ಚೀನಾದಿಂದ ಹೊಸ ಭೂ ಗಡಿ ಕಾನೂನು
ಚೀನಾದಿಂದ ಹೊಸ ಭೂ ಗಡಿ ಕಾನೂನು
ಸುದ್ಧಿಯಲ್ಲಿ ಏಕಿದೆ? ಚೀನಾ ದೇಶದ ಅಖಂಡತೆ ಹಾಗೂ ಸಾರ್ವಭೌಮತ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಚೀನಾ ತಾನು ನೂತನ ಭೂ ಗಡಿ ಕಾನೂನನ್ನು ಜಾರಿಗೆ ತರುತ್ತಿರುವುದಾಗಿ ಘೋಷಿಐದೆ. ಚೀನಾ ಸಂಸತ್ತಿನಲ್ಲಿ ಈ ಕಾನೂನಿಗೆ ಒಪ್ಪಿಗೆ ದೊರೆತಿದ್ದು ಮುಂದಿನ ವರ್ಷ ಜನವರಿ1 ರಿಂದ ಅನುಷ್ಠಾನಕ್ಕೆ ಬರಲಿದೆ.
ಹೊಸ ಕಾನೂನಿನಲ್ಲಿ ಏನಿದೆ ?
- ಚೀನಾ ಭೂಗಡಿಯಲ್ಲಿ ಯಾವುದೇ ರೀತಿಯಲ್ಲಿ ಉಲ್ಲಂಘನೆ ಕಂಡುಬಂದರೆ ಹಾಗೂ ತನ್ನ ದೇಶದ ಅಖಂಡತೆಗೆ ಧಕ್ಕೆ ಒದಗಿಬಂಡರೆ ತನ್ನ ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳಲು ಈ ಕಾನೂನು ಚೀನಾಗೆ ಅನುವು ಮಾಡಿಕೊಡಲಿದೆ.
- ಈ ನೂತನ ಕಾನೂನಿನಲ್ಲಿ ಗಡಿ ಬಲವರ್ಧನೆ ಮಾತ್ರವಲ್ಲದೆ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಗಡಿ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ನಿರ್ಮಾಣ ಹಾಗೂ ಅಲ್ಲಿನ ಜನರ ಜೀವನ ಸದೃಢಗೊಳಿಸುವ ಕಾರ್ಯಕ್ರಮಗಳ ಕುರಿತಾಗಿ ಉಲ್ಲೇಖವಿದೆ.
ಭೂ ಗಡಿ ರಕ್ಷಣೆಗೆ ಸಂಬಂಧಿಸಿದಂತೆ ಈ ಕಾನೂನು ಏನು ಹೇಳುತ್ತದೆ ಎಂಬುದರ ವಿವರ ಹೀಗಿದೆ.
- ವಿವಾದಿತ ಗಡಿ ಮತ್ತು ದೀರ್ಘಾವಧಿಯಿಂದ ಇರುವ ಗಡಿ ಸಂಘರ್ಷವನ್ನು ಹೇಗೆ ಬಗೆಹರಿಸಿಕೊಳ್ಳಬೇಕು ಎಂಬುದನ್ನು ಈ ಕಾನೂನಿನಲ್ಲಿ ವಿವರಿಸಲಾಗಿದೆ. ‘ಪರಸ್ಪರರ ಗೌರವಕ್ಕೆ ಚ್ಯುತಿ ಬರದೇ ಇರುವ ರೀತಿಯಲ್ಲಿ, ಪರಸ್ಪರರ ಹಿತಾಸಕ್ತಿಗೆ ಅನುಗುಣವಾಗಿ, ಸ್ನೇಹಕ್ಕೆ ಧಕ್ಕೆ ಬರದೇ ಇರುವ ರೀತಿಯಲ್ಲಿ ಮಾತುಕತೆಯ ಮೂಲಕ ಇಂತಹ ಗಡಿ ವಿವಾದಗಳನ್ನು ಬಗೆಹರಿಸಿಕೊಳ್ಳಬೇಕು. ಈ ಸಂದರ್ಭದಲ್ಲಿ ದೇಶದ ಸಾರ್ವಭೌಮತೆಗೆ ಧಕ್ಕೆ ಬರದಂತೆ ಎಚ್ಚರವಹಿಸಬೇಕು’ ಎಂದು ಈ ಕಾನೂನಿನಲ್ಲಿ ವಿವರಿಸಲಾಗಿದೆ.
- ಭಾರತ ಮತ್ತು ಭೂತಾನ್ ಜತೆಗೆ ಚೀನಾ ಹೊಂದಿರುವ ಗಡಿ ವಿವಾದವು ತೀವ್ರವಾಗಿದೆ. ಈ ಹಿಂದಿನ ಎರಡು ವರ್ಷಗಳಲ್ಲಿ ಎರಡೂ ದೇಶಗಳ ಜತೆಗೆ ಚೀನಾ ಗಡಿ ಸಂಘರ್ಷ ನಡೆಸುತ್ತಲೇ ಇದೆ. ಎರಡೂ ದೇಶಗಳ ಜತೆಗೆ ಮಾತುಕತೆಯ ಮೂಲಕವೇ ಸಂಘರ್ಷ ಬಗೆಹರಿಸಿಕೊಳ್ಳಲು, ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ಆದರೆ ಸಂಘರ್ಷಕ್ಕೆ ಯಾವುದೇ ತಾರ್ಕಿಕ ಅಂತ್ಯ ದೊರೆತಿಲ್ಲ.
- ‘ದೇಶದ ಗಡಿಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕು. ಇದರಿಂದ ಗಡಿ ಪ್ರದೇಶ ಅಭಿವೃದ್ಧಿಯಾಗುವುದಲ್ಲದೆ, ತುರ್ತು ಸಂದರ್ಭದಲ್ಲಿ ಸೇನಾ ಕಾರ್ಯಚರಣೆಗೆ ನೆರವಾಗಲಿದೆ’ ಎಂದು ಈ ಕಾನೂನು ವಿವರಿಸುತ್ತದೆ.
- ಆದರೆ ಭಾರತದ ಜತೆಗೆ ವಿವಾದವಿರುವ ಎಲ್ಎಸಿಯ ಉದ್ದಕ್ಕೂ ಚೀನಾ ಅಭಿವೃದ್ಧಿ ಕಾರ್ಯಗಳನ್ನು ಈಗಾಗಲೇ ನಡೆಸುತ್ತಿದೆ. ಸರ್ವಋತು ಹೆದ್ದಾರಿ, ರೈಲು ಮಾರ್ಗಗಳು ಮತ್ತು ಇಂಧನ ಕೊಳವೆ ಮಾರ್ಗಗಳನ್ನು ಅಭಿವೃದ್ಧಿಪಡಿಸಿದೆ. ಎಲ್ಎಸಿಯಿಂದ ಕೆಲವೇ ಕಿ.ಮೀ. ಸಮಾನಾಂತರವಾಗಿ ಈ ಮಾರ್ಗಗಳು ಹಾದು ಹೋಗುತ್ತವೆ. ಈವರೆಗೆ ಇಂತಹ ಪ್ರದೇಶದಲ್ಲಿ 600 ಗ್ರಾಮಗಳನ್ನು ಚೀನಾ ಅಭಿವೃದ್ಧಿಪಡಿಸಿದೆ. ಆದರೆ ಈಗ ಈ ಅಭಿವೃದ್ಧಿ ಕಾರ್ಯಗಳನ್ನು ಹೊಸ ಕಾನೂನಿನ ಮೂಲಕ ಸಮರ್ಥಿಸಿಕೊಂಡಂತಾಗಿದೆ.
ಗಡಿಯಲ್ಲಿ ಆಗಬೇಕು ಎಂದು ಚೀನಾ ಹೇಳಿರುವ ಅಭಿವೃದ್ಧಿಯ ಯೋಜನೆಗಳು ಈ ಮುಂದಿನಂತಿವೆ.
- ಗಡಿ ಗ್ರಾಮಗಳಲ್ಲಿ ಕೇವಲ ಸೇನೆ ಇರುವಿಕೆಯನ್ನು ಹೆಚ್ಚಿಸಿದರೆ, ಹೆಚ್ಚು ಅನುಕೂಲವಿಲ್ಲ. ಬದಲಿಗೆ ಅಲ್ಲಿನ ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸಬೇಕು. ಅವರ ಸಂಸ್ಕೃತಿಯನ್ನು ರಕ್ಷಿಸಬೇಕು. ಆರ್ಥಿಕ ಸ್ಥಿತಿ ಸುಧಾರಿಸಿದರೆ, ಅಲ್ಲಿನ ಜೀವನಮಟ್ಟ ಸುಧಾರಿಸುತ್ತದೆ. ಅದರಿಂದ ಗಡಿ ಪ್ರದೇಶಗಳಲ್ಲಿ ಸೇನೆ ಇರುವಿಕೆಗೆ ಹೆಚ್ಚು ನೆರವು ದೊರೆಯುತ್ತದೆ
- ಗಡಿ ಗ್ರಾಮಗಳಿಗೆ ಉತ್ತಮ-ಸರ್ವಋತು ರಸ್ತೆ ಮತ್ತು ರೈಲು ಮಾರ್ಗಗಳನ್ನು ನಿರ್ಮಿಸಬೇಕು. ಈ ಮೂಲಕ ಆ ಗಡಿ ಗ್ರಾಮಗಳಿಗೆ ವಾಣಿಜ್ಯ ಮತ್ತು ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸಬೇಕು. ಇದರಿಂದ ಗಡಿ ಗ್ರಾಮಗಳು ಶಕ್ತವಾಗುತ್ತವೆ. ಗಡಿ ಪ್ರದೇಶಗಳಲ್ಲಿ ಭದ್ರತಾ ಯೋಜನೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ
- ಗಡಿ ಗ್ರಾಮಗಳಿಗೆ ಪೆಟ್ರೋಲ್-ಡೀಸೆಲ್ ಮತ್ತು ಅಡುಗೆ ಅನಿಲವನ್ನು ವರ್ಷದ ಎಲ್ಲಾ ಋತುಗಳಲ್ಲೂ ನಿರಂತರವಾಗಿ ಪೂರೈಕೆ ಮಾಡಲು ಅನುಕೂಲವಾಗುವಂತಹ ಕೊಳವೆ ಮಾರ್ಗವನ್ನು ಅಭಿವೃದ್ಧಿಪಡಿಸಬೇಕು. ಇದರಿಂದ ಈ ಜನರಿಗೆ ಅತ್ಯಗತ್ಯದ, ಜೀವನ ನಿರ್ವಹಣೆಯ ಸರಕುಗಳು ಸುಲಭವಾಗಿ ಲಭ್ಯವಿರುವಂತೆ ಆಗುತ್ತದೆ
ಈ ಎಲ್ಲಾ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದರೆ, ಅಂತಿಮವಾಗಿ ಅದು ಚೀನಾ ಸೇನೆಯ ಕಾರ್ಯಾಚರಣೆಗೆ ನೆರವಾಗುತ್ತದೆ. ರಸ್ತೆ ಮತ್ತು ರೈಲು ಮಾರ್ಗವನ್ನು ಅಭಿವೃದ್ಧಿಪಡಿಸಿದರೆ, ತುರ್ತು ಸಂದರ್ಭದಲ್ಲಿ ಸೈನಿಕರು ಮತ್ತು ಸೇನಾ ಸಾಮಗ್ರಿಗಳನ್ನು ಗಡಿಗೆ ತ್ವರಿತವಾಗಿ ಸಾಗಿಸಲು ಸಾಧ್ಯವಾಗುತ್ತದೆ. ಇಂಧನ ಕೊಳವೆ ಮಾರ್ಗ ಅಭಿವೃದ್ಧಿಯಾದರೆ, ಗಡಿ ಸಂಘರ್ಷವು ದೀರ್ಘಾವಧಿಯವರೆಗೆ ವಿಸ್ತರಿಸಿದರೆ ಅಗತ್ಯವಿರುವ ಇಂಧನವನ್ನು ನಿರಂತರವಾಗಿ ಪೂರೈಸಲು ಸಾಧ್ಯವಾಗುತ್ತದೆ.
ಅಧಿಕಾರ ಕೇಂದ್ರೀಕರಣ
- ಚೀನಾ ದೇಶವು ಇತ್ತೀಚೆಗೆ ಅಳವಡಿಸಿಕೊಳ್ಳುತ್ತಿರುವ ವಿದೇಶಾಂಗ ನೀತಿ, ಗಡಿ ನೀತಿ, ಆಂತರಿಕ ನೀತಿಗಳೆಲ್ಲವೂ ಅಧ್ಯಕ್ಷ ಷಿ ಜಿನ್ಪಿಂಗ್ ಅವರ ಅಧಿಕಾರವನ್ನು ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶವನ್ನು ಹೊಂದಿವೆ. 2012ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಜಿನ್ಪಿಂಗ್ ಅವರು ದೇಶದ ಏಕೈಕ ರಾಜಕೀಯ ಪಕ್ಷ ಚೀನಾ ಕಮ್ಯುನಿಸ್ಟ್ ಪಕ್ಷದ ಮೇಲಿನ ಹಿಡಿತವನ್ನು ಗಟ್ಟಿಗೊಳಿಸುತ್ತಲೇ ಸಾಗಿದ್ದಾರೆ. ಸರ್ಕಾರದಲ್ಲಿ ಕೂಡ ಅವರು ತಮ್ಮ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದಾರೆ.
- ಒಬ್ಬ ವ್ಯಕ್ತಿಗೆ ಎರಡು ಅವಧಿಗೆ ಮಾತ್ರ ಅಧ್ಯಕ್ಷ ಸ್ಥಾನ ಎಂಬ ನಿಯಮನ್ನು ಜಿನ್ಪಿಂಗ್ ಅವರು ಸಂವಿಧಾನ ತಿದ್ದುಪಡಿ ಮೂಲಕ ಬದಲಾಯಿಸಿದ್ದಾರೆ. ಜೀವನಪರ್ಯಂತ ಅಧ್ಯಕ್ಷರಾಗಿ ಉಳಿಯಲು ಈಗ ಅವರಿಗೆ ಸಂವಿಧಾನದ ಅಡ್ಡಿ ಇಲ್ಲ. ಹಾಗೆ ಉಳಿಯುವುದಕ್ಕಾಗಿ ಪ್ರಶ್ನಾತೀತರಾಗಿ ಬೆಳೆಯಲು ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
- ದೇಶದೊಳಗೆ ಪ್ರಶ್ನಾತೀತರಾಗಲು ಅವರು ವಿದೇಶ ನೀತಿ ಮತ್ತು ಗಡಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದು ಇತ್ತೀಚಿನ ವರ್ಷಗಳಲ್ಲಿ ನಿಚ್ಚಳವಾಗುತ್ತಾ ಹೋಗಿದೆ. ಭಾರತ–ಚೀನಾ ನಡುವಣ ನೈಜ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಸಂಘರ್ಷ, ಗಾಲ್ವನ್ ಜಟಾಪಟಿ ಮತ್ತು ದೋಕಲಾ ಮುಖಾಮುಖಿ ಅವುಗಳಿಗೆ ಕೆಲವು ಉದಾಹರಣೆಗಳು.
- ಗಡಿ ವ್ಯವಹಾರಗಳನ್ನು ನೋಡಿಕೊಳ್ಳುವ ಹೊಣೆಯು ಚೀನಾ ಸೇನೆಯ ಭಾಗವಾಗಿರುವ ಕೇಂದ್ರ ಸೇನಾ ಆಯೋಗದ್ದಾಗಿತ್ತು. ಆದರೆ, ಹೊಸ ನೀತಿಯು ಇದನ್ನು ಬದಲಾಯಿಸಿದೆ. ಗಡಿ ನಿರ್ವಹಣೆಯ ಹೊಣೆಯನ್ನು ಪ್ರಭಾವಿ ಸ್ಟೇಟ್ ಕೌನ್ಸಿಲ್ಗೆ ವಹಿಸಲಾಗಿದೆ. ಪ್ರಧಾನಿ ಲಿ ಕೆಕಿಯಾಂಗ್ ಅವರು ಸ್ಟೇಟ್ ಕೌನ್ಸಿಲ್ನ ಮುಖ್ಯಸ್ಥ.
ಕಾನೂನು ಭಾರತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
- ಭಾರತದೊಂದಿಗಿನ ತನ್ನ ಗಡಿಯುದ್ದಕ್ಕೂ ಪ್ರಾದೇಶಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಚೀನಾ ಕಾನೂನನ್ನು ಜಾರಿಗೊಳಿಸಲಾಗಿದೆ. ವರದಿಗಳ ಪ್ರಕಾರ, ಈ ಕಾನೂನು ಗಡಿ ವ್ಯವಹಾರಗಳಿಗೆ ಸಂಬಂಧಿಸಿದಂತೆ ವಿಶಾಲ ವ್ಯಾಪ್ತಿಯನ್ನು ಹೊಂದಿದೆ. ಇದು ಪ್ರಾದೇಶಿಕ ಗಡಿ ಕೆಲಸದಲ್ಲಿ ಸರ್ಕಾರದ ಜವಾಬ್ದಾರಿಗಳು, ನಾಯಕತ್ವ ವ್ಯವಸ್ಥೆ ಮತ್ತು ಮಿಲಿಟರಿ ಕಾರ್ಯಗಳನ್ನು ಸ್ಪಷ್ಟಪಡಿಸುತ್ತದೆ.
- ಚೀನಾವು 14 ದೇಶಗಳೊಂದಿಗೆ ಸುಮಾರು 22,000 ಕಿಮೀ ಭೂ ಗಡಿಯನ್ನು ಹಂಚಿಕೊಂಡಿದೆ, ಅದರೊಂದಿಗೆ ಅದರ ಐತಿಹಾಸಿಕ ಗ್ರಹಿಕೆ ಮತ್ತು ಅದರ ಭೂಪ್ರದೇಶಗಳ ನೆಲದ ವಾಸ್ತವಗಳ ನಡುವಿನ ಹೊಂದಾಣಿಕೆಯಿಲ್ಲದ ಕಾರಣ ವಿವಾದಗಳು ಉದ್ಭವಿಸುತ್ತವೆ.
- ಭಾರತವು ಚೀನಾದೊಂದಿಗೆ 3,488 ಕಿಮೀ ಗಡಿಯನ್ನು ಹಂಚಿಕೊಂಡಿದೆ, ಅರುಣಾಚಲ ಪ್ರದೇಶದಿಂದ ಜಮ್ಮು ಮತ್ತು ಕಾಶ್ಮೀರದವರೆಗೆ ವಿಸ್ತರಿಸಿದೆ. ಭಾರತದ ಗಡಿಯನ್ನು ಸಂಪೂರ್ಣವಾಗಿ ಗುರುತಿಸಲಾಗಿಲ್ಲ. ಆದಾಗ್ಯೂ, LAC ಅನ್ನು ಸ್ಪಷ್ಟಪಡಿಸುವ ಮತ್ತು ದೃಢೀಕರಿಸುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ.
ನೆರೆಯೊಂದಿಗಿನ ಚೀನಾ ಗಡಿ ತಕರಾರು
- ಭಾರತ, ಭೂತಾನ್, ಪಾಕಿಸ್ತಾನ, ಅಫ್ಗಾನಿಸ್ತಾನ, ಕಜಕಿಸ್ತಾನ, ಕಿರ್ಗಿಸ್ತಾನ, ಲಾವೊಸ್, ಮಂಗೋಲಿಯಾ, ಮ್ಯಾನ್ಮಾರ್, ನೇಪಾಳ, ಉತ್ತರ ಕೊರಿಯಾ, ರಷ್ಯಾ, ತಜಕಿಸ್ತಾನ, ವಿಯೆಟ್ನಾಂ ದೇಶಗಳು ಚೀನಾದ ನೆರೆಯ ರಾಷ್ಟ್ರಗಳಾಗಿವೆ. ಚೀನಾವು ತನ್ನ ನೆರೆಯಲ್ಲಿರುವ ಹಲವು ದೇಶಗಳೊಂದಿಗೆ ಭೂ ಗಡಿ ಹಾಗೂ ಕಡಲ ಗಡಿ ವಿವಾದವನ್ನೂ ಹೊಂದಿದೆ.
ಗಡಿ ವಿವಾದ
- ಭಾರತ: ಭಾರತದೊಂದಿಗೆ ಪೂರ್ವ ಲಡಾಖ್ನಲ್ಲಿ ಗಡಿ ವಿವಾದವಿದೆ. ಅರುಣಾಚಲ ಪ್ರದೇಶದ ಕೆಲವು ಭಾಗಗಳ ಮೇಲೆಯೂ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದೆ. ಗಡಿ ವಿವಾದ ಬಗೆಹರಿಸಿಕೊಳ್ಳುವ ದಿಸೆಯಲ್ಲಿ ಎರಡೂ ದೇಶಗಳ ನಡುವೆ ಮಾತುಕತೆ ನಡೆಯುತ್ತಿದೆ. ಎರಡೂ ದೇಶಗಳ ಸೇನೆಗಳು ಮುಖಾಮುಖಿಯಾಗಿದ್ದ ದೋಕಲಾ ಬಿಕ್ಕಟ್ಟನ್ನು, 2017ರಲ್ಲಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗಿದೆ.
- ನೇಪಾಳ: ಟೆಬೆಟ್ ವಿಷಯವಾಗಿ ನೇಪಾಳದೊಂದಿಗಿನ ಗಡಿ ವಿವಾದ ಮುಂದುವರಿದಿದೆ.
- ಭೂತಾನ್: ಭೂತಾನ್ನ ಪೂರ್ವ ವಲಯದ ಕೆಲವು ಪ್ರದೇಶಗಳನ್ನು ಒಳಗೊಂಡ ಭೂಭಾಗ ತನ್ನದು ಎಂದು ಚೀನಾ ವಾದಿಸುತ್ತಿದೆ.
- ಲಾವೊಸ್: ಚೀನಾದ ಯುವಾನ್ ಸಾಮ್ರಾಜ್ಯದ ಆಡಳಿತಕ್ಕೆ ಒಳಪಟ್ಟಿದ್ದ ಲಾವೊಸ್ನ ಕೆಲ ಪ್ರದೇಶಗಳೂ ಈಗಲೂ ತನ್ನವೇ ಎಂದು ಚೀನಾ ಹೇಳುತ್ತಿದೆ.
- ಮಂಗೋಲಿಯಾ: ಮಂಗೋಲಿಯಾದ ಸ್ವಾಯತ್ತ ಪ್ರದೇಶವಾದ, ‘ಇನ್ನರ್ ಮಂಗೋಲಿಯಾ’ದೊಂದಿಗೆ ಚೀನಾದ ಗಡಿ ವಿವಾದವಿದೆ.
- ಟಿಬೆಟ್: ಇತರ ಎಲ್ಲ ದೇಶಗಳಿಗಿಂತ ಚೀನಾ–ಟೆಬೆಟ್ ಗಡಿ ವಿವಾದವೇ ಚೀನಾದ ಬಹು ಪ್ರಮುಖ ವಿವಾದವಾಗಿದೆ. 1950ರಲ್ಲಿ ಟಿಬೆಟ್ ಮೇಲೆ ಚೀನಾ ಹಕ್ಕು ಸಾಧಿಸಿದೆ. ಬಳಿಕ ಟಿಬೆಟ್ ಧರ್ಮಗುರು ದಲೈಲಾಮಾ ಹಾಗೂ ಅವರ ಅನುಯಾಯಿಗಳು ದೇಶದಿಂದ ಪಲಾಯನಗೈದು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಇಲ್ಲಿ, ಗಡಿಪಾರಾದ ಸರ್ಕಾರ ಅಸ್ತಿತ್ವದಲ್ಲಿದೆ.
ಕಡಲ ಗಡಿ ವಿವಾದ
- ತೈವಾನ್, ಫಿಲಿಪ್ಪೀನ್ಸ್, ಇಂಡೊನೇಷ್ಯಾ, ವಿಯೆಟ್ನಾಂ, ಮಲೇಷ್ಯಾ, ಜಪಾನ್, ಉತ್ತರ ಕೊರಿಯಾ, ದಕ್ಷಿಣ ಕೊರಿಯಾ, ಸಿಂಗಪುರ ಹಾಗೂ ಬ್ರೂನೈ ದೇಶಗಳೊಂದಿಗೆ ಚೀನಾ ಕಡಲ ಗಡಿ ವಿವಾದ ಹೊಂದಿದೆ. ಅವುಗಳಲ್ಲಿ ದಕ್ಷಿಣ ಚೀನಾದ ಸಮುದ್ರ ಭಾಗದ ಕೆಲವು ಪ್ರದೇಶಗಳು ಹಾಗೂ ದ್ವೀಪಗಳ ವಿಚಾರವಾಗಿ ಬ್ರೂನೈ ದೇಶದೊಂದಿಗೆ ಇದ್ದ ವಿವಾದವು ಬಗೆಹರಿದಿದೆ.