Published on: January 5, 2023

ನೋಟು ಅಮಾನ್ಯೀಕರಣ ನ್ಯಾಯ ಸಮ್ಮತವಾಗಿದೆ

ನೋಟು ಅಮಾನ್ಯೀಕರಣ ನ್ಯಾಯ ಸಮ್ಮತವಾಗಿದೆ

ಸುದ್ದಿಯಲ್ಲಿ ಏಕಿದೆ? ನೋಟುಗಳ ರದ್ದು  ತಪ್ಪಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಈ ಸಂಬಂಧ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದೆ.

ಮುಖ್ಯಾಂಶಗಳು

  • ನ್ಯಾಯಮೂರ್ತಿ ಎಸ್‌.ಎ. ನಜೀರ್‌ ನೇತೃತ್ವದ ಐವರು ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ಪೀಠವು ತೀರ್ಪು ಪ್ರಕಟಿಸಿದೆ.
  • ಕೇಂದ್ರದ ನೋಟ್‌ ಬ್ಯಾನ್‌ ನಿರ್ಧಾರಕ್ಕೆ ಪೀಠ 4:1 ಅನುಪಾತದಲ್ಲಿ ತೀರ್ಪು ಪ್ರಕಟಿಸಿದೆ.
  • ಆರ್‌ಬಿಐ ಒಪ್ಪಿಗೆ ಪಡೆದೇ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ತಜ್ಞರ ಸಲಹೆ ಪಡೆದು ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
  • ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಭಿನ್ನಾಭಿಪ್ರಾಯದ ತೀರ್ಪು ನೀಡಿ, ನೋಟು ರದ್ದತಿಯನ್ನು ಸಂಸತ್ತಿನ ಕಾಯಿದೆಯ ಮೂಲಕ ಕಾರ್ಯಗತಗೊಳಿಸಬಹುದಿತ್ತು, ಇದು ಸರ್ಕಾರದಿಂದ ಅಲ್ಲ ಎಂದು ಹೇಳಿದ್ದಾರೆ.

ಹಿನ್ನೆಲೆ

  • 2016ರಲ್ಲಿ ಕೇಂದ್ರ ಸರ್ಕಾರ 500 ರು. ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ ಘೋಷಿಸಿದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿದ್ದ 58 ಅರ್ಜಿಗಳ ಕುರಿತು ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ ಈ ತೀರ್ಪು ನೀಡಿದೆ.
  • ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ, ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ, ನೋಟುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ, ಸ್ವಯಂ ಯಾವುದೇ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಆರ್‌ಬಿಐನ ಕೇಂದ್ರೀಯ ಮಂಡಳಿಯ ಶಿಫಾರಸುಗಳ ಅನ್ವಯ ಮಾತ್ರವೇ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳಬಹುದು. ಹೀಗಾಗಿ 2016ರಲ್ಲಿ ಕೇಂದ್ರ ಸರ್ಕಾರ ಘೋಷಿಸಿದ ಅಪನಗದೀಕರಣ ನೀತಿ ತಪ್ಪು ನಿರ್ಧಾರ ಎಂದು ವಾದಿಸಿದ್ದರು.

ಅಮಾನ್ಯೀಕರಣ ನಿರ್ಧಾರದ ಬಗ್ಗೆ ಕೇಂದ್ರದ ನಿಲುವು

ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ, ಈ ಪ್ರಕರಣದಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಸರಿಯಲ್ಲ ಎಂದಿತ್ತು. ಜೊತೆಗೆ ಸಮಯವನ್ನು ಹಿಂದಕ್ಕೆ ಸರಿಸುವ, ಇಂಥ ಯತ್ನಗಳಿಂದ ಯಾರಿಗೂ ಯಾವುದೇ ಪರಿಹಾರ ನೀಡುವುದು ಸಾಧ್ಯವಿಲ್ಲ ಎಂದಿತ್ತು. ಅಲ್ಲದೆ ನಕಲಿ ನೋಟು ತಡೆ, ಭಯೋತ್ಪಾದನೆಗೆ ಹಣ ಪೂರೈಕೆ ಜಾಲಕ್ಕೆ ಕಡಿವಾಣ, ಕಪ್ಪುಹಣ ಮತ್ತು ತೆರಿಗೆ ವಂಚನೆ ತಡೆಯಲು ಅಪನಗದೀಕರಣ ಘೋಷಿಸಲಾಗಿದೆ. ಇದು ಸಾಕಷ್ಟು ಯೋಚಿಸಿ ಕೈಗೊಂಡ ನಿರ್ಧಾರವಾಗಿತ್ತು ಎಂದು ಸ್ಪಷ್ಟಪಡಿಸಿತ್ತು.

ಅಮಾನ್ಯೀಕರಣ ನಿರ್ಧಾರದ ಬಗ್ಗೆ RBI ನ ನಿಲುವು

ನೋಟು ನಿಷೇಧದಿಂದ ನಾಗರೀಕರು ಕೆಲ ಕಾಲ ಸಮಸ್ಯೆಗಳನ್ನು ಎದುರಿಸಿದ್ದರು, ಆದರೆ ದೇಶಕಟ್ಟುವ ಕೆಲಸದಲ್ಲಿ ಇದು ಅನಿವಾರ್ಯ. ಆದರೆ, ಇಂಥ ಸಮಸ್ಯೆಗಳನ್ನು ಬಳಿಕ ಲಭ್ಯ ವ್ಯವಸ್ಥೆಯ ಮೂಲಕ ಪರಿಹರಿಸಲಾಯಿತು’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌, ನ್ಯಾಯಾಲಯಕ್ಕೆ ಮಾಹಿತಿ ನೀಡಿತು.

ನೋಟು ಅಮಾನ್ಯೀಕರಣ ಎಂದರೇನು?

ಡಿಮಾನಿಟೈಸೇಷನ್‌ ಅಥವಾ ಅಪನಗದೀಕರಣ ಎನ್ನುವುದು ಕರೆನ್ಸಿಯ ಕಾನೂನು ಮಾನ್ಯತೆಯನ್ನು ರದ್ದುಗೊಳಿಸುವ ಪ್ರಕ್ರಿಯೆಯಾಗಿದೆ. ರಾಷ್ಟ್ರೀಯ ಕರೆನ್ಸಿಯ ಬದಲಾವಣೆ ಇದ್ದಾಗಲೆಲ್ಲಾ ಅದು ಸಂಭವಿಸುತ್ತದೆ.

ಒಂದು ದೇಶ ಏಕೆ ನೋಟು ಅಮಾನ್ಯೀಕರಣ ಘೋಷಣೆ ಮಾಡುತ್ತದೆ?

ಕರೆನ್ಸಿಯ ಮೌಲ್ಯವನ್ನು ಸ್ಥಿರಗೊಳಿಸಲು ಅಥವಾ ಹಣದುಬ್ಬರವನ್ನು ಎದುರಿಸಲು ಅಪನದೀಕರಣದ ಅಸ್ತ್ರವನ್ನು ಬಳಸಲಾಗುತ್ತದೆ.

ಅನುಕೂಲಗಳು

ಇದರ ಮುಖ್ಯ ಪ್ರಯೋಜನವೆಂದರೆ ಅಪರಾಧ ಚಟುವಟಿಕೆಯನ್ನು ಮೊಟಕುಗೊಳಿಸುವುದು. ಇದರಿಂದ ಕಾಳಸಂತೆಕೋರರು ತಮ್ಮ ಬಳಿ ಇರುವ ಕಪ್ಪು ಹಣವನ್ನು ಬಿಳಿಯ ಹಣವನ್ನಾಗಿ ಪರಿವರ್ತಿಸಲು ಸಾಧ್ಯವಾಗುವುದಿಲ್ಲ. ಇದು ನಕಲಿ ನೋಟುಗಳ ತಯಾರಿಕೆಗೆ ಕಡಿವಾಣ ಹಾಕುತ್ತದೆ. ತೆರಿಗೆ ವಂಚನೆಯನ್ನು ತಗ್ಗಿಸಲಿದೆ. ಅಂತಿಮವಾಗಿ, ಇದು ಭೌತಿಕ ಕರೆನ್ಸಿಯ ಚಲಾವಣೆಯನ್ನು ನಿಧಾನಗೊಳಿಸುವ ಮೂಲಕ ಡಿಜಿಟಲ್ ಕರೆನ್ಸಿ ಯುಗಕ್ಕೆ ಕಾರಣವಾಗಬಹುದು.

ಅನಾನುಕೂಲಗಳು

ಮುಖ್ಯ ಅನಾನುಕೂಲವೆಂದರೆ ಹೊಸ ಕರೆನ್ಸಿಯನ್ನು ಮುದ್ರಿಸಲು ತಗುಲುವ ಸಮಯ ಮತ್ತು ಮುದ್ರಿಸಲು ಆಗುವ ವೆಚ್ಚಗಳು. ಅಲ್ಲದೆ, ನೋಟು ಅಮಾನ್ಯ ಮಾಡಿದ ಮತ್ರಕ್ಕೆ ಅಪರಾಧ ಚಟುವಟಿಕೆಯನ್ನು ಕಡಿಮೆ ಮಾಡಲು ಸಾಧ್ಯವಾಗದೇ ಇರಬಹುದು. ಏಕೆಂದರೆ ವಂಚಕರು ಭೌತಿಕ ಕರೆನ್ಸಿಯನ್ನು ಹೊರತುಪಡಿಸಿ ಇತರ ರೂಪಗಳಲ್ಲಿ ಸ್ವತ್ತುಗಳನ್ನು ಹಿಡಿದಿಡಲು ಸಾಕಷ್ಟು ಕಳ್ಳ ಮಾರ್ಗ ಕಂಡುಕೊಳ್ಳಬಹುದು