Published on: September 16, 2021
ಟೆಲಿಕಾಂ ಸುಧಾರಣೆ
ಟೆಲಿಕಾಂ ಸುಧಾರಣೆ
ಸುದ್ಧಿಯಲ್ಲಿ ಏಕಿದೆ? ಟೆಲಿಕಾಂ ಸುಧಾರಣೆಗಳಿಗೆ ಕೇಂದ್ರ ಸಚಿವ ಸಂಪುಟ ಸೆ.15 ರಂದು ಅನುಮೋದನೆ ನೀಡಿದ್ದು, ಪರಿಹಾರ ಪ್ಯಾಕೇಜ್ ಗಳನ್ನೂ ಈ ಕ್ಷೇತ್ರಕ್ಕೆ ಘೋಷಣೆ ಮಾಡಲಾಗಿದೆ.
ಕೇಂದ್ರ ಸಂಪುಟ ಪ್ರಕಟಿಸಿದ ಪ್ರಮುಖ ಸುಧಾರಣೆಗಳು
- ಎಜಿಆರ್: ಒಟ್ಟು ವರಮಾನದ ಬಾಕಿ ಮೊತ್ತದ ವ್ಯಾಖ್ಯಾನವನ್ನು ಪರಿವರ್ತಿಸುವುದು ಮತ್ತು ದೂರಸಂಪರ್ಕೇತರ ಆದಾಯವನ್ನು ಹೊರತಾಗಿಸುವುದು.
- ಬಾಕಿ ಮೇಲಿನ ಮೊರಟೋರಿಯಂ: ಟೆಲಿಕಾಂ ಕಂಪೆನಿಗಳಿಗೆ ಬಹು ಅಗತ್ಯವಿರುವ ಶಾಸನಬದ್ಧ ಬಾಕಿಯ ಮೇಲಿನ ಮೊರಟೋರಿಯಂ ಅನ್ನು ನಾಲ್ಕು ವರ್ಷಗಳಿಗೆ ಪ್ರಕಟಿಸಲಾಗಿದೆ. ದೂರಸಂಪರ್ಕ ಕಂಪೆನಿಗಳು ಮೊರಟೋರಿಯಂ ಮೊತ್ತವನ್ನು ಶೇ +2ರ ದರದಲ್ಲಿ ಬಡ್ಡಿ ಪಾವತಿಸಬೇಕಾಗಲಿದೆ.
- ತರಂಗಾಂತರ ಬಳಕೆ ವೆಚ್ಚವನ್ನು ತರ್ಕಬದ್ಧಗೊಳಿಸಲಾಗುವುದು. ಮಾಸಿಕದ ಬದಲು ವಾರ್ಷಿಕವಾಗಿ ದರ ಬದಲಾವಣೆ ಮಾಡಲಾಗುವುದು.
- ತರಂಗಾಂತರ ಹರಾಜಿಗೆ ನಿಗದಿತ ಸಮಯ ಮೀಸಲಿಡುವುದು ಮತ್ತು ಹಣಕಾಸು ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಅದು ಸಾಮಾನ್ಯವಾಗಿ ನಡೆಯಲಿದೆ.
- ತರಂಗಾಂತರ ಹಂಚಿಕೆಗೆ ಅನುಮತಿ ನೀಡಲಾಗುವುದು; ದೂರಸಂಪರ್ಕ ಆಪರೇಟರ್ಗಳು ತಮಗೆ ಲಾಭಕರ ಎನಿಸುವಲ್ಲಿ ತರಂಗಾಂತರ ಹಂಚಿಕೊಳ್ಳಬಹುದು.
- ಎಫ್ಡಿಐ: ಕೇಂದ್ರ ಸರ್ಕಾರವು ಈ ವಲಯದಲ್ಲಿ ಸ್ವಯಂಚಾಲಿತ ಮಾರ್ಗದಡಿಯಲ್ಲಿನ ಎಫ್ಡಿಐ ಅನ್ನು ಶೇ 49 ರಿಂದ ಶೇ 100ಕ್ಕೆ ಹೆಚ್ಚಿಸಿದೆ. ಆದರೆ, ಶೇ 100ರಷ್ಟು ಎಫ್ಡಿಐಗೆ ಅವಕಾಶ ಎನ್ನುವ ನಿಯಮವು ಭಾರತದ ಜೊತೆ ಗಡಿಯನ್ನು ಹಂಚಿಕೊಂಡಿರುವ ದೇಶಗಳಿಗೆ ಅನ್ವಯ ಆಗುವುದಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶ, ಚೀನಾ, ನೇಪಾಳ, ಮ್ಯಾನ್ಮಾರ್ ಮತ್ತು ಭೂತಾನ್ ದೇಶಗಳು ಭಾರತದ ಜೊತೆ ಗಡಿ ಹಂಚಿಕೊಂಡಿವೆ.
- ಲೈಸೆನ್ಸ್ ರಾಜ್ ರದ್ದತಿ: 1953ರ ಕಸ್ಟಮ್ಸ್ ಅಧಿಸೂಚನೆಯನ್ನು ತೆಗೆದುಹಾಕಲಾಗಿದೆ. ಇದರಿಂದ ದೂರಸಂಪರ್ಕ ಕಂಪೆನಿಗಳು ಸುಲಭವಾಗಿ ಸಲಕರಣೆಗಳನ್ನು ಆಮದು ಮಾಡಿಕೊಳ್ಳಬಹುದಾಗಿದೆ.