Published on: March 27, 2023
ಚುಟುಕು ಸಮಾಚಾರ:27 ಮಾರ್ಚ್ 2023
ಚುಟುಕು ಸಮಾಚಾರ:27 ಮಾರ್ಚ್ 2023
- ಮೊದಲ ಬಾರಿಗೆ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ, ‘ಶ್ರವಣದೋಷ ಮುಕ್ತ ಕರ್ನಾಟಕ’ ಅಡಿಯಲ್ಲಿ ವೆಚ್ಚದಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಯೋಜನೆಗೆ 2022-23ನೇ ಸಾಲಿನಲ್ಲಿ 32 ಕೋಟಿ ರೂ. ಅನುದಾನ ನೀಡಲಾಗಿದ್ದು, ಸಲಕರಣೆ ಮತ್ತು ಸಾಧನ ಸಾಮಗ್ರಿ ಒದಗಿಸಲಾಗುತ್ತಿದೆ. ‘ಶ್ರವಣದೋಷ ಮುಕ್ತಕರ್ನಾಟಕ’ ಘೋಷವಾಕ್ಯದಡಿ ಕಾಕ್ಲಿಯರ್ ಇಂಪ್ಲಾಂಟ್ ಯೋಜನೆಯನ್ನು ಜಾರಿ ಮಾಡಲಾಗಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಯೋಜನೆ ಅನುಷ್ಠಾನಗೊಳಿಸಲಾಗಿದೆ.
- ರಾಷ್ಟ್ರೀಯ ರಕ್ಷಾ ವಿಶ್ವ ವಿದ್ಯಾಲಯದ ಕರ್ನಾಟಕ ಅಧ್ಯಯನ ಕೇಂದ್ರವನ್ನು ಶಿವಮೊಗ್ಗ ನಗರದಲ್ಲಿ ಸ್ಥಾಪಿಸಲು ಕರ್ನಾಟಕ ಸರಕಾರ ಹಾಗೂ ರಾಷ್ಟ್ರೀಯ ರಕ್ಷಾ ವಿಶ್ವ ವಿದ್ಯಾಲಯ ಒಡಂಬಡಿಕೆ ಮಾಡಿಕೊಂಡಿವೆ. ಈ ಮೂಲಕ ದಕ್ಷಿಣ ಭಾರತದಲ್ಲಿ, ರಕ್ಷಾ ವಿಶ್ವ ವಿದ್ಯಾಲಯದ ಅಧ್ಯಯನ ಕೇಂದ್ರ ಹೊಂದಿದ ಮೂರನೇ ರಾಜ್ಯ ಕರ್ನಾಟಕವಾಗಿದೆ.
- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬ್ರಿಟನ್ ಮೂಲದ 36 ಸ್ಯಾಟಲೈಟ್ಗಳೊಂದಿಗೆ ಭಾರತದ ಅತಿದೊಡ್ಡ ಲಾಂಚ್ ವೆಹಿಕಲ್ ಮಾರ್ಕ್-III (ಎಲ್ ವಿ ಎಮ್ 3) ರಾಕೆಟ್/ ಒನ್ ವೆಬ್ ಇಂಡಿಯಾ -2 ಮಿಷನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇಸ್ರೊದ ವಾಣಿಜ್ಯ ಘಟಕ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ಬ್ರಿಟನ್ನ ನೆಟ್ವರ್ಕ್ ಆಕ್ಸೆಸ್ ಅಸೋಸಿಯೇಟ್ಸ್ ಲಿಮಿಟೆಡ್ (ಒನ್ವೆಬ್ ಗ್ರೂಪ್ ಕಂಪನಿ) ಸಂಸ್ಥೆಯೊಂದಿಗಿನ ಒಪ್ಪಂದದಂತೆ ನಡೆಸಿದ ಎರಡನೇ ಉಡಾವಣಾ ಕಾರ್ಯಾಚರಣೆ ಇದಾಗಿದೆ
- ‘ಗಿಟಾರ್ ಫಿಶ್’: ಕಾಸರಕೋಡು ಕಡಲತೀರದಲ್ಲಿ ಅಪರೂಪದ ‘ಗಿಟಾರ್ ಫಿಶ್’ ಪತ್ತೆಯಾಗಿದೆ. ಇದು ಚಿಕ್ಕ ಶಾರ್ಕ್ ಗಳಲ್ಲಿ ಒಂದಾಗಿದ್ದು, ಸುಮಾರು 1 ಅಡಿ ಉದ್ದವನ್ನು ಹೊಂದಿದೆ. ಕಡಲತೀರಗಳಲ್ಲಿ ಅಪರೂಪವಾಗಿ ಈ ಮೀನುಗಳು ಕಂಡು ಬರುತ್ತವೆ. ಇದು ನೀರಿನ ಆಳದಲ್ಲಿ ವಾಸಿಸುತ್ತದೆ ನಾಚಿಕೆ ಸ್ವಭಾವವುಳ್ಳ ಮೀನು ಇದಾಗಿದ್ದು,ಫೈಟೊಪ್ಲಾಂಕ್ಟನ್ ಮತ್ತು ಝೂಪ್ಲ್ಯಾಂಕ್ಟನ್ಗಳನ್ನು ತಿನ್ನುತ್ತದೆ. ಈ ಮೀನುಗಳು ಬೇಟೆಯಾಡಲು ದೇಹದಿಂದಲೇ ವಿದ್ಯುತ್ ರೀತಿಯ ತರಂಗಗಳನ್ನು ಉತ್ಪಾದಿಸಿ ಹೊರಬಿಡುತ್ತವೆ. ಸಮುದ್ರದ ಆಳದಲ್ಲಿ ವಾಸಿಸುವ ಮೀನುಗಳು, ಮೇಲೆ ಬರುವುದು ಅತ್ಯಂತ ವಿರಳ ಸಂಗತಿಯಾಗಿದೆ.
- ವಿಜ್ಞಾನ, ಸಂಶೋಧನೆ ಮತ್ತು ಆವಿಷ್ಕಾರ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಮೂಲಕ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇರಳ ರಾಜ್ಯದಲ್ಲಿ ಮೂರು ವಿಜ್ಞಾನ ಪಾರ್ಕ್ ಸ್ಥಾಪಿಸಲು ಕೇರಳ ಸರ್ಕಾರ ಅನುಮೋದನೆ ನೀಡಿದೆ. ಇದರಿಂದ ಶೈಕ್ಷಣಿಕ ಸಂಸ್ಥೆಗಳು, ಹೈ–ಟೆಕ್ ಕಂಪನಿಗಳು, ಉದ್ಯಮಿಗಳು ಮತ್ತು ಸ್ಟಾರ್ಟಪ್ಗಳಿಗೆ ನೆರವಾಗಲಿದೆ. ರೂ. 600 ಕೋಟಿ ವೆಚ್ಚದಲ್ಲಿ ಮೂರು ವಿಜ್ಞಾನ ಪಾರ್ಕ್ ಆರಂಭಿಸಲು ನಿರ್ಧರಿಸಲಾಗಿದೆ. ವಿಜ್ಞಾನ ಪಾರ್ಕ್‌ಮೂಲಕ ನೂತನ ತಂತ್ರಜ್ಞಾನ ಮತ್ತು ಉತ್ಪನ್ನ ಅಭಿವೃದ್ಧಿಗೆ ವಿಶ್ವದರ್ಜೆಯ ಪ್ರತಿಭೆಗಳನ್ನು ಸೆಳೆಯಲು ಕೇರಳ ಯೋಜನೆ ರೂಪಿಸುತ್ತಿದೆ.
- ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ನ 52 ಕೆ.ಜಿ. ವಿಭಾಗದಲ್ಲಿ ವಿಯೆಟ್ನಾಂನ ಗುಯೆನ್ ಥಿ ಟಾಮ್ ಅವರನ್ನು ಮಣಿಸಿದ ಭಾರತದ ನಿಖತ್ ಜರೀನ್, ಎರಡನೇ ಬಾರಿಗೆ ಚಾಂಪಿಯನ್ ಎನಿಸಿದರು. ಈ ಹಿಂದೆ ಮೇರಿ ಕೋಮ್ ಅವರು ಆರು ಬಾರಿ (2002, 2005, 2006, 2008, 2010 ಹಾಗೂ 2018) ವಿಶ್ವ ಚಾಂಪಿಯನ್ ಆಗಿದ್ದರು. ಅವರನ್ನು ಹೊರತುಪಡಿಸಿ ಒಂದಕ್ಕಿಂತ ಹೆಚ್ಚು ಸಲ ಚಾಂಪಿಯನ್ ಆದ ಬಾಕ್ಸರ್ ಎಂಬ ಖ್ಯಾತಿ ಇದೀಗ ನಿಖತ್ ಅವರದ್ದಾಯಿತು. ಸರಿತಾ ದೇವಿ (2006), ಜೆನ್ನಿ ಆರ್.ಎಲ್. (2006) ಹಾಗೂ ಲೇಖಾ ಕೆ.ಸಿ. (2006) ಅವರು ಒಂದೊಂದು ಬಾರಿ ಚಾಂಪಿಯನ್ ಆಗಿದ್ದರು.