Published on: September 26, 2021
ತಲಾ ಆದಾಯ
ತಲಾ ಆದಾಯ
ಎಲ್ಲ ರಂಗಗಳಲ್ಲಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಜಿಲ್ಲೆಗಳು ಈ ವರ್ಷವೂ ತಲಾ ಆದಾಯದಲ್ಲಿ ಮತ್ತೆ ಕೊನೆ ಸ್ಥಾನ ಪಡೆದಿರುವುದು ಮತ್ತಷ್ಟು ಕಳವಳ ಉಂಟು ಮಾಡಿದೆ.
- ರಾಜ್ಯ ಸರಕಾರದ ಪ್ರಕಟಿಸಿದ 2020-21ನೇ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗವಾಗಿದ್ದು, ಸಂವಿಧಾನದ 371 ಜೆ ಜಾರಿಯಾಗಿದ್ದರೂ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) ಮತ್ತು ನಂಜುಂಡಪ್ಪ ವರದಿ ಅನ್ವಯ ಎಸ್ಡಿಪಿ ಅಡಿ ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಹಣ ನೀಡಿದ್ದರೂ ಆರ್ಥಿಕ ಸ್ಥಿತಿ ಮಾತ್ರ ಸುಧಾರಣೆಯಾಗಿಲ್ಲ.
ವರದಿಯಲ್ಲಿ ಏನಿದೆ ?
- ಬೆಂಗಳೂರು ನಗರ ಜಿಲ್ಲೆ ಆದಾಯ 96 ಲಕ್ಷ ರೂ. ಇದ್ದು, ಅಗ್ರಸ್ಥಾನದಲ್ಲಿದೆ. ಬೆಂಗಳೂರು ವಿಭಾಗದ ತಲಾ ಆದಾಯ 3 ಲಕ್ಷ ರೂ ಇದ್ದರೆ, ಕಲಬುರಗಿ ವಿಭಾಗದ ತಲಾ ಆದಾಯ 1.14 ಲಕ್ಷ ಇದೆ. ಅಂದರೆ ಬೆಂಗಳೂರಿಗಿಂತ ಅರ್ಧಕ್ಕಿಂತ ಕಡಿಮೆ ಇದೆ. ಇದು ಅಭಿವೃದ್ಧಿ ಅಂತರ ಮತ್ತು ಆರ್ಥಿಕ ಅಸಮತೋಲನ ಹೆಚ್ಚಿರುವುದನ್ನು ಸಮೀಕ್ಷೆ ಬೊಟ್ಟು ಮಾಡಿ ತೋರಿಸಿದೆ.
ಯಾಕೆ ಕಮ್ಮಿ?
- ದುಡಿಯುವ ಕೈಗಳಿದ್ದರೂ ಕೆಲಸ ಇಲ್ಲ. ಕಲ್ಯಾಣ ಕರ್ನಾಟಕದಲ್ಲಿ ಅತೀ ಹೆಚ್ಚು ಅಂದರೆ ಶೇ.39ರಷ್ಟು ಕೃಷಿ ಕೂಲಿಕಾರರು ಇದ್ದಾರೆ. ಆದರೆ ಕೃಷಿ ಲಾಭದಾಯಕವಾಗಿಲ್ಲ.
- ಮಳೆ ಆಧಾರಿತ ಕೃಷಿಯೇ ಹೆಚ್ಚು. ಒಳ್ಳೆ ಮಳೆ ಬಂದರೆ ಬೆಳೆ, ಇಲ್ಲದಿದ್ದರೆ ಇಲ್ಲ. ಕೃಷಿಯಲ್ಲಿ ಬದುಕು ರೂಪಿಸಿಕೊಳ್ಳುವುದು ದುಸ್ಥರ.
- ಕೈಗಾರಿಕೆಗಳು ಇಲ್ಲದೇ ಇದ್ದರಿಂದ ಜನರು ಮುಂಬೈ, ಪುಣೆ, ಹೈದರಾಬಾದ್, ಬೆಂಗಳೂರಿಗೆ ಕೆಲಸ ಅರಸಿ ವಲಸೆ ಹೋಗುತ್ತಾರೆ. ಇದರಲ್ಲಿ ಕಟ್ಟಡ ಕಾರ್ಮಿಕರು, ಇಟ್ಟಿಗೆ ಕೆಲಸಗಾರರೇ ಹೆಚ್ಚು. ಮಳೆಗಾಲಕ್ಕೆ ಅಲ್ಲಿ ಕೆಲಸ ಇಲ್ಲ, ಬಿರು ಬೇಸಿಗೆಯಲ್ಲಿ ಇಲ್ಲಿ ಕೆಲಸ ಇರಲ್ಲ. ಇದು ತಲಾ ಆದಾಯಕ್ಕೆ ಭಾರಿ ಹೊಡೆತ ಬೀಳುತ್ತದೆ
ಆರ್ಥಿಕ ಅಸಮತೋಲನೆ
- ಡಾ. ಡಿ.ಎಂ.ನಂಜುಂಡಪ್ಪ ವರದಿ ಅನ್ವಯ ರಾಜ್ಯದಲ್ಲಿ 39 ಅತ್ಯಂತ ಹಿಂದುಳಿದ ತಾಲೂಕುಗಳಿದ್ದು, ಅದರಲ್ಲಿ 21 ತಾಲೂಕುಗಳು ಕಲ್ಯಾಣ ಕರ್ನಾಟಕದಲ್ಲೇ ಇವೆ. ಈ ಭಾಗದ ಆರ್ಥಿಕತೆ ಸುಧಾರಿಸಲು ವಿಶೇಷ ಕಾರ್ಯಕ್ರಮ ರೂಪಿಸುವಂತೆಯೂ ಶಿಫಾರಸು ಮಾಡಿದೆ. ಹಲವು ಕ್ರಮ ಕೈಗೊಂಡರೂ ಹಿಂದುಳಿಕೆ ಮಾತ್ರ ಹೋಗಿಲ್ಲ.
- 2007-08ರಲ್ಲಿ ಜಾರಿಗೆ ತರಲಾದ ವಿಶೇಷ ಅಭಿವೃದ್ಧಿ ಯೋಜನೆ (ಎಸ್ಡಿಪಿ) ಅಡಿ ಇದುವರೆಗೆ 38,398 ಕೋಟಿ ರೂ ಮತ್ತು 371 ಜೆ ಅಡಿ ಕೆಕೆಆರ್ಡಿಬಿಗೆ 5,299 ಕೋಟಿ ರೂ.ಗಳನ್ನು ನೀಡಿದ್ದರೂ ಹಿಂದುಳಿಕೆ ಮುಂದುವರಿದಿದೆ.
ಆರ್ಥಿಕತೆ ಹೆಚ್ಚಲು ಏನು ಮಾಡಬೇಕು ?
- ತಲಾ ಆದಾಯ ಹೆಚ್ಚಾಗಬೇಕಾದರೆ ದೊಡ್ಡ ದೊಡ್ಡ ಕೈಗಾರಿಕೆಗಳು ಸ್ಥಾಪಿಸಿ ಜನರಿಗೆ ಕೆಲಸ ಸಿಗುವಂತಾಗಬೇಕು
- ದುಡಿಯುವ ಕೈಗಳಿಗೆ ಕೆಲಸ ಸಿಕ್ಕರೆ ತಲಾ ಆದಾಯ ಹೆಚ್ಚಾಗುತ್ತದೆ.
- ವಲಸೆ ಹೋಗುವುದನ್ನು ತಪ್ಪಿಸಲು ದೊಡ್ಡ ದೊಡ್ಡ ಕೈಗಾರಿಕೆಗಳು ಬರಬೇಕು. 50 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆ ಪೂರ್ಣಗೊಳಿಸಿ ರೈತರ ಹೊಲಗಳಿಗೆ ನೀರು ಹರಿಸಿ ಆರ್ಥಿಕ ಮಟ್ಟ ಹೆಚ್ಚಿಸಬೇಕು.
- ವಿಶೇಷ ಆರ್ಥಿಕ ಉತ್ತೇಜನ ನೀಡದ ಹೊರತು ಅಭಿವೃದ್ಧಿ ಅಸಾಧ್ಯ
ಆರ್ಟಿಕಲ್ 371 ಎಂದರೇನು?
- 369 ರಿಂದ 392 ರವರೆಗಿನ ಲೇಖನಗಳು ಸಂವಿಧಾನದ ಭಾಗ XXI ನಲ್ಲಿ ‘ತಾತ್ಕಾಲಿಕ, ಪರಿವರ್ತನೆ ಮತ್ತು ವಿಶೇಷ ನಿಬಂಧನೆಗಳು’ ಎಂಬ ಶೀರ್ಷಿಕೆಯಲ್ಲಿವೆ.
- ಸಂವಿಧಾನದ 371 ನೇ ವಿಧಿಯು ಈಶಾನ್ಯದ ಆರು ರಾಜ್ಯಗಳನ್ನು ಒಳಗೊಂಡಂತೆ 11 ರಾಜ್ಯಗಳಿಗೆ “ವಿಶೇಷ ನಿಬಂಧನೆಗಳನ್ನು” ಒಳಗೊಂಡಿದೆ.
- ಜನವರಿ 26, 1950 ರಂದು 370 ಮತ್ತು 371 ನೇ ಲೇಖನಗಳು ಸಂವಿಧಾನದ ಭಾಗವಾಗಿದ್ದವು; 371 ಎ ಇಂದ 371 ಜೆವರೆಗೆ ವಿಧಿಗಳನ್ನು ತರುವಾಯ ಸಂಯೋಜಿಸಲಾಯಿತು
ಆರ್ಟಿಕಲ್ 371 ಜೆ ಎಂದರೇನು?
- ಭಾರತದ ಸಂವಿಧಾನದ ಈ ಲೇಖನವು ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡುತ್ತದೆ.
- ಸಂವಿಧಾನದ 118 ಸಾಂವಿಧಾನಿಕ ತಿದ್ದುಪಡಿಯಲ್ಲಿ ಇದನ್ನು ಪರಿಚಯಿಸಲಾಗಿದೆ.
- ಆರ್ಟಿಕಲ್ 371 ಜೆ ಹೈದರಾಬಾದ್ ಕರ್ನಾಟಕ ಪ್ರದೇಶದ ಆರು ಹಿಂದುಳಿದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನವನ್ನು ನೀಡುತ್ತದೆ:
- ಪ್ರತ್ಯೇಕ ಅಭಿವೃದ್ಧಿ ಮಂಡಳಿ ಸ್ಥಾಪಿಸಿ
- ಪ್ರದೇಶದ ಅಭಿವೃದ್ಧಿಗೆ ಸಾಕಷ್ಟು ಹಣವನ್ನು ಹಂಚಿಕೆ ಮಾಡಲಾಗಿದೆಯೆಂದು ಮಂಡಳಿ ಖಚಿತಪಡಿಸುತ್ತದೆ.
- ಶಿಕ್ಷಣ ಮತ್ತು ಸರ್ಕಾರಿ-ಉದ್ಯೋಗಗಳಲ್ಲಿ ಸ್ಥಳೀಯ ಮೀಸಲಾತಿ (ನಿವಾಸದ ಅವಶ್ಯಕತೆ)
ತಲಾ ಆದಾಯ ಎಂದರೇನು?
- ತಲಾ ಆದಾಯವು ಒಂದು ರಾಷ್ಟ್ರ ಅಥವಾ ಭೌಗೋಳಿಕ ಪ್ರದೇಶದಲ್ಲಿ ಪ್ರತಿ ವ್ಯಕ್ತಿಗೆ ಗಳಿಸಿದ ಹಣದ ಅಳತೆಯಾಗಿದೆ. ತಲಾ ಆದಾಯವನ್ನು ಒಂದು ಪ್ರದೇಶದ ಸರಾಸರಿ ವ್ಯಕ್ತಿಯ ಆದಾಯವನ್ನು ನಿರ್ಧರಿಸಲು ಮತ್ತು ಜನಸಂಖ್ಯೆಯ ಜೀವನ ಮಟ್ಟ ಮತ್ತು ಜೀವನದ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲು ಬಳಸಬಹುದು. ರಾಷ್ಟ್ರದ ತಲಾ ಆದಾಯವನ್ನು ದೇಶದ ರಾಷ್ಟ್ರೀಯ ಆದಾಯವನ್ನು ಅದರ ಜನಸಂಖ್ಯೆಯಿಂದ ಭಾಗಿಸಿ ಲೆಕ್ಕಹಾಕಲಾಗುತ್ತದೆ.