Published on: March 23, 2023
ವಿಶ್ವ ಜಲ ದಿನ 2023
ವಿಶ್ವ ಜಲ ದಿನ 2023
ಸುದ್ದಿಯಲ್ಲಿ ಏಕಿದೆ? ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ.
ಮುಖ್ಯಾಂಶಗಳು
- ಥೀಮ್: ಈ ವರ್ಷ ವಿಶ್ವ ಜಲ ದಿನದ ವಿಷಯವು ‘ನೀರು ಮತ್ತು ನೈರ್ಮಲ್ಯ ಬಿಕ್ಕಟ್ಟನ್ನು ಪರಿಹರಿಸಲು ಬದಲಾವಣೆಯನ್ನು ವೇಗಗೊಳಿಸುವುದು’. ಇದು ಜಾಗತಿಕ ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ಒತ್ತಿಹೇಳುತ್ತದೆ.
ಉದ್ದೇಶ
- ನೀರಿನ ಮಹತ್ವವನ್ನು ಜಗತ್ತಿಗೆ ತಿಳಿಸಲು ಮತ್ತು ಜಾಗತಿಕ ನೀರಿನ ಬಿಕ್ಕಟ್ಟಿನ ಬಗ್ಗೆ ಜಾಗೃತಿ ಮೂಡಿಸುವುದು. ಸಿಹಿನೀರಿನ ಸಂಪನ್ಮೂಲಗಳನ್ನು ಸುಸ್ಥಿರವಾಗಿ ನಿರ್ವಹಿಸಲು ಮತ್ತು ನೀರಿನ ಮಾಲಿನ್ಯ, ನೀರಿನ ಕೊರತೆ, ಅಸಮರ್ಪಕ ನೀರು ಮತ್ತು ನೈರ್ಮಲ್ಯದ ಕೊರತೆಯಂತಹ ಜಲ ಸಂಬಂಧಿತ ಸಮಸ್ಯೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಜನರನ್ನು ಜಾಗೃತಗೊಳಿಸುವುದು ಮತ್ತು ಪ್ರೇರೇಪಿಸುವುದು
- ಈ ಆಚರಣೆಯ ಹಿಂದಿನ ಕಲ್ಪನೆ : “ಸುಸ್ಥಿರ ಅಭಿವೃದ್ಧಿ ಗುರಿ (SDG) 6: 2030 ರ ವೇಳೆಗೆ ಎಲ್ಲರಿಗೂ ನೀರು ಮತ್ತು ನೈರ್ಮಲ್ಯದ ಸಾಧನೆಯನ್ನು ಬೆಂಬಲ ನೀಡುವುದಾಗಿದೆ”.
ಇತಿಹಾಸ
- ವಿಶ್ವ ಜಲ ದಿನವನ್ನು ಆಚರಿಸುವ ನಿರ್ಣಯವನ್ನು ಮೊದಲು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು 1992ರ ಡಿಸೆಂಬರ್ 22 ರಂದು ಅಂಗೀಕರಿಸಿತು. ನಂತರ ಮಾರ್ಚ್ 22 ಅನ್ನು ವಿಶ್ವ ಜಲ ದಿನವೆಂದು ಘೋಷಿಸಲಾಯಿತು. ಅಂದಿನಿಂದ ಪ್ರಪಂಚದಾದ್ಯಂತ ವಿಶ್ವ ಜಲ ದಿನ ಆಚರಿಸಲಾಗುತ್ತದೆ. ಮೊದಲ ವಿಶ್ವ ಜಲ ದಿನವನ್ನು 1993 ರಲ್ಲಿ ಆಚರಿಸಲಾಯಿತು.
ಮಹತ್ವ
- ‘ನೀರು ಜೀವನದ ಅಮೃತ’ ಎಂಬುದು ಎಲ್ಲರಿಗೂ ಗೊತ್ತು. ಕುಡಿಯುವುದರಿಂದ ಹಿಡಿದು ಶುಚಿಗೊಳಿಸುವಿಕೆ ಮತ್ತು ಇತರ ವಿಷಯಗಳವರೆಗೆ, ನೀರಿನ ಅವಶ್ಯಕತೆ ಇದೆ. ಅನೇಕರು ದಿನದ 24 ಗಂಟೆ ಹರಿಯುವ ನೀರನ್ನು ಹೊಂದುವ ಸವಲತ್ತು ಪಡೆದಿದ್ದರೂ, ಪ್ರಪಂಚದಾದ್ಯಂತ ಯಾವುದೇ ಪ್ರಮಾಣದ ನೀರು ಸಿಗದ ದೊಡ್ಡ ಜನಸಂಖ್ಯೆಯಿದೆ.
- ವಿಶ್ವಸಂಸ್ಥೆಯ ಪ್ರಕಾರ, ಪ್ರಸ್ತುತ, ನಾಲ್ಕು ಜನರಲ್ಲಿ ಒಬ್ಬರು ( ಅಂದರೆ ವಿಶ್ವದಾದ್ಯಂತ ಎರಡು ಶತಕೋಟಿ ಜನರು) – ಸುರಕ್ಷಿತ ಕುಡಿಯುವ ನೀರಿನ ಕೊರತೆ ಎದುರಿಸುತ್ತಿದ್ದಾರೆ.
- ಪರಿಶುದ್ಧ ಕುಡಿಯುವ ನೀರಿಲ್ಲದ ಕಾರಣ ವಾರ್ಷಿಕವಾಗಿ ಸುಮಾರು 1.4 ಮಿಲಿಯನ್ ಜನರು ಸಾಯುತ್ತಾರೆ. 74 ಮಿಲಿಯನ್ ಜನರು ಕಳಪೆ ನೀರು, ನೈರ್ಮಲ್ಯ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಕಾಯಿಲೆಗಳ ಕಾರಣ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಒಇಸಿಡಿಯ ಅಂದಾಜಿನ ಪ್ರಕಾರ, 2050 ರ ವೇಳೆಗೆ ಜಾಗತಿಕ ನೀರಿನ ಬೇಡಿಕೆ (ನೀರಿನ ಹಿಂತೆಗೆದುಕೊಳ್ಳುವಿಕೆಯಲ್ಲಿ) ಶೇಕಡ 55 ಹೆಚ್ಚಾಗುತ್ತದೆ.
ನೀರಿನ ಮಹತ್ವ ಸಾರಲು ವಿಶ್ವಸಂಸ್ಥೆಯ ಕಾರ್ಯಕ್ರಮ
- ವಿಶ್ವಸಂಸ್ಥೆಯು ʻಯುಎನ್ 2023 ವಾಟರ್ ಕಾನ್ಫರೆನ್ಸ್ʼ ಅನ್ನು ಸಹ ಪ್ರಾರಂಭಿಸುತ್ತಿದೆ. ಯುನೈಟೆಡ್ ಸ್ಟೇಟ್ಸ್‌ನ ನ್ಯೂಯಾರ್ಕ್‌ನಲ್ಲಿ ಮಾರ್ಚ್ 22-24 ರವರೆಗೆ ಈ ಕಾನ್ಫರೆನ್ಸ್ ನಡೆಯುತ್ತಿದ್ದು, ನೀರಿನ ಸುತ್ತ ಜಗತ್ತನ್ನು ಒಂದುಗೂಡಿಸಲು ಸುಮಾರು 50 ಈ ರೀತಿಯ ಕಾರ್ಯಕ್ರಮ ಆಯೋಜಿಸಲು ಮುಂದಾಗಿದೆ. ಅದರಲ್ಲಿ ಇದು ಮೊದಲ ಕಾರ್ಯಕ್ರಮವಾಗಿದೆ.