Published on: November 18, 2021
ಪೂರ್ವಾಂಚಲ ಎಕ್ಸ್ಪ್ರೆಸ್ ವೇ
ಪೂರ್ವಾಂಚಲ ಎಕ್ಸ್ಪ್ರೆಸ್ ವೇ
ಸುದ್ಧಿಯಲ್ಲಿ ಏಕಿದೆ ? ದೇಶದಲ್ಲೇ ಅತೀ ಉದ್ದದ ಎಕ್ಸ್ಪ್ರೆಸ್ ವೇ ಎನ್ನುವ ಹಿರಿಮೆಗೆ ಪಾತ್ರವಾಗಿರುವ ಉತ್ತರ ಪ್ರದೇಶದ ಸುಲ್ತಾನ್ಪುರ ಜಿಲ್ಲೆಯಲ್ಲಿರುವ ಪೂರ್ವಾಂಚಲ ಎಕ್ಸ್ಪ್ರೆಸ್ ವೇ ಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಗೊಳಿಸಿದರು.
ಏನಿದು ಪೂರ್ವಾಂಚಲ ಎಕ್ಸ್ಪ್ರೆಸ್ ವೇ? ಏನಿದರ ವಿಶೇಷತೆಗಳು?
- ಒಟ್ಟು 341 ಕಿಮೀ ಉದ್ದದ ಈ ಎಕ್ಸ್ಪ್ರೆಸ್ವೇ ಸದ್ಯ ಆರು ಪಥ ಆಗಿದ್ದು, ಭವಿಷ್ಯದಲ್ಲಿ ಅಗತ್ಯ ಬಿದ್ದರೆ ಎಂಟು ಪಥಕ್ಕೆ ವಿಸ್ತರಿಸಲೂ ಕೂಡ ಅವಕಾಶ ಇದೆ.
- ಸುಮಾರು 22500 ಕೋಟಿ ರುಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದ್ದು, ಎಕ್ಸ್ಪ್ರೆಸ್ ವೇ ಜತೆಯಲ್ಲಿಯೇ ನಿರ್ಮಿಸಲಾಗಿರುವ ಈ ಏರ್ಸ್ಟ್ರಿಪ್ನಲ್ಲಿ ಯುದ್ಧ ವಿಮಾನಗಳು ತುರ್ತು ಅಗತ್ಯವಿದ್ದಾಗ ಇಳಿಯುವ ಹಾಗೂ ಏರುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
- ಉತ್ತರ ಪ್ರದೇಶದ ರಾಜಧಾನಿ ಲಖನೌ ಜಿಲ್ಲೆಯ ಗೋಸಾಯಿಗಂಜ್ ಹಾಗೂ ಗಾಜೀಪುರ ಜಿಲ್ಲೆಯ ಹೈದರಿಯಾ ನಡುವೆ ನಿರ್ಮಾಣಗೊಂಡಿರುವ ಈ ಎಕ್ಸ್ಪ್ರೆಸ್ವೇಗೆ 2018 ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಈ ಎಕ್ಸ್ಪ್ರೆಸ್ ವೇ ಲೋಕಾರ್ಪಣೆಗೊಂಡಿದೆ.
- ಈ ಎಕ್ಸ್ಪ್ರೆಸ್ ವೇ ಮೂಲಕ ವಾಹನ ಸವಾರರು ದಿಲ್ಲಿಯಿಂದ ಉತ್ತರ ಪ್ರದೇಶದ ಪೂರ್ವದಲ್ಲಿನ ಬಿಹಾರದ ಗಡಿಯ ಅಂಚಿನವರೆಗೆ 10 ಗಂಟೆಗಿಂತಲೂ ಕಡಿಮೆ ಅವಧಿಯಲ್ಲಿ ತಲುಪಲು ಸಾಧ್ಯವಾಗಲಿದೆ. ಲಕ್ನೋದಿಂದ ಗಾಜಿಪುರ ನಡುವಿನ ಪ್ರಯಾಣದ ಸಮಯವನ್ನು 6 ಗಂಟೆಯಿಂದ 3.5 ಗಂಟೆಗಳಿಗೆ ತಗ್ಗಿಸಲಿದೆ.
- ಲಕ್ನೋದ ಚಾಂದದಸರೈ ಗ್ರಾಮದಿಂದ ಆರಂಭವಾಗುವ ಪಥ, ಗಾಜಿಪುರದ (ಉತ್ತರ ಪ್ರದೇಶ- ಬಿಹಾರ ಗಡಿಯಿಂದ 18 ಕಿಮೀ ದೂರ) ರಾಷ್ಟ್ರೀಯ ಹೆದ್ದಾರಿ 31ರಲ್ಲಿರುವ ಹೈದಾರಿಯಾ ಗ್ರಾಮದಲ್ಲಿ ಅಂತ್ಯಗೊಳ್ಳಲಿದೆ.
- ಉತ್ತರ ಪ್ರದೇಶದ ಪೂರ್ವ ಭಾಗಗಳು, ಮುಖ್ಯವಾಗಿ ಲಕ್ನೋ, ಬಾರಾಬಂಕಿ, ಅಮೇಥಿ, ಅಯೋಧ್ಯಾ, ಸುಲ್ತಾನಪುರ, ಅಂಬೇಡ್ಕರ್ ನಗರ, ಅಜಂಗರ, ಮವು ಮತ್ತು ಗಾಜಿಪುರ ಜಿಲ್ಲೆಗಳಲ್ಲಿ ಆರ್ಥಿಕ ಅಭಿವೃದ್ಧಿಗೆ ಇದು ಮಹತ್ತರ ನೆರವು ನೀಡಲಿದೆ.
- ಈ ಮಾರ್ಗದಲ್ಲಿ ಒಟ್ಟು ಏಳು ಪ್ರಮುಖ ಸೇತುವೆಗಳು, 22 ಫ್ಲೈ ಓವರ್ಗಳು, ಆರು ಟೋಲ್ ಪ್ಲಾಜಾಗಳು, ಏಳು ರೈಲ್ವೆ ಓವರ್ಬ್ರಿಡ್ಜ್ಗಳು, 114 ಸಣ್ಣ ಸೇತುವೆಗಳು, 139 ಲೈಟ್ ವಿಯುಪಿ, 525 ಕಿರು ಸುರಂಗಗಳು ಮತ್ತು 271 ಅಂಡರ್ಪಾಸ್ಗಳನ್ನು ಒಳಗೊಂಡಿದೆ.
- ಈ ನೂತನ ಎಕ್ಸ್ಪ್ರೆಸ್ ವೇ ಸಿಎನ್ಜಿ ಸ್ಟೇಷನ್ಗಳು, ಎಲೆಕ್ಟ್ರಿಕ್ ರಿಚಾರ್ಜ್ ಕೇಂದ್ರಗಳನ್ನು ಒಳಗೊಂಡಿದ್ದು, ಆಗ್ರಾ ಮತ್ತು ಬುಂಡೇಲಖಂಡ್ ಎಕ್ಸ್ಪ್ರೆಸ್ ವೇಗಳ ಮುಖಾಂತರ ರಕ್ಷಣಾ ಕಾರಿಡಾರ್ಗೆ ಸಂಪರ್ಕಿಸುತ್ತದೆ.
- ಈ ಮಾರ್ಗದಲ್ಲಿ ಸುರಕ್ಷತೆ ಹಾಗೂ ವೈದ್ಯಕೀಯ ತುರ್ತುಗಳಿಗಾಗಿ ಪೊಲೀಸ್ ವಾಹನಗಳು, ಜಾನುವಾರುಗಳನ್ನು ಹಿಡಿಯುವ ವಾಹನಗಳು ಮತ್ತು 16 ಆಂಬುಲೆನ್ಸ್ಗಳನ್ನು ನಿಯೋಜಿಸಲಾಗಿದೆ.
- ಈ ಮಾರ್ಗವು ಪ್ರಯಾಣಿಕರಿಗೆ ಇಂಧನ ಹಾಗೂ ಸಮಯದ ಉಳಿತಾಯಕ್ಕೆ ನೆರವಾಗಲಿದೆ ಮತ್ತು ಅಪಘಾತಗಳ ಸಂಖ್ಯೆಯನ್ನು ತಗ್ಗಿಸಲಿದೆ.