Published on: December 10, 2021

ಆತ್ಮಹತ್ಯಾ ಯಂತ್ರ

ಆತ್ಮಹತ್ಯಾ ಯಂತ್ರ

ಸುದ್ಧಿಯಲ್ಲಿ ಏಕಿದೆ ?  ಆತ್ಮಹತ್ಯೆಯ ಪ್ರಕರಣಗಳನ್ನು ತಡೆಯಲು ಅನೇಕ ದೇಶಗಳು ಶ್ರಮಿಸುತ್ತಿದ್ದರೆ, ಸುಲಭವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸಾಧನವೊಂದಕ್ಕೆ ಸ್ವಿಟ್ಜರ್ಲೆಂಡ್ ಅನುಮೋದನೆ ನೀಡಿದೆ.

ಮುಖ್ಯಾಂಶಗಳು

  • ಶವಪೆಟ್ಟಿಗೆ ಆಕಾರದ ‘ಆತ್ಮಹತ್ಯಾ ಕ್ಯಾಪ್ಸ್ಯೂಲ್’ ಅನ್ನು 3ಡಿ ಪ್ರಿಂಟರ್‌ನೊಂದಿಗೆ ನಿರ್ಮಿಸಲಾಗಿದೆ. ಇದಕ್ಕೆ ಸ್ವಿಟ್ಜರ್ಲೆಂಡ್ ವೈದ್ಯಕೀಯ ಪರಾಮರ್ಶನಾ ಸಮಿತಿ ಅನುಮೋದನೆ ನೀಡಿದೆ.
  • ಈ ಯಂತ್ರವು ಯಂತ್ರದ ಒಳಗಿನ ಆಮ್ಲಜನಕದ ಮಟ್ಟವನ್ನು ಗಣನೀಯವಾಗಿ ಕಡಿಮೆಗೊಳಿಸುವ ಮೂಲಕ ರಕ್ತದಲ್ಲಿನ ಇಂಗಾಲದ ಡೈ ಆಕ್ಸೈಡ್ ಹಾಗೂ ಆಮ್ಲಜನಕದ ಕುಸಿತದಿಂದ ಸಾವು ಸಂಭವಿಸಲು ಕಾರಣವಾಗುತ್ತದೆ.
  • ಸಾರ್ಕೋ ಸೂಸೈಡ್ ಪಾಡ್ ಎಂಬ ಯಂತ್ರಗಳನ್ನು ಎಕ್ಸಿಟ್ ಇಂಟರ್‌ನ್ಯಾಷನಲ್ ಸಂಸ್ಥೆ ಅಭಿವೃದ್ಧಿಪಡಿಸಿದೆ. ಇದು ಜೀವನ ಸಾಕೆನಿಸಿದ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಳ್ಳಲು ಅನುವು ಮಾಡಿಕೊಳ್ಳುತ್ತದೆ. ಇದನ್ನು ಬಳಕೆದಾರ ಒಳಗೆ ಮಲಗಿಕೊಂಡೇ ಉಪಯೋಗಿಸಬಹುದು. ಈ ಯಂತ್ರವನ್ನು ಕಾನೂನುಬದ್ಧಗೊಳಿಸುವಂತೆ ಸಂಸ್ಥೆ ಮನವಿ ಮಾಡಿತ್ತು. ದಯಾಮರಣ ಬಯಸುವವರಿಗಾಗಿ ರೂಪಿಸಿರುವ ಯಂತ್ರ ಇದು.
  • ‘ಡಾ. ಡೆತ್’ ಎಂದೇ ಹೆಸರಾಗಿರುವ ಲಾಭರಹಿತ ಸಂಸ್ಥೆ ಎಕ್ಸಿಟ್ ಇಂಟರ್‌ನ್ಯಾಷನಲ್‌ನ ನಿರ್ದೇಶಕ ಡಾ. ಫಿಲಿಪ್ ನಿಟ್ಕೆ, ಈ ಸೂಸೈಡ್ ಪಾಡ್‌ನ ಹಿಂದಿನ ರೂವಾರಿಯಾಗಿದ್ದಾರೆ.

ಹಿನ್ನಲೆ

  • ಅನ್ಯರ ‘ನೆರವು’ ಪಡೆದು ಕಳೆದ ವರ್ಷ ಸ್ವಿಟ್ಜರ್ಲೆಂಡ್‌ನಲ್ಲಿ ಸುಮಾರು 1300 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಕ್ಸಿಟ್ ಇಂಟರ್‌ನ್ಯಾಷನಲ್ ತಿಳಿಸಿದೆ. ಸ್ವಿಟ್ಜರ್ಲೆಂಡ್‌ನಲ್ಲಿ ಬೇರೆಯವರ ನೆರವು ಪಡೆದು ಆತ್ಮಹತ್ಯೆ ಮಾಡಿಕೊಳ್ಳುವುದನ್ನು 1942ರಲ್ಲಿಯೇ ಕಾನೂನುಬದ್ಧಗೊಳಿಸಲಾಗಿತ್ತು. ಇದರಲ್ಲಿ ಸಾಯಲು ಬಯಸಿರುವ ವ್ಯಕ್ತಿ ಗುಳಿಗೆಯೊಂದನ್ನು ಸೇವಿಸಿದರೆ ಅದು ಅವರನ್ನು ಕೋಮಾಕ್ಕೆ ಕೊಂಡೊಯ್ಯುತ್ತದೆ. ಬಳಿಕ ಆ ವ್ಯಕ್ತಿ ಸಾವನ್ನಪ್ಪುತ್ತಾನೆ.

ಟೀಕೆಗಳು

  • ಇದಕ್ಕಿಂತಲೂ ತಮ್ಮ ಯಂತ್ರದಿಂದ ಸುಲಭವಾಗಿ ಸಾಯಬಹುದು ಎನ್ನುವುದು ಸಂಸ್ಥೆಯ ವಾದ. ಆದರೆ ಇದು ಆಧುನಿಕ ಮಾದರಿಯ ಗ್ಯಾಸ್ ಚೇಂಬರ್ ಎಂಬ ಟೀಕೆಗಳು ವ್ಯಕ್ತವಾಗಿವೆ. ಇದು ಆತ್ಮಹತ್ಯೆಗೆ ಪ್ರಚೋದನೆ ನೀಡುವ ಸಾಧ್ಯತೆ ಇದೆ ಎಂಬ ಆರೋಪಗಳು ಕೇಳಿಬಂದಿವೆ.