Published on: June 4, 2023
ಗ್ಯಾರಂಟಿ ಯೋಜನೆಗಳು
ಗ್ಯಾರಂಟಿ ಯೋಜನೆಗಳು
ಸುದ್ದಿಯಲ್ಲಿ ಏಕಿದೆ? ಕರ್ನಾಟಕ ಸರ್ಕಾರ 5 ಗ್ಯಾರಂಟಿ ಯೋಜನೆಗಳಾದ ಯುವನಿಧಿ, ಶಕ್ತಿ, ಗೃಹ ಲಕ್ಷ್ಮಿ, ಅನ್ನ ಭಾಗ್ಯ, ಗೃಹಜ್ಯೋತಿ ಯೋಜನೆಗಳನ್ನು ಘೋಷಿಸಿದೆ.
ಮುಖ್ಯಾಂಶಗಳು
ಕರ್ನಾಟಕ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ಘೋಷಿಸಿದ್ದ 5 ಗ್ಯಾರಂಟಿಗಳನ್ನು ಜಾರಿಗೊಳಿಸಲು ಕ್ಯಾಬಿನೆಟ್ ಸಭೆಯಲ್ಲಿ ಸಮ್ಮತಿ ನೀಡಲಾಗಿದೆ.
ಯುವನಿಧಿ ಯೋಜನೆ:
- 2022-23ನೇ ಶೈಕ್ಷಣಿಕ ವರ್ಷದಲ್ಲಿ ವೃತ್ತಿಪರ ಕೋರ್ಸುಗಳೂ ಸೇರಿದಂತೆ ಎಲ್ಲ ವಿಧದ ಪದವೀಧರ ಯುವಕ-ಯುವತಿಯರು, ಡಿಪ್ಲೊಮಾ ಹೊಂದಿದವರಿಗೆ ಈ ಯೋಜನೆ ಅನ್ವಯಿಸುತ್ತದೆ.
- ಪದವಿ ಪಡೆದು 180 ದಿನಗಳಾದರೂ ಉದ್ಯೋಗ ದೊರೆಯದ ಕನ್ನಡಿಗ ಪದವೀಧರರಿಗೆ 24 ತಿಂಗಳ ಅವಧಿಗೆ ಮಾಸಿಕ 3000 ರೂ. ಹಾಗೂ ಡಿಪ್ಲೊಮಾದಾರರಿಗೆ ಮಾಸಿಕ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು.
- 6 ತಿಂಗಳ ಒಳಗೆ ಖಾಸಗಿ/ಸರ್ಕಾರಿ ಕೆಲಸ ದೊರೆತರೆ ಅಥವಾ ಅರ್ಜಿ ಸಲ್ಲಿಸಿದ ನಂತರ ಕೆಲಸ ಸಿಕ್ಕರೂ ಕೂಡ ಅಂತಹವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.
- ಎರಡು ವರ್ಷಗಳವರೆಗೆ ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯಬಹುದು. ಎರಡು ವರ್ಷಕ್ಕೂ ಮೊದಲೇ ಉದ್ಯೋಗ ದೊರೆತರೆ ಭತ್ಯೆ ಪಾವತಿ ಸ್ಥಗಿತಗೊಳಿಸಲಾಗುತ್ತದೆ.
- ನಿರುದ್ಯೋಗ ಸ್ಥಿತಿಯ ಕುರಿತು ಸ್ವತಂತ್ರ ಪರಿಶೀಲನೆ ನಡೆಸಲಾಗುತ್ತದೆ. ಉದ್ಯೋಗ ದೊರಕಿದ ಕುರಿತು ತಪ್ಪು ಮಾಹಿತಿ ನೀಡಿದರೆ ಅಥವಾ ಘೋಷಣೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ.
- ನೇರ ನಗದು ಪಾವತಿ ವ್ಯವಸ್ಥೆ ಮೂಲಕ ನಿರುದ್ಯೋಗ ಭತ್ಯೆ ಪಾವತಿ ಮಾಡಲಾಗುತ್ತದೆ. ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಯಾರಿಗೆಲ್ಲ ಭತ್ಯೆ ಇಲ್ಲ?:
- ಪದವಿ ಅಥವಾ ಡಿಪ್ಲೊಮಾ ನಂತರ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆದಿರುವವರು.
- ಶಿಶಿಕ್ಷು (ಅಪ್ರೆಂಟಿಸ್‌ಶಿಪ್) ವೇತನ ಪಡೆಯುತ್ತಿರುವವರು. *
- ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗ ಪಡೆದಿರುವವರು.
- ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಗಳಡಿ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿದವರು.
ಶಕ್ತಿ ಯೋಜನೆ:
- ವಿದ್ಯಾರ್ಥಿನಿಯರೂ ಸೇರಿದಂತೆ ಎಲ್ಲ ವರ್ಗಗಳ ಮಹಿಳೆಯರು ಹವಾ ನಿಯಂತ್ರಿತ ಬಸ್‌ಗಳು ಮತ್ತು ಐಷಾರಾಮಿ ಬಸ್‌ಗಳನ್ನು ಹೊರತುಪಡಿಸಿ ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೂ ಪ್ರಯಾಣ ಮಾಡಬಹುದು.
- ಜೂನ್ 11 ರಿಂ ದ ಈ ಯೋಜನೆಗೆ ಚಾಲನೆ ನೀಡಲಾಗುವುದು. ಈ ಯೋಜನೆಯು ಶೇ. 94 ರಷ್ಟು ಮಹಿಳಾ ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ.
- ಬಸ್ಗಳಲ್ಲಿ ಶೇ . 50 ರಷ್ಟು ಸೀಟುಗಳನ್ನು ಪುರುಷರಿಗೆ ಮೀಸಲಿರಿಸಲಾಗುವುದು.
- ಆ ಮೂಲಕ ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪುರುಷರಿಗೆ ಆಸನ (ಸೀಟ್) ಮೀಸಲಿಡುವ ವ್ಯವಸ್ಥೆ ಜಾರಿಯಾಗುತ್ತಿದೆ.
- ಉಚಿತ ಬಸ್ ಪ್ರಯಣದ ಸವಲತ್ತನ್ನು ತೃತೀಯ ಲಿಂಗಿಗಳಿಗೂ ಒದಗಿಸಲಾಗಿದೆ.
- ರಾಜ್ಯ ಸಾರಿಗೆ ಬಸ್‌ಗಳಲ್ಲೇ ಹೊರ ರಾಜ್ಯಗಳಿಗೆ ಪ್ರಯಾಣಿಸಲು ಅವಕಾಶವಿಲ್ಲ.
ಗೃಹ ಲಕ್ಷ್ಮಿ ಯೋಜನೆ:
- ಯೋಜನೆಯ ಫಲಾನುಭವಿಗಳು: ರಾಜ್ಯದಲ್ಲಿರುವ ಬಿಪಿಎಲ್ ಹಾಗೂ ಎಪಿಎಲ್ ಕುಟುಂಬಗಳ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರು, ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುವ ಯಜಮಾನಿ (ಮನೆಯ ಒಡತಿ)
- ಯಜಮಾನಿಯ ಖಾತೆಗೆ ಮಾಸಿಕ 2000 ರೂ. ಮೊತ್ತ ವರ್ಗಾವಣೆ ಮಾಡಲಾಗುವುದು.
- ಈ ಯೋಜನೆಯ ಸೌಲಭ್ಯ ಪಡೆಯಲು ಮಹಿಳೆಯರು ಅರ್ಜಿ ಸಲ್ಲಿಸಬೇಕು. ಇದರಲ್ಲಿ ಮನೆಯ ಯಜಮಾನಿ ಯಾರು ಎಂಬುದನ್ನು ಘೋಷಿಸಬೇಕು.
- ಬ್ಯಾಂ ಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಮಾಹಿತಿ ಒದಗಿಸಬೇಕು.
- ಜೂನ್ 15 ರಿಂದ ಜುಲೈ 15 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಜುಲೈ 15 ರಿಂ ದ ಆಗಸ್ಟ್ 15ರ ಅವಧಿಯಲ್ಲಿ ಅರ್ಜಿಗಳನ್ನು ಪರಿಶೀಲಿಸಿ, ಅಗತ್ಯ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಿ, ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ದಿನ ಈ ಯೋಜನೆಗೆ ಚಾಲನೆ ನೀಡಲಾಗುವುದು.
ಗೃಹಜ್ಯೋತಿ ಯೋಜನೆ
- ವಾರ್ಷಿಕ ವಿದ್ಯುತ್ ಬಿಲ್‌ನ ಸರಾಸರಿಯಲ್ಲಿ 200 ಯೂನಿಟ್ ಒಳಗೆ ಬಳಸಿದ್ದರೆ ಅಂತಹ ಕುಟುಂಬಕ್ಕೆ ಉಚಿತ ವಿದ್ಯುತ್ ನೀಡಲಾಗುವುದು.
- ವಾರ್ಷಿಕ ಸರಾಸರಿ ಮೇಲೂ ಕೂಡ 10% ಅನ್ನು ಉಚಿತ ಎಂದು ಪರಿಗಣಿಸಲಾಗುವುದು.
- 2023 ಜುಲೈ ತಿಂಗಳ ವಿದ್ಯುತ್ ಬಿಲ್ನಿಂದಲೇ ವಿನಾಯಿತಿ ಪ್ರಾರಂಭವಾಗುತ್ತದೆ. ಜುಲೈನಿಂದ ಬಳಕೆಯು ಉಚಿತವಾಗಿರುತ್ತದೆ
ಅನ್ನ ಭಾಗ್ಯ ಯೋಜನೆ:
- ಜೂನ್ ತಿಂಗಳ ಪಡಿತರ ವಿತರಣೆ ಪ್ರಕ್ರಿಯೆ ಪ್ರಾರಂಭವಾಗಿರುವುದರಿಂದ ಹಾಗೂ ಆಹಾರ ಧಾನ್ಯ ಖರೀದಿಸಬೇಕಾಗಿರುವುದರಿಂದ ಜುಲೈ 1ರಿಂದ ಅನ್ನಭಾಗ್ಯ ಯೋಜನೆಯಡಿ ಹತ್ತು ಕೆಜಿ ಆಹಾರ ಧಾನ್ಯ ನೀಡಲಾಗುವುದು.
- ಅಂತ್ಯೋದಯ ಕಾರ್ಡುದಾರರು ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಈ ಯೋಜನೆ ಸೌಲಭ್ಯ ದೊರೆಯಲಿದೆ.
- ಅಂತ್ಯೋದಯ ಅನ್ನ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಕಡು ಬಡವರಿಗಾಗಿ ಜಾರಿಯಾಗಿದೆ.
- ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಪ್ರತಿ ಕುಟುಂಬಕ್ಕೆ ಕೇಂದ್ರ ಸರ್ಕಾರ ತಿಂಗಳಿಗೆ 35 ಕೆ.ಜಿ. ಆಹಾರಧಾನ್ಯ ಉಚಿತವಾಗಿ ಒದಗಿಸುತ್ತಿದೆ.
- ಇನ್ನು ಮುಂದೆ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಗಳಲ್ಲಿ ಮೂವರು ಸದಸ್ಯರಿದ್ದರೆ ತಿಂಗಳಿಗೆ 35 ಕೆ.ಜಿ. ಆಹಾರ ಧಾನ್ಯ ಉಚಿತವಾಗಿ ದೊರೆಯಲಿದೆ.
- ಈ ಕುಟುಂಬಗಳಲ್ಲಿ ನಾಲ್ಕು ಜನರಿದ್ದರೆ ತಲಾ 10 ಕೆ.ಜಿ.ಯಂತೆ ಒಟ್ಟು 40 ಕೆ.ಜಿ., ಐವರು ಇದ್ದರೆ ಒಟ್ಟು 50 ಕೆ.ಜಿ. ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಪ್ರತಿ ವ್ಯಕ್ತಿಗೆ ಹತ್ತು ಕೆ.ಜಿ.ಯಂತೆ ಉಚಿತ ಅಕ್ಕಿ ಸಿಗಲಿದೆ.
- ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳಲ್ಲಿ ಪ್ರತಿ ಸದಸ್ಯರಿಗೆ ಹತ್ತು ಕೆ.ಜಿ.ಯಂತೆ ಉಚಿತವಾಗಿ ಆಹಾರ ಧಾನ್ಯ ವಿತರಿಸಲಾಗುತ್ತದೆ.
- ಅಂತ್ಯೋದಯ ಪಡಿತರ ಚೀಟಿ ಹೊಂದಿದ ಕುಟುಂಬಗಳಿಗೆ ತಲಾ 35 ಕೆ.ಜಿ. ಹಾಗೂ ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ ತಲಾ ಐದು ಕೆ.ಜಿ. ಆಹಾರ ಧಾನ್ಯವನ್ನು ಕೇಂದ್ರ ಸರ್ಕಾರವು ಆಹಾರ ಭದ್ರತಾ ಕಾಯ್ದೆಯಡಿ ಉಚಿತವಾಗಿ ಒದಗಿಸುತ್ತಿದೆ. ಹೆಚ್ಚುವರಿ ಆಹಾರ ಧಾನ್ಯದ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ.