Published on: September 2, 2021
ವಾಯು ಮಾಲಿನ್ಯ
ವಾಯು ಮಾಲಿನ್ಯ
ಸುದ್ಧಿಯಲ್ಲಿ ಏಕಿದೆ? ಭಾರತದಲ್ಲಿರುವ ವಾಯುಮಾಲಿನ್ಯದಿಂದ ಉತ್ತರ ಭಾರತದ ಪ್ರಜೆಗಳ ಜೀವಿತಾವಧಿಯಲ್ಲಿ 9 ವರ್ಷ ಕಡಿತಗೊಳ್ಳುತ್ತಿದೆ ಎಂದು ಯೂನಿವರ್ಸಿಟಿ ಆಫ್ ಚಿಕಾಗೋ ಪ್ರಕಟಿಸಿರುವ ವರದಿ ಹೇಳಿದೆ.
ವರದಿಯಲ್ಲಿ ಏನಿದೆ ?
- ಭಾರತ ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ದೇಶ. ಈ ದೇಶದ ಶೇ.40 ರಷ್ಟು ಜನಸಂಖ್ಯೆ ವಾಸಿಸುತ್ತಿರುವುದು ಗಂಗಾ ನದಿ ಹರಿಯುವ ಪ್ರದೇಶಗಳಲ್ಲಿ. ಈ ಪ್ರದೇಶಗಳಲ್ಲಿ ಮಾಲಿನ್ಯ ನಿರಂತರವಾಗಿ ಏರಿಕೆಯಾಗುತ್ತಿದ್ದು 2019 ರಲ್ಲಿದ್ದಷ್ಟೇ ಮಾಲಿನ್ಯ ಪ್ರಮಾಣಗಳು ಈಗಲೂ ಇದ್ದಲ್ಲಿ ಅದರ ಪರಿಣಾಮವಾಗಿ ಉತ್ತರ ಭಾರತದ ಮಂದಿ ತಮ್ಮ ಆಯುಷ್ಯದಲ್ಲಿ 9 ವರ್ಷಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ವರದಿಯಲ್ಲಿನ ಅಂಶಗಳು ಎಚ್ಚರಿಸಿವೆ.
- ಇನ್ನು ಮಾಲಿನ್ಯದಿಂದ ಜೀವಿತದ ಅವಧಿಯನ್ನು ಕಡಿಮೆಗೊಳಿಸಿಕೊಳ್ಳುತ್ತಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶವೂ ಮುಂದಿದ್ದು ಹೆಚ್ಚುವರಿಯಾಗಿ 2.5-2.9 ವರ್ಷಗಳಷ್ಟು ಅಂದರೆ ಒಟ್ಟು 11.5 ವರ್ಷ ಆಯುಷ್ಯ ಕಡಿತಗೊಳ್ಳುತ್ತಿದೆ ಎಂದು ವರದಿ ಹೇಳಿದೆ.
- ಶುದ್ಧ ಗಾಳಿ ಸೇವಿಸಿದರೆ ಮನುಷ್ಯ ಗರಿಷ್ಠ ಎಷ್ಟು ವರ್ಷ ಬದುಕಲು ಸಾಧ್ಯ ಎಂಬ ಬಗ್ಗೆ ಈ ವಿವಿ ಏರ್ ಕ್ವಾಲಿಟಿ ಹಾಗೂ ಲೈಫ್ ಇಂಡೆಕ್ಸ್ ಅಧ್ಯಯನ ನಡೆಸಿದ್ದು ವರದಿ ಪ್ರಕಟಿಸಿದೆ.
- ಉತ್ತರ ಭಾರತದಲ್ಲಿ ವಿಶ್ವದಲ್ಲೇ ಅತಿ ಹೆಚ್ಚಿನ ಪ್ರಮಾಣದ ಮಾಲಿನ್ಯವಿದೆ ಎಂದು ವರದಿ ಎಚ್ಚರಿಸಿದೆ.
- 2019 ರಲ್ಲಿ ಭಾರತದಲ್ಲಿನ ಮಾಲಿನ್ಯ ಕಣಗಳ ಸಾಂದ್ರತೆ ಕ್ಯುಬಿಕ್ ಮೀಟರ್ ಗೆ 70.3 ಮೈಕ್ರೋಗ್ರಾಮ್ (µg/m3) ಇತ್ತು. ಇದು ವಿಶ್ವದಲ್ಲೇ ಅತಿ ಹೆಚ್ಚು ಹಾಗೂ ಡಬ್ಲ್ಯುಹೆಚ್ ಒ ನಿಗದಿಪಡಿಸಿರುವ 10 µg/m3 ಗಿಂತ 7 ಪಟ್ಟು ಹೆಚ್ಚು ಎಂದು ವರದಿ ಹೇಳಿದೆ.
- ಕೇವಲ ಉತ್ತರ ಭಾರತವಷ್ಟೇ ಅಲ್ಲದೇ ಈ ಮಾಲಿನ್ಯ ಪ್ರಮಾಣಗಳು ಭಾರತದಾದ್ಯಂತ ಹೆಚ್ಚುತ್ತಿದ್ದು, ದಶಕಗಳ ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದಲ್ಲಿ ಮಾಲಿನ್ಯ ಕಣಗಳು ಇಂಡೋ-ಗಂಗಾ ಬಯಲು ಪ್ರದೇಶಗಳು ಮಾತ್ರ ಸೀಮಿತವಾಗಿಲ್ಲ ಎನ್ನುತ್ತದೆ ವರದಿ
- ಬಾಂಗ್ಲಾದೇಶ, ಭಾರತ, ನೇಪಾಳ, ಪಾಕಿಸ್ತಾನಗಳಿಗೆ ಎಕ್ಯುಎಲ್ಐ ಡೇಟಾ ಬಹಿರಂಗಪಡಿಸಿರುವ ಮಾಹಿತಿಯ ಪ್ರಕಾರ ಡಬ್ಲ್ಯುಹೆಚ್ಒ ನಿಗದಿಪಡಿಸಿರುವ ಮಾನದಂಡಗಳಿಗೆ ಮಾಲಿನ್ಯ ಪ್ರಮಾಣವನ್ನು ಇಳಿಕೆ ಮಾಡಿಕೊಂಡಲ್ಲಿ ಈ ಪ್ರದೇಶಗಳಲ್ಲಿನ ಜನತೆ ಸರಾಸರಿ 5.6 ವರ್ಷಗಳು ಹೆಚ್ಚು ಬದುಕಲಿದ್ದಾರೆ ಎಂದು ವರದಿ ಹೇಳಿದೆ.