Published on: November 8, 2021
ಜಾಗತಿಕ ವಿದ್ಯುತ್ ಗ್ರಿಡ್ ಯೋಜನೆ
ಜಾಗತಿಕ ವಿದ್ಯುತ್ ಗ್ರಿಡ್ ಯೋಜನೆ
ಸುದ್ಧಿಯಲ್ಲಿ ಏಕಿದೆ? ವಿಶ್ವದ ಬಡ ರಾಷ್ಟ್ರಗಳಿಗೆ ನವೀಕರಿಸಬಹುದಾದ ಮೂಲದ ವಿದ್ಯುತ್ ಅನ್ನು ಪೂರೈಸುವ ವಿಶ್ವ ವಿದ್ಯುತ್ ಗ್ರಿಡ್ ಯೋಜನೆಗೆ ಭಾರತ ಮತ್ತು ಬ್ರಿಟನ್ ಚಾಲನೆ ನೀಡಿವೆ.
ಏನಿದು ಜಾಗತಿಕ ಗ್ರಿಡ್ ಯೋಜನೆ ?
- ನಮ್ಮ ದೇಶದ ಯಾವುದೇ ಭಾಗದಲ್ಲಿ ಉತ್ಪಾದಿಸಿದ ವಿದ್ಯುತ್ತನ್ನು ದೇಶದ ಇನ್ನಾವುದೇ ಭಾಗದಲ್ಲಿ ಬಳಸಬಹುದು. ಇದು ಸಾಧ್ಯವಾಗುವುದು ನಮ್ಮ ದೇಶದಲ್ಲಿರುವ ಅಧಿಕ ವೋಲ್ಟೇಜ್ ವಿದ್ಯುತ್ ಪ್ರಸರಣದ ಐದು ಪ್ರಾದೇಶಿಕ ಮತ್ತು ಒಂದು ರಾಷ್ಟ್ರೀಯ ವಿದ್ಯುತ್ ಜಾಲದ (ನ್ಯಾಷನಲ್ ಗ್ರಿಡ್) ಮೂಲಕ. ಭೂತಾನ್, ಮ್ಯಾನ್ಮಾರ್, ಬಾಂಗ್ಲಾದೇಶ ಮತ್ತು ನೇಪಾಳವೂ ನಮ್ಮ ರಾಷ್ಟ್ರೀಯ ಜಾಲದೊಂದಿಗೆ ಸಂಪರ್ಕ ಹೊಂದಿವೆ.
- ದೇಶದ ಹಂತದಲ್ಲಿನ ಈ ವ್ಯವಸ್ಥೆಯಂತೆಯೇ, ನವೀಕರಿಸಬಹುದಾದ ಸೌರವಿದ್ಯುತ್ಗೆ ಸಂಬಂಧಿಸಿದಂತೆ ಪ್ರಪಂಚದ ಎಲ್ಲ ದೇಶಗಳನ್ನೂ ಜೋಡಿಸುವ ಜಾಗತಿಕ ವಿದ್ಯುತ್ ಜಾಲವೊಂದನ್ನು ರೂಪಿಸುವುದು ಸಾಧ್ಯವಾದರೆ, ಅದು ಸೌರಶಕ್ತಿಯ ಬಳಕೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಬಲ್ಲದು. ನಮ್ಮ ಭೂಮಿಯ ಅರ್ಧ ಭಾಗದಲ್ಲಿ ಸೂರ್ಯ ಇರುವ ಹಗಲಿನಲ್ಲಿ ಉತ್ಪಾದಿಸಿದ ಸೌರಶಕ್ತಿಯನ್ನು, ಸೂರ್ಯನಿಲ್ಲದ ರಾತ್ರಿಯ ಭೂಮಿಯ ಇನ್ನೊಂದು ಭಾಗಕ್ಕೆ ರವಾನಿಸಬಹುದು. ಹೀಗಾಗಿ ಹಗಲು- ರಾತ್ರಿಗಳೆನ್ನದೇ ದಿನದ 24 ಗಂಟೆಗಳೂ ಸೌರವಿದ್ಯುತ್ ಉತ್ಪಾದನೆ ಸಾಧ್ಯವಾಗಿ, ರಾತ್ರಿಯ ಬಳಕೆಗೆ ವಿದ್ಯುತ್ತನ್ನು ಬ್ಯಾಟರಿಗಳಲ್ಲಿ ಸಂಗ್ರಹಿಸಿಡುವುದನ್ನೂ ಕಡಿಮೆ ಮಾಡಬಹುದು.
- ಇಂತಹದೊಂದು ದೂರದರ್ಶಿತ್ವದ, ಅತ್ಯಂತ ಮಹತ್ವಾಕಾಂಕ್ಷೆಯ ‘ಒಂದು ಸೂರ್ಯ- ಒಂದು ಪ್ರಪಂಚ- ಒಂದು ಜಾಲ’ ಎಂಬ ಹೆಸರಿನ, ಜಾಗತಿಕ ವಿದ್ಯುತ್ ಜಾಲದ ಯೋಜನೆಯನ್ನು ಇಂಗ್ಲೆಂಡ್ನೊಡನೆ ಸೇರಿ, ಗ್ಲಾಸ್ಗೊದ ಶೃಂಗಸಭೆಯಲ್ಲಿ ಭಾರತ ಅನಾವರಣಗೊಳಿಸಿದೆ.
ಹಿನ್ನಲೆ
- ಜಾಗತಿಕ ವಿದ್ಯುತ್ ಜಾಲದ ಪರಿಕಲ್ಪನೆ ಮೂಡಿ ಬಂದದ್ದು 2018ರಲ್ಲಿ ದೆಹಲಿಯಲ್ಲಿ ನಡೆದ ‘ಅಂತರರಾಷ್ಟ್ರೀಯ ಸೌರ ಒಕ್ಕೂಟ’ದ (ಇಂಟರ್ನ್ಯಾಷನಲ್ ಸೋಲಾರ್ ಅಲಯನ್ಸ್) ಮೊದಲ ಮಹಾಸಭೆಯಲ್ಲಿ ಪ್ರಧಾನಿ ಮಾಡಿದ ಆಶಯ ಭಾಷಣದಲ್ಲಿ. ಶುದ್ಧ, ನವೀಕರಿಸಬಹುದಾದ ಸೌರವಿದ್ಯುತ್ಗೆ ಸಂಬಂಧಿಸಿದ ಆಧಾರ ರಚನೆಗಳ ನಿರ್ಮಾಣ, ವಿದ್ಯುದುತ್ಪಾದನೆ, ಬಳಕೆ, ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಜ್ಞಾನ ಸೃಷ್ಟಿ, ಮಾಹಿತಿ ವಿನಿಮಯ, ಪರಸ್ಪರ ಸಹಕಾರಗಳಿಗಾಗಿ, ಭಾರತದ ಪ್ರಾಥಮಿಕ ಪ್ರಯತ್ನಗಳಿಂದ 2015ರಲ್ಲಿ ಅಸ್ತಿತ್ವಕ್ಕೆ ಬಂದ ಈ ಒಕ್ಕೂಟದಲ್ಲಿ ಇಂದು 99 ದೇಶಗಳಿವೆ.
ಈ ಒಕ್ಕೂಟದಿಂದಾದ ಪ್ರಮುಖ ಕಾರ್ಯಗಳು
- ಕಳೆದ ಮೂರು ವರ್ಷಗಳ ಅವಧಿಯಲ್ಲಿ, ಈ ಒಕ್ಕೂಟದ ಅಡಿಯಲ್ಲಿ ಜಾಗತಿಕ ವಿದ್ಯುತ್ ಜಾಲಕ್ಕೆ ಸಂಬಂಧಪಟ್ಟಂತೆ ಮೂರು ಮುಖ್ಯ ಕೆಲಸಗಳು ನಡೆದಿವೆ. ಮೊದಲನೆಯದಾಗಿ, ಏಷ್ಯಾ, ಆಫ್ರಿಕಾ, ಯುರೋಪ್, ಉತ್ತರ ಅಮೆರಿಕ ಮತ್ತು ಲ್ಯಾಟಿನ್ ಅಮೆರಿಕ ದೇಶಗಳ ಪ್ರತಿನಿಧಿಗಳ ಚಾಲನಾ ಸಮಿತಿ ಈ ಯೋಜನೆ ಕಾರ್ಯಗತವಾಗಲು ಅಗತ್ಯವಾದ ನಂಬಿಕೆ, ವಿಶ್ವಾಸಗಳನ್ನು ದೇಶ ದೇಶಗಳ ನಡುವೆ ಬೆಳೆಸುವ ಪ್ರಯತ್ನ ಮಾಡಿದೆ. ಎರಡನೆಯದಾಗಿ, ಪರಿಣತರ ತಂಡವೊಂದು ಜಾಗತಿಕ ವಿದ್ಯುತ್ ಜಾಲದ ನಿರ್ಮಾಣಕ್ಕೆ ಬೇಕಾದ ಸರ್ವ ಸಮಸ್ತ ಅಗತ್ಯಗಳನ್ನೂ ಪಟ್ಟಿ ಮಾಡಿ, ಅವುಗಳನ್ನು ಪೂರೈಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೆಲಸ ಮಾಡಿದೆ. ಮೂರನೆಯದಾಗಿ, ಅಂತರರಾಷ್ಟ್ರೀಯ ಸೌರ ಒಕ್ಕೂಟ ಮತ್ತು ವಿಶ್ವಬ್ಯಾಂಕ್ನ ಪರಿಣತರ ತಂಡ ಈ ಯೋಜನೆಯನ್ನು ಕಾರ್ಯಗತಗೊಳಿಸುವುದರಲ್ಲಿ ಎದುರಾಗುವ ಆರ್ಥಿಕ, ತಾಂತ್ರಿಕ, ಸಾಂಸ್ಥಿಕ ಸಮಸ್ಯೆಗಳನ್ನು ಗುರುತಿಸಿ, ಅವುಗಳನ್ನು ಪರಿಹರಿಸುವತ್ತ ಗಮನಹರಿಸಿದೆ.
ಸವಾಲುಗಳು
- ಜಾಗತಿಕ ವಿದ್ಯುತ್ ಜಾಲವನ್ನು ನನಸುಗೊಳಿಸಬೇಕಾದರೆ ದೇಶ ದೇಶಗಳ ನಡುವೆ, ಖಂಡಗಳ ನಡುವೆ, ವಿವಿಧ ಕಾಲವಲಯಗಳ (ಟೈಮ್ ಝೋನ್) ನಡುವೆ ಅಧಿಕ ವೋಲ್ಟೇಜಿನ ವಿದ್ಯುತ್ ಪ್ರಸರಣ ಸಾಧ್ಯವಾಗಬೇಕು. ಈ ದಿಕ್ಕಿನಲ್ಲಿ ಹಲವಾರು ಯೋಜನೆಗಳು ಪ್ರಾರಂಭವಾಗಿವೆ.
- ಯೋಜನೆಯನ್ನು ಸಾಕಾರಗೊಳಿಸಲು ಎಲ್ಲ ದೇಶಗಳೂ ಸೌರ ವಿದ್ಯುತ್ ಉತ್ಪಾದನೆ, ಸಂಗ್ರಹಣೆ, ಸಾಗಣೆಯ ಕ್ಷೇತ್ರಗಳಲ್ಲಿ ಬಹಳಷ್ಟು ಬಂಡವಾಳ ತೊಡಗಿಸಬೇಕು. ದೇಶಗಳ ಗಡಿ ದಾಟಿ, ಖಂಡಾಂತರ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ರೂಪಿಸಬೇಕು.
- ಸಾಗರ ತಳದ ಕೇಬಲ್ಗಳ ಮೂಲಕ ಸೌರ ವಿದ್ಯುತ್ತನ್ನು ಸಾಗಿಸುವುದು ಬಹು ದುಬಾರಿ. ಅದು ಸಾಧ್ಯವಾಗದಿದ್ದಾಗ ತಂತಿಗಳ ಮೂಲಕ ಸಾಗಿಸಬೇಕು.
- ಅಕ್ಕಪಕ್ಕದ ದೇಶಗಳ ನಡುವೆ ಗಡಿ ಸಮಸ್ಯೆ, ವೈಮನಸ್ಯ, ಅಪನಂಬಿಕೆ, ವೈರತ್ವಗಳಿದ್ದಾಗ ವಿದ್ಯುತ್ ಪ್ರಸರಣ ಅಸಾಧ್ಯವಾಗುತ್ತದೆ.
- ಜಾಗತಿಕ ಜಾಲದಿಂದ ಸೌರವಿದ್ಯುತ್ ವಿತರಣೆಗೆ ದೇಶ ದೇಶಗಳ ನಡುವೆ ವ್ಯಾಪಾರ, ವಹಿವಾಟಿನ ಒಪ್ಪಂದಗಳಾಗಬೇಕು. ಈ ಒಪ್ಪಂದಗಳು ಪಾರದರ್ಶಕವಾಗಿದ್ದು ಯಾವುದೇ ರೀತಿಯ ಶೋಷಣೆಗೆ ಅವಕಾಶವಿರಬಾರದು.
- ವ್ಯಾಜ್ಯ ಪರಿಹಾರ ವ್ಯವಸ್ಥೆಯಿರಬೇಕು.
- ಎಲ್ಲದಕ್ಕಿಂತ ಮುಖ್ಯವಾಗಿ ದೇಶಗಳಿಗೆ ನಾಗರಿಕ ಸಮಾಜದ ನೀತಿ ಸಂಹಿತೆ, ಕಾನೂನುಬದ್ಧ ನಡವಳಿಕೆ, ನ್ಯಾಯಾಲಯದ ತೀರ್ಪನ್ನು ಗೌರವಿಸುವ ಮನೋಭಾವವಿರಬೇಕು.
ಭಾರತಕ್ಕೆ ಯೋಜನೆಯ ಮಹತ್ವ
- ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಇರುವ ಭಾರತವು, ಪಳೆಯುಳಿಕೆ ಇಂಧನ ಕಡಿತದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳಿಗೆ ಸಮನಾಗಿಯೇ ಗುರಿಯನ್ನು ಹಾಕಿಕೊಂಡಿದೆ. ಜಾಗತಿಕ ವಿದ್ಯುತ್ ಗ್ರಿಡ್ ಯೋಜನೆಯು ಭಾರತದ ಇಂಗಾಲ ಕಡಿತದ ಸಾಧ್ಯತೆಗಳನ್ನು ತೋರಿಸುತ್ತದೆ