Published on: July 31, 2024

ಚುಟುಕು ಸಮಾಚಾರ :30 ಜುಲೈ 2024

ಚುಟುಕು ಸಮಾಚಾರ :30 ಜುಲೈ 2024

  • ದೇಶದಲ್ಲಿ ಪ್ರಸಕ್ತ ವರ್ಷದ ಜೂನ್ ಅಂತ್ಯಕ್ಕೆ ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯಿಂದ (ಡಿಪಿಐಐಟಿ) ಮಾನ್ಯತೆ ಪಡೆದಿರುವ 1.40 ಲಕ್ಷ ನವೋದ್ಯಮಗಳಿವೆ. ಮಹಾರಾಷ್ಟ್ರವು ಮಾನ್ಯತೆ ಪಡೆದಿರುವ ಅತಿಹೆಚ್ಚು ನವೋದ್ಯಮಗಳನ್ನು ಹೊಂದಿರುವ ರಾಜ್ಯವೆಂದು ಹೆಗ್ಗಳಿಕೆ ಪಡೆದಿದೆ. ಕರ್ನಾಟಕವು ಎರಡನೇ ಸ್ಥಾನದಲ್ಲಿದೆ.
  • ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರವನ್ನು (ಕೆಆರ್ಎಸ್) ₹2,663.74 ಕೋಟಿ ವೆಚ್ಚದಲ್ಲಿ ‘ಡಿಸ್ನಿ ಲ್ಯಾಂಡ್’ ಮಾದರಿಯಲ್ಲಿ ಮೇಲ್ದರ್ಜೆಗೇರಿಸುವ ಪರಿಷ್ಕೃತ ಅಂದಾಜಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಕೃಷ್ಣರಾಜ ಸಾಗರ ಜಲಾಶಯದ ಕೆಳಭಾಗದಲ್ಲಿನ 198 ಎಕರೆ ಜಾಗದಲ್ಲಿ ಬೃಂದಾವನ ಉದ್ಯಾನವನದ ಸೌಂದರ್ಯೀಕರಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುವುದು.
  • ಥರ್ಡ್-ಪಾರ್ಟಿ ವಿಮಾ ಪಾಲಿಸಿಯನ್ನು ನವೀಕರಿಸಲು ಮಾನ್ಯವಾದ ಮಾಲಿನ್ಯ ನಿಯಂತ್ರಣ (PUC) ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿ 2017 ರಲ್ಲಿ ಹೊರಡಿಸಲಾದ ತನ್ನದೇ ಆದ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿತು. PUC ಪ್ರಮಾಣಪತ್ರವನ್ನು ಮಾಲಿನ್ಯ ಪ್ರಮಾಣಪತ್ರ ಎಂದೂ ಕರೆಯುತ್ತಾರೆ, ಇದು ಭಾರತದಲ್ಲಿ ವಾಹನ ಮಾಲೀಕರಿಗೆ ಕಡ್ಡಾಯ ದಾಖಲೆಯಾಗಿದೆ. ಭಾರತೀಯ ರಸ್ತೆಗಳಲ್ಲಿನ ಎಲ್ಲಾ ವಾಹನಗಳು ಕೇಂದ್ರ ಮೋಟಾರು ವಾಹನಗಳ ನಿಯಮ 1989 ರ ಪ್ರಕಾರ ಮಾನ್ಯವಾದ PUC ಪ್ರಮಾಣಪತ್ರವನ್ನು ಹೊಂದಿರಬೇಕು.
  • ಯುನೆಸ್ಕೋ ಆಶ್ರಯದಲ್ಲಿರುವ ದಕ್ಷಿಣ-ದಕ್ಷಿಣ ಸಹಕಾರಕ್ಕಾಗಿ ಅಂತರಾಷ್ಟ್ರೀಯ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಕೇಂದ್ರವು (ISTIC), ಭಾರತದ ನವದೆಹಲಿಯಲ್ಲಿ “ಸುಸ್ಥಿರ ಜೀವನೋಪಾಯಕ್ಕಾಗಿ ಸಾಂಪ್ರದಾಯಿಕ ಜ್ಞಾನ” ಎಂಬ ಮಹತ್ವದ STI(ವಿಜ್ಞಾನ ತಂತ್ರಜ್ಞಾನ ನಾವೀನ್ಯತಾ) ಸಮಾವೇಶವನ್ನು ಆಯೋಜಿಸುತ್ತಿದೆ.
  • ನಿವೃತ್ತ ಅಗ್ನಿವೀರರಿಗೆ ಸರ್ಕಾರದ ವಿವಿಧ ಇಲಾಖೆಯ ನೇಮಕಾತಿಯಲ್ಲಿ ಮೀಸಲಾತಿ ನಿಗದಿಗೊಳಿಸಿ ಅರುಣಾಚಲ ಪ್ರದೇಶ, ರಾಜಸ್ಥಾನ ಸರ್ಕಾರ ನಿರ್ಧಾರ ಕೈಗೊಂಡಿದೆ. ಅರುಣಾಚಲ ಪ್ರದೇಶ ಸರ್ಕಾರವು ‘ಅಗ್ನಿಪಥ’ಯೋಜನೆ ಅಡಿಯಲ್ಲಿ ಸೇರ್ಪಡೆಯಾಗಲು ಬಯಸುವ ಸ್ಥಳೀಯ ಯುವಕರಿಗೆ ತರಬೇತಿ ನೀಡಲಿದ್ದು, ನಿವೃತ್ತಿಯಾಗುವ ಅಗ್ನಿವೀರರಿಗೆ ರಾಜ್ಯ ತುರ್ತು ಹಾಗೂ ಅಗ್ನಿಶಾಮಕ ಸೇವೆ, ಪೊಲೀಸ್ ಇಲಾಖೆಯಲ್ಲಿ ಆದ್ಯತೆ ನೀಡಲಾಗುವುದು. ಸರ್ಕಾರದ ಈ ನಿರ್ಧಾರವು ರಾಜ್ಯದ ಯುವಕರು ದೇಶ ಸೇವೆ ಮಾಡಲು ಅನುವು ಮಾಡಿಕೊಡುತ್ತದೆ. ಬಂಧೀಖಾನೆ, ಅರಣ್ಯ ಇಲಾಖೆ ಹಾಗೂ ರಾಜ್ಯ ಪೊಲೀಸ್ ಇಲಾಖೆಯ ನೇಮಕಾತಿಗಳಲ್ಲಿ ನಿವೃತ್ತ ಅಗ್ನಿವೀರರಿಗೆ ಮೀಸಲಾತಿ ನೀಡಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಘೋಷಿಸಿದರು.
  • ದಕ್ಷಿಣ ಆಫ್ರಿಕಾದ ವಿಮೋಚನಾ ಹೋರಾಟ ಮತ್ತು ಮಾನವ ಹಕ್ಕುಗಳ ಪ್ರತಿಪಾದಕ ನೆಲ್ಸನ್ ಮಂಡೇಲಾ ಅವರಿಗೆ ಸಂಬಂಧಿಸಿದ ಐತಿಹಾಸಿಕ ಸ್ಥಳಗಳನ್ನು ‘ಯುನೆಸ್ಕೊ– ವಿಶ್ವ ಪಾರಂಪರಿಕ ತಾಣ’ದ ಪಟ್ಟಿಗೆ ಸೇರಿಸಲಾಗಿದೆ. ಇಲ್ಲಿ ನಡೆದ, ಭಾರತ ನವದೆಹಲಿಯಲ್ಲಿ ಆಯೋಜಿಸಿದ್ದ 46ನೇ ವಿಶ್ವ ಪಾರಂಪರಿಕ ಸಮಿತಿ ಸಭೆಯಲ್ಲಿ ಈ ಘೋಷಣೆ ಮಾಡಲಾಯಿತು. ನೆಲ್ಸನ್ ಮಂಡೇಲಾ ಅವರ ‘ಪಿತ್ರಾರ್ಜಿತ ಸ್ಥಳ’ ಎಂಬ ಹೆಸರಿನ ನಾಮನಿರ್ದೇಶನವನ್ನು ದಕ್ಷಿಣ ಆಫ್ರಿಕಾ ಮಾಡಿತ್ತು. ಇತರ ಸದಸ್ಯ ದೇಶಗಳಾದ ಇಟಲಿ, ದಕ್ಷಿಣ ಕೊರಿಯ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನೇಡಿನೆಸ್, ಜಪಾನ್ ಮತ್ತು ಇಟಲಿ ಈ ನಾಮನಿರ್ದೇಶನವನ್ನು ಬೆಂಬಲಿಸಿದವು. ಮಾನವಕುಲದ ದೃಷ್ಟಿಯಿಂದ ಈ ಸ್ಥಳಗಳು ಮಹತ್ವ ಪಡೆದಿವೆ.
  • ಜಪಾನ ದೇಶದ ಸ್ಯಾಡೊಚಿನ್ನದ ಗಣಿಗೆ ಯುನೆಸ್ಕೊ ಮನ್ನಣೆ: ನವದೆಹಲಿಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಯುನೆಸ್ಕೊ ವಿಶ್ವ ಪಾರಂಪಾರಿಕ ಸಮಿತಿಯು ಜಪಾನ್ನ ಸ್ಯಾಡೊ ದ್ವೀಪದಲ್ಲಿರುವ ವಿವಾದಾತ್ಮಕ ಚಿನ್ನದ ಗಣಿಯನ್ನು ಸಾಂಸ್ಕೃತಿಕ ಪಾರಂಪರಿಕ ತಾಣವಾಗಿ ನೋಂದಾಯಿಸಲು ನಿರ್ಧಾರ ತೆಗೆದುಕೊಂಡಿದೆ. ಈ ಗಣಿಯಲ್ಲಿ ಎರಡನೇ ವಿಶ್ವ ಸಮರದಲ್ಲಿ ಕೊರಿಯಾದ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸಿದ ಕರಾಳ ಇತಿಹಾಸದ ಚಿತ್ರಣವನ್ನು ಪ್ರದರ್ಶಿಸಲು ಜಪಾನ್ ಒಪ್ಪಿದ ನಂತರ ಸಮಿತಿಯು ಈ ನಿರ್ಧಾರ ತೆಗೆದುಕೊಂಡಿದೆ. ಜಪಾನ್ ಮತ್ತು ದಕ್ಷಿಣ ಕೊರಿಯಾ ನಡುವಿನ ಸಂಬಂಧಗಳಲ್ಲಿ ಆಗಿರುವ ಸುಧಾರಣೆಯನ್ನು ಈ ನಿರ್ಧಾರ ಸೂಚಿಸುತ್ತದೆ. ಉತ್ತರ ಜಪಾನ್ನ ನಿಗಾಟಾದ ಕರಾವಳಿಯ ಸ್ಯಾಡೊ ದ್ವೀಪದಲ್ಲಿರುವ ಗಣಿ 1989ರಲ್ಲಿ ಮುಚ್ಚುವ ಮೊದಲು, ಸುಮಾರು ನಾಲ್ಕು ಶತಮಾನಗಳ ಕಾಲ ಕಾರ್ಯ ನಿರ್ವಹಿಸಿತ್ತು. ವಿಶ್ವದಲ್ಲೇ ಅತಿದೊಡ್ಡ ಚಿನ್ನದ ಉತ್ಪಾದಕ ಎನಿಸಿತ್ತು. ಇದು ಜಪಾನ್ನ ಯುದ್ಧ ಕಾಲದಲ್ಲಿ ಕೊರಿಯಾದ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸಿದ ಕರಾಳ ಇತಿಹಾಸವನ್ನೂ ಹೊಂದಿದೆ. ‘ಕೊರಿಯಾದ ಕಾರ್ಮಿಕರು ಸ್ಯಾಡೊ ದ್ವೀಪದ ಚಿನ್ನದ ಗಣಿಯಲ್ಲಿ ಅನುಭವಿಸಿದ ಗಂಭೀರ ಸ್ವರೂಪದ ಪರಿಸ್ಥಿತಿಗಳು ಮತ್ತು ಕಷ್ಟಗಳನ್ನು ಸ್ಮರಿಸಲು ಜಪಾನ್ಹೊಸ ಪ್ರದರ್ಶನ ಸಾಮಗ್ರಿಯನ್ನು ಸ್ಥಾಪಿಸಿದೆ. ಈ ಗಣಿಯಲ್ಲಿ ಕೆಲಸಮಾಡಿದ ಎಲ್ಲ ಕಾರ್ಮಿಕರ ಸ್ಮರಣೀಯ ಸೇವೆಯನ್ನು ವಾರ್ಷಿ ಕವಾಗಿ ಈ ತಾಣದಲ್ಲಿ ಸ್ಮರಿಸಲಾಗುವುದು. ಆದರೆ, ಎರಡನೇ ವಿಶ್ವ ಸಮರದಲ್ಲಿ ಕೊರಿಯಾದ ಕಾರ್ಮಿಕರನ್ನು ಈ ಗಣಿಗಳಲ್ಲಿ ದುರುಪಯೋಗ ಮಾಡಿಕೊಂಡ ಬಗ್ಗೆ ಯಾವುದೇ ಉಲ್ಲೇಖ ಮಾಡಿರಲಿಲ್ಲ.
  • ಇತ್ತೀಚಿಗೆ ಲಾವೋಸ್ ನಲ್ಲಿ ನಡೆದ 57 ನೇ ASEAN ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ಭಾಗವಹಿಸಿದ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈ ಶಂಕರ್ ಅವರು ಇದೇ ಮೊದಲ ಬಾರಿಗೆ ಸಿದ್ಧಪಡಿಸಲಾಗಿರುವ ಅಯೋಧ್ಯೆ ಬಾಲರಾಮನ ಚಿತ್ರವಿರುವ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಾರೆ. ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ಸಂಬಂಧಿಸಿದ ಸಭೆಯಲ್ಲಿ ಭಾಗವಹಿಸಿದ್ದ ಜೈ ಶಂಕರ್ ಅವರು, ಭಾರತ ಮತ್ತು ಲಾವೋಸ್ ನಡುವಿನ ಸಾಂಸ್ಕೃತಿಕ ಸಂಬಂಧದ ಭಾಗವಾಗಿ ಈ ಅಂಚೆ ಚೀಟಿಯನ್ನು ಅನಾವರಣಗೊಳಿಸಿದ್ದಾರೆ. ಅದರ ಜತೆಗೆ ಲಾವೋಸ್ನ ಪುರಾತನ ರಾಜಧಾನಿ ಲುವಾಂಗ್ ಪ್ರಬಾಂಗ್ನಲ್ಲಿರುವ ಬುದ್ದನ ಚಿತ್ರವಿರುವ ಅಂಚೆ ಚೀಟಿಯನ್ನೂ ಬಿಡುಗಡೆಗೊಳಿಸಿದ್ದಾರೆ. ರಾಮಾಯಣ ಮತ್ತು ಬೌದ್ಧ ಧರ್ಮದ ಪರಸ್ಪರ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಅಂಚೆ ಚೀಟಿಯನ್ನು ಪ್ರಾರಂಭಿಸಿದ್ದೇ ವೆ’
  • ನೆಲ್ಸನ್ ಮಂಡೇಲಾ ದಿನವು ಪ್ರತಿ ವರ್ಷ ಜುಲೈ 18 ರಂದು ಆಚರಿಸಲಾಗುವ ಜಾಗತಿಕ ಕಾರ್ಯಕ್ರಮವಾಗಿದೆ, ಇದು ನೆಲ್ಸನ್ ಮಂಡೇಲಾ ಅವರ ಜನ್ಮ ವಾರ್ಷಿಕೋತ್ಸವವನ್ನು ನಾವು ಗೌರವಿಸುವ ಮತ್ತು ಆಚರಿಸುವ ದಿನವಾಗಿದೆ, ಅವರು ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷರಾಗಿದ್ದರು ಮತ್ತು ಶಾಂತಿ, ನ್ಯಾಯ ಮತ್ತು ಮಾನವ ಹಕ್ಕುಗಳ ಜಾಗತಿಕ ಸಂಕೇತವಾಗಿದ್ದಾರೆ. ವಿಶ್ವಸಂಸ್ಥೆಯು ನವೆಂಬರ್ 2009 ರಲ್ಲಿ ಅಧಿಕೃತವಾಗಿ ಮಂಡೇಲಾ ದಿನವನ್ನು ಘೋಷಿಸಿತು, ಇದನ್ನು ಮೊದಲು ಜುಲೈ 18, 2010 ರಂದು ಆಚರಿಸಲಾಯಿತು.