Published on: September 29, 2021
35 ವಿಶೇಷ ಬೆಳೆ ತಳಿ
35 ವಿಶೇಷ ಬೆಳೆ ತಳಿ
ಸುದ್ಧಿಯಲ್ಲಿ ಏಕಿದೆ? ಪ್ರಧಾನಿ ನರೇಂದ್ರ ಮೋದಿ 35 ಬಗೆಯ ವಿವಿಧ ಬೆಳೆಗಳ ಸುಧಾರಿತ ತಳಿಯ ಬೀಜಗಳನ್ನು ದೇಶಕ್ಕೆ ಅರ್ಪಿಸಿದರು. ಈ ವಿಶೇಷ ತಳಿಗಳು ಹವಾಮಾನ ಬದಲಾವಣೆಗೆ ನಿರೋಧಕವಾಗಿರುವ ಜತೆಗೆ ಹೆಚ್ಚಿನ ಪೌಷ್ಟಿಕಾಂಶಗಳನ್ನು ಹೊಂದಿರಲಿವೆ. ಅಂದರೆ, ಈ ತಳಿಗಳು ಹವಾಮಾನ ಬದಲಾವಣೆಯ ಪರಿಣಾಮಕ್ಕೆ ಒಳಪಡುವುದಿಲ್ಲ. ಈ ತಳಿಗಳನ್ನು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) ಅಭಿವೃದ್ಧಿಪಡಿಸಿದೆ.
- ಅಭಿವೃದ್ಧಿ ಪಡಿಸಲಾಗಿರುವ ನೂತನ ತಳಿಗಳು ತಾಪಮಾನ ಬದಲಾವಣೆ ಸವಾಲು ಎದುರಿಸಲು ಪೂರಕವಾದ ಸ್ಥಿತಿಸ್ಥಾಪಕತ್ವ, ಅತ್ಯಧಿಕ ಪೌಷ್ಟಿಕಾಂಶವನ್ನು ಒಳಗೊಂಡಿದೆ.
- ಬರಗಾಲದ ಸಹಿಷ್ಣು ಮಾದರಿಯ ಕಡಲೆ, ಬೀಜ ನಿರೋಧಕ ಗುಣವುಳ್ಳ ತೊಗರಿ, ತ್ವರಿತವಾಗಿ ಫಸಲು ನೀಡುವ ಸೋಯಾಬೀನ್, ರೋಗನಿರೋಧಕ ಸಾಮರ್ಥ್ಯದ ಭತ್ತ, ಜೈವಿಕ ಬಲವರ್ಧಿತವಾದ ಗೋಧಿ, ಜೋಳ, ತೊಗರಿ, ರಾಗಿ, ನವಣೆ ಅಕ್ಕಿ, ಹುರುಳಿ ಬೆಳೆಗಳ ತಳಿಗಳು ಇವುಗಳಲ್ಲಿ ಸೇರಿವೆ.
- ವಿಶೇಷ ಗುಣಗಳಿರುವ ಈ ತಳಿಗಳು ಪೌಷ್ಟಿಕಾಂಶ ನಿರೋಧಕ ಶಕ್ತಿಯನ್ನೂ ಹೊಂದಿವೆ. ಕೆಲವು ತಳಿಗಳಲ್ಲಿರುವ ಅಂಶಗಳು ಮನುಷ್ಯ, ಪ್ರಾಣಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದವು. ಇದು ಆ ಕೊರತೆ ನೀಗಿಸಲಿದೆ.
ಇತ್ತೀಚೆಗೆ 17 ಹೊಸ ತಳಿಯ ಬೆಳೆಗಳನ್ನು ಸಮರ್ಪಿಸಿದ್ದ ಮೋದಿ
- ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗಷ್ಟೇ 17 ಬಗೆಯ ಜೈವಿಕವಾಗಿ ಸುಧಾರಿಸಲಾದ ಹೊಸ ತಳಿಯ ಬೆಳೆಗಳನ್ನು ದೇಶದ ಕೃಷಿ ವಲಯಕ್ಕೆ ಸಮರ್ಪಿಸಿದ್ದರು. ಸಿರಿಧಾನ್ಯಗಳು ಮತ್ತು ಅಗತ್ಯ ಪೋಷಕಾಂಶಗಳ ಬೆಳೆಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಸುಧಾರಿತ ತಳಿಗಳನ್ನು ಅಭಿವೃದ್ಧಿಪಡಿಸಲಾಗಿತ್ತು.
- ಭಾರತದಲ್ಲಿ ಅಪೌಷ್ಠಿಕತೆ ನಿವಾರಣೆಗೆ ಕೇಂದ್ರ ಸರ್ಕಾರ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅನುಷ್ಠಾನಗೊಳಿಸುತ್ತಿದೆ.
- ಈ ನಿಟ್ಟಿನಲ್ಲಿ ನವಣೆ ಸೇರಿದಂತೆ ಸಿರಿಧಾನ್ಯಗಳು ಮತ್ತು ಅಗತ್ಯ ಆಹಾರ ಧಾನ್ಯಗಳ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೃಷಿಕರಿಗೆ ಅಧಿಕ ಇಳಿವರಿ ನೀಡುವ 17 ಜೈವಿಕವಾಗಿ ಸುಧಾರಿಸಲಾದ ಹೊಸ ತಳಿಯ ಬೆಳೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ. ಇದರಿಂದ ಸುರಕ್ಷಿತ ಆಹಾರ ಧಾನ್ಯದ ಜತೆಗೆ ರೈತರ ಆದಾಯವೂ ದ್ವಿಗುಣಗೊಳ್ಳಲು ನೆರವಾಗುತ್ತದೆ