Published on: January 4, 2023
ಸಿಯಾಚಿನ್ – ಮೊದಲ ಮಹಿಳಾ ಅಧಿಕಾರಿ
ಸಿಯಾಚಿನ್ – ಮೊದಲ ಮಹಿಳಾ ಅಧಿಕಾರಿ
ಸುದ್ದಿಯಲ್ಲಿ ಏಕಿದೆ? ವಿಶ್ವದ ಅತ್ಯಂತ ಎತ್ತರದ ಕದನ ಭೂಮಿ ಭಾರತದ ಸಿಯಾಚಿನ್ ನೀರ್ಗಲ್ಲಿನ ಕುಮಾರ್ ಪೋಸ್ಟ್ ಯುದ್ಧಭೂಮಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಮೊದಲ ಮಹಿಳಾ ಅಧಿಕಾರಿ ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಅಧಿಕಾರಿ ಕ್ಯಾಪ್ಟನ್ ಶಿವ ಚೌಹಾಣ್ ಆಗಿದ್ದಾರೆ.
ಮುಖ್ಯಾಂಶಗಳು
- ಸೇನೆ ನೀಡಿದ ಕಠಿಣ ತರಬೇತಿಯನ್ನು ಮುಕ್ತಾಯಗೊಳಿಸಿದ ಬಳಿಕ ಶಿವ ಅವರನ್ನು ಸಮುದ್ರ ಮಟ್ಟದಿಂದ 15632 ಅಡಿ ಎತ್ತರದಲ್ಲಿರುವ ಸಿಯಾಚಿನ್‌ನ ಕುಮಾರ್ ಪೋಸ್ಟ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
- ಶಿವ ಚೌಹಾಣ್ ಅವರ ಸಾಧನೆ ಶ್ಲಾಘಿಸಿರುವ ಫೈರ್ ಮತ್ತು ಫ್ಯೂರಿ ಕಾರ್ಪ್ಸ್ ‘ಬ್ರೇಕಿಂಗ್ ದಿ ಗ್ಲಾಸ್ ಸೀಲಿಂಗ್’ ಎಂಬ ಶೀರ್ಷಿಕೆಯನ್ನು ನೀಡಿದೆ.
- ಭೂಮಿ ಮೇಲಿನ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ನೀರ್ಗಲ್ಲು ಆಗಿದ್ದು, ಇಲ್ಲಿ 1984ರಿಂದ ಭಾರತ-ಪಾಕಿಸ್ತಾನ ಕದನ ನಡೆಯುತ್ತಲೇ ಇದೆ.
- ಕಳೆದ ವರ್ಷ 2021ರ ಸೆಪ್ಟೆಂಬರ್ ತಿಂಗಳಲ್ಲಿ 15,632 ಅಡಿ ಎತ್ತರದ ಕುಮಾರ್ ಪೋಸ್ಟ್ ಗೆ ಎಂಟು ಮಂದಿಯ ವಿಶೇಷ ಚೇತನರ ತಂಡ ತಲುಪಿ ವಿಶ್ವದಾಖಲೆ ಮಾಡಿದೆ.
ಶಿವ ಚೌಹಾಣ್
- ರಾಜಸ್ಥಾನ ಮೂಲದ ಇವರು ಉದಯ್‌ಪುರದ ಎನ್‌ಜೆಆರ್ ತಾಂತ್ರಿಕ ಸಂಸ್ಥೆಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಚೆನ್ನೈನಲ್ಲಿ ತರಬೇತಿ ಪಡೆದ ಬಳಿಕ 2012ರ ಮೇನಲ್ಲಿ ಎಂಜಿನಿಯರಿಂಗ್ ರೆಜಿಮೆಂಟ್‌ಗೆ ನಿಯೋಜನೆಗೊಂಡಿದ್ದರು.
ಸಿಯಾಚಿನ್ ನೀರ್ಗಲ್ಲು :
- ಯುರೇಶಿಯನ್ ನೆಲತಟ್ಟೆ ಹಾಗು ಭಾರತ ನೆಲತಟ್ಟೆಯನ್ನು ಬೇರ್ಪಡಿಸುವ ‘ಗ್ರೇಟ್ ಡ್ರೈನೇಜ್ ಡಿವೈಡ್’ ನ ದಕ್ಷಿಣಕ್ಕಿದೆ. ಕರಕೋರಮ್ ನ ಈ ಭೂಭಾಗ ಅತಿ ಹೆಚ್ಚಾಗಿ ಹಿಮನದಿಗಳನ್ನು ಹೊಂದಿರುವ ಕಾರಣ ಇದನ್ನು ಮೂರನೆ ಧ್ರುವ ಎಂದು ಕರೆಯಲಾಗುತ್ತದೆ.
- ಸಲ್ಟಾರೋ ಗುಡ್ಡ ಸಾಲುಗಳ ಪೂರ್ವದಲ್ಲಿದೆ. ಪ್ರಸ್ತುತ ಸಿಯಾಚಿನ್‌ನ ಉಷ್ಣಾಂಶ -31 ಡಿಗ್ರಿ ಸೆ.ನಷ್ಟಿದೆ. ಈ ಮೊದಲು ಸಮುದ್ರಮಟ್ಟದಿಂದ 9000 ಅಡಿ ಎತ್ತರದಲ್ಲಿರುವ ಸಿಯಾಚಿನ್ ಬೇಸ್ ಕ್ಯಾಂಪ್‌ನಲ್ಲಿ ಮಹಿಳಾ ಯೋಧರ ನಿಯೋಜನೆ ಮಾಡಲಾಗಿತ್ತು.
- ಸದ್ಯಕ್ಕೆ ಸಿಯಾಚಿನ್ ನಲ್ಲಿ ಭಾರತದ್ದೇ ಮೇಲುಗೈ. ಪಾಕಿಸ್ತಾನದ ನೆಲೆಗಳು ಮೂರು ಸಾವಿರ ಅಡಿ ಕೆಳಗೆ ಇವೆ. ಸಿಯಾಚಿನ್ ನಲ್ಲಿನ ಸೇನೆ ನಿಯೋಜನೆ ತೆಗೆಯಬೇಕು ಎಂದು ಭಾರತ ಮತ್ತು ಪಾಕಿಸ್ತಾನ ಮಧ್ಯೆ ಹಲವು ಸುತ್ತಿನ ಮಾತುಕತೆ ಆಗಿದೆ. ದ್ವಿಪಕ್ಷೀಯ ಮಾತುಕತೆಗಳು ವಿಫಲವಾಗಿವೆ.
ಭಾರತಕ್ಕೆ ಸಿಯಾಚಿನ್ ಏಕೆ ಮುಖ್ಯ
- ವ್ಯೂಹಾತ್ಮಕ ಕಾರಣಕ್ಕೆ ಸಿಯಾಚಿನ್ ಬಹಳ ಮುಖ್ಯವಾದದ್ದು. ಎಲ್ಲಿಯ ತನಕ ಇದರ ಮೇಲೆ ಭಾರತದ ಹತೋಟಿ ಇರುತ್ತದೋ ಅಲ್ಲಿಯವರೆಗೆ ಪಾಕಿಸ್ತಾನಿ ಸೇನೆಗೆ ಚೀನಿಯರ ಜತೆ ಸಂಪರ್ಕ ಸಾಧ್ಯವಿಲ್ಲ. ಆ ಮೂಲಕ ಲಡಾಖ್ ಗೆ ಯಾವುದೇ ಆತಂಕ ಎದುರಾಗುವುದಿಲ್ಲ. ಚೀನಾ ನಿಯಂತ್ರಣದಲ್ಲಿ ಇರುವ ಶಾಕ್ಸಗಂ ಕಣಿವೆ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಬಾಲ್ಟಿಸ್ತಾನ್ ಮಧ್ಯೆ ಈ ಸ್ಥಳವು ತಡೆಯಂತೆ ಇದೆ.
ಫೈರ್ ಅಂಡ್ ಫ್ಯೂರಿ ಕಾರ್ಪ್ಸ್
XIV ಕಾರ್ಪ್ಸ್ ಅಥವಾ ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಭಾರತೀಯ ಸೇನೆಯ ಒಂದು ದಳವಾಗಿದೆ. ಇದು ಸೇನೆಯ ಉಧಂಪುರ ಮೂಲದ ಉತ್ತರ ಕಮಾಂಡ್‌ನ ಒಂದು ಭಾಗವಾಗಿದೆ. ಕಾರ್ಪ್ಸ್ ಕಾರ್ಗಿಲ್-ಲೇಹ್ ಉದ್ದಕ್ಕೂ ಮಿಲಿಟರಿ ನಿಯೋಜನೆಯನ್ನು, ಚೀನಾ, ಪಾಕಿಸ್ತಾನದ ಗಡಿಗಳನ್ನು ಮತ್ತು ಸಿಯಾಚಿನ್ ಗ್ಲೇಸಿಯರ್ ಅನ್ನು ಸಹ ಕಾಪಾಡುತ್ತದೆ. 1999 ರಲ್ಲಿ ಸ್ಥಾಪಿಸಲಾಯಿತು. ಲೇಹ್ ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. ಈ ತಂಡ ಉತ್ತರ ಸೇನೆ ಅಡಿಯಲ್ಲಿ ಕೆಲಸ ಮಾಡುತ್ತದೆ