Published on: November 15, 2021
ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆ
ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆ
ಸುದ್ಧಿಯಲ್ಲಿ ಏಕಿದೆ ? ರಷ್ಯಾದ ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆ, ಬ್ರಿಟನ್‌ನ ಎಂ777 ಹೊವಿಟ್ಜರ್ ಗನ್‌ಗಳು ಭಾರತೀಯ ಸೇನೆಯ ಬತ್ತಳಿಕೆ ಸೇರಿದ್ದು, ಗಡಿಯಲ್ಲಿ ಸದಾ ಕಿರಿಕಿರಿ ಉಂಟುಮಾಡುವ ಚೀನಾ ಜತೆ ಹೋರಾಡಲು ಮತ್ತಷ್ಟು ಶಕ್ತಿ ತುಂಬಿವೆ.
ಮುಖ್ಯಾಂಶಗಳು
- ಎಸ್-400 ಚೀನಾದ ವಾಯುದಾಳಿ ತಡೆಯಲು ಸಮರ್ಥವಾದರೆ, ಎಂ777 ಗನ್‌ಗಳು ಗುಡ್ಡಗಾಡು ಪ್ರದೇಶಗಳಲ್ಲಿಯೂ ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲವು. ಜತೆಗೆ ಈ ಗನ್‌ಗಳ ಸಾಗಣೆಯೂ ಸುಲಭವಾಗಿದೆ.
- ರಷ್ಯಾ ಜತೆಗೆ 2018ರಲ್ಲಿ ನಡೆದ ಒಪ್ಪಂದದ ಅನ್ವಯ ಐದು ಎಸ್-400 ಕ್ಷಿಪಣಿ ದಾಳಿ ನಿರೋಧಕ ವ್ಯವಸ್ಥೆಗಳನ್ನು ಸುಮಾರು 40 ಸಾವಿರ ಕೋಟಿ ರೂ. ವೆಚ್ಚದಲ್ಲಿ ಖರೀದಿಗೆ ನಿರ್ಧರಿಸಲಾಗಿದೆ. ಎಸ್-400 ವಾಯುದಾಳಿ ನಿರೋಧಕ ವ್ಯವಸ್ಥೆಯನ್ನು ಚೀನಾ ಗಡಿಯಲ್ಲಿ ನಿಯೋಜಿಸಲು ನಿರ್ಧರಿಸಲಾಗಿದೆ. ಇದರಿಂದ ಆಗಾಗ ಕ್ಯಾತೆ ತೆಗೆಯುವ ಚೀನಾ ಮಿಲಿಟರಿಗೆ ಖಡಕ್ ಎಚ್ಚರಿಕೆ ರವಾನಿಸಿದಂತಾಗಲಿದೆ.
ಅಮೆರಿಕ ನಿರ್ಬಂಧಕ್ಕೆ ಹಿನ್ನಡೆ:
- ರಷ್ಯಾದ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಖರೀದಿಸುವ ದೇಶದ ವಿರುದ್ಧ ಅಮೆರಿಕವು ಹಣಕಾಸು ಮತ್ತು ಮಿಲಿಟಿರಿ ವ್ಯವಹಾರ ನಡೆಸುವುದಿಲ್ಲ. ಈ ಸಂಬಂಧ 2017ರಲ್ಲಿ ‘ಕ್ಯಾಟ್ಸಾ’ ಕಾನೂನು ರೂಪಿಸಲಾಗಿದೆ. ಎಸ್-400 ಖರೀದಿಸಿದ ಟರ್ಕಿ ವಿರುದ್ಧ ಕಳೆದ ವರ್ಷ ಅಮೆರಿಕ ಸರಕಾರವು ಕ್ಯಾಟ್ಸಾ ಅಡಿಯಲ್ಲಿ ನಿರ್ಬಂಧ ಹೇರಿದೆ.
- ಇದಲ್ಲದೇ ಎಫ್-35 ಯುದ್ಧವಿಮಾನ ಯೋಜನೆಯಿಂದಲೂ ಟರ್ಕಿಯನ್ನು ಹೊರಕ್ಕೆ ದೂಡಲಾಗಿದೆ. ನ್ಯಾಟೋ ಒಕ್ಕೂಟದ ಟರ್ಕಿ ವಿರುದ್ಧವೇ ಅಮೆರಿಕ ಇಷ್ಟೊಂದು ಖಡಕ್ ಕ್ರಮ ಕೈಗೊಂಡಿದ್ದರೂ, ಭಾರತದ ವಿರುದ್ಧ ಮಾತ್ರ ಮೊದಲಿನಿಂದಲೂ ಮೃದುಧೋರಣೆಯನ್ನೇ ಹೊಂದಿದೆ.
- ಕ್ಯಾಟ್ಸಾ ಅಡಿಯಲ್ಲಿ ಅಮೆರಿಕ ಭಾರತದ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದರೂ ದ್ವಿಪಕ್ಷೀಯ ಸಂಬಂಧ ಉತ್ತಮವಾಗಿರುವ ಕಾರಣ ಹಾಗೂ ಚೀನಾದ ಅತಿಕ್ರಮ ಹತ್ತಿಕ್ಕಲು ಅಮೆರಿಕಕ್ಕೆ ಭಾರತ ಅನಿವಾರ್ಯ ಆಗಿರುವ ಕಾರಣ ನಿರ್ಬಂಧಗಳಿಂದ ವಿನಾಯಿತಿ ನೀಡಲೇಬೇಕಿದೆ.
ಆರು ಕಂಪನಿಗಳಿಗೆ ರಕ್ಷಣಾ ಸಚಿವಾಲಯ ನಿರ್ಬಂಧ
- ಆರು ವಿದೇಶಿ ರಕ್ಷಣಾ ಸಾಧನ ತಯಾರಿಕೆ ಕಂಪನಿಗಳ ಮೇಲೆ ರಕ್ಷಣಾ ಸಚಿವಾಲಯ ನಿರ್ಬಂಧ ಹೇರಿದೆ. ಸಿಂಗಾಪುರ ಟೆಕ್ನಾಲಜೀಸ್ ಕೈನೆಟಿಕ್ಸ್, ಇಸ್ರೇಲ್ ಮಿಲಿಟರಿ ಇಂಡಸ್ಟ್ರೀಸ್, ಟಿಎಸ್ ಕಿಸಾನ್, ಲುಧಿಯಾನದ ಆರ್‌ಕೆ ಮಷೀನ್ ಟೂಲ್ಸ್, ಜ್ಯೂರಿಚ್‌ನ ರ್ಹೀನ್‌ಮೆಟಲ್ ಏರ ಡಿಫೆನ್ಸ್, ರಷ್ಯಾ ಕಾರ್ಪೊರೇಷನ್ ಡಿಫೆನ್ಸ್ ಕಂಪನಿಗಳ ಜತೆಗೆ ವ್ಯವಹಾರಕ್ಕೆ ಸಚಿವಾಲಯ ಬ್ರೇಕ್ ಹಾಕಿದೆ. ಅಗಸ್ಟಾವೆಸ್ಟ್‌ಲ್ಯಾಂಡ್‌ನ ಮಾಲೀಕ ಕಂಪನಿಯಾದ ಲಿಯೊನಾರ್ಡೊ (ಮುಂಚಿನ ಹೆಸರು ಫಿನ್‌ಮೆಕ್ಕಾನಿಕಾ) ಹೆಸರುಗಳನ್ನು ನಿರ್ಬಂಧಿತ ಕಂಪನಿಗಳ ಪಟ್ಟಿಯಲ್ಲಿ ಇಲ್ಲ ಎನ್ನುವುದು ಗಮನಾರ್ಹ.