Published on: October 20, 2021
ವಿಶ್ವ ಚಿನ್ನ ಪರಿಷತ್ ವರದಿ
ವಿಶ್ವ ಚಿನ್ನ ಪರಿಷತ್ ವರದಿ
ಸುದ್ಧಿಯಲ್ಲಿ ಏಕಿದೆ? ವಿಶ್ವ ಚಿನ್ನ ಪರಿಷತ್ತು, ಭಾರತೀಯ ಚಿನ್ನ ಮಾರುಕಟ್ಟೆಯ ಆಳ – ವಿಸ್ತೃತ ವಿಶ್ಲೇಷಣೆಯ ಸರಣಿಯ ಮೊದಲ ಕಂತಾದ ‘ಭಾರತೀಯ ಚಿನ್ನ ಬೇಡಿಕೆಯ ಚಾಲಕರು’ ಎಂಬ ವರದಿಯನ್ನು ಬಿಡುಗಡೆಗೊಳಿಸಿದೆ.
ವರದಿಯಲ್ಲಿ ಏನಿದೆ ?
- ಎಕನೋಮೆಟ್ರಿಕ್ ಮಾದರಿಯನ್ನು ಬಳಸಿ ತಯಾರಾಗಿರುವ ಈ ವರದಿ, 1990 ರಿಂದ 2020 ರವರೆಗಿನ ಮೂರು ದಶಕಗಳ ವಾರ್ಷಿಕ ದತ್ತಾಂಶಗಳ ಮೇಲೆ ಬೆಳಕು ಚೆಲ್ಲಿದ್ದು, ಭಾರತದ ಚಿನ್ನದ ಬೇಡಿಕೆಯ ಮೇಲಿನ ಕೆಲ ಪ್ರಮುಖ ಪ್ರಭಾವಗಳ ಕುರಿತು ವಿಶ್ಲೇಷಿಸಿದೆ.
- ಈ ವರದಿಯು ಪ್ರಮಾಣ ಹಾಗೂ ಗುಣಮಟ್ಟ ಎರಡೂ ದೃಷ್ಟಿಕೋನದಿಂದ ಚಿನ್ನದ ಬೇಡಿಕೆಯನ್ನು ವಿಶ್ಲೇಷಿಸಿದೆ. ಭಾರತದಲ್ಲಿ ದೀರ್ಘಾವಧಿ ಹಾಗೂ ಅಲ್ಪಾವಧಿಯ ಚಿನ್ನದ ಬೇಡಿಕೆಯ ಸಮಗ್ರ ವಿಶ್ಲೇಷಣೆಯ ಜೊತೆಗೆ, ಈ ಬೇಡಿಕೆಯನ್ನು ರೂಪಿಸುವ ಜನಸಂಖ್ಯಾ ಶಾಸ್ತ್ರ, ಸಾಮಾಜಿಕ – ಆರ್ಥಿಕ ಮತ್ತು ಸಂಬಂಧಿಸಿದ ಬೆಳವಣಿಗೆಗಳನ್ನು ಪರಿಶೀಲಿಸುತ್ತದೆ. ಇದು ಭವಿಷ್ಯದ ಬೇಡಿಕೆಯ ಏರುಪೇರಿನ ಮೇಲೆ ಕೂಡ ಬೆಳಕು ಚೆಲ್ಲುತ್ತದೆ.
- ಆದಾಯದ ಹೆಚ್ಚಳವೇ ದೀರ್ಘಾವಧಿಯಲ್ಲಿ ಚಿನ್ನದ ಬೇಡಿಕೆಯ ಏರಿಕೆಗೆ ಕಾರಣ. ಇದಕ್ಕೆ ದೇಶದ ಸದೃಢ ಜನಸಂಖ್ಯಾ ಶಾಸ್ತ್ರದ ಆರ್ಥಿಕತೆ ಕೂಡ ಪೂರಕವಾಗಿದೆ. ಆದರೂ, ಇಳಿಮುಖವಾಗುತ್ತಿರುವ ಕುಟುಂಬಗಳ ಉಳಿತಾಯ ಮತ್ತು ಕೃಷಿ ಆದಾಯದಿಂದ ಭಾರತದಲ್ಲಿ ಚಿನ್ನದ ಬೇಡಿಕೆ ಅಲ್ಪಾವಧಿಯ ಸವಾಲುಗಳನ್ನು ಎದುರಿಸುತ್ತಿದೆ.
- ಪ್ರಸ್ತುತ ನೀತಿ ತಯಾರಕರು ಚಿನ್ನದ ಬೇಡಿಕೆಯನ್ನು ಆಮದುಗಳ ದೃಷ್ಟಿಕೋನದ ಮೂಲಕ ಮಾತ್ರ ನೋಡುತ್ತಾರೆ. ಹೆಚ್ಚುವರಿಯಾಗಿ, ಜನರ ನಂಬಿಕೆ ಗಳಿಸಲು ಮತ್ತು ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಉದ್ಯಮದ ಪ್ರಯತ್ನಗಳು ಹೆಚ್ಚು ಒಗ್ಗಟ್ಟಾಗಿರಬೇಕು ಎಂದು ವರದಿಯು ಎತ್ತಿ ತೋರಿಸುತ್ತದೆ.
ವಿಶ್ವ ಚಿನ್ನದ ಪರಿಷತ್ತಿನ ಅಭಿಪ್ರಾಯ
- ಸಾಂಸ್ಕೃತಿಕ ಬಾಂಧವ್ಯ, ದೀರ್ಘಕಾಲದ ಸಂಪ್ರದಾಯ ಮತ್ತು ಹಬ್ಬಗಳಲ್ಲಿ ಉಡುಗೊರೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಇದು ಕಳೆದ ಮೂರು ದಶಕಗಳಲ್ಲಿ ಭಾರತದ ಚಿನ್ನದ ಬೇಡಿಕೆಯನ್ನು ಹೆಚ್ಚಿಸಿದೆ. ಭಾರತದ ಹೂಡಿಕೆದಾರರು ಮನೆಯ ಆದಾಯ, ಚಿನ್ನದ ಬೆಲೆ ಮತ್ತು ಹಣದುಬ್ಬರಗಳಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ವರದಿ ಇಂದು ಹಾಗೂ ಭವಿಷ್ಯದಲ್ಲಿ ಚಿನ್ನದ ಬೇಡಿಕೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ
ವರದಿಯ ಪ್ರಮುಖ ಅಂಶಗಳು
ಚಿನ್ನದ ದೀರ್ಘಾವಧಿಯ ಗ್ರಾಹಕರ ಬೇಡಿಕೆಗಳ ಮೇಲೆ ಮೂರು ಪ್ರಮುಖ ಅಂಶಗಳು ಪ್ರಭಾವ ಬೀರುತ್ತವೆ.
- ಆದಾಯ: ಶೇ. 1ರಷ್ಟು ರಾಷ್ಟ್ರೀಯ ತಲಾದಾಯ ಹೆಚ್ಚಳವಾದಲ್ಲಿ ಚಿನ್ನದ ಬೇಡಿಕೆ ಶೇ. 0.9ರಷ್ಟು ಏರಿಕೆಯಾಗುತ್ತದೆ.
- ಚಿನ್ನದ ದರ: ಚಿನ್ನದ ರೂಪಾಯಿ ಆಧಾರಿತ ಬೆಲೆಯಲ್ಲಿ ಶೇ.1ರಷ್ಟು ಏರಿಕೆಯಾದಾಗ, ಬೇಡಿಕೆ ಶೇ.0.4ರಷ್ಟು ಕಡಿಮೆಯಾಗುತ್ತದೆ.
- ಸರ್ಕಾರಿ ಸುಂಕಗಳು: ಆಮದು ಸುಂಕ ಮತ್ತು ಇತರ ತೆರಿಗೆಗಳು ದೀರ್ಘಾವಧಿಯ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತವೆ. ಆದರೆ ಅದು ಚಿನ್ನವನ್ನು ಆಭರಣಗಳು ಅಥವಾ ಬಾರ್ಗಳು ಮತ್ತು ಕಾಯಿನ್ ಹೀಗೆ ಅದರ ಖರೀದಿಯ ಪ್ರಕಾರವನ್ನು ಆಧರಿಸಿರುತ್ತದೆ.
ಚಿನ್ನದ ಅಲ್ಪಾವಧಿ ಬೇಡಿಕೆಯ ಮೇಲೆ ಪ್ರಭಾವ ಬೀರುವ ಅಂಶಗಳು
- ಹಣದುಬ್ಬರ: ಪ್ರಪಂಚದಾದ್ಯಂತದ ಹೂಡಿಕೆದಾರಂತೆಯೇ ಭಾರತೀಯ ಉಳಿತಾಯಗಾರರು ಚಿನ್ನವನ್ನು ಹಣದುಬ್ಬರಕ್ಕೆ ತಡೆ ಎಂದು ಪರಿಗಣಿಸುತ್ತಾರೆ. ಹಣದುಬ್ಬರದಲ್ಲಿ ಪ್ರತಿ ಶೇ.1ರಷ್ಟು ಹೆಚ್ಚಳಕ್ಕೆ ಚಿನ್ನದ ಬೇಡಿಕೆ ಶೇ.2.6ರಷ್ಟು ಹೆಚ್ಚಾಗುತ್ತದೆ.
- ಚಿನ್ನದ ಬೆಲೆಯಲ್ಲಿ ಬದಲಾವಣೆ: ನಿರಂತರ ದರದ ಹೆಚ್ಚಳ ಮತ್ತು ಕಡಿತ ದೀರ್ಘಾವಧಿಯ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತದೆ. ತ್ವರಿತ ದರದ ಬದಲಾವಣೆ ಅಲ್ಪಾವಧಿ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತದೆ. ಪ್ರತಿ ಶೇ.1ರಷ್ಟು ಚಿನ್ನದ ಬೆಲೆ ಕಡಿತದಿಂದ ಬೇಡಿಕೆ ಶೇ.1.2ರಷ್ಟು ಹೆಚ್ಚಾಗುತ್ತದೆ.
- ತೆರಿಗೆ ಅವಧಿ: 2012ರಿಂದ ಆಮದು ಸುಂಕದ ದರದ ಹೆಚ್ಚಳದಿಂದ ಪ್ರತಿ ವರ್ಷ ಚಿನ್ನದ ಬೇಡಿಕೆ ಶೇ.1.2ರಷ್ಟು ಕಡಿಮೆಯಾಗಿದೆ.
- ಹೆಚ್ಚುವರಿ ಮಳೆ: ಮುಂಗಾರು ಕೂಡ ಗ್ರಾಹಕರ ವರ್ತನೆಯ ಮೇಲೆ ಪ್ರಭಾವ ಬೀರುತ್ತದೆ. ಶೇ.1ರಷ್ಟು ಮಳೆಯ ಹೆಚ್ಚಳದಿಂದ, ಶೇ.0.2ರಷ್ಟು ಚಿನ್ನದ ಬೇಡಿಕೆ ಹೆಚ್ಚಾಗುತ್ತದೆ.
ಭಾರತದಲ್ಲಿ ಭವಿಷ್ಯದ ಚಿನ್ನದ ಬೇಡಿಕೆಯ ಹೊರನೋಟ
- ಈ ವರ್ಷ ಕೋವಿಡ್-19 ಸಾಂಕ್ರಾಮಿಕದ ಸುದೀರ್ಘ ಹೋರಾಟದಿಂದ ದೇಶದಲ್ಲಿ ಚಿನ್ನದ ಬೇಡಿಕೆ ನಿಯಂತ್ರಣದಲ್ಲಿತ್ತು.
- ದೇಶಾದ್ಯಂತ ನಿರ್ಬಂಧಗಳು ನಿಧಾನವಾಗಿ ಸಡಿಲಗೊಳ್ಳುತ್ತಿರುವುದರಿಂದ ಆಮದು ಸದೃಢಗೊಳ್ಳುವ ಮತ್ತು ಚಿಲ್ಲರೆ ಮಾರಾಟದ ಬೇಡಿಕೆ ಏರಿಕೆಯ ನಿರೀಕ್ಷೆಯಿದೆ.
- 2022ರಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಬಂಗಾರದ ಬೇಡಿಕೆಯ ಪ್ರಭಾವ ಬಲಗೊಳ್ಳುವ ಸಾಧ್ಯತೆಯಿದೆ. ಆದರೂ ಯಾವುದೇ ಭವಿಷ್ಯದ ಕರೋನಾ ವೈರಸ್ ಸೋಂಕು ಏಕಾಏಕಿ ಮತ್ತಷ್ಟು ಅನಿಶ್ಚಿತತೆಗಳನ್ನು ಸೃಷ್ಟಿಸಬಹುದು.
- ಉದ್ಯಮವು ಹೆಚ್ಚು ಪಾರದರ್ಶಕ, ಹೆಚ್ಚು ಪ್ರಮಾಣಿತ ಮತ್ತು ಜಾಗತಿಕ ಸ್ನೇಹಿ ಕ್ರಮಗಳನ್ನು ತೆಗೆದುಕೊಂಡರೆ, ಭಾರತದ ಚಿನ್ನದ ಮಾರುಕಟ್ಟೆಯು ಪ್ರಯೋಜನ ಪಡೆಯುತ್ತದೆ.