Published on: September 27, 2022
ಸುದ್ಧಿ ಸಮಾಚಾರ – 27 ಸೆಪ್ಟೆಂಬರ್ 2022
ಸುದ್ಧಿ ಸಮಾಚಾರ – 27 ಸೆಪ್ಟೆಂಬರ್ 2022
-
‘ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು (ಕೆಆರ್ವಿಪಿ) ವತಿಯಿಂದ ಕೆಎಸ್ಒಯು ಘಟಿಕೋತ್ಸವ ಭವನದಲ್ಲಿ ಸೆ.8ರಿಂದ 10ರವರೆಗೆ 14ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ ಆಯೋಜಿಸಲಾಗಿತ್ತು’.
- ಸೆಲ್ಕೊ ‘ಸೂರ್ಯಮಿತ್ರ’ ಪ್ರಶಸ್ತಿ : ಸೆಲ್ಕೊ ಸಂಸ್ಥೆಯ ಅಂತರರಾಷ್ಟ್ರೀಯ ‘ಸೂರ್ಯಮಿತ್ರ’ ವಾರ್ಷಿಕ ಪ್ರಶಸ್ತಿಗೆ 2020ನೇ ಸಾಲಿನ ಸೌರಶಕ್ತಿಯ ಉಪಯೋಗ ಉತ್ತೇಜಿಸುತ್ತಿರುವ ಸೌರತಜ್ಞರಾದ ನೇವಿಲ್ಲೆ ವಿಲಿಯಮ್ಸ್, 2021 ನೇ ಸಾಲಿನ ಪ್ರಶಸ್ತಿಗೆ ಇಂಧನ ಬಳಕೆ ಕುರಿತ ಜಾಗತಿಕ ಮನ್ನಣೆ ಪಡೆದ ತಜ್ಞೆ ರಿಚೆಂಡಾ ವಾನ್ ಲೀವೆನ್ ಹಾಗೂ 2022 ನೇ ಸಾಲಿನ ಪ್ರಶಸ್ತಿಗೆ ಕರ್ನಾಟಕದ ವಿವಿಧೆಡೆ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಮೂಲ ಸೌಕರ್ಯ ಬಲಪಡಿಸುವ ಕೆಲಸ ಮಾಡುತ್ತಿರುವ ಸ್ವಾಮಿ ವಿವೇಕಾನಂದ ಯೂಥ್ ಮೂವ್ಮೆಂಟ್ ಸಂಸ್ಥೆ (ಡಾ.ಆರ್.ಬಾಲಸುಬ್ರಮಣ್ಯಂ ನೇತೃತ್ವದಲ್ಲಿ 1984 ರಿಂದ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ) ಭಾಜನವಾಗಿದೆ.
- ಗೋಕರ್ಣದ ಅಶೋಕೆಯಲ್ಲಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ, ಸದ್ಯದಲ್ಲೇ ದೇಶದ ಪ್ರಥಮ ಪರಂಪರಾ ವಿಶ್ವವಿದ್ಯಾಲಯ ಸ್ಥಾಪನೆಗೆ ಯೋಜಿಸಲಾಗಿದೆ. ವಿದ್ಯಾಪೀಠದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪರಂಪರಾ ಗುರುಕುಲ ಆರಂಭಿಸಲಾಗುವುದು’. ಪರಂಪರಾ ಗುರುಕುಲದಲ್ಲಿ ವಿದ್ಯಾರ್ಥಿಗಳು ಆರು ವರ್ಷಗಳಲ್ಲಿ, 18 ಭಾರತೀಯ ವಿದ್ಯೆಗಳ ಪೂರ್ವಶಿಕ್ಷಣ ಪಡೆಯಲಿದ್ದಾರೆ. ಪರಂಪರಾ ವಿಶ್ವವಿದ್ಯಾಲಯದಲ್ಲಿ ಇವುಗಳ ಉನ್ನತ ಅಧ್ಯಯನಕ್ಕೆ ಅವಕಾಶ ಇರುತ್ತದೆ.
- ಪುನೀತ್ ಜನ್ಮದಿನ ಸ್ಫೂರ್ತಿಯ ದಿನ: ‘ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರ ಜನ್ಮದಿನವನ್ನು ಸ್ಫೂರ್ತಿಯ ದಿನವನ್ನಾಗಿ ಸರ್ಕಾರದ ವತಿಯಿಂದ ರಾಜ್ಯದಾದ್ಯಂತ ಆಚರಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ನವೆಂಬರ್ 1ರಂದು ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನುನೀಡಲಾಗುತ್ತದೆ. ಜನ್ಮದಿನವಾದ ಮಾರ್ಚ್ 17ರಂದು ಸ್ಫೂರ್ತಿಯ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ.
- ಓಣಂ ಹಬ್ಬದ ಪ್ರಯುಕ್ತ ಕೇರಳದಲ್ಲಿ ವರ್ಷಂಪ್ರತಿ ಆಯೋಜನೆಯಾಗುತ್ತಿರುವ ನೆಹರೂ ಟ್ರೋಫಿ ದೋಣಿ ಸ್ಪರ್ಧೆಗೆ ಈ ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೇರಳ ಸರ್ಕಾರವು ಆಹ್ವಾನ ನೀಡಿತ್ತು. ಆಲಪ್ಪುಳದ ಪುನ್ನಮಡ ಹಿನ್ನೀರಿನಲ್ಲಿ ವರ್ಣರಂಜಿತ ದೋಣಿ ಸ್ಪರ್ಧೆಯು ಸೆಪ್ಟೆಂಬರ್ ನಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ಪಳ್ಳತುರುತಿ ಬೋಟ್ ಕ್ಲಬ್ನ ‘ಮಹಾದೇವಿಕಾಡು ಕಟ್ಟಿಲ್ ತೆಕೆತಿಲ್’ ಟ್ರೋಫಿ ಗೆದ್ದರೆ, ಎನ್ಸಿಡಿಸಿ ಬೋಟ್ ಕ್ಲಬ್ನ ‘ನಾಡುಭಾಗಂ’ ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
- 64ನೇ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆ ಮಾಡಿರುವ ಸಂಬಂಧ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರತಿಷ್ಠಾನವು ಕೇರಳದ ಸಿಪಿಎಂ ಹಿರಿಯ ನಾಯಕಿ ಮತ್ತು ಮಾಜಿ ಆರೋಗ್ಯ ಸಚಿವೆ ಶೈಲಜಾ ಅವರನ್ನು ಸಂಪರ್ಕಿಸಿತ್ತು, ಆದರೆ ಅವರು ಈ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.
- ರಕ್ತದಾನ ಅಮೃತ ಮಹೋತ್ಸವ’ ಅಭಿಯಾನಕ್ಕಾಗಿ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಕೇಂದ್ರ ಆರೋಗ್ಯ ಸಚಿವಾಲಯವು ಇದಕ್ಕಾಗಿ ಇ-ರಕ್ತ್ ಕೋಶ್ ಎಂಬ ಆನ್ಲೈನ್ ಪೋರ್ಟಲ್ ಲಾಂಚ್ ಮಾಡಲಿದ್ದು, ಸೆಪ್ಟೆಂಬರ್ 17ರಿಂದ ಜನರು ಇದರಲ್ಲಿ ತಮ್ಮ ಹೆಸರು ನೋಂದಾಯಿಸಿ ಸ್ವಯಂಪ್ರೇರಿತ ರಕ್ತದಾನದಲ್ಲಿ ಪಾಲ್ಗೊಳ್ಳಬಹುದು. ಈ ವೆಬ್ಸೈಟ್ ಮಾತ್ರವಲ್ಲದೆ ಆರೋಗ್ಯ ಸೇತು ಆಪ್ ಮೂಲಕವೂ ರಕ್ತದಾನಕ್ಕೆ ಹೆಸರು ನೋಂದಾಯಿಸಬಹುದಾಗಿದೆ.
- 1947 ರಲ್ಲಿ ದೇಶದ ಕೊನೆಯ ಚಿರತೆ ಸಾವನ್ನಪ್ಪಿದ 75 ವರ್ಷಗಳ ನಂತರ, ವಿಶ್ವದ ಅತಿ ವೇಗದ ಪ್ರಾಣಿಯನ್ನು ಭಾರತೀಯ ಅರಣ್ಯಕ್ಕೆ ಮರುಪರಿಚಯಿಸುವ ಕಾರ್ಯಕ್ರಮವನ್ನು ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನೆರವೇರಿಸಲಿದ್ದಾರೆ.
- ದೆಹಲಿಯಲ್ಲಿ ಪ್ರತೀ ವರ್ಷ ಮಾಲಿನ್ಯ ಸೃಷ್ಟಿಸುತ್ತಿರುವ ರೈತರ ಕೃಷಿ ತ್ಯಾಜ್ಯ ಸುಡುವಿಕೆ ಸಮಸ್ಯೆಗೆ ಅಂತ್ಯ ಹಾಡಲು ಪಂಜಾಬ್ ಮತ್ತು ದೆಹಲಿ ಸರ್ಕಾರಗಳು ಕೈಜೋಡಿಸಿವೆ. ಬೆಳೆ ತ್ಯಾಜ್ಯ ನಿರ್ವಹಣೆಗೆ ಸದ್ಯದಲ್ಲೇ ಪೈಲಟ್ ಯೋಜನೆ ಆರಂಭಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
- ದೇಶದಲ್ಲಿ ಆ್ಯಪಲ್ ಐಫೋನ್ ಉತ್ಪಾದನಾ ಘಟಕ ಸ್ಥಾಪನೆಗೆ ವೇದಾಂತ ಲಿಮಿಟೆಡ್ ಮುಂದಾಗಿದೆ. ಆ್ಯಪಲ್ ಕಂಪನಿಯ ಐಫೋನ್ ಮತ್ತು ಟಿವಿ, ಇತರ ಉಪಕರಣಗಳನ್ನು ಉತ್ಪಾದಿಸುವ ಘಟಕ ಸ್ಥಾಪಿಸಲು ವೇದಾಂತ ಲಿ. ನಿರ್ಧರಿಸಿದೆ. ಮಹಾರಾಷ್ಟ್ರದಲ್ಲಿ ನೂತನ ಘಟಕ ನಿರ್ಮಿಸುವ ಗುರಿಯಿದೆ ಎಂದು ವೇದಾಂತ ಚೇರ್ಮನ್ ಅನಿಲ್ ಅಗರ್ವಾಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
- ರೇಡಾರ್ಗಳ ಕಣ್ತಪ್ಪಿಸಿ ಸಂಚರಿಸುವ ಸಾಮರ್ಥ್ಯದ, ಭಾರತೀಯ ನೌಕಾಪಡೆಯ ಪ್ರಾಜೆಕ್ಟ್–17 ಯೋಜನೆಯ ಮೂರನೇ ನೌಕೆ ‘ತಾರಾಗಿರಿ’ ಅರಬ್ಬಿ ಸಮುದ್ರಕ್ಕೆ ಇಳಿಯಿತು. ‘ನೀಲಗಿರಿ ಶ್ರೇಣಿ’ಯ ನೌಕೆಗಳಲ್ಲಿ ಈ ನೌಕೆ ಮೂರನೆಯದ್ದಾಗಿದ್ದು, ಇದು ರಕ್ಷಣಾ ಸ್ವಾವಲಂಬನೆಯಲ್ಲಿ ಭಾರತದ ಮಹತ್ವದ ಹೆಜ್ಜೆ ಎಂದು ವಿಶ್ಲೇಷಿಸಲಾಗಿದೆ.
- ಶ್ರೀಲಂಕಾದಲ್ಲಿ ಅಧ್ಯಕ್ಷರ ಅಧಿಕಾರವನ್ನು ಮೊಟಕುಗೊಳಿಸಿ ಸಂಸತ್ಗೆ ಪರಮಾಧಿಕಾರವನ್ನು ನೀಡುವ ಸಂವಿಧಾನದ 22ನೇ ತಿದ್ದುಪಡಿ ಮಸೂದೆಗೆ ದೇಶದ ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿದೆ.
- ದಕ್ಷಿಣ ಅಮೆರಿಕದ ಅಮೆಜಾನ್ ಮಳೆ ಕಾಡುಗಳಲ್ಲಿ ಬದುಕಿದ್ದ ಅಮೆಜಾನ್ ಕಾಡಿನ ಬುಡಕಟ್ಟು ಸಮುದಾಯವೊಂದರ ಕಟ್ಟಕಡೆಯ ವ್ಯಕ್ತಿ ಮರಣ ಹೊಂದಿದ್ದಾನೆ. ಈ ವ್ಯಕ್ತಿ ರೋಂಡೊನಿಯಾದ ತಾನಾರು ವ್ಯಾಪ್ತಿಯ ಕಾಡಿನಲ್ಲಿ ಮರಣವಾಗಿದ್ದಾನೆ ಎಂದು ಬ್ರೆಜಿಲ್ನ ಬುಡಕಟ್ಟು ಇಲಾಖೆ (Funai) ತಿಳಿಸಿದೆ.
- ಭಾರತೀಯ ಮೂಲದ ಬ್ಯಾರಿಸ್ಟರ್ ಸುಯೆಲ್ಲಾ ಬ್ರಾವರ್ಮನ್ ಅವರನ್ನು ಬ್ರಿಟನ್ ನ ಹೊಸ ಗೃಹ ಕಾರ್ಯದರ್ಶಿಯಾಗಿ ನೇಮಿಸಲಾಗಿದ್ದು, ಭಾರತೀಯ ಮೂಲದ ಸಹ ಸಹೋದ್ಯೋಗಿ ಪ್ರೀತಿ ಪಟೇಲ್ ಅವರ ಬದಲಾಗಿ ಸುಯೆಲ್ಲಾ ಅವರಿಗೆ ಈ ಸ್ಥಾನ ನೀಡಲಾಗಿದೆ.
· ಇತ್ತೀಚಿಗೆ ರಾಣಿ ಎಲಿಜಬೆತ್ II ಕನ್ಸರ್ವೇಟಿವ್ ಪಕ್ಷದ ನಾಯಕಿ ಲಿಜ್ ಟ್ರಸ್ ಅವರನ್ನು ಯುನೈಟೆಡ್ ಕಿಂಗ್ಡಂನ ಹೊಸ ಪ್ರಧಾನ ಮಂತ್ರಿಯಾಗಿ ನೇಮಿಸಿದರು.
- ಟಿಯಾಂಜಿನ್ ಮೂಲದ ಔಷಧ ತಯಾರಕ ಕಂಪನಿ ‘ಕ್ಯಾನ್ಸಿನೊ ಬಯಾಲಜಿಸ್’ ಉಸಿರಾಟದ ಮೂಲಕವೇ ಪಡೆಯಬಹುದಾದ ವಿಶ್ವದ ಮೊದಲ ಕೋವಿಡ್–19 ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ಚೀನಾದ ಔಷಧ ನಿಯಂತ್ರಕಗಳು ಅನುಮೋದನೆ ನೀಡಿವೆ ಎಂದು ವರದಿಯಾಗಿದೆ. ನೆಬ್ಯುಲೈಸರ್ ಮೂಲಕ ಹಾಕಬಹುದಾದ ಈ ಲಸಿಕೆಯನ್ನು ಸೂಜಿ ಇಲ್ಲದೆ ತುಂಬಾ ಸುಲಭವಾಗಿ ವಿತರಿಸಬಹುದಾಗಿದೆ ಎಂದು ಕಂಪನಿ ತಿಳಿಸಿದೆ.
- ಗುವಾಹಟಿಯ ಡಾ. ಜಾಕೀರ್ ಹುಸೇನ್ ಈಜು ಸಂಕೀರ್ಣದಲ್ಲಿ ನಡೆಯುತ್ತಿರುವ ಚಾಂಪಿಯನ್ಷಿಪ್ನ ಕರ್ನಾಟಕದ ಎಸ್.ಶಿವಾ ಅವರು ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಅವರು ಪುರುಷರ 200 ಮೀಟರ್ಸ್ ಮೆಡ್ಲೆಯಲ್ಲಿ ಅಗ್ರಸ್ಥಾನ ಗಳಿಸಿದರು. ಶಿವಾ, ಶಿವಾಂಕ್ ವಿಶ್ವನಾಥ್, ಧ್ಯಾನ್ ಬಾಲಕೃಷ್ಣ ಮತ್ತು ಪೃಥ್ವಿ ಎಂ. ಅವರನ್ನೊಳಗೊಂಡ ಕರ್ನಾಟಕ ರಾಜ್ಯ ತಂಡವು ಪುರುಷರ 4X200 ಮೀಟರ್ಸ್ ಫ್ರೀಸ್ಟೈಲ್ನಲ್ಲಿ ಚಿನ್ನದ ಪದಕ ಗೆದ್ದರು.
- ವಿಶ್ವದ ಶ್ರೇಷ್ಠ ಟೆನಿಸ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್, ಟೆನಿಸ್ ಕ್ರೀಡೆಯಿಂದ ನಿವೃತ್ತಿ ಪಡೆದರು.
ಅಮೆರಿಕದಲ್ಲಿ ಸಾಗುತ್ತಿರುವ ಅಮೆರಿಕನ್ ಓಪನ್ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಸೋಲಿನೊಂದಿಗೆ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಿದರು. ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸೆರೆನಾ, 46ನೇ ರ್ಯಾಂಕ್ನ ಆಸ್ಟ್ರೇಲಿಯಾದ ಅಜ್ಲಾ ಟಾಮ್ಲಜಾನೊವಿಚ್ ವಿರುದ್ಧ ಪರಾಭವಗೊಂಡರು.Toda
- ಸ್ಪೇನ್ನ ಯುವ ಪ್ರತಿಭೆ ಕಾರ್ಲೊಸ್ ಅಲ್ಕರಾಜ್, ಅಮೆರಿಕ ಓಪನ್ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮೊದಲ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ 19 ವರ್ಷದ ಅಲ್ಕರಾಜ್, ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರಿದ ಅತಿ ಕಿರಿಯ ಆಟಗಾರ ಎನಿಸಿದ್ದಾರೆ.
- ಪೋಲಂಡ್ನ ಇಗಾ ಸ್ವಟೆಕ್ ಅವರು ಅಮೆರಿಕ ಓಪನ್ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮೊದಲ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅಲ್ಲದೆ ಪ್ರಸಕ್ತ ಸಾಲಿನಲ್ಲಿ ಎರಡನೇ ಮತ್ತು ಒಟ್ಟಾರೆಯಾಗಿ ಮೂರನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಜಯಿಸಿದ್ದಾರೆ. ಇಗಾ ಸ್ವಟೆಕ್ 2020 ಹಾಗೂ 2022ನೇ ಸಾಲಿನಲ್ಲಿ ಫ್ರೆಂಚ್ ಓಪನ್ ಗೆದ್ದ ಸಾಧನೆ ಮಾಡಿದ್ದಾರೆ.
- ಟೆನಿಸ್ ಲೋಕದ ಆಟಗಾರ ರೋಜರ್ ಫೆಡರರ್ ಅವರು ವೃತ್ತಿಪರ ಟೆನಿಸ್ ಕ್ರೀಡೆಗೆ ನಿವೃತ್ತಿ ಘೋಷಿಸಿದ್ದಾರೆ. ‘ಲೇವರ್ ಕಪ್–2022’ರ ನಂತರ ನಿವೃತ್ತಿಯಾಗುವುದಾಗಿ ತಿಳಿಸಿದ್ದಾರೆ. ರೋಜರ್ ಫೆಡರರ್ ಅವರು 24 ವರ್ಷಗಳ ಕಾಲ ಸ್ವಿಟ್ಜರ್ಲೆಂಡ್ ಅನ್ನು ಪ್ರತಿನಿಧಿಸಿದ್ದಾರೆ.