Published on: July 16, 2023

ವಿಶ್ವಸಂಸ್ಥೆಯ ಬಹು ಆಯಾಮಗಳ ಬಡತನ ಸೂಚ್ಯಂಕ ವರದಿ

ವಿಶ್ವಸಂಸ್ಥೆಯ ಬಹು ಆಯಾಮಗಳ ಬಡತನ ಸೂಚ್ಯಂಕ ವರದಿ

ಸುದ್ದಿಯಲ್ಲಿ ಏಕಿದೆ? 2005-06ರಿಂದ 2019-21ರವರೆಗಿನ ಅವಧಿಯ 15 ವರ್ಷಗಳ ಅವಧಿಯಲ್ಲಿ ಬಡತನ ನಿರ್ಮೂಲನೆಯಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದೆ ಎಂದು ವಿಶ್ವಸಂಸ್ಥೆಯ ಬಹು ಆಯಾಮಗಳ ಬಡತನ ಸೂಚ್ಯಂಕ ವರದಿ ಹೇಳಿದೆ.

ಮುಖ್ಯಾಂಶಗಳು

  • ಈ ಅವಧಿಯಲ್ಲಿ ಹಿಂದುಳಿದ ರಾಜ್ಯಗಳು, ವರ್ಗಗಳು ಸೇರಿದಂತೆ ಎಲ್ಲಾ ವಲಯಗಳಲ್ಲೂ ಅತ್ಯಂತ ವೇಗವಾಗಿ ಪ್ರಗತಿಯಾಗಿದೆ ಎಂದು ವರದಿ ಹೇಳಿದೆ.
  • ಭಾರತದಲ್ಲಿ 41.5 ಕೋಟಿ ಜನರು ಕಡುಬಡತನದಿಂದ ಹೊರಬಂದಿದ್ದಾರೆ ಎಂದು ಅದು ತಿಳಿಸಿದೆ.

ವರದಿಯನ್ನು ಬಿಡುಗಡೆ ಮಾಡಿದವರು

  • ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ), ಆಕ್ಸ್‌ಫರ್ಡ್‌ ಬಡತನ ಮತ್ತು ಮಾನವ ಅಭಿವೃದ್ಧಿ ಉಪಕ್ರಮ (ಒಪಿಎಚ್‌ಐ) ಸಂಸ್ಥೆಗಳು ಜಂಟಿಯಾಗಿ ಗ್ಲೋಬಲ್ ಮಲ್ಟಿಡೈಮೆನ್ಶನಲ್ ಸೂಚ್ಯಂಕದಲ್ಲಿ ಈ ವರದಿಯನ್ನು ಬಿಡುಗಡೆ ಮಾಡಿವೆ.

ವರದಿಯಲ್ಲಿರುವ ಅಂಶಗಳು

  • ಬಡವರು ಮತ್ತು ಹಸಿವಿನಿಂದ ಬಳಲುವರ ಪ್ರಮಾಣ 2005-2006ರಲ್ಲಿ ಶೇ 44.3 ಇದ್ದದ್ದು 2019-2021ರಲ್ಲಿ ಶೇ 11.8ಕ್ಕೆ ಇಳಿದಿದೆ. ಮಕ್ಕಳ ಮರಣ ಪ್ರಮಾಣ ಶೇ 4.5ರಿಂದ ಶೇ 1.5ಕ್ಕೆ ಇಳಿದಿದೆ. ನೈರ್ಮಲ್ಯದಿಂದ ವಂಚಿತರಾದವರ ಪ್ರಮಾಣ ಶೇ 50.4ರಿಂದ ಶೇ 11.3ಕ್ಕೆ ಇಳಿದಿದೆ.
  • ಅಡುಗೆ ಇಂಧನ ವಂಚಿತರ ಪ್ರಮಾಣ ಶೇ 52.9ರಿಂದ ಶೇ 13.9ಕ್ಕೆ ಇಳಿದಿದೆ.
  • ಶುದ್ಧ ಕುಡಿಯುವ ನೀರಿನಿಂದ ವಂಚಿತರಾದವರ ಪ್ರಮಾಣ ಶೇ 16.4ರಿಂದ ಶೇ 2.7ಕ್ಕೆ ಇಳಿದಿದೆ.
  • ವಿದ್ಯುತ್‌ ವಂಚಿತ ಕುಟುಂಬಗಳ ಪ್ರಮಾಣ ಶೇ 29ರಿಂದ ಶೇ 2.1ಕ್ಕೆ ಮತ್ತು ಮನೆ ವಂಚಿತರ ಪ್ರಮಾಣ ಶೇ 44.9ರಿಂದ ಶೇ 13.6ಕ್ಕೆ ಇಳಿದಿದೆ ಎಂದು ವರದಿ ತಿಳಿಸಿದೆ.
  • ಸಹರನ್ ಆಫ್ರಿಕಾ, ದಕ್ಷಿಣ ಏಷ್ಯಾಗಳಲ್ಲಿ ಅಧಿಕ: ವಿಶ್ವಸಂಸ್ಥೆಯ ವರದಿಯಲ್ಲಿ ಚೀನಾ, ಕಾಂಬೋಡಿಯಾ, ಕಾಂಗೋ, ಹಾಂಡುರಸ್, ಇಂಡೋನೇಷ್ಯಾ, ಮೊರಾಕ್ಕೋ, ಸರ್ಬಿಯಾ ಮತ್ತು ವಿಯೆಟ್ನಾಂ ಕೂಡ ಸೇರಿವೆ.

ವರದಿಯ ಅಂಕಿಅಂಶಗಳು

  • 2000 ದಿಂದ 2022ರವರೆಗಿನ ಬೆಳವಣಿಗೆಯ ಆಧಾರದಲ್ಲಿ 81 ದೇಶಗಳ ದತ್ತಾಂಶಗಳನ್ನು ಹೋಲಿಕೆ ಮಾಡಿ ಈ ವಿಶ್ಲೇಷಣೆ ನಡೆಸಲಾಗಿದೆ.
  • ವರದಿ ಪ್ರಕಾರ, 110 ದೇಶಗಳಲ್ಲಿನ 610 ಕೋಟಿ ಜನಸಂಖ್ಯೆಯಲ್ಲಿ 110 ಕೋಟಿ ಜನರು (ಶೇ 18ರಷ್ಟು) ತೀವ್ರ ಪ್ರಮಾಣದ ಬಹು ಆಯಾಮದ ಬಡತನಗಳಿಂದ ಬಳಲುತ್ತಿದ್ದಾರೆ.
  • ಪ್ರತಿ ಆರು ಬಡ ಜನರಲ್ಲಿ ಅಂದಾಜು ಐವರು ಉಪ – ಸಹರನ್ ಆಫ್ರಿಕಾ (53.4 ಕೋಟಿ ) ಮತ್ತು ದಕ್ಷಿಣ ಏಷ್ಯಾದಲ್ಲಿ (38.9 ಕೋಟಿ) ನೆಲೆಸಿದ್ದಾರೆ. ಎಂಪಿಐ ಬಡ ಜನರ ವರದಿಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅರ್ಧದಷ್ಟಿದ್ದಾರೆ.

ಭಾರತದ ಸ್ಥಿತಿ

  • ‘ಭಾರತದಲ್ಲಿ ಕಡು ಬಡತನ ಪ್ರಮಾಣ ಕಡಿಮೆಯಾಗಿದೆ. ಕೇವಲ 15 ವರ್ಷದಲ್ಲಿ ಸುಮಾರು 41.5 ಕೋಟಿ ಜನರು ಕಡು ಬಡತನದಿಂದ ಹೊರಬಂದಿದ್ದಾರೆ. 2005–2006ರಲ್ಲಿ ಶೇಕಡ 55.1ರಷ್ಟು ಮತ್ತು 2019–2021ರಲ್ಲಿ ಶೇ ಕಡ 16ರಷ್ಟು ಜನರು ಕಡು ಬಡತನದ ಸುಳಿಯಿಂದ ಹೊರಬಂದಿದ್ದಾರೆ’.
  • ‘2005–2006ರಲ್ಲಿ ಭಾರತದಲ್ಲಿ ಸುಮಾರು 64.5 ಕೋಟಿ ಜನರು ಕಡು ಬಡತನದಿಂದ ಬಳಲುತ್ತಿದ್ದರು. 2015–2016ರಲ್ಲಿ ಸರಿ ಸುಮಾರು 37 ಕೋಟಿ ಜನರು ಇದರಿಂದ ಹೊರಬಂದರು ಮತ್ತು 2019–2021ರಲ್ಲಿ ಸುಮಾರು 23 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ’

ಬಹು ಆಯಾಮಗಳ ಬಡತನ ಎಂದರೆ

  • ಮನೆ, ವಿದ್ಯುತ್‌, ಶಿಕ್ಷಣ, ನೈರ್ಮಲ್ಯ, ಪೌಷ್ಟಿಕ ಆಹಾರ ಇತ್ಯಾದಿಗಳಿಂದ ವಂಚಿತರಾದವರ ಸಂಖ್ಯೆ