Published on: November 15, 2021
ಲೀಲಾವತಿ ವರದಿ
ಲೀಲಾವತಿ ವರದಿ
ಸುದ್ಧಿಯಲ್ಲಿ ಏಕಿದೆ ? ನಾಡಗೀತೆಗೆ ಮೈಸೂರು ಅನಂತ ಸ್ವಾಮಿ ಅವರ ರಾಗ ಸಂಯೋಜನೆಯ ದಾಟಿಯನ್ನೇ ಉಳಿಸಿಕೊಳ್ಳುವಂತೆ ಎಚ್.ಆರ್.ಲೀಲಾವತಿ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ಸರಕಾರ ಯಾವುದೇ ಕಾರಣಕ್ಕೂ ಒಪ್ಪಬಾರದು ಎಂದು ಸುಗಮ ಸಂಗೀತಗಾರರು ಒತ್ತಾಯಿಸಿದ್ದಾರೆ.
ಅನಂತ ಸ್ವಾಮಿ ಧಾಟಿ ಒಪ್ಪದಿರಲು ಕಾರಣ
- ಮೈಸೂರು ಅನಂತಸ್ವಾಮಿ ಅವರು ನಾಡಗೀತೆಯ ಒಂದು ಚರಣ ಮತ್ತು ಎರಡು ಪಲ್ಲವಿಗಳಿಗೆ ಮಾತ್ರ ರಾಗ ಸಂಯೋಜನೆ ಮಾಡಿದ್ದಾರೆ. ಪೂರ್ಣ ಪ್ರಮಾಣದ ನಾಡಗೀತೆಗೆ ಅವರು ರಾಗ ಸಂಯೋಜಿಸಿಲ್ಲ. ಆದರೆ, ಡಾ. ಸಿ. ಅಶ್ವಥ್ ಅವರು ಇಡೀ ನಾಡಗೀತೆಗೆ ರಾಗ ಸಂಯೋಜನೆ ಮಾಡಿ ಹಾಡಿದ್ದಾರೆ. ಆದ್ದರಿಂದ ಸಿ.ಅಶ್ವಥ್ ಅವರ ರಾಗ ಸಂಯೋಜನೆಯಲ್ಲೇ ಉಳಿಸಿಕೊಳ್ಳಬೇಕು ಎಂದು ಸರಕಾರವನ್ನು ಆಗ್ರಹಿಸಿದ್ದಾರೆ.
ಹಿನ್ನಲೆ
- ನಾಡಗೀತೆಗೆ ಸಂಬಂಧಿಸಿದಂತೆ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ, ನಾಡೋಜ ಚನ್ನವೀರ ಕಣವಿ ಹಾಗೂ ವಸಂತ ಕನಕಾಪುರ ಅವರ ಮೂರು ಸಮಿತಿಗಳು ಸರಕಾರಕ್ಕೆ ವಿಸ್ತೃತ ವರದಿ ಸಲ್ಲಿಸಿವೆ. ಈ ವರದಿಗಳು ಸರಕಾರದಿಂದ ಸ್ವೀಕೃತಗೊಂಡ ಬಗ್ಗೆ ಅಥವಾ ತಿರಸ್ಕೃತಗೊಂಡ ಬಗ್ಗೆ ಇದುವರೆಗೆ ಯಾವುದೇ ಆದೇಶಗಳಿಲ್ಲ. ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯನ್ನು ಪೂರ್ಣಪಾಠ ಹಾಡಬೇಕು ಎಂಬುದು ಸರಕಾರ ಹೊರಡಿಸಿರುವ ಕೊನೆಯ ಆದೇಶವಾಗಿದೆ. ಆದರೆ, ಸರಕಾರ ದಿಢೀರನೆ ಎಚ್.ಆರ್. ಲೀಲಾವತಿ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿ ರಚಿಸಿ, ಒಂದೇ ದಿನದಲ್ಲಿ ತರಾತುರಿಯಲ್ಲಿ ವರದಿ ಪಡೆದಿವೆ.
ನಾಡ ಗೀತೆ
- ರಾಷ್ಟ್ರಕವಿ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ| ಜಯ ಹೇ ಕರ್ನಾಟಕ ಮಾತೆ ಗೀತೆಯನ್ನು ಕರ್ನಾಟಕದ ನಾಡಗೀತೆಯನ್ನಾಗಿ ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಕೆ ವಿ ಪುಟ್ಟಪ್ಪ(ಕುವೆಂಪು) ಈ ಪದ್ಯವನ್ನು ೧೯೨೪ರಲ್ಲಿ ‘ಕಿಶೋರಚಂದ್ರವಾಣಿ’ ಎಂಬ ಕಾವ್ಯನಾಮದಡಿ ಬರೆದರು. ೨೦೦೪ರಲ್ಲಿ ಕುವೆಂಪು ಜನ್ಮ ಶತಮಾನೋತ್ಸವದ ಸಮಯದಲ್ಲಿ ಕರ್ನಾಟಕ ಸರ್ಕಾರ ಈ ಗೀತೆಯನ್ನು ಅಧಿಕೃತ ನಾಡ ಗೀತೆಯನ್ನಾಗಿ ಮಾಡಲು ನಿರ್ಧರಿಸಿತು.