Published on: August 23, 2022

ಸುದ್ಧಿ ಸಮಾಚಾರ – 23 ಆಗಸ್ಟ್ 2022

ಸುದ್ಧಿ ಸಮಾಚಾರ – 23 ಆಗಸ್ಟ್ 2022

  • ಕರ್ನಾಟಕ ಜಾನಪದ ಅಕಾಡೆಮಿಯ 2022ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಮಂಡ್ಯ ಜಿಲ್ಲೆಯ ವ.ನಂ.ಶಿವರಾಮು ಅವರಿಗೆ ಪ್ರತಿಷ್ಠಿತ ಡಾ|| ಜಿ.ಶಂ.ಪರಮಶಿವಯ್ಯ ಪ್ರಶಸ್ತಿ ಮತ್ತು ಬಾಗಲಕೋಟೆಯ ಡಾ ಶಂಭು ಬಳಿಗಾರ ಅವರಿಗೆ ಡಾ ಬಿ.ಎಸ್.ಗದ್ದಿಗಿಮಠ ಪ್ರಶಸ್ತಿ ಘೋಷಿಸಲಾಗಿದೆ.
  • ದೇವಬಾಗ್ ಬಳಿಯ ದಂಡೇಬಾಗ್‌ನಲ್ಲಿ ದಡಕ್ಕೆ ತೇಲಿಬಂದ ಆಳಸಮುದ್ರ ಮೀನುಗಾರಿಕೆಯ ಬಲೆಯಲ್ಲಿ ಎರಡು ಆಲಿವ್ ರಿಡ್ಲೆ ಆಮೆಗಳು ಸಿಲುಕಿದ್ದವು.ಆಲಿವ್ ರಿಡ್ಲಿ ಸಮುದ್ರ ಆಮೆ (ಲೆಪಿಡೋಚೆಲಿಸ್ ಒಲಿವೇಸಿಯಾ), ಇದನ್ನು ಸಾಮಾನ್ಯವಾಗಿ ಪೆಸಿಫಿಕ್ ರಿಡ್ಲಿ ಸಮುದ್ರ ಆಮೆ ಎಂದೂ ಕರೆಯಲಾಗುತ್ತದೆ, ಇದು ಚೆಲೋನಿಡೆ ಜಾತಿಯ ಕುಟುಂಬಕ್ಕೆ ಸೇರಿದೆ.
  • ಭಾರತದ ತೇಜಸ್‌ ಲಘು ಯುದ್ಧ ವಿಮಾನಗಳಿಗೆ ಭಾರೀ ಬೇಡಿಕೆ ಬಂದಿದ್ದು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಲ್) ಕೌಲಾಲಂಪುರದಲ್ಲಿ(ಮಲೇಷ್ಯಾ) ತನ್ನ ಕಚೇರಿಯನ್ನು ತೆರೆಯುವ ಒಪ್ಪಂದಕ್ಕೆ ಸಹಿ ಹಾಕಿದೆ.
  • ದೆಹಲಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಭಾರತವನ್ನು ವಿಶ್ವದ ನಂಬರ್ ಒನ್ ದೇಶವನ್ನಾಗಿ ಮಾಡುವ ರಾಷ್ಟ್ರೀಯ ಮಿಷನ್ ಗೆ ಚಾಲನೆ ನೀಡಿದರು. ನಾಗರಿಕರಿಗೆ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆ, ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಸಮಾನ ಹಕ್ಕು ಮತ್ತು ಘನತೆ ಮತ್ತು ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ನೀಡುವ ಗುರಿಯನ್ನು ಸಾಧಿಸುವ ಅಗತ್ಯವಿದೆ. ಈ ಉಪಕ್ರಮದಲ್ಲಿ ಭಾಗಿಯಾಗುವಂತೆ ಜನರನ್ನು ಉತ್ತೇಜಿಸಲು ‘ಮೇಕ್ ಇಂಡಿಯಾ ನಂ.1’ ಅಭಿಯಾನದ ಭಾಗವಾಗಿ ದೇಶಾದ್ಯಂತ ಸಂಚರಿಸುವುದಾಗಿ ಹೇಳಿದ ಅವರು, ಮಿಷನ್ ಅರಾಜಕೀಯ ಸ್ವರೂಪದ್ದಾಗಿದೆ ಎಂದರು.
  • ತಿಂಗಳ ಕೊನೆಯಲ್ಲಿ ರಷ್ಯಾದಲ್ಲಿ ನಡೆಯಲಿರುವ ವೋಸ್ಟಾಕ್ -2022 ಮಿಲಿಟರಿ ತಾಲೀಮಿನಲ್ಲಿ ತಮ್ಮ ಸೈನಿಕರು ಭಾಗವಹಿಸಲಿದ್ದಾರೆ ಎಂದು ಚೀನಾ ತಿಳಿಸಿದೆ. ಈ ಸಮರಾಭ್ಯಾಸದಲ್ಲಿ ಭಾರತೀಯ ಸೇನೆಯ ಭಾಗವಹಿಸುವಿಕೆಯೂ ಇರಲಿದೆ ಎಂದು ಅದು ಹೇಳಿದೆ. ಚೀನಾ ಮತ್ತು ರಷ್ಯಾ ಮಿಲಿಟರಿಗಳ ನಡುವಿನ ವಾರ್ಷಿಕ ಸಹಕಾರ ಯೋಜನೆ ಹಾಗೂ ಎರಡು ಕಡೆಯ ಒಮ್ಮತದ ಪ್ರಕಾರ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಮುಂದಿನ ದಿನಗಳಲ್ಲಿ ಮಿಲಿಟರಿ ತಾಲೀಮಿನಲ್ಲಿ ಭಾಗವಹಿಸಲು ಕೆಲವು ಸೈನಿಕರನ್ನು ರಷ್ಯಾಕ್ಕೆ ಕಳುಹಿಸಲಿದೆ ಎಂದು ಚೀನಾದ ರಕ್ಷಣಾ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ
  • ಫಿಫಾ ಕೌನ್ಸಿಲ್​​ ಬ್ಯೂರೋ, ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (AIFF) ಸಂಸ್ಥೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಘೋಷಿಸಿದೆ. ಬ್ಯೂರೊ ಆಫ್ ಫಿಫಾ (FIFA) ಕೌನ್ಸಿಲ್‍ನಲ್ಲಿ ಈ ಸಂಬಂಧ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ.
  • ಇಂಧನ ಸಂರಕ್ಷಣೆ (ತಿದ್ದುಪಡಿ) ಮಸೂದೆ, 2022 ಅನ್ನು ಆಗಸ್ಟ್ 3, 2022 ರಂದು ಲೋಕಸಭೆಯಲ್ಲಿ ಮಂಡಿಸಲಾಯಿತು ಮತ್ತು ಆಗಸ್ಟ್ 8 ರಂದು ಅಂಗೀಕರಿಸಲಾಯಿತು. ಇದು ಇಂಧನ ಸಂರಕ್ಷಣೆ ಕಾಯಿದೆ, 2001 ಅನ್ನು ತಿದ್ದುಪಡಿ ಮಾಡಲು ಪ್ರಯತ್ನಿಸುತ್ತದೆ. ಇದು ಇಂಧನ ದಕ್ಷತೆ ಮತ್ತು ಸಂರಕ್ಷಣೆಯನ್ನು ಉತ್ತೇಜಿಸುತ್ತದೆ.