Published on: November 6, 2021

2070ರ ವೇಳೆ ಇಂಗಾಲಮುಕ್ತ ಭಾರತ

2070ರ ವೇಳೆ ಇಂಗಾಲಮುಕ್ತ ಭಾರತ

ಸುದ್ಧಿಯಲ್ಲಿ ಏಕಿದೆ?   ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2070ರ ವೇಳೆಗೆ ಭಾರತವನ್ನು ಇಂಗಾಲಮುಕ್ತ ದೇಶವನ್ನಾಗಿ ಪರಿವರ್ತಿಸುವುದಾಗಿ ಪ್ರಕಟಿಸಿದ್ದಾರೆ. ಹವಾಮಾನ ಮಾಲಿನ್ಯದ ನಿಯಂತ್ರಣಕ್ಕೆ ಅವರು ಐದು ಭರವಸೆಗಳನ್ನು ನೀಡಿದ್ದಾರೆ.

  • ಸಂಪನ್ಮೂಲಗಳ ಪ್ರಜ್ಞಾಪೂರ್ವಕ ಬಳಕೆಯನ್ನು ಅಳವಡಿಸಿಕೊಳ್ಳುವುದು ಹಾಗೂ ಮತಿಹೀನ ಬಳಕೆಯನ್ನು ತೊಡೆದುಹಾಕುವ- ‘ವಿಶ್ವ ಜೀವನ’ ಎಂಬ ಜಾಗತಿಕ ಚಳವಳಿಯನ್ನು ‘ಜೀವನ ವಿಧಾನ ಬದಲಾವಣೆ’ಯನ್ನಾಗಿ ಮಾಡಿಕೊಳ್ಳಬೇಕು ಎಂದು ಜಾಗತಿಕ ನಾಯಕರಿಗೆ ಅವರು ಮನವಿ ಮಾಡಿದ್ದಾರೆ.

ಮೋದಿ ಘೋಷಣೆಗಳು

  • 2030ರ ವೇಳೆಗೆ ದೇಶದಲ್ಲಿ 450-500 ಗಿಗಾವಾಟ್‌ನಷ್ಟು ವಿದ್ಯುತ್ ಅನ್ನು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸಲಾಗುವುದು
  • 2030ರ ವೇಳೆಗೆ ದೇಶಕ್ಕೆ ಅಗತ್ಯವಿರುವ ವಿದ್ಯುತ್‌ನಲ್ಲಿ ಶೇ 50ರಷ್ಟನ್ನು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸಲಾಗುವುದು
  • 2030ರ ವೇಳೆಗೆ ಇಂಗಾಲದ ಹೊರಸೂಸುವಿಕೆಯನ್ನು ಶೇ 45ರಷ್ಟು ಕಡಿತ ಮಾಡಲಾಗುವುದು (ಈ ಹಿಂದೆ 2030ರ ವೇಳೆಗೆ ಶೇ 35ರಷ್ಟು ಕಡಿತ ಮಾಡುವ ಗುರಿ ಹಾಕಿಕೊಳ್ಳಲಾಗಿತ್ತು
  • 2030ರ ವೇಳೆಗೆ ರೈಲ್ವೆಯ ಇಂಗಾಲ ಹೊರಸೂಸುವಿಕೆಯನ್ನು ಶೇ 100ರಷ್ಟು ಕಡಿತ ಮಾಡಲಾಗುವುದು. ಇದರಿಂದ ವಾರ್ಷಿಕ 6 ಕೋಟಿ ಟನ್ ಇಂಗಾಲದ ಮಾಲಿನ್ಯ ಕಡಿಮೆಯಾಗಲಿದೆ
  • 2030ರ ವೇಳೆಗೆ ಭಾರತದ ವಾರ್ಷಿಕ ಇಂಗಾಲ ಹೊರಸೂಸುವಿಕೆಯಲ್ಲಿ 100 ಕೋಟಿ ಟನ್‌ನಷ್ಟು ಕಡಿಮೆ ಮಾಡಲಾಗುವುದು.

ದ್ವೀಪ ರಾಷ್ಟ್ರಗಳಿಗೆ ನೆರವು

  • ಹವಾಮಾನ ಬದಲಾವಣೆಯಿಂದ ಅಪಾಯ ಎದುರಿಸುತ್ತಿರುವ ಸಣ್ಣ ದ್ವೀಪ ರಾಷ್ಟ್ರಗಳ ನೆರವಿಗಾಗಿ ಭಾರತವು ‘ರೆಸಿಲಿಯಂಟ್ ಐಲ್ಯಾಂಡ್ ಸ್ಟೇಟ್ಸ್’ (ಐಆರ್‌ಐಎಸ್‌) ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.
  • ಈ ರಾಷ್ಟ್ರಗಳಲ್ಲಿ ಹವಾಮಾನ ಬದಲಾವಣೆಯನ್ನು ತಡೆಗಟ್ಟಲು ಮತ್ತು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ತಡೆಗಟ್ಟಲು ದೊಡ್ಡ ರಾಷ್ಟ್ರಗಳು ಶ್ರಮಿಸಬೇಕಿದೆ’ ಎಂದು ಕರೆ ನೀಡಿದ್ದಾರೆ.
  • ಈ ದೇಶಗಳಲ್ಲಿ ಚಂಡಮಾರುತದ ಮಾಹಿತಿ, ಹವಳದ ದಿಬ್ಬಗಳ ಮೇಲ್ವಿಚಾರಣೆ, ಕರಾವಳಿ ಮೇಲ್ವಿಚಾರಣೆಗೆ ನೆರವು ನೀಡಲೆಂದೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಪ್ರತ್ಯೇಕ ಘಟಕವನ್ನು ಆರಂಭಿಸಿದೆ ಎಂದು ಮೋದಿ ಹೇಳಿದ್ದಾರೆ. ಐಆರ್‌ಐಎಸ್‌ ಕಾರ್ಯಕ್ರಮವನ್ನು ಭಾರತ ಮತ್ತು ಬ್ರಿಟನ್ ಸಹಭಾಗಿತ್ವದಲ್ಲಿ ಜಾರಿಗೆ ತರಲಾಗುತ್ತದೆ.

ಗುರಿ ತಲುಪುವ ಹಾದಿ

  • ಭಾರತವು 2070ರ ವೇಳೆಗೆ ನೆಟ್ ಝೀರೊ ಗುರಿ ತಲುಪಲು ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯನ್ನು ಶೇ 99.99ರಷ್ಟು ಕಡಿತಗೊಳಿಸಬೇಕು ಎಂದು ತಜ್ಞರು ಹೇಳಿದ್ದಾರೆ. ಈ ಗುರಿ ತಲುಪಲು ಏನೆಲ್ಲಾ ಮಾಡಬೇಕು ಎಂಬುದನ್ನು ದೆಹಲಿಯ ‘ಕೌನ್ಸಿಲ್ ಆನ್ ಎನರ್ಜಿ, ಎನ್‌ವಿರಾನ್‌ಮೆಂಟ್‌ ಅಂಡ್ ವಾಟರ್’ ಸಂಘಟನೆಯು ಪಟ್ಟಿ ಮಾಡಿದೆ.
  • ಸೌರಶಕ್ತಿ ಆಧಾರಿತ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು 2050ರ ವೇಳೆಗೆ 1,689 ಗಿಗಾವಾಟ್, 2070ರ ವೇಳೆಗೆ 5,630 ಗಿಗಾವಾಟ್‌ಗೆ ಹೆಚ್ಚಿಸಬೇಕು.
  • ಪವನ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 2050ರ ವೇಳೆಗೆ 557 ಗಿಗಾವಾಟ್ ಮತ್ತು 2070ರ ವೇಳೆಗೆ 1,792 ಗಿಗಾವಾಟ್‌ಗಳಿಗೆ ಹೆಚ್ಚಿಸಬೇಕು.
  • 2070ರ ವೇಳೆಗೆ ದೇಶದ ಶೇ 79ರಷ್ಟು ಟ್ರಕ್‌ಗಳು ವಿದ್ಯುತ್ ಚಾಲಿತವಾಗಿರಬೇಕು. ಶೇ 21ರಷ್ಟು ಟ್ರಕ್‌ಗಳು ಜಲಜನಕದ ಸೆಲ್‌ ಚಾಲಿತವಾಗಿರಬೇಕು.
  • 2070ರ ವೇಳೆಗೆ ಕಾರು, ಟ್ರಕ್, ಬಸ್‌ ಮತ್ತು ವಿಮಾನಗಳಲ್ಲಿ ಬಳಕೆಯಾಗುವ ಇಂಧನದಲ್ಲಿ ಶೇ 84ರಷ್ಟು ಜೈವಿಕ ಇಂಧನವಾಗಿರಬೇಕು.
  • ಕೈಗಾರಿಕಾ ವಲಯದಲ್ಲಿ ಕಲ್ಲಿದ್ದಲು ಬಳಕೆ ಪ್ರಮಾಣವು 2040ರಿಂದ ಇಳಿಕೆಯಾಗಬೇಕು ಮತ್ತು 2065ರ ವೇಳೆಗೆ ಶೇ 97ರಷ್ಟು ಕಡಿಮೆಯಾಗಬೇಕು.
  • ಕಚ್ಚಾತೈಲ ಬಳಕೆ ಪ್ರಮಾಣವು 2050-2070ರ ಮಧ್ಯ ಶೇ 90ರಷ್ಟು ಕಡಿಮೆಯಾಗಬೇಕು.