Published on: June 1, 2024
ಚುಟುಕು ಸಮಾಚಾರ :31 ಮೇ 2024
ಚುಟುಕು ಸಮಾಚಾರ :31 ಮೇ 2024
- ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿರೀಕ್ಷೆಗೂ ಮೀರಿ ಆದಾಯ ಗಳಿಸಿದ ಹಿನ್ನೆಲೆಯಲ್ಲಿ ಅದರ ಲಾಭಾಂಶವನ್ನು ಕೇಂದ್ರ ಸರ್ಕಾರಕ್ಕೆ ಭಾರೀ ಪ್ರಮಾಣದಲ್ಲಿ ನೀಡಲು ಮುಂದಾಗಿದೆ. 2023-24 ನೇ ಸಾಲಿಗೆ 2.11 ಲಕ್ಷ ಕೋಟಿ ರೂಪಾಯಿ ಡಿವಿಡೆಂಡ್ ಅನ್ನು ಕೇಂದ್ರ ಸರ್ಕಾರಕ್ಕೆ ಪಾವತಿಸಲು ಅನುಮೋದನೆ ನೀಡಿದೆ. ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಭಾರತೀಯ ರಿಸರ್ವ್ ಬ್ಯಾಂಕ್ನ ಕೇಂದ್ರೀಯ ನಿರ್ದೇಶಕರ ಮಂಡಳಿಯ 608ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇಷ್ಟು ಮೊತ್ತವನ್ನು ಆರ್ ಐ ಹಿಂದೆಂದೂ ಡಿವಿಡೆಂಡ್ ರೂಪದಲ್ಲಿ ನೀಡಿದ್ದ ನಿದರ್ಶನ ಇಲ್ಲ. ಹೆಚ್ಚುವರಿ ಲೆಕ್ಕಾಚಾರವು ಬಿಮಲ್ ಜಲನ್ ಸಮಿತಿಯು ಶಿಫಾರಸು ಮಾಡಿದ ಆರ್ಥಿಕ ಬಂಡವಾಳ ಚೌಕಟ್ಟನ್ನು (ECF) ಆಧರಿಸಿದೆ, ಇದು RBI ತನ್ನ ಬ್ಯಾಲೆನ್ಸ್ ಶೀಟ್ನ 5.5% ಮತ್ತು 6.5% ನಡುವೆ ಅನಿಶ್ಚಿತ ಅಪಾಯದ ಬಫರ್ (CRB) ಅನ್ನು ನಿರ್ವಹಿಸಲು ಸಲಹೆ ನೀಡಿತು.
- ಡಿಆರ್ಡಿಒ ರುದ್ರ ಎಂ-II ಹೆಸರಿನ ಗಾಳಿಯಿಂದ ಮೇಲ್ಮೈಗೆ ಚಿಮ್ಮುವ ಕ್ಷಿಪಣಿಯನ್ನು ಒಡಿಶಾದ ಕರಾವಳಿ ತೀರದಲ್ಲಿ, ಭಾರತೀಯ ವಾಯುಪಡೆಯ (IAF) Su-30 MK-I ವಿಮಾನದಿಂದ ಯಶಸ್ವಿಯಾಗಿ ಪರೀಕ್ಷಿಸಿದೆ. “ರುದ್ರಂ” ಎಂಬ ಹೆಸರು “ದುಃಖಗಳ ನಿವಾರಣೆ” ಎಂದು ಅರ್ಥ ಕೊಡುತ್ತದೆ. ರುದ್ರಮ್ ಸರಣಿಯು ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ವಿಕಿರಣ ವಿರೋಧಿ ಕ್ಷಿಪಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
- ಜಾಗತಿಕ ಮಟ್ಟದಲ್ಲಿ ಧೂಮಪಾನ ಹಾಗೂ ತಂಬಾಕು ಸೇವನೆಯಿಂದ ಉಂಟಾಗುವ ಹಾನಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷದ ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತದೆ.ವಿಶ್ವ ತಂಬಾಕು ರಹಿತ ದಿನ 2024 ಥೀಮ್: ತಂಬಾಕು ಉದ್ಯಮಗಳ ಹಸ್ತಕ್ಷೇಪಗಳನ್ನು ತಡೆದು ಮಕ್ಕಳನ್ನು ರಕ್ಷಿಸುವುದು ಎಂಬುದಾಗಿದೆ. ಇದು ಭವಿಷ್ಯದ ಜನಾಂಗವನ್ನು ತಂಬಾಕಿನ ದುಷ್ಪರಿಣಾಮಗಳಿಂದ ರಕ್ಷಿಸುವ ಗುರಿಯನ್ನು ಹೊಂದಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟ್ರಗಳು 1987 ರಲ್ಲಿ ವಿಶ್ವ ತಂಬಾಕು ರಹಿತ ದಿನವನ್ನು ರಚಿಸಿದವು.1988 ರಲ್ಲಿ, ನಿರ್ಣಯವನ್ನು ಅಂಗೀಕರಿಸಲಾಯಿತು.
- ಚೆನ್ನೈ ಮೂಲದ ಅಗ್ನಿಕುಲ ಕಾಸ್ಮಾಸ್ ಎಂಬ ಖಾಸಗಿ ಬಾಹ್ಯಾಕಾಶ ಸಂಶೋಧನಾ ನವೋದ್ಯಮ ಕಂಪನಿಯು ಮೂರು ಆಯಾಮಗಳ (3D) ಮುದ್ರಣಾ ತಂತ್ರಜ್ಞಾನ ಬಳಸಿ ತಯಾರಿಸಿದ ಸಿಂಗಲ್ ಪೀಸ್ ರಾಕೆಟ್ ಎಂಜಿನ್ ಹೊಂದಿರುವ ಸಬ್ ಆರ್ಬಿಟಲ್ ಟೆಸ್ಟ್ ರಾಕೇಟ್ ‘ಅಗ್ನಿಬಾಣ ಸಾರ್ಟೆಡ್(SOrTeD) 01’ದ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ದೇಶದಲ್ಲಿ ಈ ಸಾಹಸ ಮಾಡಿದ ಎರಡನೇ ಖಾಸಗಿ ಸಂಸ್ಥೆ ಆಗಿದೆ. ‘ಅಗ್ನಿಬಾಣ’ ಸಬ್ ಆರ್ಬಿಟಲ್ ಟೆಕ್ನಾಲಜಿ ಡೆಮಾನ್ಸ್ಟ್ರೇಟರ್(ಎಸ್ಒಆರ್ಟಿಇಡಿ) ಪರೀಕ್ಷಾ ನೌಕೆಯು ಇಸ್ರೋದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಆವರಣದಲ್ಲಿರುವ ತನ್ನದೇ ಉಡ್ಡಯನ ಕೇಂದ್ರ ಮತ್ತು ಭಾರತದ ಮೊದಲ ಮತ್ತು ಏಕೈಕ ಖಾಸಗಿ ಉಡಾವಣಾ ಕೇಂದ್ರದಿಂದ (ಶ್ರೀಹರಿಕೋಟಾದ ಧನುಶ್ ಹೆಸರಿನ ಅಗ್ನಿಕುಲ್ ಉಡಾವಣಾ ಘಟಕ) ಈ ಉಡ್ಡಯನ ನಡೆದಿದೆ’.
- ದೆಹಲಿಯ ಮುಂಗೇಶ್ಪುರದಲ್ಲಿ 52.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ರಾಷ್ಟ್ರ ರಾಜಧಾನಿಯಲ್ಲಿ ದಾಖಲಾದ ಅತ್ಯಂತ ಗರಿಷ್ಠ ತಾಪಮಾನ ಎಂದು ದೆಹಲಿಯ ಈಶಾನ್ಯ ಭಾಗದಲ್ಲಿರುವ ಹವಾಮಾನ ಕೇಂದ್ರವು ಮಾಹಿತಿ ನೀಡಿದೆ. ದೆಹಲಿಯಲ್ಲಿ ಇದುವರೆಗೆ ವರದಿಯಾದ ಗರಿಷ್ಠ ತಾಪಮಾನ ಇದಾಗಿದೆ. ನಗರದ ಹೊರವಲಯದಲ್ಲಿರುವ ಮುಂಗೇಶ್ಪುರವು ರಾಜಸ್ಥಾನ ಕಡೆಯಿಂದ ಬೀಸುವ ಬಿಸಿಗಾಳಿ ಪರಿಣಾಮಕ್ಕೊಳಗಾಗುತ್ತದೆ. ಹೀಗಾಗಿ, ಇಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
- ಲಂಡನ್ನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ಸಿಂಗಾಪುರ ಏರ್ಲೈನ್ಸ್ ವಿಮಾನವು ಕೇವಲ 4.6 ಸೆಕೆಂಡ್ಗಳಲ್ಲಿ 178 ಅಡಿ ಕುಸಿತ ಕಂಡಿದ್ದಕ್ಕೆ ಗುರುತ್ವಾಕರ್ಷಣಾ ಶಕ್ತಿಯಲ್ಲಿನ ತ್ವರಿತ ಬದಲಾವಣೆಯೇ ಕಾರಣ ಎಂದು ಸಾರಿಗೆ ಸುರಕ್ಷತಾ ತನಿಖಾ ಸಂಸ್ಥೆಯು(ಟಿಎಸ್ಐಬಿ) ಈ ಕುರಿತ ವರದಿಯನ್ನು ಬಿಡುಗಡೆ ಮಾಡಿದೆ. ವಿಮಾನವು ಮ್ಯಾನ್ಮಾರ್ನ ಐರಾವಡ್ಡಿ ಜಲಾನಯನ ಪ್ರದೇಶದಲ್ಲಿ ಟರ್ಬ್ಯುಲೆನ್ಸನಿಂದಾಗಿ (ಗಾಳಿಯ ವೇಗದಲ್ಲಿ ಆಗುವ ಬದಲಾವಣೆಯಿಂದ ಉಂಟಾಗುವ ಕ್ಷೋಭೆ) ಹಠಾತ್ ಕುಸಿತ ಕಂಡಿತ್ತು. ಘಟನೆಯ ನಂತರ ವಿಮಾನವನ್ನು ಬ್ಯಾಂಕಾಕ್ನ ಸುವರ್ಣ ಭೂಮಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.