Published on: November 24, 2021
3 ರಾಜಧಾನಿ ಮಸೂದೆ ಹಿಂಪಡೆತ
3 ರಾಜಧಾನಿ ಮಸೂದೆ ಹಿಂಪಡೆತ
ಸುದ್ಧಿಯಲ್ಲಿ ಏಕಿದೆ ? ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ಘೋಷಣೆ ಮಾಡುವ ವಿವಾದಾತ್ಮಕ ನಿರ್ಣಯವನ್ನು ಆಂಧ್ರ ಪ್ರದೇಶ ಸರ್ಕಾರ ಕೊನೆಗೂ ಹಿಂಪಡೆದಿದ್ದು, ಸಿಎಂ ಜಗನ್ ಮೋಹನ್ ರೆಡ್ಡಿ ಸರ್ಕಾರ 3 ರಾಜಧಾನಿ ಮಸೂದೆಯನ್ನು ಆಂಧ್ರ ಅಸೆಂಬ್ಲಿಯಲ್ಲಿ ಹಿಂದಕ್ಕೆ ಪಡೆದಿದೆ.
ಹಿನ್ನಲೆ
- ಈ ಹಿಂದೆ ಸಿಎಂ ಆಗಿದ್ದ ಚಂದ್ರಬಾಬು ನಾಯ್ಡು ಅವರು ಅಮರಾವತಿಯನ್ನು ರಾಜಧಾನಿಯಾಗಿ ಘೋಷಣೆ ಮಾಡಿ ಅಲ್ಲಿನ ರೈತರಿಂದ ಭಾರಿ ಪ್ರಮಾಣದ ಕೃಷಿ ಭೂಮಿಗಳನ್ನು ರಾಜಧಾನಿ ನಿರ್ಮಾಣಕ್ಕಾಗಿ ವಶಕ್ಕೆ ಪಡೆದಿದ್ದರು. ಅಲ್ಲದೆ ಹಲವಾರು ವಲಯಗಳ ಅಭಿವೃದ್ಧಿ ಕಾಮಗಾರಿ ಕೂಡ ನಡೆದಿತ್ತು. ಆದರೆ ಬಳಿಕ ಅಧಿಕಾರಕ್ಕೆ ಬಂದ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಮೂರು ರಾಜಧಾನಿಗಳನ್ನು ಘೋಷಣೆ ಮಾಡಿತ್ತು. ಈ ವಿವಾದಿತ ಮಸೂದೆಯಲ್ಲಿ ಕಾರ್ಯಕಾರಿ ರಾಜಧಾನಿಯಾಗಿ ವಿಶಾಖಪಟ್ಟಣಂ, ಶಾಸಕಾಂಗ ರಾಜಧಾನಿಯಾಗಿ ಅಮರಾವತಿ, ನ್ಯಾಯಾಂಗ ರಾಜಧಾನಿ ಕರ್ನೂಲ್ ಜಿಲ್ಲೆಯನ್ನು ಪ್ರಸ್ತಾಪಿಸಲಾಗಿತ್ತು.
- ಈ ತ್ರಿವಿಧೀಕರಣ ಮಸೂದೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದೀಗ ಅಮರಾವತಿ ರೈತರ ಮತ್ತು ಹಲವಾರು ವಲಯಗಳ ತೀವ್ರ ಪ್ರತಿರೋಧದ ಹಿನ್ನಲೆಯಲ್ಲಿ ಆಂಧ್ರಪ್ರದೇಶದ ರಾಜ್ಯ ಸರಕಾರವು ವಿವಾದಾತ್ಮಕ ಮೂರು ರಾಜಧಾನಿ ಮಸೂದೆಯನ್ನು ಹಿಂಪಡೆಯಲು ನಿರ್ಧರಿಸಿದೆ
ಸಂಸತ್ತಿಗೆ ಮಾತ್ರವೇ ಅಧಿಕಾರ
- ರಾಜ್ಯದ ರಾಜಧಾನಿಯನ್ನು ಸ್ಥಾಪಿಸುವ, ಬದಲಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಆ ಅಧಿಕಾರ ಇರುವುದು ಸಂಸತ್ತಿಗೆ ಮಾತ್ರ’. ಇದು ಆಂಧ್ರ ಪ್ರದೇಶದಲ್ಲಿ ಮೂರು ರಾಜಧಾನಿಗಳನ್ನು ಸ್ಥಾಪಿಸುವ ವೈಎಸ್‌ಆರ್‌ಸಿ ಸರ್ಕಾರದ ನಿರ್ಧಾರದ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿಗಳನ್ನು ಹಾಕಿರುವ ರೈತರ ಪರ ವಕೀಲರ ವಾದ.
- ರಾಜ್ಯದ ರಾಜಧಾನಿಯನ್ನು ಸ್ಥಾಪಿಸುವ ಸಂಬಂಧ ಇರುವ ಅಧಿಕಾರಗಳು ಮತ್ತು ಅನುಸರಿಸಬೇಕಾದ ಪ್ರಕ್ರಿಯೆಗಳ ಬಗ್ಗೆ ಸಂವಿಧಾನದ 2ನೇ ಮತ್ತು 3ನೇ ವಿಧಿಯಲ್ಲಿ ವಿವರಿಸಲಾಗಿದೆ. ಸಂವಿಧಾನದ 2ನೇ ಮತ್ತು 3ನೇ ವಿಧಿಯ ಅಡಿ ನೂತನ ರಾಜ್ಯವನ್ನು ರಚಿಸಿ, ಅದರ ಭೌಗೋಳಿಕ ಗಡಿಗಳನ್ನು ನಿರ್ಧರಿಸಿ, ರಾಜಧಾನಿಯನ್ನು ಗುರುತಿಸುವ ಅಧಿಕಾರ ಸಂಸತ್ತಿಗೆ ಮಾತ್ರವೇ ಇದೆ. ಹೊಸ ರಾಜಧಾನಿ ರಚಿಸುವ ಸಂಬಂಧ ಸಂಸತ್ತಿನಲ್ಲಿ ನಿರ್ಣಯ ಮಂಡಿಸಿ, ಅಂಗೀಕಾರ ಪಡೆಯಬೇಕು
ಮಸೂದೆಗಳು ಏನು ಹೇಳುತ್ತವೆ?
- ಮೂರು ರಾಜಧಾನಿ ಸ್ಥಾಪನೆ ಕುರಿತು 2020ರ ಜನವರಿಯಲ್ಲಿ ಮಸೂದೆಗಳನ್ನು ಮಂಡಿಸಲಾಗಿತ್ತು. ಅವುಗಳೆಂದರೆ, ‘ಆಂಧ್ರಪ್ರದೇಶ ರಾಜಧಾನಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ರದ್ದು ಮಸೂದೆ’ ಮತ್ತು ‘ಆಂಧ್ರಪ್ರದೇಶ ವಿಕೇಂದ್ರೀಕರಣ ಮತ್ತು ಎಲ್ಲಾ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮಸೂದೆ’.
- ಈ ಮಸೂದೆಗಳ ಪ್ರಕಾರ, ರಾಯಲಸೀಮಾ ಭಾಗದ ಕರ್ನೂಲ್ ಅನ್ನು ನ್ಯಾಯಾಂಗ ರಾಜಧಾನಿಯಾಗಿ, ರಾಜ್ಯದ ಉತ್ತರ ಭಾಗದ ವಿಶಾಖಪಟ್ಟಣವನ್ನು ಕಾರ್ಯಾಂಗ ರಾಜಧಾನಿಯಾಗಿ, ಅಮರಾವತಿಯನ್ನು ಶಾಸಕಾಂಗ ರಾಜಧಾನಿಯನ್ನಾಗಿ ಪ್ರತ್ಯೇಕಿಸಬೇಕು.
- ಹೈಕೋರ್ಟ್ ಹಾಗೂ ನ್ಯಾಯಾಂಗಕ್ಕೆ ಸಂಬಂಧಪಟ್ಟ ಎಲ್ಲ ಕಚೇರಿ ಮತ್ತು ವಿಭಾಗಗಳನ್ನು ಕರ್ನೂಲ್‌ಗೆ, ಆಡಳಿತಕ್ಕೆ ಸಂಬಂಧಪಟ್ಟ ಕಚೇರಿ ಹಾಗೂ ವಿಭಾಗಗಳನ್ನು ವಿಶಾಖಪಟ್ಟಣಕ್ಕೆ ಸ್ಥಳಾಂತರ ಮಾಡುವ ಸಂಬಂಧ ಹೈಕೋರ್ಟ್‌ಗೆ ಸರ್ಕಾರ ಅರ್ಜಿ ಸಲ್ಲಿಸಿತ್ತು. ಅಮರಾವತಿಯಲ್ಲಿ ವಿಧಾನಮಂಡಲವನ್ನು ಉಳಿಸಿಕೊಳ್ಳುವುದಾಗಿ ಹೇಳಿತ್ತು. ಈ ಮಸೂದೆಗಳಿಗೆ ವಿಧಾನಸಭೆ ಅನುಮೋದನೆ ನೀಡಿದೆ. ಆದರೆ ವಿಧಾನ ಪರಿಷತ್‌ನಲ್ಲಿ ವೈಎಸ್‌ಆರ್‌ಸಿ ಪಕ್ಷಕ್ಕೆ ಬಹುಮತ ಇಲ್ಲದ ಕಾರಣ, ಮಸೂದೆಗಳು ಅಂಗೀಕಾರ ಪಡೆದಿಲ್ಲ.
- ಈ ಮಸೂದೆಗಳನ್ನು ಜುಲೈನಲ್ಲಿ ಮತ್ತೆ ಮಂಡನೆ ಮಾಡಲಾಗಿದ್ದು, ಇವುಗಳನ್ನು ಆಯ್ಕೆ ಸಮಿತಿಯ ಪರಿಶೀಲನೆಗೆ ಕಳುಹಿಸಲಾಗಿದೆ. ಆದರೆ ಮಸೂದೆಗಳಿಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ ಎಂದು ತೆಲುಗುದೇಶಂ ಪಕ್ಷ (ಟಿಡಿಪಿ) ಆರೋಪಿಸಿದೆ