Published on: November 18, 2022

ಆರ್ಟೆಮಿಸ್– 1 ಚಂದ್ರ ಮಿಷನ್‌’ ಯೋಜನೆ

ಆರ್ಟೆಮಿಸ್– 1 ಚಂದ್ರ ಮಿಷನ್‌’ ಯೋಜನೆ

ಸುದ್ದಿಯಲ್ಲಿ ಏಕಿದೆ?

ನಾಸಾವು ಚಂದ್ರಯಾನದ ಅಂಗವಾಗಿ, ಆರ್ಟೆಮಿಸ್– 1 ಒರಿಯನ್‌’ನೌಕೆಯನ್ನು ಸ್ಪೇಸ್‌ ಲಾಂಚ್ ಸಿಸ್ಟಂನ (ಎಸ್‌ಎಲ್‌ಎಸ್‌) ಪರೀಕ್ಷಾರ್ಥವಾಗಿ ಉಡಾವಣೆ ಮಾಡಿದೆ.

ಮುಖ್ಯಾಂಶಗಳು

  • ಈ ರಾಕೆಟ್‌, ತಾನು ಹೊತ್ತೊಯ್ದಿರುವ ಸಿಬ್ಬಂದಿ ರಹಿತವಾದ ನೌಕೆಯನ್ನು ಚಂದ್ರನ ಸುತ್ತಲಿನ ವಿಶಾಲವಾದ ಕಕ್ಷೆಗೆ ಬಿಡಲಿದೆ. ಗುರಿ ಪೂರ್ಣಗೊಳಿಸಿದ ಬಳಿಕ ಭೂ ಕಕ್ಷೆಗೆ ಹಿಂತಿರುಗಲಿರುವ ಇದು ಡಿಸೆಂಬರ್‌ನಲ್ಲಿ ಪೆಸಿಫಿಕ್‌ ಸಮುದ್ರಕ್ಕೆ ಅಪ್ಪಳಿಸಲಿದೆ.
  • ಎಲ್ಲಿಂದ ಉಡಾವಣೆ : ಈ ರಾಕೆಟ್‌ ಅನ್ನು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನ ಮಾಡಲಾಯಿತು.
  • ವಿಶೇಷತೆ :ಇದು ಮಾನವ ರಹಿತ ನೌಕೆಯೇ ಆದರೂ ಮನುಷ್ಯನ ಅಂಗಾಂಶ ರಚನೆ ಹೊಂದಿರುವ ಈ ಪ್ರತಿಕೃತಿಗಳು (‘ಮ್ಯಾನಿಕಿನ್‌ಗಳು’ )ಎನ್ನುವುದು ಇಲ್ಲಿನ ವಿಶೇಷ. ಈ ಮಾನವ ಪ್ರತಿಕೃತಿಗಳ ಮೇಲೆ ಚಂದ್ರನ ವಾತಾವರಣ ಬೀರುವ ಪರಿಣಾಮಗಳನ್ನು ಆಧರಿಸಿ, 2025ರಲ್ಲಿ ನಾಸಾ ‘ಆರ್ಟೆಮಿಸ್‌-3’ ನೌಕೆ ಮೂಲಕ ಮಾನವ ಸಹಿತ ಚಂದ್ರಯಾನ ಕೈಗೊಳ್ಳಲಿದೆ.

ಉದ್ದೇಶ

  • 50 ವರ್ಷ ಹಿಂದೆ ನಾಸಾವು ಚಂದ್ರಯಾನ ಕೈಗೊಂಡಾಗ ತಂತ್ರಜ್ಞಾನ ಅಷ್ಟೊಂದು ಅಭಿವೃದ್ಧಿ ಕಂಡಿರಲಿಲ್ಲ. ಅಪೋಲೊ ನೌಕೆಯ ತಂತ್ರಜ್ಞಾನಗಳು ಹಳೆಯ ಮಾದರಿಯಾಗಿದ್ದ ಕಾರಣ ಯಾವ ನಿಖರ ಫಲಿತಾಂಶಗಳೂ ಲಭಿಸಿರಲಿಲ್ಲ. ಈಗ ನಾಸಾದ ನೌಕೆಗಳಲ್ಲಿ ಸುಧಾರಿತ ತಂತ್ರಜ್ಞಾನಗಳಿದ್ದು, ಚಂದ್ರನ ಮೇಲ್ಮೈನ ಪರಿಣಾಮಗಳನ್ನು ಕೂಲಂಕಷವಾಗಿ ಅಧ್ಯಯನಿಸುವಂಥ ಸಲಕರಣೆಗಳೂ ಇವೆ. ಜಗತ್ತಿನ ಅರಿವಿಗೇ ಬಾರದ ಚಂದ್ರನ ದಕ್ಷಿಣ ಧ್ರುವದ ರಹಸ್ಯ ತಿಳಿಯುವ ಕುತೂಹಲ ನಾಸಾಕ್ಕೆ ಇದೆ.

ಆರ್ಟಿಮಿಸ್‌

  • ಉದ್ದ :98 ಮೀಟರ್‌
  • ತೂಕ : 40 ಲಕ್ಷ ಕೆಜಿ
  • ವೇಗ :1 ಸೆಕೆಂಡಿಗೆ 160 ಕಿ.ಮೀ

    ಆರ್ಟೆಮಿಸ್‌ ಮಿಷನ್‌ 1972ರ ಅಪೊಲೊ ಮಿಷನ್‌ಗಿಂತ ಸಾಕಷ್ಟು ಭಿನ್ನ. ಆರ್ಟೆಮಿಸ್‌- 1, 2, 3 ಹೀಗೆ ಒಟ್ಟು 3 ಹಂತಗಳಲ್ಲಿ ಚಂದ್ರನನ್ನು ಸೇರುವ ಪರಿಪೂರ್ಣ ಉದ್ದೇಶವನ್ನು ನಾಸಾ ಇಟ್ಟುಕೊಂಡಿದೆ.

  • ಆರ್ಟಿಮಿಸ್‌-2: ಇದನ್ನು ನಾಸಾ 2024ರಲ್ಲಿ ಕೈಗೊಳ್ಳಲಿದೆ. ಕೆಲವು ಗಗನಯಾತ್ರಿಗಳೂ ಇದರಲ್ಲಿ ಹೋಗುತ್ತಾರೆ. ಆದರೆ, ಅವರು ಚಂದ್ರನ ಮೇಲೆ ಕಾಲಿಡುವುದಿಲ್ಲ. ಚಂದ್ರನ ಕಕ್ಷೆಯಲ್ಲಿ 3 ವಾರಗಳ ಕಾಲ ಸುತ್ತಾಡಿ, ಭೂಮಿಗೆ ಮರಳುತ್ತಾರೆ.
  • ಆರ್ಟೆಮಿಸ್‌- 3: ಈ ನೌಕೆಯಲ್ಲಿ ತೆರಳುವ ಗಗನಯಾತ್ರಿಗಳು ಚಂದ್ರನ ಮೇಲೆ ಇಳಿಯುತ್ತಾರೆ. ಆರ್ಟೆಮಿಸ್‌ ಯೋಜನೆಯಲ್ಲಿ ಇದು ನಾಸಾದ ಅಂತಿಮ ಟಾರ್ಗೆಟ್‌. 2025ರಲ್ಲಿ ನಾಸಾ ಇದನ್ನು ಆರಂಭಿಸಲಿದೆ. ಮೊದಲ ಬಾರಿಗೆ ಮಹಿಳಾ ಯಾತ್ರಿಗಳೂ ಚಂದ್ರನ ಮೇಲೆ ಕಾಲಿಟ್ಟು ಇತಿಹಾಸ ಸೃಷ್ಟಿಸಲಿದ್ದಾರೆ. ಕಪ್ಪು ಜನಾಂಗದ ವ್ಯಕ್ತಿಯೂ ಈ ಯಾತ್ರೆಯ ಭಾಗವಾಗಲಿದ್ದಾರೆ. ಚಂದ್ರನ ದಕ್ಷಿಣ ಧ್ರುವದಲ್ಲಿರುವ ನೀರು ಮತ್ತು ಮಂಜುಗಡ್ಡೆಯನ್ನು ಈ ಗಗನಯಾತ್ರಿಗಳು ಅಧ್ಯಯನಿಸಲಿದ್ದಾರೆ.

ಮನುಷ್ಯನ ಬದಲಾಗಿ ಪ್ರತಿಕೃತಿಗಳನ್ನು ಕಳಿಸಿದ್ದೇಕೆ?

  • ಬಾಹ್ಯಾಕಾಶದಲ್ಲಿ ವಿಕಿರಣ ಅಪಾಯ ಅಧಿಕ. ಹೆಚ್ಚಿನ ವಿಕಿರಣಗಳು ಕ್ಯಾನ್ಸರ್‌ಕಾರಕಗಳು ಕೂಡ. ಇವುಗಳ ತೀವ್ರತೆಯ ಶೋಧ ಅಧ್ಯಯನಿಸುವುದು ಅತಿ ಮುಖ್ಯ.

    ಇವುಗಳಲ್ಲಿ ಸಾವಿರಾರು ಸಂವೇದಕಗಳನ್ನು ಅಳವಡಿಸಲಾಗಿದ್ದು, ಭೂಮಿಗೆ ಮರಳುವವರೆಗೂ ವಿಕಿರಣ ಪರಿಣಾಮಗಳನ್ನು ದಾಖಲಿಸುತ್ತವೆ.

    ಭವಿಷ್ಯದಲ್ಲಿ ಚಂದ್ರನಲ್ಲಿಗೆ ತೆರಳುವ ಮಾನವರ ಮೇಲೆ ವಿಕಿರಣಗಳ ಸಂಭಾವ್ಯ ಪರಿಣಾಮಗಳು ಈ ಪ್ರತಿಕೃತಿಗಳಿಂದ ಲಭಿಸುತ್ತವೆ.

ನಿಮಗಿದು ತಿಳಿದಿರಲಿ

ಮಹಿಳಾ ಆಕೃತಿಗಳನ್ನೇ ಆರಿಸಿಕೊಂಡಿದ್ದೇಕೆ?

  • ವಿಕಿರಣದ ಪರಿಣಾಮ ತಡೆದುಕೊಳ್ಳುವ ಕ್ಷಮತೆ ಮಹಿಳೆಯರಲ್ಲಿ ಕಡಿಮೆ. ಒಂದು ವೇಳೆ ಈ ವಿಚಾರದಲ್ಲಿ ಸಫಲತೆ ಕಂಡರೆ ಭವಿಷ್ಯದಲ್ಲಿ ಮಾನವ ಸಂತತಿಯನ್ನು ಚಂದ್ರನಲ್ಲೂ ಬೆಳೆಸುವುದು ಸುಲಭ. ಬಾಹ್ಯಾಕಾಶಕ್ಕೆ ಕಳಿಸಲಾದ ಜೀವಿಗಳಲ್ಲೂ ಹೆಣ್ಣು ಜೀವಕ್ಕೇ ಆದ್ಯತೆ ನೀಡಿರುವುದನ್ನೂ ಗಮನಿಸಬಹುದು.
  • 1947ರ ಫೆಬ್ರವರಿಯಲ್ಲಿ ಅಮೆರಿಕ ಮೊಟ್ಟ ಮೊದಲ ಬಾರಿಗೆ ಹೆಣ್ಣು ನೊಣವನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಬಳಿಕ ರಷ್ಯಾವು ‘ಸ್ಫುಟ್ನಿಕ್‌’ನಲ್ಲಿ ಕಳುಹಿಸಿದ ‘ಲೈಕಾ’ ನಾಯಿ ಕೂಡ ಹೆಣ್ಣೇ. ನಂತರ ಬಾಹ್ಯಾಕಾಶ ಯಾತ್ರೆ ಕೈಗೊಂಡ ಇಲಿ, ಕೋತಿ, ಬೆಕ್ಕು, ಕಪ್ಪೆಗಳು ಕೂಡ ಹೆಣ್ಣು ಜೀವಗಳೇ.
  • ಪ್ರಸ್ತುತ ಆರ್ಟೆಮಿಸ್‌-1ರಲ್ಲೂ 2 ಹೆಣ್ಣಾಕೃತಿಗಳನ್ನೇ ಕಳುಹಿಸಲಾಗುತ್ತಿದೆ. ‘ಮಹಿಳಾ ಗಗನಯಾತ್ರಿಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಆದ್ದರಿಂದ, ಮಹಿಳೆಯರ ದೇಹದ ಮೇಲಿನ ವಿಕಿರಣ ಪರಿಣಾಮ ಅಧ್ಯಯನಿಸುವುದು ಮುಖ್ಯವಾಗಿದೆ’ ಎನ್ನುತ್ತಾರೆ ಜರ್ಮನಿಯ ಏರ್‌ಸ್ಪೇಸ್‌ ಸೆಂಟರ್‌ನ ವಿಜ್ಞಾನಿ ಥಾಮಸ್‌ ಬರ್ಗರ್‌.