Published on: July 25, 2023

ಪಿಟಿಸಿಎಲ್‌ ಮಸೂದೆಗೆ ಒಪ್ಪಿಗೆ

ಪಿಟಿಸಿಎಲ್‌ ಮಸೂದೆಗೆ ಒಪ್ಪಿಗೆ

ಸುದ್ದಿಯಲ್ಲಿ ಏಕಿದೆ? ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಮೀನು ಪರಭಾರೆ ನಿಷೇಧ (ತಿದ್ದುಪಡಿ) ಮಸೂದೆ ಮಂಡಿಸಲು ವಿಶೇಷ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಮುಖ್ಯಾಂಶಗಳು

  • ಪ‍ರಿಶಿಷ್ಟ ಜಾತಿ/ ಪಂಗಡಗಳ ಭೂಮಿ ವರ್ಗಾವಣೆ ನಿಷೇಧ(ಪಿಟಿಸಿಎಲ್) ಮಸೂದೆಗೆ ಉಭಯ ಸದನಗಳ ಅನುಮೋದನೆ ದೊರೆತಿದ್ದು, ರಾಜ್ಯಪಾಲರ ಅಂಕಿತದ ಬಳಿಕ ಕಾಯ್ದೆರೂಪದಲ್ಲಿ ಜಾರಿಯಾಗಲಿದೆ.
  • 2023-24ನೇ ಆಯವ್ಯಯದಲ್ಲಿ ಪಿಟಿಸಿಎಲ್‌ ಕಾಯ್ದೆಗೆ ತಿದ್ದುಪಡಿ ತಂದು ಇನ್ನಷ್ಟು ಬಲಪಡಿಸುವ ಕುರಿತು ಪ್ರಸ್ತಾಪಿಸಲಾಗಿತ್ತು.

ಉದ್ದೇಶ

  • ‘ಪರಿಶಿಷ್ಟರಿಗೆ ಅನ್ಯಾಯ ಆಗುವುದನ್ನು ತಪ್ಪಿಸಲು ತಿದ್ದುಪಡಿ ತರಲಾಗುತ್ತಿದೆ.

ತಿದ್ದುಪಡಿಯಲ್ಲಿ ಏನಿದೆ?

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹಂಚಿಕೆಯಾದ ಜಮೀನನ್ನು ಸರ್ಕಾರದ ಅನುಮತಿಯಿಲ್ಲದೆ ಪರಭಾರೆ ಮಾಡಿದ ಸಂದರ್ಭದಲ್ಲಿ ಜಮೀನು ಮಾಲೀಕರು ಪಿಟಿಸಿಎಲ್‌ ಕಾಯ್ದೆಯ ಸೆಕ್ಷನ್‌ 5(1)ರ ಅನ್ವಯ ದೂರು ದಾಖಲಿಸಲು ಕಾಲಮಿತಿ ತೆಗೆದು ಹಾಕುವುದು.
  • ಸರ್ಕಾರದ ಅನುಮತಿ ಪಡೆದು ಜಮೀನು ಪರಭಾರೆ ಮಾಡಬಹುದು.
  • ಕೃಷಿಯೇತರ ಚಟುವಟಿಕೆಗೂ ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ.

ಹಿನ್ನೆಲೆ

  • 1978ರಿಂದ ಈ ಕಾಯ್ದೆಜಾರಿಯಲ್ಲಿತ್ತು. ಆದರೆ, 2017ರಲ್ಲಿ ಪ್ರಕರಣವೊಂದರಲ್ಲಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಕಾಯ್ದೆಯಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಕಾಲಮಿತಿ ಕುರಿತು ಸ್ಪಷ್ಟತೆ ಇಲ್ಲದ ಕಾರಣ ಗೊಂದಲವಿದೆ ಎಂದು ಹೇಳಿತ್ತು. ಅದರ ಆಧಾರದಲ್ಲೇ ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಬಹುತೇಕ ಪ್ರಕರಣಗಳು ವಜಾಗೊಂಡಿದ್ದವು.

ಪಿಟಿಸಿಎಲ್‌ ಮಸೂದೆ 1978

  • ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಜಮೀನುಗಳ ಹಸ್ತಾಂತರ ನಿಷೇಧ) ಕಾಯಿದೆ, 1978, 1979 ರಲ್ಲಿ ಜಾರಿಗೆ ಬಂದಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಜನರು ಸರ್ಕಾರದಿಂದ ಮಂಜೂರಾತಿಯಾಗಿರುವ ಜಮೀನುಗಳನ್ನು ಪರಭಾರೆ ಮಾಡಬೇಕಾದರೆ ಸರ್ಕಾರದ ಅನುಮತಿ ತೆಗೆದುಕೊಂಡಿರಬೇಕು. ಒಂದು ವೇಳೆ ಅನುಮತಿಯಿಲ್ಲದೆ ಮಾರಿದ್ದರೆ ಅಂತಹ ಜಮೀನುಗಳನ್ನು ಮೂಲ ಮಂಜೂರುದಾರರಿಗೆ ಮತ್ತೆ ಅವರಿಗೆ ಜಮೀನಿನ ಹಕ್ಕನ್ನು ನೀಡಬೇಕು ಎಂದು ಕಾನೂನು ತಂದಿತ್ತು.
  • ಅಂದು ಕೇಂದ್ರದಲ್ಲಿ ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ ದೇಶದಲ್ಲಿ ಬಡವರಾಗಿದ್ದ ದಲಿತರು ತಿಳುವಳಿಕೆಯ ಕೊರತೆಯಿಂದ ಅವರ ಜಮೀನುಗಳನ್ನು ಸರ್ಕಾರದ ಅನುಮತಿಯಿಲ್ಲದೆ ಬೇರೆಯವರು ಕೊಂಡುಕೊಳ್ಳುವುದನ್ನು ಕಡಿವಾಣ ಹಾಕಲು ಬಯಸಿದ್ದರು.