Published on: March 13, 2023

ನಿಸಾರ್ ಮಿಷನ್

ನಿಸಾರ್ ಮಿಷನ್


ಸುದ್ದಿಯಲ್ಲಿ ಏಕಿದೆ? ನಿಸಾರ್ ಮಿಷನ್ ಎಂಬುದು ಒಂದು ಉಪಗ್ರಹ ಯೋಜನೆ. ಇದನ್ನು ಭಾರತದ ಇಸ್ರೋ ಹಾಗೂ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಜಂಟಿಯಾಗಿ ನಿರ್ಮಿಸಿದೆ.


ಮುಖ್ಯಾಂಶಗಳು

  • 2014ರಲ್ಲಿ ನಾಸಾ ಮತ್ತು ಇಸ್ರೋಗಳು ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಿದ್ದು, ಅದರನ್ವಯ ಜಂಟಿಯಾಗಿ ನಾಸಾ – ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್ (ನಿಸಾರ್) ಅನ್ನು ನಿರ್ಮಿಸಿವೆ.
  • ಈ ಲೋ ಅರ್ತ್ ಆರ್ಬಿಟ್ (ಎಲ್‌ಇಒ) ಉಪಗ್ರಹ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜನವರಿ 2024ರಲ್ಲಿ ಉಡಾವಣೆಗೊಳ್ಳಲಿದೆ.
  • ಈ ಉಪಗ್ರಹ ಕನಿಷ್ಠ ಮೂರು ವರ್ಷಗಳ ಕಾರ್ಯಾಚರಣಾ ಅವಧಿಯನ್ನು ಹೊಂದಿರಲಿದೆ. ನಿಸಾರ್ ಸಂಪೂರ್ಣ ಭೂಮಿಯ ನಕಾಶೆಯನ್ನು ಹನ್ನೆರಡು ದಿನಗಳ ಒಳಗೇ ಚಿತ್ರಿಸಲಿದೆ.
  • ನಾಸಾ ಈ ಉಪಗ್ರಹಕ್ಕೆ ಅಗತ್ಯವಿರುವ ಎಲ್-ಬ್ಯಾಂಡ್ ರೇಡಾರ್, ಜಿಪಿಎಸ್, ಮಾಹಿತಿ ಸಂಗ್ರಹಿಸಲು ಹೆಚ್ಚಿನ ಸಾಮರ್ಥ್ಯದ ಸಾಲಿಡ್-ಸ್ಟೇಟ್ ರೆಕಾರ್ಡರ್, ಹಾಗೂ ಒಂದು ಪೇಲೋಡ್ ಡೇಟಾ ಉಪ ವ್ಯವಸ್ಥೆಗಳನ್ನು ಒದಗಿಸಿದೆ. ಇಸ್ರೋ ಉಪಗ್ರಹದ ಎಸ್-ಬ್ಯಾಂಡ್ ರೇಡಾರ್, ಜಿಯೋಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್ಎಲ್‌ವಿ) ಹಾಗೂ ಸ್ಪೇಸ್‌ಕ್ರಾಫ್ಟ್ ಒದಗಿಸುತ್ತಿದೆ.

ಈ ಉಪಗ್ರಹದ ವಿವರ

  • ಇದು ಭೂಮಿಯ ನಿಯಮಿತವಾದ ಸಮೀಕ್ಷೆ ನಡೆಸುವ ಉಪಗ್ರಹ.
  • ಎಲ್-ಬ್ಯಾಂಡ್ ಹಾಗೂ ಎಸ್-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರೇಡಾರ್ (ಎಸ್ಎಆರ್) ಉಪಕರಣಗಳನ್ನು ಹೊಂದಿದ್ದು, ಇದು ಎರಡೂ ತರಂಗಾಂತರಗಳ ಇಮೇಜಿಂಗ್ ಉಪಗ್ರಹ ಎನಿಸುತ್ತದೆ.
  • ಇದು ಬಾಹ್ಯಾಕಾಶದಿಂದ ಭೂಮಿಯ ನಿಯಮಿತವಾದ ಸಮೀಕ್ಷೆ ನಡೆಸುವ ಉಪಗ್ರಹಗಳಲ್ಲಿ ಎಲ್-ಬ್ಯಾಂಡ್ ಹಾಗೂ ಎಸ್-ಬ್ಯಾಂಡ್ ಎರಡೂ ತರಂಗಾಂತರಗಳನ್ನು ಹೊಂದಿರುವ ಮೊದಲ ಉಪಗ್ರಹವಾಗಿದೆ. ಆ ಮೂಲಕ ನಿಸಾರ್ ಭೂಮಿಯ ಮೇಲಿನ ಅತ್ಯಂತ ಸಣ್ಣದಾದ, ಒಂದು ಸೆಂಟಿಮೀಟರ್‌ಗೂ ಕಡಿಮೆ ಪ್ರದೇಶದಲ್ಲಿನ ಬದಲಾವಣೆಗಳನ್ನೂ ಗುರುತಿಸುವ ಸಾಮರ್ಥ್ಯ ಹೊಂದಿದೆ.
  • ಉಪಗ್ರಹದ ಇನ್ಸ್ಟ್ರುಮೆಂಟ್ ಸ್ಟ್ರಕ್ಚರ್ 39 ಅಡಿಗಳ ಸ್ಟೇಷನರಿ ಆ್ಯಂಟೆನಾ ರಿಫ್ಲೆಕ್ಟರ್ ಹೊಂದಿದ್ದು, ಅದನ್ನು ಚಿನ್ನದ ಲೇಪನ ಹೊಂದಿರುವ ವಯರ್ ಮೆಶ್‌ನಿಂದ ನಿರ್ಮಿಸಲಾಗಿದೆ. ಈ ರಿಫ್ಲೆಕ್ಟರ್ ಕಳುಹಿಸುವ ಮತ್ತು ಸ್ವೀಕರಿಸುವ ರೇಡಾರ್ ಸಂಕೇತಗಳನ್ನು ಪುಷ್ಟೀಕರಿಸಲು ನೆರವಾಗುತ್ತದೆ.
  • ತೂಕ : 2,800 ಕೆಜಿ

ಉದ್ದೇಶ

  • ನಾಸಾಗೆ ತನ್ನ ಜಾಗತಿಕ ವಿಜ್ಞಾನ ಕಾರ್ಯಾಚರಣೆಗಳಿಗಾಗಿ ಎಲ್-ಬ್ಯಾಂಡ್ ಕನಿಷ್ಠ ಮೂರು ವರ್ಷಗಳ ಅವಧಿಗೆ ಅಗತ್ಯವಿದೆ. ಅದೇ ರೀತಿ, ಇಸ್ರೋ ಎಸ್-ಬ್ಯಾಂಡ್ ಅನ್ನು ಕನಿಷ್ಠ ಐದು ವರ್ಷಗಳ ಅವಧಿಗೆ ಬಳಸಿಕೊಳ್ಳಲಿದೆ. ಎಸ್ ಬ್ಯಾಂಡ್ ರೇಡಾರ್‌ಗಳು 8-15 ಸೆಂಟಿಮೀಟರ್ ತರಂಗಾಂತರ ಹಾಗೂ 2-4 ಗಿಗಾ ಹರ್ಟ್ಸ್ ಆವರ್ತನದಲ್ಲಿ ಕಾರ್ಯ ನಿರ್ವಹಿಸುವುದರಿಂದ, ಕಡಿಮೆ ಕ್ಷೀಣಿಸುವ ಸಾಧ್ಯತೆಗಳಿವೆ. ಆದ್ದರಿಂದ ಅವು ಹತ್ತಿರ ಮತ್ತು ದೂರದ ಹವಾಮಾನ ವೀಕ್ಷಣೆಗೆ ಸೂಕ್ತವಾಗುತ್ತವೆ.

ನಿಸಾರ್ ಉಪಯೋಗಗಳು

  • ಒಂದು ಬಾರಿ ಬಾಹ್ಯಾಕಾಶಕ್ಕೆ ಕಳುಹಿಸಿದ ಬಳಿಕ, ನಿಸಾರ್ ಭೂಮಿಯ ಮೇಲ್ಮೈಯ ಕುರಿತು ವಿವರವಾದ ಮಾಹಿತಿ ಒದಗಿಸಿ, ಆ ಮೂಲಕ ಅದರ ಕುರಿತು ಸಂಶೋಧನೆ ನಡೆಸುವ ಸಂಶೋಧಕರಿಗೆ ನೆರವಾಗುತ್ತದೆ.
  • ಈ ಉಪಗ್ರಹ ಜ್ವಾಲಾಮುಖಿ, ಭೂಕಂಪ, ಹಾಗೂ ಭೂಕುಸಿತದಂತಹ ನೈಸರ್ಗಿಕ ವಿಕೋಪಗಳ ಸಂಕೇತವನ್ನು ಮೊದಲೇ ಗುರುತಿಸಲು ನೆರವಾಗುತ್ತದೆ.
  • ಅಂತರ್ಜಲ ಮಟ್ಟವನ್ನು ಲೆಕ್ಕಾಚಾರ ಮಾಡಬಲ್ಲದು, ಹಿಮನದಿಗಳ ಚಲನೆಯನ್ನು ಅಂದಾಜು ಮಾಡಬಲ್ಲದು. ಭೂಮಿಯ ಮೇಲಿರುವ ಕಾಡು ಮತ್ತು ಕೃಷಿ ಭೂಮಿಯನ್ನು ಗಮನಿಸಿ, ಕಾರ್ಬನ್ ಎಕ್ಸ್‌ಚೇಂಜ್ ಕುರಿತ ನಮ್ಮ ಜ್ಞಾನವನ್ನು ಹೆಚ್ಚಿಸಬಲ್ಲದು.
  • ಇಸ್ರೋ ವಿವಿಧ ಉದ್ದೇಶಗಳಿಗೆ ನಿಸಾರ್ ಉಪಗ್ರಹದ ಪ್ರಯೋಜನ ಪಡೆದುಕೊಳ್ಳಲಿದೆ. ಅದರಲ್ಲಿ ಕೃಷಿ ಭೂಮಿಯ ನಕ್ಷೆ ತಯಾರಿಸುವಿಕೆ, ಹಿಮಾಲಯದಲ್ಲಿ ಹಿಮನದಿಗಳ ಚಲನೆಯನ್ನು ಗಮನಿಸುವುದು, ಭೂಕುಸಿತದ ಅಪಾಯವಿರುವ ಪ್ರದೇಶಗಳ ಸರ್ವೆ ನಡೆಸುವುದು ಹಾಗೂ ಕರಾವಳಿ ತೀರದಲ್ಲಿನ ಬದಲಾವಣೆಗಳನ್ನು ಗಮನಿಸಲು ಸಹಾಯವಾಗುತ್ತದೆ. ಸಿಂಥೆಟಿಕ್ ಅಪರ್ಚರ್ ರೇಡಾರ್ (ಎಸ್ಎಆರ್) ಬಳಸುವ ಮೂಲಕ ನಿಸಾರ್ ಅತ್ಯಂತ ಹೆಚ್ಚಿನ ಗುಣಮಟ್ಟದ ಚಿತ್ರಗಳನ್ನು ತೆಗೆಯಲಿದೆ.
  • ಎಸ್ಎಆರ್ ಮೋಡದ ಮೂಲಕವೂ ನೋಡುವ ಸಾಮರ್ಥ್ಯ ಹೊಂದಿದ್ದು, ಎಂತಹ ಹವಾಮಾನ ಸಂದರ್ಭದಲ್ಲೂ, ಹಗಲು ರಾತ್ರಿ ಎರಡು ಹೊತ್ತಿನಲ್ಲೂ ಮಾಹಿತಿ ಸಂಗ್ರಹಿಸಬಲ್ಲದು.