Published on: August 31, 2023
ಚುಟುಕು ಸಮಾಚಾರ : 30 ಆಗಸ್ಟ್ 2023
ಚುಟುಕು ಸಮಾಚಾರ : 30 ಆಗಸ್ಟ್ 2023
- ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ವಿಮಾನವನ್ನು ಸುಲಭ ಹಾಗೂ ಸುರಕ್ಷಿತವಾಗಿ ಭೂಸ್ಪರ್ಶ ಮಾಡಲು ನೆರವಾಗಲು ರಷ್ಯಾ ಮೂಲದ ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ನ(ಐಎಲ್ಎಸ್) ಉಪಕರಣಗಳನ್ನು ಕಲಬುರಗಿ ವಿಮಾನ ನಿಲ್ದಾಣಕ್ಕೆ ಅಳವಡಿಸಲಾಗುತ್ತಿದೆ.
- ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ)ಯನ್ನು ಸದುಪಯೋಗ ಮಾಡಿಕೊಂಡ ದೇಶದ ಒಟ್ಟು ಜನ್ ಧನ್ ಖಾತೆಗಳ ಸಂಖ್ಯೆ 50 ಕೋಟಿ ಗಡಿ ದಾಟಿದ್ದು, ಶೇ 56ರಷ್ಟು ಖಾತೆಗಳನ್ನು ಮಹಿಳೆಯರು ಹೊಂದಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.
- ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ಕಲ್ಲಿದ್ದಲು ಸಚಿವಾಲಯವು ಖಾನನ್ ಪ್ರಹರಿ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಕಲ್ಲಿದ್ದಲು ಗಣಿ ಕಣ್ಗಾವಲು ಮತ್ತು ನಿರ್ವಹಣಾ ವ್ಯವಸ್ಥೆ (CMSMS) ಯಾಗಿದೆ.ಜಿಯೋಟ್ಯಾಗ್ ಮಾಡಿದ ಛಾಯಾಚಿತ್ರಗಳನ್ನು ಮತ್ತು ಬರವಣಿಗೆಯ ಮಾಹಿತಿಯ ಮೂಲಕ ಅಕ್ರಮ ಕಲ್ಲಿದ್ದಲು ಗಣಿಗಾರಿಕೆಯ ಘಟನೆಗಳನ್ನು ವರದಿ ಮಾಡಲು ನಾಗರಿಕರಿಗೆ ಅವಕಾಶ ನೀಡುತ್ತದೆ. ಇ-ಆಡಳಿತ ಉಪಕ್ರಮವಾಗಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಿಕೊಂಡು ಅಕ್ರಮ ಗಣಿಗಾರಿಕೆ ವಿರುದ್ಧ ಪಾರದರ್ಶಕ ಕ್ರಮ ಕೈಗೊಳ್ಳಲು ಸರ್ಕಾರ ಉದ್ದೇಶಿಸಿದೆ. ಈ ಬೆದರಿಕೆಯನ್ನು ಎದುರಿಸುವಲ್ಲಿ ಸಾರ್ವಜನಿಕ ಸಹಭಾಗಿತ್ವದ ಮಹತ್ವವನ್ನು ಸರ್ಕಾರ ಗುರುತಿಸುತ್ತದೆ.
- ‘ರಾಷ್ಟ್ರದ ಮಹಾನಗರಗಳ ಪೈಕಿ, ಬೆಂಗಳೂರು ನಗರವು ‘ಸೇಫ್ ಸಿಟಿ’ (ಸುರಕ್ಷತಾ ನಗರ) ಯೋಜನೆ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿದೆ. ಸದ್ಯದಲ್ಲೇ ಈ ಯೋಜನೆ ಅನುಷ್ಠಾನ ಪೂರ್ಣಗೊಳಿಸಿದ ಮೊದಲ ನಗರ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಲಿದೆ’. ‘ಸೇಫ್ ಸಿಟಿ ಯೋಜನೆ ಅಡಿ ಇದುವರೆಗೂ 4,500 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಮೂರು ಸಾವಿರ ಕ್ಯಾಮೆರಾ ಅಳವಡಿಕೆ ಬಾಕಿ ಇದೆ. ಕೃತಕ ಬುದ್ಧಿಮತ್ತೆ ಕ್ಯಾಮೆರಾ ವ್ಯವಸ್ಥೆ ನೆರವಿನಿಂದ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ಫೋಟೊ ತೆಗೆದು ದಂಡ ವಿಧಿಸಲಾಗುತ್ತಿದೆ. ಬೆಂಗಳೂರು ಸೇಫ್ ಸಿಟಿ ಪ್ರಾಜೆಕ್ಟ್ನ್ನು ಮಾರ್ಚ್ 2023 ರಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಉದ್ಘಾಟನೆ ಮಾಡಿದರು. ಆ ಮೂಲಕ ಜನರಿಗೆ, ಅದರಲ್ಲೂ ಮಹಿಳೆಯರಿಗೆ ಸುರಕ್ಷತೆ ಒದಗಿಸಲಾಗುತ್ತಿದೆ. 2021ರಲ್ಲಿ ಹನಿವೆಲ್ ಆಟೋಮೇಷನ್ ಇಂಡಿಯಾ ಲಿಮಿಟೆಡ್ ಸಹಭಾಗಿತ್ವದಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಬೆಂಗಳೂರನ್ನು ಮಹಿಳೆಯರಿಗೆ ಸಾರ್ವಜಿನಿಕ ಸ್ಥಳಗಳಲ್ಲಿ ಸುರಕ್ಷತೆ ಕಲ್ಪಿಸುವ ದೃಷ್ಟಿಯಿಂದ ಸುಮಾರು 667 ಕೋಟಿ ರೂಪಾಯಿ ವೆಚ್ಚದಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ಈ ಯೋಜನೆಯನ್ನು ಆರಂಭಿಸಿದೆ.
- ‘ಕೇರಳ’ ರಾಜ್ಯವನ್ನು ‘ಕೇರಳಂ’ ಎಂದು ಅಧಿಕೃತವಾಗಿ ಮರುನಾಮಕರಣ ಮಾಡಲು ಕೇಂದ್ರ ಸರ್ಕಾರವನ್ನು ಕೋರಿ ಮಂಡಿಸಲಾದ ನಿಲುವಳಿಗೆ ಕೇರಳ ವಿಧಾನಸಭೆ ಸರ್ವಾನುಮತದ ಒಪ್ಪಿಗೆ ನೀಡಿದೆ. ಸಂವಿಧಾನದ ಎಂಟನೇ ಪರಿಚ್ಛೇದ ಸೇರಿ ಎಲ್ಲಾ ಭಾಷೆಗಳಲ್ಲಿ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸಬೇಕು ಎನ್ನುವ ನಿಲುವಳಿಯನ್ನು ಮಂಡಿಸಿದರು. ಇತರೆ ಭಾಷೆಗಳಲ್ಲಿ ಅದು ಕೇರಳ ಎಂದಿದೆ. ಸಂವಿಧಾನದ ಮೊದಲ ಪರಿಚ್ಛೇದದಲ್ಲೂ ಕೇರಳ ಎಂದಿದೆ. ಇದನ್ನು ಸಂವಿಧಾನದ ಮೂರನೇ ವಿಧಿಯಡಿ ಕೇರಳಂ ಎಂದು ಮರುನಾಮಕರಣ ಮಾಡಬೇಕು. ಸಂವಿಧಾನದ ಎರಡನೇ ಪರಿಚ್ಛೇದದ ಅನ್ವಯ ಎಲ್ಲಾ ಭಾಷೆಗಳಲ್ಲೂ ಕೇರಳಂ ಎಂದು ಬದಲಾಯಿಸಲು ಎಲ್ಲಾ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊ ಳ್ಳಬೇಕು.
- ರಾಷ್ಟ್ರ ರಾಜಧಾನಿ ದೆಹಲಿಯ ತೀನ್ ಮೂರ್ತಿ ಭವನ ಆವರಣದಲ್ಲಿರುವ ‘ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ’ (ಎನ್ಎಂಎಂಎಲ್) ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದ್ದು ‘ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆ’ ಎಂಬುದಾಗಿ ಅಧಿಕೃತವಾಗಿ ಮರುನಾಮಕರಣ ಮಾಡಲಾಗಿದೆ. ಬ್ರಿಟಿಷರ ಆಳ್ವಿಕೆ ವೇಳೆ ನಿರ್ಮಿಸಲಾಗಿರುವ ತೀನ್ ಮೂರ್ತಿ ಭವನ, ದೇಶ ಸ್ವಾತಂತ್ರ್ಯ ಪಡೆದ ನಂತರ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಅಧಿಕೃತ ನಿವಾಸವಾಗಿತ್ತು. ನೆಹರೂ ಅವರು ಈ ನಿವಾಸದಲ್ಲಿ 16 ವರ್ಷಗಳಿಗೂ ಹೆಚ್ಚು ಕಾಲ ವಾಸವಾಗಿದ್ದರು. ನೆಹರೂ ಅವರ 75ನೇ ಜನ್ಮದಿನದ ನೆನಪಿಗಾಗಿ 1964ರಲ್ಲಿಈ ಭವನದಲ್ಲಿ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸ್ಥಾಪಿಸಿ, ಸಮರ್ಪಿಸಲಾಯಿತು. ನಂತರ ಇದಕ್ಕೆ ಸ್ವಾಯತ್ತ ಸ್ಥಾನಮಾನ ನೀಡಲಾಯಿತು. ಇದರ ಅಂಗವಾಗಿ 1966ರ ಏಪ್ರಿಲ್ 1ರಂದು ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆಯನ್ನು ಸ್ಥಾಪಿಸಲಾಯಿತು.
- ಹೆಸರಾಂತ ಲೇಖಕಿ ಸುಧಾಮೂರ್ತಿ ಅವರ ನೂತನ ಆಂಗ್ಲ ಕಾದಂಬರಿ ‘ಕಾಮನ್ ಎಟ್ ಅನ್ಕಾಮನ್’ ಬಿಡುಗಡೆಗೊಂಡಿದೆ . ಮಕ್ಕಳ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದ ಸುಧಾಮೂರ್ತಿ ಅವರು ಏಳು ವರ್ಷಗಳ ತರುವಾಯ ವಯಸ್ಕ ಓದುಗರನ್ನು ಗುರಿಯಾಗಿಸಿದ ಕಾದಂಬರಿ ರಚಿಸಿದ್ದಾರೆ. ಈ ಹಿಂದೆ 2017ರಲ್ಲಿಅವರ ಕಾದಂಬರಿ ‘ತ್ರಿ ಥೌಸಂಡ್ ಸ್ಟಿಚ್ಚಸ್’ ಪ್ರಕಟವಾಗಿತ್ತು. ಸುಧಾಮೂರ್ತಿ ಈವರೆಗೆ ಮಕ್ಕಳ ಸಾಹಿತ್ಯ ಸೇರಿದಂತೆ ವಿವಿಧ ಭಾಷೆಗಳಲ್ಲಿ 250ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
- ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಮತದಾರರನ್ನು ಉತ್ತೇಜಿಸುವ ದೃಷ್ಟಿಯಿಂದ ಕ್ರಿಕೆಟ್ ಆಟಗಾರ ಭಾರತ ರತ್ನ ಪ್ರಶಸ್ತಿ ಪಡೆದ ಸಚಿನ್ ತೆಂಡೂಲ್ಕರ್ ಅವರನ್ನು ಚುನಾವಣಾ ಆಯೋಗದ ‘ನ್ಯಾಷನಲ್ ಐಕಾನ್’ ಆಗಿ ನೇಮಕ ಮಾಡಲಾಗಿದೆ. ‘ಮುಂಬರುವ 2024ರ ಲೋಕಸಭಾ ಚುನಾವಣೆ ಸೇರಿದಂತೆ ಮತದಾನ ಪ್ರಕ್ರಿಯೆಯಲ್ಲಿ ಮತದಾರರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಚಿನ್ ತೆಂಡೂಲ್ಕರ್ ಅವರು ಯುವಕರ ಮೇಲೆ ಹೊಂದಿರುವ ಅಪ್ರತಿಮ ಪ್ರಭಾವದ ಬಳಕೆಯ ಮಹತ್ವದ ಹೆಜ್ಜೆ ಇದಾಗಿದೆ’. ನಗರಗಳ ಮತ್ತು ಯುವ ಮತದಾರರಲ್ಲಿ ಮತದಾನದ ಕುರಿತಾಗಿ ಇರುವ ನಿರಾಸಕ್ತಿಯನ್ನು ತೊಡೆದುಹಾಕುವ ಮೂಲಕ ಮತದಾನದ ಪ್ರಮಾಣವನ್ನು ಹೆಚ್ಚಿಸುವುದು ಈ ಒಪ್ಪಂದದ ಹಿಂದಿನ ಚುನಾವಣಾ ಆಯೋಗದ ಉದ್ದೇಶವಾಗಿದೆ. 2022 ರಲ್ಲಿ ನಟ ಪಂಕಜ್ ತ್ರಿಪಾಠಿ ಅವರನ್ನು ಆಯೋಗದ ನ್ಯಾಷನಲ್ ಐಕಾನ್ ಆಗಿ ನೇಮಕ ಮಾಡಿಕೊಳ್ಳಲಾಗಿತ್ತು.
- ಕೇಂದ್ರ ನಗರಾಭಿವೃದ್ಧಿ ಮತ್ತು ವಸತಿ ಸಚಿವಾಲಯವು ಸ್ಮಾರ್ಟ್ ಸಿಟಿ ಪ್ರಶಸ್ತಿಗಳ ಪಟ್ಟಿಯನ್ನು ಪ್ರಕಟಿಸಿದೆ . ಸತತ ಆರನೇ ಬಾರಿಯೂ ಮಧ್ಯಪ್ರದೇಶದ ಇಂದೋರ್ ನಗರಕ್ಕೆ 2022ನೇ ಸಾಲಿನ ರಾಷ್ಟ್ರೀಯ ಸ್ಮಾರ್ಟ್ ಸಿಟಿಗಳ ಪೈಕಿ ಮೊದಲ ಸ್ಥಾನ ನೀಡಲಾಗಿದೆ. ನಗರ ಪರಿಸರ ಅಭಿವೃದ್ಧಿ ವಿಭಾಗದಲ್ಲಿ ಶಿವಮೊಗ್ಗ ನಗರಕ್ಕೆ (ಕನ್ಸರ್ವೆನ್ಸಿಗಳ ಅಭಿವೃದ್ಧಿ) ಪ್ರಶಸ್ತಿ ಲಭಿಸಿದೆ. ಇನ್ನೋವೇಟಿಂಗ್ ಇಂಡಿಯಾ ಪ್ರಶಸ್ತಿಗೆ (ಒಳಚರಂಡಿ ನವೀಕರಣ) ಹುಬ್ಬಳ್ಳಿ-ಧಾರವಾಡ ಭಾಜನವಾಗಿದೆ. ದಕ್ಷಿಣ ವಲಯದಲ್ಲಿ ಝೋನಲ್ ಬೆಸ್ಟ್ ಸ್ಮಾರ್ಟ್ ಸಿಟಿ ಪ್ರಶಸ್ತಿಗೆ ಬೆಳಗಾವಿ ಭಾಜನವಾಗಿದೆ.
- ಭಾರತೀಯ ವಾಯುಪಡೆಯು ಈಜಿಪ್ಟ್ನ ಕೈರೋ ವಾಯುನೆಲೆಯಲ್ಲಿ ದ್ವೈವಾರ್ಷಿಕವಾಗಿ ಆಯೋಜಿಸಲಾದ ಬಹುಪಕ್ಷೀಯ, ಬ್ರೈಟ್ ಸ್ಟಾರ್-23 ತ್ರಿ-ಸೇವಾ ವ್ಯಾಯಾಮದಲ್ಲಿ ಭಾಗವಹಿಸುತ್ತಿದೆ.
- ಡ್ಯುರಾಂಡ್ ಕಪ್ ಫುಟ್ಬಾಲ್ ಪಂದ್ಯಾವಳಿಯ 132 ನೇ ಆವೃತ್ತಿಯ ಉದ್ಘಾಟನಾ ಸಮಾರಂಭವು ಗುವಾಹಟಿಯ ಸರುಸಜೈನಲ್ಲಿರುವ ಇಂದಿರಾ ಗಾಂಧಿ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ಪ್ರಾರಂಭವಾಯಿತು. 3ನೇ ಆಗಸ್ಟ್ನಿಂದ 3ನೇ ಸೆಪ್ಟೆಂಬ ರ್ 2023 ರ ವರೆಗೆ ನಡೆಯಲಿದೆ ಆಯೋಜಕರು :ಭಾರತದ ಸಶಸ್ತ್ರ ಪಡೆ
- ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನಲ್ಲಿ 15 ನೇ ಬ್ರಿಕ್ಸ್ ಶೃಂಗಸಭೆಯು ನಡೆಯಿತು. ಭೌಗೋಳಿಕ ರಾಜಕೀಯ ಬದಲಾವಣೆಗಳು ಮತ್ತು ಜಾಗತಿಕ ಆರ್ಥಿಕ ಡೈನಾಮಿಕ್ಸ್ನ ಹಿನ್ನೆಲೆಯಲ್ಲಿ ಮಹತ್ವದ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಶೃಂಗಸಭೆಯು ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ 2019 ರ ನಂತರ ಮೊದಲ ವ್ಯಕ್ತಿಗತ ಸಮಾವೇಶವಾಗಿದೆ. ಶೃಂಗಸಭೆಯ ವಿಷಯ: “BRICS ಮತ್ತು ಆಫ್ರಿಕಾ: ಪರಸ್ಪರ ವೇಗವರ್ಧಿತ ಬೆಳವಣಿಗೆ, ಸುಸ್ಥಿರ ಅಭಿವೃದ್ಧಿ ಮತ್ತು ಅಂತರ್ಗತ ಬಹುಪಕ್ಷೀಯತೆಗಾಗಿ ಪಾಲುದಾರಿಕೆ”.
- ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಅಂತರಾಷ್ಟ್ರೀಯ ಅಂಧರ ಕ್ರೀಡಾಕೂಟ (ಐಬಿಎಸ್ಎ) ವಿಶ್ವ ಕ್ರೀಡಾಕೂಟದ ಚೊಚ್ಚಲ ಆವೃತ್ತಿಯಲ್ಲಿ ಭಾರತ ಅಂಧ ಮಹಿಳಾ ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಚಿನ್ನದ ಪದಕ ಪಡೆದುಕೊಂಡಿದೆ. ಭಾರತದ ಪುರುಷರ ತಂಡ ಫೈನಲ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಸೋತು ರನ್ನರ್ಸ್ ಅಪ್ ಸ್ಥಾನ ಪಡೆದುಕೊಂಡಿದೆ.