Published on: September 6, 2021
ಅಟಲ್ ಪಿಂಚಣಿ ಯೋಜನೆ
ಅಟಲ್ ಪಿಂಚಣಿ ಯೋಜನೆ
ಸುದ್ಧಿಯಲ್ಲಿ ಏಕಿದೆ? ರಾಷ್ಟ್ರೀಯ ಪಿಂಚಣಿ ಯೋಜನೆಗೊಳಪಡುವ (ಎನ್ಪಿಎಸ್) ಅಟಲ್ ಪಿಂಚಣಿ ಯೋಜನೆಯು 2.8 ಕೋಟಿಗೂ ಹೆಚ್ಚು ಚಂದಾದಾರರೊಂದಿಗೆ ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಯಾಗಿ ಹೊರಹೊಮ್ಮಿದೆ.
ಎನ್ಪಿಎಸ್ನ ವಾರ್ಷಿಕ ವರದಿ
- ರಾಷ್ಟ್ರೀಯ ಪಿಂಚಣಿ ಯೋಜನೆಯ 4.2 ಕೋಟಿ ಬಳಕೆದಾರರಲ್ಲಿ 2020–21ರ ಅಂತ್ಯದ ವೇಳೆ ಶೇಕಡ 66 ರಷ್ಟು ಚಂದಾದಾರರು ಅಟಲ್ ಪಿಂಚಣಿ ಯೋಜನೆಯನ್ನು(ಎಪಿವೈ) ಆರಿಸಿಕೊಂಡಿದ್ದಾರೆ’ ಎಂದು ಎನ್ಪಿಎಸ್ನ ವಾರ್ಷಿಕ ವರದಿಯು ಹೇಳಿದೆ.
- ಎನ್ಪಿಎಸ್ನ ಒಟ್ಟು ಚಂದಾದಾರರಲ್ಲಿ ರಾಜ್ಯ ಸರ್ಕಾರದ ಯೋಜನೆಯು ಶೇಕಡ 11 ಮತ್ತು ಕೇಂದ್ರ ಸ್ವಾಯತ್ತ ಸಂಸ್ಥೆಗಳು (ಸಿಎಬಿ) ಶೇಕಡ 1 ಮತ್ತು ರಾಜ್ಯ ಸ್ವಾಯತ್ತ ಸಂಸ್ಥೆಗಳು(ಎಸ್ಎಬಿ) ಶೇಕಡ 2 ರಷ್ಟು ಪಾಲನ್ನು ಹೊಂದಿವೆ.
- ಎಪಿವೈ ಬಹುತೇಕ ಚಂದಾದಾರರಲ್ಲಿ ಹೆಚ್ಚಿನವರು ಸಣ್ಣ ಪಟ್ಟಣ, ಗ್ರಾಮೀಣ ಪ್ರದೇಶಗಳಿಗೆ ಸೇರಿದವರು. ಇದು ದೇಶದ ಜನಸಂಖ್ಯಾ ಮಾದರಿಯನ್ನು ಸಹ ಪ್ರತಿಬಿಂಬಿಸುತ್ತದೆ. ಈ ಪ್ರದೇಶಗಳಲ್ಲಿ ಹೆಚ್ಚಾಗಿ ಅಸಂಘಟಿತ ವರ್ಗಕ್ಕೆ ಸೇರಿದವರು ವಾಸವಾಗಿದ್ದಾರೆ’ ಎಂದು ವರದಿ ಹೇಳಿದೆ.
- ಚಂದಾದಾರರ ಬೆಳವಣಿಗೆ ದರದಲ್ಲೂ ಎಪಿವೈ ಪ್ರಾಬಲ್ಯ ಸಾಧಿಸಿದ್ದು, 2021ರ ಮಾರ್ಚ್ಗೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಎಪಿವೈಯು ಶೇಕಡ 33ರಷ್ಟು ಲಾಭ ಗಳಿಸಿದೆ.
ಅಟಲ್ ಪಿಂಚಣಿ ಯೋಜನೆ ಬಗ್ಗೆ
- ಕೇಂದ್ರ ಸರ್ಕಾರವು 2015ರ ಮೇ ತಿಂಗಳಲ್ಲಿ ಅಟಲ್ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯಲ್ಲಿ 18–40 ವರ್ಷದೊಳಗಿನ ಎಲ್ಲರೂ ಭಾಗಿಯಾಗಬಹುದು. ಚಂದಾದಾರರು 60 ವರ್ಷದ ಬಳಿಕ ಅವರ ಕೊಡುಗೆಗೆ ಅನುಸಾರವಾಗಿ ತಿಂಗಳಿಗೆ ₹1000 ದಿಂದ ₹5000 ಪಿಂಚಣಿ ಪಡೆಯುತ್ತಾರೆ. ನಿಧನದ ಬಳಿಕ ಅವರ ನಾಮಿನಿಗೆ ಪಿಂಚಣಿ ನೀಡಲಾಗುವುದು.