Published on: July 14, 2023
ಲಂಬಾಣಿ ಕಸೂತಿ ಕಲೆ
ಲಂಬಾಣಿ ಕಸೂತಿ ಕಲೆ
ಸುದ್ದಿಯಲ್ಲಿ ಏಕಿದೆ? ಹಂಪಿಯಲ್ಲಿ ನಡೆಯುತ್ತಿರುವ ಜಿ- 20 ಸಭೆಯಲ್ಲಿ ಲಂಬಾಣಿ ಕಸೂತಿ ಕಲೆಯ ಅತಿ ದೊಡ್ಡ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಸದ್ಯ ಈ ಪ್ರದರ್ಶನವು ಗಿನ್ನಿಸ್ ದಾಖಲೆಯನ್ನು ಮಾಡಿದೆ.
ಮುಖ್ಯಾಂಶಗಳು
- ಹಂಪಿಯಲ್ಲಿ ನಡೆಯುತ್ತಿರುವ ಜಿ -20 ಮೂರನೇ ಸಾಂಸ್ಕೃತಿಕ ಕಾರ್ಯಪಡೆ (ಸಿಎಬ್ಲುಜಿ) ಸಭೆಯಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನ ಕುಶಲ ಕಲಾಕೇಂದ್ರದ 450 ಮಹಿಳೆಯರು ತಯಾರಿಸಿದ ಸುಮಾರು 1750 ಲಂಬಾಣಿ ಕಸೂತಿ ಕಲೆಯ ಅತಿದೊಡ್ಡ ವಸ್ತ್ರ ಪ್ರದರ್ಶನವನ್ನು ಏರ್ಪಡಿಸಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿತು.
- ಗಿನ್ನಿಸ್ ರೆಕಾರ್ಡ್ಗೆ ಸಾಕ್ಷಿಯಾದ ಲಂಬಾಣಿ ಕಸೂತಿ ಕಲೆ ಪ್ರದರ್ಶನದಲ್ಲಿ ಜಿ-20 ರಾಷ್ಟಗಳ 56 ಪ್ರತಿನಿಧಿಗಳು ಭಾಗವಹಿಸಿದ್ದರು.
ಕಲಾ ಕೇಂದ್ರ
- ಸಂಡೂರಿನ ಲಂಬಾಣಿ ಕುಶಲ ಕಲಾ ಕೇಂದ್ರ ಕೇವಲ 5 ಲಂಬಾಣಿ ಮಹಿಳೆಯರಿಂದ 1988 ರಲ್ಲಿ ಆರಂಭವಾಗಿದೆ. ಆದರೆ ಸದ್ಯ 600 ಕುಶಲ ಕಸೂತಿ ಕಲೆ ಕಲಿತ ಮಹಿಳೆಯರಿಂದ ಮುನ್ನಡೆಯುತ್ತಿದೆ. ಪಾರಂಪರಿಕವಾಗಿ ಮನೆಗಳು ಹಾಗೂ ತಾಂಡಗಳಿಗೆ ಸೀಮಿತವಾಗಿದ್ದ ಲಂಬಾಣಿ ಕಸೂತಿ ಕಲೆಗೆ ಸಾಂಸ್ಥಿಕ ರೂಪ ನೀಡಿ ಜಿಐ ಟ್ಯಾಗ್ (2008 ರಲ್ಲಿ) ಪಡೆಯುವಲ್ಲಿ ಸಂಡೂರಿನ ಕಲಾ ಕೇಂದ್ರ ಯಶಗಳಿಸಿದೆ.
- ಸಂಡೂರಿನಲ್ಲಿ ತಯಾರಾಗುವ ವಿವಿಧ ಸಂಡೂರು ಕಸೂತಿಯ ಲಂಬಾಣಿ ಸಾಂಪ್ರದಾಯಿಕ ಹಾಗೂ ಆಧುನಿಕ ಉಡುಗೆಗಳು ಅಮೇರಿಕ, ಲಂಡನ್ ಮತ್ತು ಜಪಾನಗಳಿಗೆ ರಫ್ತಾಗುತ್ತಿವೆ
29 ಕಲಾತ್ಮಕ ಕಸೂತಿಗಳಿಗೆ ಸಿಕ್ಕ ಮನ್ನಣೆ
- ವಿಶೇಷವೆಂದರೆ ವಿವಿಧ ರೀತಿಯ 29 ಕಲಾತ್ಮಕ ಕಸೂತಿಗಳನ್ನು ಇಲ್ಲಿ ರಚಿಸಲಾಗುತ್ತದೆ. ಈ ಕೇಂದ್ರಕ್ಕೆ ರಾಷ್ಟ್ರ ಮಟ್ಟದ ಪ್ರಶಸ್ತಿ, ಯುನಿಸ್ಕೋ ಮನ್ನಣೆ ಹಾಗೂ ಕಮಲಾದೇವಿ ಛಟ್ಟೋಪಾಧ್ಯಾಯ ಪ್ರಶಸ್ತಿ ಲಭಿಸಿದೆ.
ಲಂಬಾಣಿ ಜನಾಂಗ ಮತ್ತು ಅವರ ಕಲೆ
- ರಾಜಸ್ಥಾನ ಗುಜರಾತಿನಲ್ಲಿ ಮಧ್ಯಪ್ರದೇಶ ಸಿಂಧ್ ಪ್ರಾಂತ್ಯಗಳಲ್ಲಿ ಅಧಿಕವಾಗಿ ಹರಡಿರುವ ಈ ಬಂಜಾರ ಮಹಿಳೆಯರು ಭಾರತದ ಜಿಪ್ಸಿ ಮಹಿಳೆಯರು ಎಂಬ ಹೆಸರು ಪಡೆದುಕೊಂಡಿದ್ದಾರೆ.
- ಇವರು ಅಫಘಾನಿಸ್ಥಾನದಿಂದ ಬಂದು ರಾಜಸ್ಥಾನದಲ್ಲಿ (ಮಿರವರ್) ಪ್ರದೇಶದಲ್ಲಿ ನೆಲೆ ನಿಂತರು ಎಂಬ ಐತಿಹ್ಯವಿದೆ.
- ಶ್ರಾವಣ ಮಾಸದಲ್ಲಿ ಬಂಜಾರಾ ಮಹಿಳೆಯರು “ತೀಜ್’ ಎಂಬ ಹಬ್ಬವನ್ನು ಆಚರಿಸುತ್ತಾರೆ. ಆ ಸಮಯದಲ್ಲಿ ಆಕರ್ಷಕ ಸಾಂಪ್ರದಾಯಿಕ ಉಡುಗೆ ತೊಡುಗೆಯ ಜೊತೆಗೆ ನೃತ್ಯ, ಸಂಗೀತಗಳು ಮಹತ್ವ ಪಡೆದುಕೊಂಡಿವೆ.
- ಈ ಲಂಬಾಣಿ ಸಮಾಜದಲ್ಲಿ ಭಾಷೆ, ಆಚಾರ, ವಿಚಾರ ಸೇರಿದಂತೆ ಎಲ್ಲ ಪದ್ಧತಿಗಳು ಒಂದೇಯಾಗಿದ್ದು, ಒಂದೇ ಭಾಷೆಮಾತನಾಡುವ ಸಮಾಜ ಎಂದರೆ ಅದು ದೇಶದಲ್ಲಿ ಸುಮಾರು 12 ಕೋಟಿಯಷ್ಟು ಜನಸಂಖ್ಯೆಯನ್ನು ಹೊಂದಿರುವ ಲಂಬಾಣಿ ಸಮಾಜ ಮಾತ್ರವಾಗಿದೆ.
ಲಂಬಾಣಿ ಕಸೂತಿ
- ಲಂಬಾಡಿ ಕಸೂತಿ, ಲಂಬಾಣಿ ಕಸೂತಿ, ಸಂಡೂರ್ ಲಂಬಾಣಿ ಕಸೂತಿ, ಬಂಜಾರ ಕಸೂತಿ, ಲೆಪೋ ಎಂಬುದು ಲಂಬಾಣಿಗಳು, ಸಂಡೂರಿನ ಬುಡಕಟ್ಟು ಜನಾಂಗದವರು, ಕರ್ನಾಟಕದ ಬಳ್ಳಾರಿ ಮತ್ತು ಬಿಜಾಪುರ, ಆಂಧ್ರಪ್ರದೇಶದ ಹೈದರಾಬಾದ್‌ನ ಬಂಜಾರರು ಬಟ್ಟೆಗಳನ್ನು ಅಲಂಕರಿಸುವ ಕಲೆಯಾಗಿದೆ.
- ಇವರು ಧರಿಸುವ ಸಾಂಪ್ರದಾಯಿಕ ತೊಡುಗೆಯ ಮೇಲೆ “ಲೆಪೊ’ ಎಂಬ ವಿಶಿಷ್ಟ ವಿಧಾನದ ಕಸೂತಿ ಕಲೆಯನ್ನು ಪಡಿಮೂಡಿಸುತ್ತಾರೆ. ಗಾಢ ರಂಗಿನ ವರ್ಣಮಯ ಲೆಪೊ ಕಸೂತಿಯ ಜೊತೆಗೆ ಮಿರರ್ ವರ್ಕ್ (ಪುಟ್ಟ ಕನ್ನಡಿಗಳನ್ನು) ಬಳಸುತ್ತಾರೆ.
- ಈ ದಿರಿಸಿನೊಂದಿಗೆ ವಿಶಿಷ್ಟ ರೀತಿಯ ನತ್ತು, ಕಿವಿಯ ಓಲೆ, ತಲೆಯ ಮೇಲೆ ಧರಿಸುವ ವಸ್ತ್ರವನ್ನು ಧರಿಸುತ್ತಾರೆ. ಅಸ್ಥಿಯಂತಹ ಬಿಳಿ ಬಣ್ಣದ ಹಲವು ಬಳೆಗಳನ್ನು ಧಾರಣೆ ಮಾಡುತ್ತಾರೆ.
- ಇವರು ಕಸೂತಿಯ ಜೊತೆಗೆ ಬಣ್ಣ ಹಚ್ಚಲು (ಪೇಂಟಿಂಗ್), ಹಚ್ಚೆ ಹಾಕುವುದು (ಟ್ಯಾಟೂ) ಹಾಗೂ ವಿಶೇಷ ರಂಗೋಲಿಗಳನ್ನು ರಚಿಸುವಲ್ಲಿಯೂ ಬಹಳ ಪ್ರವೀಣರು.
- ಹಂಪಿಯಲ್ಲೂ ವಾಸಿಸುವ ಲಂಬಾಣಿ ಮಹಿಳೆಯರು ಲೆಪೋ ವಿಧದ ಕಸೂತಿಯ ಪೆಥಿಯಾ ಎಂಬ ಸ್ಕರ್ಟ್‌ನಂತಹ ಲಂಗ, ಕಂಚಲಿ ಎಂಬ ಕುಪ್ಪಸ, ಜೊತೆಗೆ ಶಿರೋವಸ್ತ್ರವನ್ನು ಧರಿಸುತ್ತಾರೆ. ಲೆಪೋ ಬಗೆಯ ಲಂಬಾಣಿ ಮಹಿಳೆಯರು ತಮ್ಮ ಉಡುಗೆಯಲ್ಲಿ ಮಣಿಗಳನ್ನು ಸಮುದ್ರದ ಪುಟ್ಟ ಶಂಖ ಹಾಗೂ ನಾಣ್ಯ (ಕಾಯಿನ್) ಬಳಸುವುದು ವಿಶಿಷ್ಟವಾಗಿದೆ.