Published on: October 18, 2021
ಸುದ್ಧಿ ಸಮಾಚಾರ 18 ಅಕ್ಟೋಬರ್ 2021
ಸುದ್ಧಿ ಸಮಾಚಾರ 18 ಅಕ್ಟೋಬರ್ 2021
- ಚೀನಾದಿಂದ ರೇಷ್ಮೆ ಜಿಲ್ಲೆಗೆ (ರಾಮನಗರ) ದಶಕದ ಹಿಂದೆ ಪ್ರಾಯೋಗಿಕ ಪರೀಕ್ಷಾರ್ಥವಾಗಿ ಬಂದ ಆಟೋಮೆಟಿಕ್ ರೀಲರ್ ಮೆಷಿನ್ (ಎಆರ್ಎಂ) ಇದೀಗ ಜಿಲ್ಲೆಯಲ್ಲಿ ಹಂತ ಹಂತವಾಗಿ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಾ ಸಾಗಿದೆ. ‘ಡೀನಿಯಲ್ ಇಂಡಿಕೇಟರ್’ ಎಂಬ ನೂಲಿನ ಸಾಮರ್ಥ್ಯ ಮತ್ತು ಗುಣಮಟ್ಟ ಗುರುತಿಸುವ ಅತ್ಯಾಧುನಿಕ ವ್ಯವಸ್ಥೆಯೇ ಇದರಲ್ಲಿದೆ. ಇದರಿಂದ ರೇಷ್ಮೆದಾರದ ಗುಣಮಟ್ಟವನ್ನು ನಿಖರವಾಗಿ ತಿಳಿಯಬಹುದು. ಎಳೆಎಳೆಯಾಗಿ ಹರಿದುಬರುತ್ತಾ ಇರುವ ರೇಷ್ಮೆ ನೂಲಿನ ಗುಣಮಟ್ಟದಲ್ಲಿ ಸ್ವಲ್ಪ ಮಾತ್ರದ ವ್ಯತ್ಯಾಸವಾದರೂ ಈ ‘ಡೀನಿಯಲ್ ಇಂಡಿಕೇಟರ್’ ತಕ್ಷಣ ನೂಲಿನ ಲೋಪವನ್ನು ತೋರಿಸಿ ಗುಣಮಟ್ಟ ಕಾಯುತ್ತದೆ.
- ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಕಳೆದ 10 ದಿನಗಳಿಂದ ಭೂಕಂಪನವಾಗುತ್ತಿರುವುದರಿಂದ ಹೈದರಾಬಾದಿನ ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ(ಎನ್ಜಿಆರ್ಐ) ವಿಜ್ಞಾನಿಗಳ ತಂಡ ಭೇಟಿ ನೀಡಿ ಭೂಕಂಪನದ ಅಲೆಯನ್ನು ಅಳೆಯಲು ಸಿಸ್ಮೋಮೀಟರ್ ಅನ್ನು ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಿದೆ.
- ದಿಲ್ಲಿ ವಾಯುಮಾಲಿನ್ಯ ನಿಯಂತ್ರಿಸಲು ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರಕಾರ ಸಾಕಷ್ಟು ಮುಂಚಿತವಾಗಿಯೇ ಕಾರ್ಯಪ್ರವೃತ್ತವಾಗಿದೆ. ಇದರ ಭಾಗವಾಗಿ ‘ಕೆಂಪು ದೀಪ ಹತ್ತಿದ ತಕ್ಷಣ ಎಂಜಿನ್ ಆಫ್ ಮಾಡಿ’ ಅಭಿಯಾನಕ್ಕೆ ಅ.18ರಂದು ಚಾಲನೆ ನೀಡಲಿದೆ.
- ಅಕ್ಟೋಬರ್ 6ರಿಂದಲೇ ಮುಂಗಾರು ಹಿಂತೆಗೆತ ಆರಂಭವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದರೂ, ಕೇರಳದಲ್ಲಿ ಮಾತ್ರ ಭಾರಿ ಮಳೆಯಾಗುತ್ತಿದೆ. ಇದನ್ನೂ ಮುಂಗಾರು ಅಂತ್ಯದ ಸೂಚನೆ ಎಂದೇ ವಿಶ್ಲೇಷಿಸಲಾಗುತ್ತಿದೆ. ದೇಶದಲ್ಲಿ ಸತತ ಐದು ದಿನ ಮಳೆಯಾಗದಿದ್ದರೆ ಅಥವಾ ಒಣ ಹವೆ ಇದ್ದರೆ ಆಗ ಮುಂಗಾರು ಅಂತ್ಯವಾಗಿದೆ ಎಂದು ಘೋಷಿಸಲಾಗುತ್ತದೆ.
- ಸಕ್ಕರೆಗೆ ಹೋಲಿಸಿದರೆ ಎಥನಾಲ್ ಉತ್ಪಾದನೆಯಲ್ಲಿ ಲಾಭದ ಪ್ರಮಾಣ ಅಧಿಕ. ಹೀಗಾಗಿ, ರಾಜ್ಯದ ಹಲವು ಸಕ್ಕರೆ ಕಾರ್ಖಾನೆಗಳು ಎಥನಾಲ್ ಉತ್ಪಾದನೆಗೆ ಆಸಕ್ತಿ ತೋರುತ್ತಿವೆ. ಇದು ಪ್ರಮುಖ ಜೈವಿಕ ಇಂಧನಗಳಲ್ಲಿ ಒಂದಾಗಿದೆ, ಇದು ನೈಸರ್ಗಿಕವಾಗಿ ಯೀಸ್ಟ್ಗಳಿಂದ ಸಕ್ಕರೆ ಹುದುಗುವಿಕೆ ಅಥವಾ ಎಥಿಲೀನ್ ಹೈಡ್ರೇಶನ್ನಂತಹ ಪೆಟ್ರೋಕೆಮಿಕಲ್ ಪ್ರಕ್ರಿಯೆಗಳ ಮೂಲಕ ಉತ್ಪತ್ತಿಯಾಗುತ್ತದೆ.