ಸುದ್ಧಿ ಸಮಾಚಾರ – 15 ಆಗಸ್ಟ್ 2022
ಸುದ್ಧಿ ಸಮಾಚಾರ – 15 ಆಗಸ್ಟ್ 2022
-
ಕಾಡು ಕುದುರೆ ಓಡಿ ಬಂದಿತ್ತಾ ಗೀತೆ ಖ್ಯಾತಿಯ, ಕನ್ನಡದ ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ (83 ವರ್ಷ) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸುಬ್ಬಣ್ಣ ಅವರ ಹಿನ್ನಲೆ
ಕನ್ನಡದ ಸುಗಮ ಸಂಗೀತ ಕ್ಷೇತ್ರದ ಹಿರಿಯ ಗಾಯಕರಲ್ಲಿ ಸುಬ್ಬಣ್ಣ ಒಬ್ಬರಾಗಿದ್ದು, ಸುಬ್ಬಣ್ಣ ಅವರ ನಿಜ ನಾಮಧೇಯ ಜಿ.ಸುಬ್ರಹ್ಮಣ್ಯಂ. ಶ್ರೀ ಗಣೇಶ್ ರಾವ್ ಹಾಗೂ ರಂಗನಾಯಕಮ್ಮನವರ ಮಗನಾದ ಸುಬ್ಬಣ್ಣ ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲ್ಲಿ 1938ರಲ್ಲಿ ಜನಿಸಿದರು. ಸಿನಿಮಾ ರಂಗಕ್ಕೆ ಸುಬ್ಬಣ್ಣ ಹಿನ್ನೆಲೆ ಗಾಯಕರಾಗಿ ಚಿತ್ರರಂಗ ಪ್ರವೇಶಿಸಿದ್ದು ನಾಟಕಕಾರ, ಚಿತ್ರ ನಿರ್ದೇಶಕ ಕವಿ ಚಂದ್ರಶೇಖರ ಕಂಬಾರರ ‘ಕರಿಮಾಯಿ’ ಮೂಲಕ. 1979ರಲ್ಲಿ ಅಂದಿನ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಅವರಿಂದ ರಜತಕಮಲ ಪ್ರಶಸ್ತಿ ಸ್ವೀಕರಿಸಿದರು. ಆಕಾಶವಾಣಿ ಎಂ.ಎಸ್.ಐ.ಎಲ್. ಪ್ರಾಯೋಜಕತ್ವದಲ್ಲಿ ಪ್ರಸಾರ ಮಾಡಿದ ಜನಪ್ರಿಯ ಕಾರ್ಯಕ್ರಮದಲ್ಲಿ ‘ಕೋಡಗನ ಕೋಳಿ ನುಂಗಿತ್ತಾ..’, ‘ಅಳಬೇಡಾ ತಂಗಿ ಅಳಬೇಡ…’ ‘ಬಿದ್ದೀಯಬ್ಬೇ ಮುದುಕಿ..’ ಮೊದಲಾದ ಶಿಶುನಾಳ ಷರೀಫರ ಗೀತೆಗಳನ್ನು ಹಾಡಿದ ಸುಬ್ಬಣ್ಣ ಮನೆ ಮಾತಾದರು.
- ಚರಂಡಿಯ ನೀರನ್ನು ಸಂಸ್ಕರಿಸಿ ಶುದ್ಧ ಕುಡಿಯುವ ನೀರು ನೀಡುವ ಇಸ್ರೇಲ್ ಕಂಪನಿಯ ‘ಗಾಲ್ ಮೊಬೈಲ್’ ನೀರು ಸಂಸ್ಕರಣೆ ಯಂತ್ರವು ನಗರಕ್ಕೆ ಬಂದಿದೆ. ಬೊಮ್ಮನಹಳ್ಳಿಯ ಎಚ್ಎಸ್ಆರ್ ಲೇಔಟ್ನಲ್ಲಿ ಇದರ ಮೊದಲ ಪ್ರಾತ್ಯಕ್ಷಿಕೆ ನೀಡಲಾಯಿತು, ಕೊಳವೆಯ ಮೂಲಕ ಚರಂಡಿ ನೀರನ್ನು ಹೀರಿ, ನಾಲ್ಕು ಹಂತಗಳಲ್ಲಿ ಸಂಸ್ಕರಿಸಿ ಶುದ್ಧ ಕುಡಿಯುವ ನೀರು ಕೊಡುತ್ತದೆ.
- ಈ ಹಿಂದಿನ ಸರ್ಕಾರ 2016ರಲ್ಲಿ ರಚನೆ ಮಾಡಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದ್ದು, ಎಸಿಬಿಗೆ ನೀಡಲಾಗಿದ್ದ ಪೊಲೀಸ್ ಠಾಣೆ ಸ್ಥಾನಮಾನವನ್ನು ಮರಳಿ ಲೋಕಾಯುಕ್ತ ಸಂಸ್ಥೆಗೆ ನೀಡಿದೆ.
- ರಾಜಸ್ಥಾನದಲ್ಲಿ ಲಂಪಿ ವೈರಸ್ನಿಂದ ಉಂಟಾಗುವ ಚರ್ಮಗಂಟು ಸೋಂಕಿನಿಂದ 12,800 ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿದ್ದು, ರಾಜ್ಯ ಸರ್ಕಾರ ಪ್ರಾಣಿಗಳ ಸಂತೆ, ಅಥವಾ ಜಾತ್ರೆ ನಡೆಸುವುದನ್ನು ನಿಷೇಧಿಸಿದೆ.
- ದೇಶದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ಉದಯ್ ಉಮೇಶ್ ಲಲಿತ್ ಅವರನ್ನು ನೇಮಕ ಮಾಡಲಾಗಿದೆ.
- ಬಿಹಾರದ ಮುಜಾಫರ್ಪುರದ ಲಂಗತ್ ಸಿಂಗ್ ಕಾಲೇಜಿನಲ್ಲಿರುವ 106 ವರ್ಷ ಹಳೆಯ ಖಗೋಳ ವೀಕ್ಷಣಾಲಯವನ್ನು ಯುನೆಸ್ಕೋ ವಿಶ್ವ ಪರಂಪರೆಯ ವೀಕ್ಷಣಾಲಯಗಳ ಪಟ್ಟಿಗೆ ಸೇರಿಸಲಾಗಿದೆ. ಈ ವೀಕ್ಷಣಾಲಯವು ಭಾರತದ ಪೂರ್ವ ಭಾಗದಲ್ಲಿ ಮೊದಲನೆಯದು.
- ನರ್ಮದಾ ನದಿಗೆ ಕಟ್ಟಲಾಗಿರುವ ಓಂಕಾರೇಶ್ವರ ಅಣೆಕಟ್ಟೆಯಲ್ಲಿ ತೇಲುವ ಸೌರ ಸ್ಥಾವರ ನಿರ್ಮಿಸಲಾಗುತ್ತದೆ. 2022-23 ರ ವೇಳೆಗೆ 600 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ತೇಲುವ ಸೌರ ವಿದ್ಯುತ್ ಸ್ಥಾವರವನ್ನು ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಿರ್ಮಿಸಲು ಯೋಜಿಸಲಾಗಿದೆ.
- ಹಿರಿಯ ಕಾಂಗ್ರೆಸ್ ಮುಖಂಡ ಶಶಿ ತರೂರ್ ಫ್ರಾನ್ಸ್ ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಚೆವಲಿಯರ್ ಡೆ ಲಾ ಲೀಜನ್ ಡಿ ಹಾನರ್ ಭಾಜನರಾಗಿದ್ದಾರೆ, ಶಶಿ ತರೂರ್ ಅವರ ಲೇಖನಗಳು ಮತ್ತು ಭಾಷಣಗಳಿಗಾಗಿ ಫ್ರಾನ್ಸ್ ಸರ್ಕಾರ ಅವರನ್ನು ಪುರಸ್ಕರಿಸುತ್ತಿದೆ.
-
ಮಹಿಳಾ ಪೊಲೀಸ್ ಅಧಿಕಾರಿ ಲಲಿತಾ ಮಡ್ವಾಲ್ ನೆದರ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಪೊಲೀಸ್ ಹಾಗೂ ಅಗ್ನಿಶಾಮಕ ಕ್ರೀಡಾಕೂಟ, 2022ದಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ಕ್ರೀಡೆಗಳಲ್ಲಿ 6 ಪದಕ (5 ಚಿನ್ನದ ಪದಕ, ಒಂದು ಬೆಳ್ಳಿಯ ಪದಕ)ಗಳನ್ನು ಗೆದ್ದಿದ್ದಾರೆ. ರಾಷ್ಟ್ರಪತಿ ಭವನದ ಭದ್ರತಾ ವಿಭಾಗದಲ್ಲಿ ಸಹಾಯಕ ಸಬ್ ಇನ್ಸ್ಪೆಕ್ಟರ್ ಆಗಿದ್ದಾರೆ.