Published on: December 20, 2022
ಆಕಸ್ಮಿಕ ಲಾಭ ತೆರಿಗೆ
ಆಕಸ್ಮಿಕ ಲಾಭ ತೆರಿಗೆ
ಸುದ್ದಿಯಲ್ಲಿ ಏಕಿದೆ? ಕೇಂದ್ರ ಸರ್ಕಾರವು ದೇಶದಲ್ಲಿ ಉತ್ಪಾದನೆ ಆಗುವ ಕಚ್ಚಾ ತೈಲದ ಮೇಲಿನ ‘ಆಕಸ್ಮಿಕ ಲಾಭ ತೆರಿಗೆ’ಯನ್ನು ತಗ್ಗಿಸಿದೆ. ಇದೇ ವೇಳೆ, ಡೀಸೆಲ್ ಮತ್ತು ವಿಮಾನ ಇಂಧನ (ಎಟಿಎಫ್) ರಫ್ತು ಮೇಲಿನ ತೆರಿಗೆಯನ್ನೂ ಕಡಿಮೆ ಮಾಡಿದೆ.
ಮುಖ್ಯಾಂಶಗಳು
- ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಂತಹ (ಒಎನ್‌ಜಿಸಿ) ಕಂಪನಿಗಳು ದೇಶದಲ್ಲಿ ಉತ್ಪಾದನೆ ಮಾಡುವ ಕಚ್ಚಾ ತೈಲದ ಮೇಲೆ ಪ್ರತಿ ಟನ್‌ಗೆ ರೂ. 4,900 ಇದ್ದ ಆಕಸ್ಮಿಕ ಲಾಭ ತೆರಿಗೆಯನ್ನು ರೂ. 1,700ಕ್ಕೆ ಇಳಿಕೆ ಮಾಡಲಾಗಿದೆ. ಡೀಸೆಲ್ ಮೇಲಿನ ರಫ್ತು ತೆರಿಗೆಯನ್ನು ಲೀಟರಿಗೆ ರೂ. 8 ರಷ್ಟು ಇದ್ದಿದ್ದು ರೂ. 5ಕ್ಕೆ ಹಾಗೂ ವಿಮಾನ ಇಂಧನದ ರಫ್ತು ಮೇಲಿನ ತೆರಿಗೆಯನ್ನು ಲೀಟರಿಗೆ ರೂ. 5ರಷ್ಟು ಇದ್ದಿದ್ದು ರೂ. 1.5ಕ್ಕೆ ಇಳಿಕೆ ಮಾಡಲಾಗಿದೆ. ಪರಿಷ್ಕೃತ ತೆರಿಗೆ ದರಗಳು ಜಾರಿಗೆ ಬರಲಿವೆ.
- ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ನವೆಂಬರ್‌ನಿಂದ ಈವರೆಗೆ ಶೇ 14ರಷ್ಟು ಇಳಿಕೆ ಕಂಡಿದೆ. ಇದಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರವು ತೆರಿಗೆ ದರಗಳನ್ನು ಕಡಿಮೆ ಮಾಡಿದೆ.
- ರಷ್ಯಾ ದೇಶವು ಭಾರತಕ್ಕೆ ಕಚ್ಚಾ ತೈಲ ಪೂರೈಕೆ ಮಾಡುವ ದೇಶಗಳ ಸಾಲಿನಲ್ಲಿ ಇದೇ ಮೊದಲ ಬಾರಿಗೆ ಮೊದಲ ಸ್ಥಾನಕ್ಕೆ ಬಂದಿದೆ.
- ಅಕ್ಟೋಬರ್‌ನಲ್ಲಿ ರಷ್ಯಾದಿಂದ ತರಿಸಿಕೊಂಡಿದ್ದ ಕಚ್ಚಾ ತೈಲದ ಪ್ರಮಾಣಕ್ಕೆ ಹೋಲಿಸಿದರೆ ಇದು ಶೇಕಡ 4ರಷ್ಟು ಹೆಚ್ಚು. ನವೆಂಬರ್‌ನಲ್ಲಿ ಭಾರತ ಆಮದು ಮಾಡಿಕೊಂಡ ಕಚ್ಚಾ ತೈಲದಲ್ಲಿ ಶೇ 23ರಷ್ಟು ಪಾಲು ರಷ್ಯಾದ್ದು.
ಆಕಸ್ಮಿಕ ಲಾಭ ತೆರಿಗೆ ಎಂದರೇನು?
- ಸರಳವಾಗಿ ಹೇಳಬೇಕೆಂದರೆ ಯಾವುದೇ ಸಂಸ್ಥೆ ಅಥವಾ ಕೈಗಾರಿಕೆಗಳು ತಮ್ಮ ವ್ಯಾಪ್ತಿಯನ್ನು ಮೀರಿ ಅನಿರೀಕ್ಷಿತ ಮಟ್ಟದ ಲಾಭಗಳಿಸಿದಾಗ ಅವುಗಳಿಗೆ ಸರ್ಕಾರ ವಿಧಿಸುವ ಒಂದು ವಿಧದ ತೆರಿಗೆಯನ್ನೇ ಅಥವಾ ಆಕಸ್ಮಿಕ ಲಾಭ ತೆರಿಗೆಎಂದು ಕರೆಯಲಾಗುತ್ತದೆ.
ನಿಮಗಿದು ತಿಳಿದಿರಲಿ
- ಜಿ7 ದೇಶಗಳು, ಆಸ್ಟ್ರೇಲಿಯಾ ಮತ್ತು ಐರೋಪ್ಯ ಒಕ್ಕೂಟದ 27 ದೇಶಗಳು ರಷ್ಯಾದ ಕಚ್ಚಾ ತೈಲದ ಮೇಲೆ ಡಿಸೆಂಬರ್ 5ರಿಂದ ಅನ್ವಯವಾಗುವಂತೆ ಬೆಲೆ ಮಿತಿ ಹೇರಿವೆ. ಪ್ರತಿ ಬ್ಯಾರೆಲ್‌ಗೆ 60 ಡಾಲರ್ ಮಿತಿ ಹಾಕಿವೆ. ಈ ಮಿತಿಗಿಂತ ಹೆಚ್ಚಿನ ಬೆಲೆಗೆ ರಷ್ಯಾ ಕಚ್ಚಾ ತೈಲ ಮಾರಲು ಮುಂದಾದರೆ, ಅದಕ್ಕೆ ವಿಮೆ, ಹಣಕಾಸು ಮತ್ತು ಇತರ ಸೇವೆಗಳನ್ನು ಕೊಡಬಾರದು ಎಂಬ ಷರತ್ತು ಇದೆ.