ಷ ), ತೆಲಂಗಾಣ (2.04 ಲಕ್ಷ ) ನಾಲ್ಕನೇ ಸ್ಥಾನಗಳಲ್ಲಿ ಇವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
- ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ನ್ಯಾಕೊ), ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ರಾಷ್ಟ್ರೀಯ ವೈದ್ಯಕೀಯ ಸಾಂಖ್ಯಿಕ ಸಂಸ್ಥೆ (ನಿಮ್್ಸ) 14ನೇ ಸುತ್ತಿನ ಸಮೀಕ್ಷೆ ನಡೆಸಿದೆ. 2016ಕ್ಕೆ ಹೋಲಿಸಿದರೆ 87 ಸಾವಿರ ಮಂದಿಗೆ ಹೊಸದಾಗಿ ಎಚ್ಐವಿ ಸೋಂಕು ತಗುಲಿದೆ ಎಂದು ವರದಿ ತಿಳಿಸಿದೆ
ವರದಕ್ಷಿಣೆ ಕಾಯ್ದೆ
ಸುದ್ಧಿಯಲ್ಲಿ ಏಕಿದೆ ? ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
- ಆರೋಪಿಗಳ ಬಂಧನಕ್ಕೂ ಮೊದಲು ಕುಟುಂಬ ಕಲ್ಯಾಣ ಸಮಿತಿಯ ಪರಿಶೀಲನೆ ಕಡ್ಡಾಯ ಎಂಬ ನಿಯಮವನ್ನು ರದ್ದುಪಡಿಸಿದೆ. ಹೀಗಾಗಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪತಿ ಅಥವಾ ಅವರ ಕುಟುಂಬದವರನ್ನು ಬಂಧಿಸಲು ತನಿಖಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.
- ಐಪಿಸಿ ಸೆಕ್ಷನ್ 498ಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ನೀಡಿದ್ದ ಆದೇಶ ರದ್ದುಪಡಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯರ ಪೀಠ, ವರದಕ್ಷಿಣೆ ಪ್ರಕರಣದ ಗಂಭೀರತೆ ಆಧರಿಸಿ ತನಿಖಾಧಿಕಾರಿಯು ಆರೋಪಿಯನ್ನು ಬಂಧಿಸಬಹುದು. ಆದರೆ ಯಾವುದೇ ಕಡ್ಡಾಯ ಆದೇಶವನ್ನು ನ್ಯಾಯಪೀಠ ನೀಡದು. ಈ ಕುರಿತು ಕಾನೂನು ರೂಪಿಸಬೇಕಿದ್ದರೆ ಸಂಸತ್ತು ನಿರ್ಧರಿಸಲಿ ಎಂದು ಮುಖ್ಯ ನ್ಯಾಯಮೂರ್ತಿ ಸ್ಪಷ್ಟಪಡಿಸಿದ್ದಾರೆ.
- ವರದಕ್ಷಿಣೆ ಪ್ರಕರಣದಲ್ಲಿ ಕುಟುಂಬ ಕಲ್ಯಾಣ ಸಮಿತಿ ದೂರು ಪರಿಶೀಲಿಸದರೆ ಪತಿ ಅಥವಾ ಆತನ ಕುಟುಂಬ ಸದಸ್ಯರನ್ನು ಬಂಧಿಸಬಾರದು ಎಂದು ಕಳೆದ ವರ್ಷ ವಿಭಾಗೀಯ ಪೀಠ ಆದೇಶಿಸಿತ್ತು.
- ನಿರೀಕ್ಷಣಾ ಜಾಮೀನು: ಅಕ್ರಮ ಬಂಧನದ ಕುರಿತು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಇದರ ಜತೆಗೆ ನಿರೀಕ್ಷಣಾ ಜಾಮೀನಿಗೂ ಅವಕಾಶ ನೀಡಲಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಸ್ವಚ್ಛತಾ ಹೀ ಸೇವಾ’ ಅಭಿಯಾನ
ಸುದ್ಧಿಯಲ್ಲಿ ಏಕಿದೆ ? ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ‘ಸ್ವಚ್ಛತಾ ಹೀ ಸೇವಾ’ (ಸ್ವಚ್ಛತೆಯೇ ಸೇವೆ) ಕಾರ್ಯಕ್ರಮಕ್ಕೆ ಶನಿವಾರ ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
- ಸ್ವಚ್ಛ ಭಾರತ ಅಭಿಯಾನದ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ಈ ದಿನ ‘ಸ್ವಚ್ಛತಾ ಹೀ ಸೇವಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಈ ಮಹತ್ವದ ಅಭಿಯಾನ ಸ್ವಚ್ಛತಾ ಕ್ರಾಂತಿಗೆ ಕಾರಣವಾಗಿದೆ
- ‘ಸ್ವಚ್ಛತಾ ಹೀ ಸೇವಾ’ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ನಾನಾ ರಂಗಗಳ 2 ಸಾವಿರಕ್ಕೂ ಅಧಿಕ ಗಣ್ಯರಿಗೆ ವೈಯಕ್ತಿಕವಾಗಿ ಪತ್ರ ಬರೆದಿದ್ದಾರೆ.
ಚಂದಿರ ದರ್ಶನ
ಸುದ್ಧಿಯಲ್ಲಿ ಏಕಿದೆ ? ಚಂದ್ರನಲ್ಲಿಗೆ ಪ್ರವಾಸ ಎಂಬ ಕಲ್ಪನೆ ನಿಜವಾಗುವ ಕಾಲ ಸನ್ನಿಹಿತವಾಗಿದೆ.
- ಸ್ಪೇಸ್ ಎಕ್ಸ್ ಎಂಬ ಖಾಸಗಿ ಬಾಹ್ಯಾಕಾಶ ಸಂಸ್ಥೆ ಇದೇ ಮೊದಲ ಬಾರಿಗೆ ಗಗನಯಾತ್ರಿಯೇತರ ಖಾಸಗಿ ವ್ಯಕ್ತಿಯನ್ನು ಚಂದಿರನಲ್ಲಿಗೆ ಕಳುಹಿಸಿಕೊಡಲಿದೆ. ಗುರುವಾರ ರಾತ್ರಿ ಈ ಘೋಷಣೆ ಹೊರಬಿದ್ದಿದ್ದು, ಚಂದ್ರನಲ್ಲಿಗೆ ಹೋಗಲಿರುವ ಮೊದಲ ಪ್ರವಾಸಿಗ ಯಾರು ಎನ್ನುವುದನ್ನು ಸೆಪ್ಟೆಂಬರ್ 17ರಂದು ಪ್ರಕಟಿಸುವುದಾಗಿ ತಿಳಿಸಿದೆ.
- ಇದು ಬಾಹ್ಯಾಕಾಶದಲ್ಲಿ ಪ್ರವಾಸ ಮಾಡುವ ಜನರ ಕನಸನ್ನು ನನಸು ಮಾಡುವ ದೊಡ್ಡ ಹೆಜ್ಜೆ ಎಂದೇ ಪರಿಗಣಿತವಾಗಿದೆ.
- ಹಿಂದೆಯೂ ಘೋಷಿಸಿದ್ದರು: ಚಂದ್ರಯಾನದ ಬಗ್ಗೆ ಸ್ಪೇಸ್ ಎಕ್ಸ್ ಘೋಷಣೆ ಮಾಡಿದ್ದು ಇದು ಮೊದಲ ಸಲವೇನಲ್ಲ. ಸ್ಪೇಸ್ ಎಕ್ಸ್ ಸಿಇಒ, ಅಮೆರಿಕ ಉದ್ಯಮಿ ಎಲೋನ್ ಮಸ್ಕ್ ಅವರು 2017ರ ಫೆಬ್ರವರಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಚಂದ್ರನ ಸುತ್ತ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ ಎಂದು ಘೋಷಿಸಿದ್ದರು.
- ನಾಸಾ ಈ ಹಿಂದೆ ಕಳುಹಿಸಿದ್ದ ಅಪೋಲೊ ಗಗನ ನೌಕೆಗಳ ದಾರಿಯಲ್ಲೇ ಚಂದ್ರನ ಸುತ್ತ ಎರಡು ನೌಕೆಗಳನ್ನು ಕಳುಹಿಸಲಾಗುವುದು ಎಂದಿದ್ದರು. ಆದರೆ, ಈಗ ಪ್ರವಾಸಿಗರ ಸಂಖ್ಯೆ 2ರಿಂದ 1ಕ್ಕೆ ಇಳಿದಿದೆ.
ಚಂದ್ರನ ಸುತ್ತ ತಿರುಗಾಟ
- ಬಿಗ್ ಫಾಲ್ಕನ್ ರಾಕೆಟ್ (ಬಿಎಫ್ಆರ್) ಎಂಬ ನೌಕೆಯ ಪ್ರವಾಸಿಗನನ್ನು ಹೊತ್ತು ಚಂದ್ರನ ಸುತ್ತ ತಿರುಗಾಡುವ ಟೂರ್ ಇದಾಗಿದೆ. ಚಂದ್ರನ ಮೇಲೆ ಪ್ರವಾಸಿಗ ಇಳಿಯುವ ಪ್ಲ್ಯಾನ್ ಸದ್ಯಕ್ಕಿಲ್ಲ.
ಎಷ್ಟು ಖರ್ಚು?
- 1078 ಕೋಟಿ ರೂ.
ಮೂವರ ನಡುವೆ ಫೈಟ್
- ಬಾಹ್ಯಾಕಾಶ ಪ್ರವಾಸ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯಲು ವಿಶ್ವದ ಮೂವರು ಶ್ರೀಮಂತರು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.
- ಅಮೆಜಾನ್ ಕಂಪನಿಯ ಸಿಇಒ ಜೆಫ್ ಬೆಜೋಸ್, ಸ್ಪೇಸ್ ಎಕ್ಸ್ನ ಸಿಇಒ ಎಲೋನ್ ಮಸ್ಕ್, ವರ್ಜಿನ್ ಗ್ರೂಪ್ನ ಮಾಲೀಕ ರಿಚರ್ಡ್ ಬ್ರಾನ್ಸನ್. ಈ ಮೂವರೂ ತಮ್ಮದೇ ಆದ ಖಾಸಗಿ ರಾಕೆಟ್ ಸಂಸ್ಥೆಗಳನ್ನು ಹೊಂದಿದ್ದು, ಸ್ವಯಂ ತಂತ್ರಜ್ಞಾನ ಬೆಳೆಸುತ್ತಿದ್ದಾರೆ. ಅದಕ್ಕಾಗಿ ಗಗನ ನೌಕೆಗಳನ್ನು ನಿರ್ಮಿಸುತ್ತಿದ್ದಾರೆ. ಒಂದೊಮ್ಮೆ ಸ್ಪೇಸ್ ಎಕ್ಸ್ ಸಾಹಸ ಯಶಸ್ವಿಯಾದರೆ ಮೂರೂ ಕಂಪನಿಗಳು ಮುಗಿಬಿದ್ದು ಬಾಹ್ಯಾಕಾಶ ಟೂರ್ ನಡೆಸಲಿವೆ.
ದುಡ್ಡಿದ್ದರಷ್ಟೇ ಸಾಲದು
- ಚಂದ್ರನಲ್ಲಿ ಹೋಗಲು ಶ್ರೀಮಂತರೇ ಆಗಬೇಕು ಎನ್ನುವುದು ನಿಜ. ಆದರೆ, ದುಡ್ಡೊಂದೇ ಸಾಕಾಗುವುದಿಲ್ಲ. ಪ್ರಯಾಣಿಕರು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೊಂದಿರುವುದು ದುಡ್ಡಿಗಿಂತಲೂ ಮುಖ್ಯ. ತೀವ್ರ ವೈದ್ಯಕೀಯ ಪರೀಕ್ಷೆ, ಬಾಹ್ಯಾಕಾಶದ ಒತ್ತಡಗಳನ್ನು ನಿಭಾಯಿಸಲು ಕಠಿಣ ತರಬೇತಿಗಳನ್ನು ನೀಡಿದ ಬಳಿಕವೇ ಅವರನ್ನು ಆಯ್ಕೆ ಮಾಡಲಾಗುತ್ತದೆ.
ಮಾನವ ಅಭಿವೃದ್ಧಿ ಸೂಚ್ಯಂಕ
ಸುದ್ಧಿಯಲ್ಲಿ ಏಕಿದೆ ? ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಸಾಧನೆಗಳನ್ನು ಮಾಡಿರುವ ಭಾರತ ಈಗ ಮತ್ತೊಂದು ಗರಿ ಸಂಪಾದಿಸಿದೆ.
- ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತ ಒಂದು ಸ್ಥಾನ ಜಿಗಿತ ಕಂಡಿದೆ. ಒಟ್ಟು 189 ದೇಶಗಳ ಪೈಕಿ ಭಾರತ ಈಗ 130ನೇ ಸ್ಥಾನ ಪಡೆದುಕೊಂಡಿದೆ.
- ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆಯಡಿ ಬಿಡುಗಡೆ ಮಾಡಲಾಗಿರುವ ಪಟ್ಟಿಯಲ್ಲಿ ಭಾರತ ಮೇಲೇರಿದೆ.
- 2017ರಲ್ಲಿ ಭಾರತದ ಮಾನವ ಅಭಿವೃದ್ಧಿ ಸೂಚ್ಯಂಕ 640 ಇತ್ತು. ಇದು ಮಾನವ ಅಭಿವೃದ್ಧಿ ವಿಭಾಗದಲ್ಲಿ ಮಧ್ಯಮ ಪ್ರಗತಿ ಸಾಧಿಸಿದ ದೇಶಗಳ ಸಾಲಿಗೆ ಸೇರಿದೆ. 1999 ರಿಂದ 2017ರವರೆಗೆ ಭಾರತದ ಸೂಚ್ಯಂಕ 0.427 ರಿಂದ 0.640ಗೆ ಏರಿದೆ. ಶೇಕಡ 50ರಷ್ಟು ಏರಿಕೆ ಕಂಡಿದೆ.
- .ಮಾನವ ಅಭಿವೃದ್ಧಿಗೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಬೇಟಿ ಬಚಾವೋ, ಸ್ವಚ್ಛ ಭಾರತ ಆಂದೋಲನ, ಮೇಕ್ ಇನ್ ಇಂಡಿಯಾದಂಥ ಕ್ರಿಯಾಶೀಲ ಯೋಜನೆಗಳು ದೇಶದ ಪ್ರಗತಿಗೆ ಸಾಥ್ ನೀಡಿವೆ.
- ಇದರ ಜತೆಗೆ ಕೇಂದ್ರ ಸರಕಾರ ಮಹಿಳಾ ಸಬಲೀಕರಣಕ್ಕೆ ಹಾಗೂ ಲಿಂಗಾನುಪಾತ ಸಮಸ್ಯೆ ನಿವಾರಣೆಯತ್ತಲೂ ಗಮನ ಹರಿಸಿದೆ. ಇದು ಪ್ರಗತಿಯ ಸೂಚಕವಾಗಿದೆ. ಬಾಲಕಿಯರು ಶಾಲೆಗೆ ತೆರಳುತ್ತಿರುವ ಸಂಖ್ಯೆ ಅಧಿಕವಾಗಿರುವುದು ನಿಜಕ್ಕೂ ಮೆಚ್ಚುಗೆಯ ಅಂಶವಾಗಿದೆ ಎಂದು ಪಿಕಪ್ ಪ್ರತಿಪಾದಿಸಿದ್ದಾರೆ.
ಪ್ರಾದೇಶಿಕವಾರು ಸೂಚ್ಯಂಕ ಪಟ್ಟಿ
- ದಕ್ಷಿಣ ಏಷ್ಯಾದಲ್ಲಿ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಸೂಚ್ಯಂಕ ಗಣನೀಯವಾಗಿ ಏರಿಕೆಯಾಗಿದೆ. ಈ ಪ್ರಾಂತ್ಯದಲ್ಲಿ ಸರಾಸರಿ 638 ಸೂಚ್ಯಂಕ ಇದ್ದು, ಇದಕ್ಕೆ ಪೂರಕವಾಗಿಯೇ ಭಾರತದ ಸೂಚ್ಯಂಕವೂ ದಾಖಲಾಗಿದೆ. ದಕ್ಷಿಣ ಏಷ್ಯಾ ದೇಶಗಳ ಪೈಕಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಕ್ರಮವಾಗಿ 136 ಮತ್ತು 150ನೇ ಸ್ಥಾನದಲ್ಲಿದೆ.
- ನಾರ್ವೆ, ಸ್ವಿಜರ್ಲೆಂಡ್, ಆಸ್ಟ್ರೇಲಿಯಾ, ಐಸ್ಲ್ಯಾಂಡ್, ಜರ್ಮನಿ ರ್ಯಾಂಕಿಂಗ್ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಸೆಂಟ್ರಲ್ ಆಫ್ರಿಕಾ ರಿಪಬ್ಲಿಕನ್ನ ನಿಗರ್, ದಕ್ಷಿಣ ಸೂಡಾನ್, ಚಾದ್ ಮತ್ತು ಬುರಾಂಡಿ ದೇಶಗಳು ಅತಿ ಕಡಿಮೆ ಸೂಚ್ಯಂಕ ಪಡೆದು ಕೊನೆಯ ಸಾಲಿನಲ್ಲಿದೆ.









