Published on: April 24, 2024
ಚುಟುಕು ಸಮಾಚಾರ : 23 ಏಪ್ರಿಲ್ 2024
ಚುಟುಕು ಸಮಾಚಾರ : 23 ಏಪ್ರಿಲ್ 2024
- ಸುಜಾತ ವೆಂಕಟೇಶ್ ನಿರ್ಮಾಣ ಮಾಡಿರುವ ಸೀಮೆ ಹಸು ಫಾರಂ: ಹೈನುಗಾರಿಕೆಯನ್ನು ನಂಬಿ ಹೈನುಗಾರಿಕೆಯಲ್ಲಿ ರೈತ ಮಹಿಳೆಯರು ಸಹ ತೊಡಗಿಕೊಂಡು ಕ್ಷೀರ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಚನ್ನಪಟ್ಟಣ ತಾಲ್ಲೂಕಿನ ಭೂಹಳ್ಳಿ ಗ್ರಾಮದ ರೈತ ಮಹಿಳೆ ಸುಜಾತ ವೆಂಕಟೇಶ್. ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ. ಹೈನುಗಾರಿಕೆಯಲ್ಲಿ ದಕ್ಷಿಣ ಭಾರತದಲ್ಲೆ ಅತಿ ಹೆಚ್ಚು ಹಾಲು ಉತ್ಪಾದಿಸುವ ಸಂಘದ ಸದಸ್ಯೆ ಎಂಬ ಗೌರವಕ್ಕೂ ಇವರು ಪಾತ್ರರಾಗಿದ್ದಾರೆ. ಈ ರಾಸುಗಳಿಂದ ಪ್ರತಿನಿತ್ಯ 250ಕ್ಕೂ ಹೆಚ್ಚು ಲೀಟರ್ ಹಾಲು ಉತ್ಪಾದನೆ ಮಾಡಿ ಮಾದರಿ ರೈತ ಮಹಿಳೆ ಎನಿಸಿಕೊಂಡಿದ್ದಾರೆ. ಸುಜಾತ ವೆಂಕಟೇಶ್ ಅವರ ಹೈನುಗಾರಿಕೆಯ ಸಾಧನೆಗೆ 2023ರಲ್ಲಿ ಇಂಡಿಯನ್ ಡೈರಿ ಅಸೋಸಿಯೇಷನ್ ವತಿಯಿಂದ ‘ಬೆಸ್ಟ್ ವುಮೆನ್ ಡೈರಿ ಫಾರ್ಮರ್’ ಪ್ರಶಸ್ತಿ ದೊರೆತಿದೆ. ಹೈನುಗಾರಿಕೆಯಲ್ಲಿ ದಕ್ಷಿಣ ಭಾರತದಲ್ಲೇ ಅತಿಹೆಚ್ಚು ಹಾಲು ಉತ್ಪಾದನೆ ಮಾಡಿದ್ದಾರೆ ಎನ್ನುವ ಸಾಧನೆಗೆ ಇವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.
- ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ (UNFPA) ವಿಶ್ವ ಜನಸಂಖ್ಯೆಯ ಸ್ಥಿತಿ – 2024 ರ ವರದಿ ಪ್ರಕಾರ ಭಾರತದ ಜನಸಂಖ್ಯೆಯು 77 ವರ್ಷಗಳಲ್ಲಿ ದ್ವಿಗುಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಅಂದಾಜು 1.44 ಶತಕೋಟಿ ಜನಸಂಖ್ಯೆಯೊಂದಿಗೆ ಭಾರತವು ಜಾಗತಿಕವಾಗಿ ಮುಂಚೂಣಿಯಲ್ಲಿದೆ, ನಂತರದ ಸ್ಥಾನದಲ್ಲಿ1.425 ಶತಕೋಟಿ ಜನಸಂಖ್ಯೆಯೊಂದಿಗೆ ಚೀನಾ ಇದೆ. 2011 ರಲ್ಲಿ ನಡೆಸಿದ ಕೊನೆಯ ಜನಗಣತಿಯ ಸಮಯದಲ್ಲಿ ಭಾರತದ ಜನಸಂಖ್ಯೆಯು 1.21 ಶತಕೋಟಿ ಎಂದು ದಾಖಲಾಗಿದೆ.
- ಮೊದಲ ಬಾರಿಗೆ, ಭಾರತದಲ್ಲಿನ ವಿಶೇಷವ ದುರ್ಬಲ ಆದಿವಾಸಿ ಗುಂಪುಗಳಲ್ಲಿ (ಪಿವಿಟಿಜಿ) ಒಂದಾದ ಅಂಡಮಾನ್ ಮತ್ತು ನಿಕೋಬಾರ್ ನ ಶೋಂಪೆನ್ ಬುಡಕಟ್ಟಿನ 7 ಜನರು ಲೋಕಸಭಾ ಕ್ಷೇತ್ರದಲ್ಲಿ ಮತ ಚಲಾಯಿಸುವ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.
- ಚೆನ್ನೈನ 17 ವರ್ಷದ ಭಾರತೀಯ ಗ್ರ್ಯಾಂಡ್ಮಾಸ್ಟರ್ ಡಿ ಗುಕೇಶ್ ಅವರು ಕೆನಡಾದ ಟೊರೊಂಟೊದಲ್ಲಿ 2024 ರ FIDE ಚೆಸ್ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅವರು 1984 ರಲ್ಲಿ ಗ್ಯಾರಿ ಕಾಸ್ಪರೋವ್ ನಿರ್ಮಿಸಿದ ದಾಖಲೆಯನ್ನು ಮೀರಿಸುವ ಮೂಲಕ ವಿಶ್ವ ಚೆಸ್ ಚಾಂಪಿಯನ್ಶಿಪ್ಗೆ ಇದುವರೆಗಿನ ಅತ್ಯಂತ ಕಿರಿಯ ಚಾಲೆಂಜರ್ ಆಗಿದ್ದಾರೆ. ವಿಶ್ವನಾಥನ್ ಆನಂದ್ ನಂತರ ಕ್ಯಾಂಡಿಡೇಟ್ಸ್ ಟೂರ್ನಮೆಂಟ್ ಗೆದ್ದ ಎರಡನೇ ಭಾರತೀಯರಾಗಿದ್ದಾರೆ. ಕ್ಯಾಂಡಿಡೇಟ್ಸ್ ಟೂರ್ನಮೆಂಟ್ ಗೆಲ್ಲುವ ಮೂಲಕ ಗುಕೇಶ್ ಅವರು ಪ್ರಸ್ತುತ ವಿಶ್ವ ಚೆಸ್ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಅವರನ್ನು ಎದುರಿಸಲಿದ್ದಾರೆ. ಗುಕೇಶ್ ಅವರು 12 ನೇ ವಯಸ್ಸಿನಲ್ಲಿ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಗಳಿಸಿದ ಮೂರನೇ ಕಿರಿಯ ಆಟಗಾರರಾದರು. ಅವರು 2023 ರ ಹ್ಯಾಂಗ್ಝೌ ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.