Published on: June 7, 2024
ಚುಟುಕು ಸಮಾಚಾರ :6 ಜೂನ್ 2024
ಚುಟುಕು ಸಮಾಚಾರ :6 ಜೂನ್ 2024
- ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದಲ್ಲಿ 1.7 ಲಕ್ಷ ಜನರು ‘ಮೇಲಿನ ಯಾರೂ ಅಲ್ಲ’ (ನೋಟಾ) ಆಯ್ಕೆಯನ್ನು ಒತ್ತಿದ್ದಾರೆ. ಇದರೊಂದಿಗೆ ಚುನಾವಣಾ ಇತಿಹಾಸದಲ್ಲೇ ಕ್ಷೇತ್ರವೊಂದರಲ್ಲಿ ಅತಿಹೆಚ್ಚು ನೋಟಾ ಮತ ಪ್ರಯೋಗವಾಗಿದೆ. 2019ರಲ್ಲಿ ಬಿಹಾರದ ಗೋಪಾಲಗಂಜ್ನಲ್ಲಿ 51,660 ನೋಟಾ ಮತಗಳನ್ನು ಹಾಕಲಾಗಿತ್ತು. ಇದು ಈವರೆಗೆ ದಾಖಲೆಯಾಗಿತ್ತು. NOTA(None Of The Above): ಇದು ಮತಪತ್ರದಲ್ಲಿ ಮತದಾನದ ಆಯ್ಕೆಯಾಗಿದ್ದು, ಮತದಾರರು ಎಲ್ಲ ಸ್ಪರ್ಧಿಸುವ ಅಭ್ಯರ್ಥಿಗಳ ಪರ ಅಸಮ್ಮತಿಯನ್ನು ಸೂಚಿಸಲು ಅವಕಾಶ ನೀಡುತ್ತದೆ.
- ಕೊನೊಕಾರ್ಪಸ್ ಗಿಡಗಳು ಮಳೆ ಪರಿಸರವನ್ನು ಹಾಳುಮಾಡುತ್ತವೆ, ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ಇತ್ತೀಚಿನ ಒಂದು ಸಂಶೋಧನೆ ಹೇಳಿದೆ. ಇದನ್ನು ‘ದುಬೈ ಗಿಡ’ ಎಂದೂ ಕರೆಯಲಾಗುತ್ತದೆ. ಯುಎಇ ಹಾಗೂ ದೇಶದ ಎರಡು ರಾಜ್ಯಗಳಾದ ಗುಜರಾತ್, ತೆಲಂಗಾಣ ಮಾನವನ ಆರೋಗ್ಯಕ್ಕೆ ಮಾರಕ ಹಾಗೂ ಈ ಗಿಡಗಳು ಹೆಚ್ಚಾಗುವ ಪ್ರದೇಶದಲ್ಲಿ ಮಳೆ ಕಡಿಮೆಯಾಗಿ ಬರದ ಪರಿಸ್ಥಿತಿ ಉಂಟಾಗುತ್ತದೆ ಎಂದು 2023ರಲ್ಲಿ ಕೊನೊಕಾರ್ಪಸ್ ಗಿಡವನ್ನು ನಿಷೇಧಿಸಿವೆ. ಗುಜರಾತ್ನಲ್ಲಿ ಈ ಗಿಡ–ಮರಗಳನ್ನು ಬುಡಸಹಿತ ತೆರವುಗೊಳಿಸಿ, ಸುಟ್ಟು ಹಾಕಲಾಗಿದೆ.
- ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (ICAR) ಅಂಗಸಂಸ್ಥೆಯಾದ ಮೀನು ತಳಿ ಆನುವಂಶಿಕ ಸಂಪನ್ಮೂಲಗಳ ಸಂಶೋಧನಾ ಸಂಸ್ಥೆ (NBFGR) ಅರುಣಾಚಲ ಪ್ರದೇಶ ರಾಜ್ಯದಲ್ಲಿ ಬ್ರಹ್ಮಪುತ್ರ ನದಿಯ ಉಪನದಿ ಟಿಸ್ಸಾ ನದಿಯ ಜಲಾನಯನ ಪ್ರದೇಶದಲ್ಲಿರುವ ‘ತುಂಗ್’ ಹೆಸರಿನ ಒಳನಾಡು ಪ್ರವಾಹದ ಝರಿಯಲ್ಲಿ ಹೊಸ ಪ್ರಜಾತಿಯ ಕ್ಯಾಟ್ಫಿಶ್ಗಳನ್ನು ಪತ್ತೆಮಾಡಿದೆ. ICAR–NBFGR ಸ್ಥಾಪಕ ನಿರ್ದೇಶಕ ಡಾ.ಪುಣ್ಯಬರತ ದಾಸ್ ಅವರು ಜಲಚರಗಳ ಸಂರಕ್ಷಣೆ ಮತ್ತು ವರ್ಧನೆಯಲ್ಲಿ ನೀಡಿದ ಕೊಡುಗೆಯ ಗೌರವಾರ್ಥ ಹೊಸದಾಗಿ ಗುರುತಿಸಲಾದ ಈ ಕ್ಯಾಟ್ ಫಿಶ್ ಗೆ ‘ಗ್ಲಿಪ್ಟೋಥೊರಾಕ್ಸ್ ಪುಣ್ಯಬ್ರತೈ’ (Glyptothorax punyabratai) ಎಂದು ಹೆಸರಿಸಲಾಗಿದೆ.
- ರಾಜಸ್ಥಾನದ ಕಂಜರ್ ಸಮುದಾಯದಲ್ಲಿ ಸ್ಟಾಂಪ್ ಪೇಪರ್ಗಳಲ್ಲಿ ಅಪ್ರಾಪ್ತ ಬಾಲಕಿಯರನ್ನು ಮಾರಾಟ ಮಾಡುವಲ್ಲಿ ತೊಡಗಿರುವವರ ವಿರುದ್ಧ ಕ್ರಿಮಿನಲ್ ಕ್ರಮವನ್ನು ಖಚಿತಪಡಿಸಿದ ನಂತರ, ಮಾನವ ಕಳ್ಳಸಾಗಣೆ ವಿರೋಧಿ (AHT) ನೋಡಲ್ ಅಧಿಕಾರಿಗಳನ್ನು ನೇಮಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ NHRC ರಾಜ್ಯಗಳಿಗೆ ನಿರ್ದೇಶಿಸಿದೆ. ಈ ಅಧಿಕಾರಿಗಳು ರಾಜ್ಯ ಕಾರ್ಯದರ್ಶಿ ಅಥವಾ ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲಿಸ್ ದರ್ಜೆಗಿಂತ ಕೆಳಗಿನವರಾಗಿರಬಾರದು
- ಕನ್ನಡಿಗ ಡಿ.ಪಿ.( ದೇವರಕೇಶವಿ ಪ್ರಕಾಶ) ಮನು ಅವರು ತೈವಾನ್ ಓಪನ್ ಕೂಟದ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 81.58 ಮೀಟರ್ ಸಾಧನೆಯೊಂದಿಗೆ ಚಿನ್ನ ಗೆದ್ದರು. ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಪಿಪ್ನ ಬೆಳ್ಳಿ ವಿಜೇತ ಮನು, ಭುವನೇಶ್ವರದಲ್ಲಿ ನಡೆದ ಫೆಡರೇಷನ್ ಕಪ್ನಲ್ಲಿ ಋತುವಿನ ಅತ್ಯುತ್ತಮ ಪ್ರಯತ್ನದೊಂದಿಗೆ (82.06 ಮೀ) ಅವರು ಬೆಳ್ಳಿ ಗೆದ್ದಿದ್ದರು. ಅಲ್ಲಿ ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಚಿನ್ನ ಗೆದ್ದಿದ್ದರು.
- ಭವ್ಯಾ ನರಸಿಂಹಮೂರ್ತಿ: ಭಾರತೀಯ ಸೇನೆಯ ಟೆರಿಟೋರಿಯಲ್ ಆರ್ಮಿ ಸೇರ್ಪಡೆಯಾದ ಭವ್ಯಾ ನರಸಿಂಹಮೂರ್ತಿ ಕರ್ನಾಟಕ ಕಾಂಗ್ರೆಸ್ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಅವರು ಭಾರತೀಯ ಸೇನೆಯ ಮೀಸಲು ಘಟಕವಾದ ಟೆರಿಟೋರಿಯಲ್ ಆರ್ಮಿಯಲ್ಲಿ ಕಮಿಷನ್ಡ್ ಆಫೀಸರ್ ಆಗಿ ಸೇರ್ಪಡೆಯಾಗಿದ್ದಾರೆ. ಟೆರಿಟೋರಿಯಲ್ ಆರ್ಮಿಯಲ್ಲಿ ದಕ್ಷಿಣ ಭಾರತದಿಂದ ಕಮಿಷನ್ಡ್ ಆಫೀಸರ್ ಆದ ಏಕೈಕ ಮಹಿಳೆಯಾಗಿದ್ದಾರೆ. ಪ್ರಾದೇಶಿಕ ಸೇನೆ ಎಂಥಲೂ ಹೇಳುವ ಟೆರಿಟೋರಿಯಲ್ ಆರ್ಮಿಯಲ್ಲಿ ಎರಡು ವಿಭಾಗಗಳಿವೆ. ಒಂದು, ಡಿಪಾರ್ಟಮೆಂಟಲ್ ಹಾಗೂ ಎರಡನೇ ಯದ್ದು ನಾನ್ ಡಿಪಾರ್ಟಮೆಂಟಲ್. ಡಿಪಾರ್ಟಮೆಂಟಲ್ನಲ್ಲಿ ಭಾರತೀಯ ನಾಗರಿಕ ಸೇವಾ ಅಧಿಕಾರಿಗಳು, ಸಿಬ್ಬಂದಿ ಹಾಗೂ ರೈಲ್ವೆಯ ನಿವೃತ್ತರು ಸೇರಿಕೊಳ್ಳಬಹುದು. ನಾನ್ ಡಿಪಾರ್ಟಮೆಂಟಲ್ನಲ್ಲಿ ಯಾವುದೇ ಭಾರತೀಯ ನಾಗರಿಕರು ಸೇರಿಕೊಳ್ಳಬಹುದು. ಟೆರಿಟೋರಿಯಲ್ ಆರ್ಮಿ ಸೇರುವವರು ಭಾರತೀಯ ಸೇನೆಗೆ ಅಗತ್ಯ ಬಿದ್ದಾಗ ಸ್ವಯಂ ಸೇವಕರ ರೀತಿ ಕೆಲಸ ಮಾಡಬೇಕಾಗುತ್ತದೆ. ಇದರಲ್ಲೂ ಸಹ ಕಮಿಷನ್ಡ್ ಹಾಗೂ ನಾನ್ ಕಮಿಷನ್ಡ್ ಎಂಬ ಎರಡು ಹಂತಗಳಿವೆ. ಕಮಿಷನ್ಡ್ ಹುದ್ದೆಗಳು ಅಧಿಕಾರಿ ಹಂತದ ಹುದ್ದೆಗಳದ್ದಾಗಿದ್ದರೆ, ನಾನ್ ಕಮಿಷನ್ಡ್ ಇತರ ಸೇವಾ ಸಿಬ್ಬಂದಿ ಹಂತದ ಹುದ್ದೆಗಳಾಗಿರುತ್ತವೆ. ದೇಶದಾದ್ಯಂತ ಐದು ವಲಯಗಳನ್ನು ಹೊಂದಿರುವ ಈ ಸೇ ನೆಯಲ್ಲಿ 40,000 ಕ್ಕೂ ಅಧಿಕ ಸ್ವಯಂ ಸೇವಕರಿದ್ದಾರೆ. ಈ ಸೇನೆ ಸೇರುವವರು ವರ್ಷದಲ್ಲಿ ಕನಿಷ್ಠ ಎರಡು ತಿಂಗಳು ಸ್ವಯಂ ಸೇವಕರಾಗಿ ಭಾರತೀಯ ಸೇನೆಯ ಜೊತೆ ಕೆಲಸಮಾಡಬಹುದು.