Published on: September 16, 2023
ಚುಟುಕು ಸಮಾಚಾರ : 15 ಸೆಪ್ಟೆಂಬರ್ 2023
ಚುಟುಕು ಸಮಾಚಾರ : 15 ಸೆಪ್ಟೆಂಬರ್ 2023
- ದೇಶದಲ್ಲಿ ಕನಿಷ್ಠ 150 ಆನೆ ಕಾರಿಡಾರ್ಗಳನ್ನು ಗುರುತಿಸಲಾಗಿದೆ ಎಂದು ಪರಿಸರ ಸಚಿವಾಲಯದ ವರದಿ ಮಾಡಿದೆ. ಪರಿಸರ ಸಚಿವಾಲಯವು ರಾಜ್ಯಗಳ ಅರಣ್ಯ ಇಲಾಖೆಗಳ ಸಹಯೋಗದಲ್ಲಿಈ ವರದಿಯನ್ನು ಸಿದ್ಧಪಡಿಸಿದೆ. ಈ ಪೈಕಿ ಗರಿಷ್ಠ 26 ಆನೆ ಕಾರಿಡಾರ್ಗಳನ್ನು ಹೊಂದಿರುವ ಪಶ್ಚಿಮ ಬಂಗಾಳ ಅಗ್ರಸ್ಥಾನದಲ್ಲಿದೆ.
- ದಕ್ಷಿಣ ಕನ್ನಡ ಜಿಲ್ಲೆಮೂಡುಬಿದಿರೆ ಸಮೀಪದ ಮೂಡುಕೊಣಾಜೆಯ ಕಲ್ಮನೆ ಸಮಾಧಿಗಳ ಒಳಭಾಗದಲ್ಲಿ ಸುಟ್ಟ ಆವಿಗೆ ಮಣ್ಣಿನ, ಅಪರೂಪದ ಶಿಲ್ಪಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಶಿಲಾಯುಗದ ಸಮಾಧಿಯ ಒಳಗೆ ಕಾಮಧೇನು ಅಥವಾ ಮಾತೃದೇವತೆ ಶಿಲ್ಪಗಳು ಪತ್ತೆಯಾಗಿವೆ. ಇವುಗಳ ಕಾಲಮಾನವನ್ನು ಕನಿಷ್ಠ ಕ್ರಿ.ಪೂ 800 ಅಥವಾ 700 ಆಗಿರಬಹುದು ಎಂದು ಅಂದಾಜಿಸಲಾಗಿದೆ’.
- ಒಲಂಪಿಕ್ಸನಲ್ಲಿ ಕನ್ನಡಿಗ ಅಂಪೈರ್: 2024 ರಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಹಾಕಿ ಅಂಪೈರ್ ಆಗಿ ಕನ್ನಡಿಗ ರಘುಪ್ರಸಾದ್ ಆರ್.ವಿ ಕಾರ್ಯನಿರ್ವಹಿಸಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ ಕೂಟಕ್ಕೆ ಆಯ್ಕೆಯಾಗಿರುವ ಭಾರತದ ಏಕೈಕ ಅಂಪೈರ್ ಕೂಡ ಅವರಾಗಿದ್ದಾರೆ. ಇದು ಅವರಿಗೆ ಮೂರನೇ ಒಲಿಂಪಿಕ್ಸ್. 2012 ಮತ್ತು 2020ರ ಒಲಿಂಪಿಕ್ ಕೂಟಗಳಲ್ಲಿ ಅವರು ಅಂಪೈರ್ ಆಗಿದ್ದರು. 2016ರ ರಿಯೊ ಒಲಿಂಪಿಕ್ಸ್ನಲ್ಲಿ ಕಾಯ್ದಿಟ್ಟ ಅಂಪೈರ್ ಆಗಿದ್ದರು. 186 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಅವರಿಗೆ ಇದೆ. ‘ಇದುವರೆಗೆ ನಾಲ್ಕು ಸೀನಿಯರ್ ವಿಶ್ವಕಪ್, ಮೂರು ಜೂನಿಯರ್ ವಿಶ್ವಕಪ್, ಒಂದು ಬಾರಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಾರ್ಯನಿರ್ವಹಿಸಿದ್ದಾರೆ.
- ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ICAR) ಆಯೋಜಿಸಿದ ರೈತರ ಹಕ್ಕುಗಳ ಕುರಿತು ಮೊದಲ ಜಾಗತಿಕ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭತ್ತ ಹಾಗೂ ಇತರ ಹಲವಾರು ಕೃಷಿ ಸಂಬಂಧಿ ಸಸ್ಯಗಳ ನೂರಾರು ತಳಿಗಳನ್ನು ಸಂಗ್ರಹಿಸಿ, ಬೆಳೆ ಸಿರುವ ದಕ್ಷಿಣ ದಕ್ಷಿಣ ಕನ್ನಡದ ಬೆಳ್ತಂಗಡಿಯ ಕಿಲ್ಲೂರಿನ ಅಮೈ ದೇವ ರಾವ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ಪ್ರಶಸ್ತಿ 2020-21 ನೀಡಿ ಪುರಸ್ಕರಿಸಿದರು. ತಮ್ಮ ಐದು ಎಕರೆ ಗದ್ದೆಯಲ್ಲಿ 175ಕ್ಕೂ ಅಧಿಕ ಭತ್ತದ (Paddy) ತಳಿಗಳನ್ನು ಬೆಳೆದಿರುವ ಸಾಧಕ ಅಮೈ ದೇವರಾವ್ ಅವರಿಗೆ ಈ ಹಿಂದೆ 2019ರಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿತ್ತು. ಈ ಕೃಷಿ ಕೆಲಸಕ್ಕೆ ʼತಳಿ ತಪಸ್ವಿʼ ಬಿರುದು ಸಿಕ್ಕಿದೆ. ರಾಷ್ಟ್ರಮಟ್ಟದ ಪ್ರತಿಷ್ಠಿತ ʼಸೃಷ್ಟಿ ಸಮ್ಮಾನ್ʼ ಪ್ರಶಸ್ತಿಯೂ ದೊರಕಿದೆ. ದೇಶದ 10, ಕರ್ನಾಟಕದ ಇಬ್ಬರಿಗೆ ಈ ಪ್ರಶಸ್ತಿ ಸಿಕ್ಕಿದ್ದು ಅದು ಒಂದೂವರೆ ಲಕ್ಷ ನಗದು ಬಹುಮಾನ, ಪ್ರಶಸ್ತಿಪತ್ರ ಹಾಗೂ ಫಲಕವನ್ನು ಹೊಂದಿದೆ.
- ರಾಜ್ಯದಲ್ಲಿಪ್ರಸಕ್ತ ಸಾಲಿನಲ್ಲಿವಾಣಿಜ್ಯ ತೆರಿಗೆ ಸಂಗ್ರಹದ ಬೆಳವಣಿಗೆ ದರ ಶೇ 19.2ರಷ್ಟಿದ್ದು, ಈ ಬೆಳವಣಿಗೆ ದರ ಇಡೀ ದೇಶದಲ್ಲಿಯೇ ಅತಿ ಹೆಚ್ಚು. ಆ ಮೂಲಕ, ಸರಕು ಮತ್ತು ಸೇವಾ ತೆರಿಗೆ ಮತ್ತು ಮಾರಾಟ ತೆರಿಗೆ ಸಂಗ್ರಹದ ಸಾಧನೆಯಲ್ಲಿ ಕರ್ನಾಟಕವು ದೇಶದಲ್ಲಿ ಅಗ್ರ ಸ್ಥಾನದಲ್ಲಿದೆ. ‘ದೇಶದ ಒಟ್ಟಾರೆ ತೆರಿಗೆ ಸಂಗ್ರಹದಲ್ಲಿ ರಾಜ್ಯದ ಪಾಲು ಶೇ 9.4ರಷ್ಟಿದೆ. ಕಳೆದ ಬಾರಿಗಿಂತ ಈ ಬಾರಿ ರಾಜ್ಯದ ಪಾಲು ಹೆಚ್ಚಾಗಿದೆ’ ‘ದೇಶದ ಸರಾಸರಿ ತೆರಿಗೆ ಸಂಗ್ರಹ ಬೆಳವಣಿಗೆ ದರ ಶೇ 15ರಷ್ಟು ಮಾತ್ರ ಇದೆ. ಅದಕ್ಕೆ ಹೋಲಿಸಿದರೆ ತೆರಿಗೆ ಸಂಗ್ರಹ ವಿಚಾರದಲ್ಲಿ ಗಮನಾರ್ಹ ಸಾಧನೆ ಆಗಿದೆ. ಇಲಾಖೆಗೆ ಪ್ರಸಕ್ತಸಾಲಿನಲ್ಲಿಶೇ 24ರ ಬೆಳವಣಿಗೆ ಗುರಿ ನೀಡಲಾಗಿದೆ.
- ವಿಶ್ವ ತಯಾರಿಕೆದಾರರ ಕಾಂಗ್ರೆಸ್ (ವರ್ಲ್ಡ್ ಮ್ಯಾನುಫ್ಯಾಕ್ಚರಿಂಗ್ ಕಾಂಗ್ರೆಸ್) ಸ್ಥಾಪಿಸಿರುವ 10ನೇ ಆವೃತ್ತಿಯ ರಾಷ್ಟ್ರೀಯ ನಾಯಕತ್ವ ಹಾಗೂ ವಿದ್ಯುತ್ ವಾಹನಗಳ ಉಪಕ್ರಮಗಳ ಪ್ರಶಸ್ತಿಯನ್ನು ಕೆಎಸ್ಆರ್ಟಿಸಿ ಪಡೆದಿದೆ. ಅಂತರನಗರ ಎಲೆಕ್ಟ್ರಿಕ್ ಬಸ್ ಉಪಕ್ರಮಕ್ಕಾಗಿ ಈ ಪ್ರಶಸ್ತಿ ಲಭಿಸಿದೆ.
- ಒಡಿಶಾದಲ್ಲಿ ‘ಸ್ಕ್ರಬ್ ಟೈಫಸ್’ ಎಂಬ ಸೋಂಕು ಜ್ವರ ಕಾಣಿಸಿಕೊಂಡಿದ್ದು, ಈವರೆಗೆ ಆರು ಮಂದಿ ಮೃತಪಟ್ಟಿದ್ದಾರೆ. ವ್ಯಕ್ತಿಗಳಿಗೆ ಚಿಗಟ ಕಚ್ಚಿದರೆ ಸ್ಕ್ರಬ್ ಟೈಫಸ್ ಜ್ವರ ಹರಡುತ್ತದೆ. ಕೃಷಿ ಭೂಮಿ ಅಥವಾ ಕಾಡು ಪ್ರದೇಶಕ್ಕೆ ಭೇಟಿ ನೀಡುವ ಜನರಿಗೆ ಚಿಗಟ ಕಚ್ಚುವ ಸಾಧ್ಯತೆ ಇದ್ದು, ಸೋಂಕಿಗೆ ಒಳಗಾಗುತ್ತಾರೆ.
- ಭಾರತದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಪರಂಪರೆಯನ್ನು ಪ್ರದರ್ಶಿಸುವ ಭಾಗವಾಗಿ, ಒಡಿಶಾದ ಸೂರ್ಯ ದೇವಾಲಯದ ಐತಿಹಾಸಿಕ ಕೋನಾರ್ಕ್ ಚಕ್ರದ ಭಿತ್ತಿಚಿತ್ರವನ್ನು ಚಿತ್ರಿಸುವ ಗೋಡೆಯನ್ನು G20 ಶೃಂಗಸಭೆಯ ಸ್ಥಳದಲ್ಲಿ ವಿಶ್ವ ನಾಯಕರನ್ನು ಸ್ವಾಗತಿಸಲು ಹಿನ್ನೆಲೆಯಾಗಿ ಇರಿಸಲಾಗಿತ್ತು. 18 ನೇ G20 ಶೃಂಗಸಭೆಯು ಭಾರತದ ಹೊಸದಿಲ್ಲಿಯಲ್ಲಿ 9 ರಿಂದ 10 ಸೆಪ್ಟೆಂಬರ್ 2023 ರಂದು ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ವಿಷಯದ ಅಡಿಯಲ್ಲಿ ನಡೆಯಿತು.
- ಉತ್ತರ ಆಫ್ರಿಕಾದ ದೇಶ ಲಿಬಿಯಾದ ಪೂರ್ವ ಕರಾವಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿ 5000 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ‘ಡೆರ್ನಾ ಭಾಗದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಮೆಡಿಟರೇನಿಯನ್ ಚಂಡಮಾರುತ ಡೇನಿಯಲ್ನಿಂದ ಡೆರ್ನಾ ನಗರದ ಕರಾವಳಿಗೆ ಅಪ್ಪಳಿಸುತ್ತಿದ್ದಂತೆ, ನಗರದ ಹೊರಗಿನ ಅಣೆಕಟ್ಟುಗಳು ಒಡೆದು ಸ್ಪೋಟಗೊಂಡಿವೆ. ಮೆಡಿಟರೇನಿಯನ್ ಸಮುದ್ರವು ಅಟ್ಲಾಂಟಿಕ್ ಸಾಗರಕ್ಕೆ ಸಂಪರ್ಕ ಹೊಂದಿದ ಸಮುದ್ರವಾಗಿದ್ದು, ಸಂಪೂರ್ಣವಾಗಿ ಭೂಮಿಯಿಂದ ಆವೃತವಾಗಿದೆ: ಸಮುದ್ರದ ಉತ್ತರದಲ್ಲಿ ದಕ್ಷಿಣ ಯುರೋಪ್ ಮತ್ತು ಅನಾಟೋಲಿಯಾ, ದಕ್ಷಿಣದಲ್ಲಿ ಉತ್ತರ ಆಫ್ರಿಕಾ ಮತ್ತು ಪೂರ್ವದಲ್ಲಿ ಪಶ್ಚಿಮ ಏಷ್ಯಾದ ಲೆವಂಟ್ ಇದೆ.