Published on: November 12, 2021
ವಿಶ್ವ ನ್ಯುಮೋನಿಯಾ ದಿನ
ವಿಶ್ವ ನ್ಯುಮೋನಿಯಾ ದಿನ
ಸುದ್ಧಿಯಲ್ಲಿ ಏಕಿದೆ ? ಪ್ರತಿ ವರ್ಷ ನವೆಂಬರ್ 12ನ್ನು ಜಾಗತಿಕ ನ್ಯುಮೋನಿಯಾ ದಿನವನ್ನಾಗಿ ಆಚರಿಸಲಾಗುತ್ತದೆ.
ಮಹತ್ವ
- ನ್ಯುಮೋನಿಯಾ ಮತ್ತದರ ಲಕ್ಷಣಗಳು, ಚಿಕಿತ್ಸೆ ಹಾಗೂ ಅದರ ತಡೆ, ನಿಯಂತ್ರಣದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಹೆಚ್ಚಿಸುವುದಕ್ಕಾಗಿ ಈ ದಿನಾಚರಣೆ ನಡೆಸಲಾಗುತ್ತದೆ. ಜತೆಗೆ ಶ್ವಾಸಕೋಶಗಳಿಗೆ ತಗಲುವ ಈ ಮಾರಕ ಸೋಂಕು ರೋಗದ ಬಗ್ಗೆ ಮಾಹಿತಿ ಮತ್ತು ಎಚ್ಚರ ಸದಾ ಜಾಗೃತವಾಗಿರಬೇಕಾಗಿದೆ ಎಂಬುದು ದಿನದ ಮಹತ್ವವಾಗಿದೆ.
ನ್ಯುಮೋನಿಯಾ ಎಂದರೇನು?:
- ನ್ಯುಮೋನಿಯಾವು ಶ್ವಾಸಕೋಶಗಳಿಗೆ ತಗಲುವ ಒಂದು ಸೋಂಕು. ಬಾಯಿ ಅಥವಾ ಮೂಗಿನ ಮೂಲಕ ನಡೆಸುವ ಉಚ್ಛಾಸದ ಮೂಲಕ ಶ್ವಾಸಕೋಶಗಳ ಒಳಕ್ಕೆ ಸೇರುವ ಸೂಕ್ಷ್ಮಜೀವಿಗಳಿಂದಾಗಿ ಈ ಸೋಂಕು ಉಂಟಾಗುತ್ತದೆ. 2016ರ ಗ್ಲೋಬಲ್ ಬರ್ಡನ್ ಆಫ್ ಡಿಸೀಸಸ್ (ಜಿಬಿಡಿ) ಪ್ರಕಾರ ಜಾಗತಿಕವಾಗಿ ಮೃತ್ಯು ಮತ್ತು ಆರೋಗ್ಯ ಹಾನಿ ಉಂಟಾಗುವ ಕಾರಣಗಳಲ್ಲಿ ನ್ಯುಮೋನಿಯಾ ಮುಂಚೂಣಿಯಲ್ಲಿದೆ.
ಲಕ್ಷಣಗಳೇನು?:
- ಜ್ವರ, ಚಳಿ ನಡುಕ, ಕೆಮ್ಮು, ಉಸಿರಾಡಲು ತೊಂದರೆ, ಹೃದಯ ಬಡಿತ ಮತ್ತು ಉಸಿರಾಟದ ವೇಗ ಹೆಚ್ಚುವುದು, ಅಪರೂಪಕ್ಕೆ ಹೊಟ್ಟೆ ತೊಳೆಸುವಿಕೆ, ವಾಂತಿ ಮತ್ತು ಭೇದಿ ನ್ಯುಮೋನಿಯಾದ ಲಕ್ಷಣಗಳಾಗಿವೆ. ರೋಗದ ಮುಂದುವರಿದ ಹಂತಗಳಲ್ಲಿ ರೋಗಿಯು ಗೊಂದಲಕ್ಕೀಡಾಗಬಹುದು, ಉದ್ವಿಗ್ನಗೊಳ್ಳುವ ಸಾಧ್ಯತೆಯಿದೆ.
ರೋಗ ಪತ್ತೆ ಹೇಗೆ?:
- ವೈದ್ಯರು ರೋಗ ಲಕ್ಷಣಗಳ ಬಗ್ಗೆ ರೋಗಿಯಿಂದ ಮಾಹಿತಿ ಸಂಗ್ರಹಿಸುತ್ತಾರೆ. ದೇಹವನ್ನು ಅದರಲ್ಲೂ ವಿಶೇಷವಾಗಿ ಎದೆಯನ್ನು ಕೂಲಂಕಷವಾಗಿ ತಪಾಸಣೆಗೆ ಒಳಪಡಿಸುತ್ತಾರೆ. ರಕ್ತಪರೀಕ್ಷೆ, ಕಫದ ಪರೀಕ್ಷೆ ಮತ್ತು ಎದೆಯ ಎಕ್ಸ್ ರೇಗಳು ಕಾಯಿಲೆಯನ್ನು ಖಚಿತಪಡಿಸುವಲ್ಲಿ ಸಹಾಯ ಮಾಡುತ್ತವೆ. ರೋಗಿಯ ಸ್ಥಿತಿಯ ಗಂಭೀರತೆಯನ್ನು ಅವಲಂಬಿಸಿ ಮುಂದುವರಿದ ಉನ್ನತ ಪರೀಕ್ಷೆಗಳನ್ನು ನಡೆಸಿ ಯಾವ ವೈರಸ್ ಅಥವಾ ಬ್ಯಾಕ್ಟೀರಿಯಾದಿಂದ ರೋಗ ಹರಡಿದೆ ಎಂಬುದರ ಬಗ್ಗೆ ತಿಳಿಯಲಾಗುತ್ತದೆ.
ಚಿಕಿತ್ಸೆಗೆ ವ್ಯವಸ್ಥೆ:
- ನ್ಯುಮೋನಿಯಾ ಮಕ್ಕಳಲ್ಲಿ ಹೆಚ್ಚಾಗಿ ಕಾಡುತ್ತವೆ. ಇದರ ಚಿಕಿತ್ಸೆಗೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಆಶಾಕಾರ್ಯತೆಯರು, ವೈದ್ಯರು, ವೈದ್ಯ ಸಿಬ್ಬಂದಿಗೆ ರೋಗ ಪತ್ತೆ ಹಚ್ಚುವ ಕುರಿತು ತರಬೇತಿ ನೀಡಲಾಗಿದೆ. ಜತೆಗೆ ಚಿಕಿತ್ಸೆಗೂ ಕೂಡಾ ಕ್ರಮ ವಹಿಸಲಾಗಿದೆ. ಔಷಧಗಳ ಪೂಧಿರೈಕೆ ಕೂಡ ಸಮರ್ಪಕವಾಗಿ ಮಾಡಲಾಗುತ್ತಿದೆ.
- ನ್ಯೂಮೋನಿಯಾ ಲಸಿಕೆ: ನ್ಯುಮೊಕಾಕಲ್ ಕಾಂಜುಗೇಟ್ ವ್ಯಾಕ್ಸಿನ್ ಎಂಬ ಲಸಿಕೆಯನ್ನು ನೀಡಲಾಗುತ್ತದೆ.