Published on: May 24, 2023
ಅಂತರರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ
ಅಂತರರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ
ಸುದ್ದಿಯಲ್ಲಿ ಏಕಿದೆ? ಪ್ರತಿ ವರ್ಷ ಮೇ 22ರಂದು ಅಂತರರಾಷ್ಟ್ರೀಯ ಜೀವವೈವಿಧ್ಯ ದಿನವನ್ನು ಆಚರಿಸಲಾಗುತ್ತದೆ.
ಮುಖ್ಯಾಂಶಗಳು
- ವಿಶ್ವಸಂಸ್ಥೆ, ಸರ್ಕಾರಗಳು, ಗಣ್ಯ ವ್ಯಕ್ತಿಗಳು, ಸ್ಥಳೀಯ ಸಮುದಾಯಗಳು, ಸರ್ಕಾರೇತರ ಸಂಸ್ಥೆಗಳ ಪರಿಶ್ರಮದಿಂದಾಗಿ ಜೀವವೈವಿಧ್ಯ ರಕ್ಷಣೆಯು ಹಿಂದೆಂದಿಗಿಂತಲೂ ಮಹತ್ವ ಪಡೆದುಕೊಂಡಿದೆ.
- ಜೀವವೈವಿಧ್ಯ ಬಿಕ್ಕಟ್ಟು ನಿವಾರಣೆಗೆ ಈ ಎಲ್ಲಸರ್ಕಾರಗಳು, ಸಂಘಟನೆಗಳು ಹಾಗೂ ವ್ಯಕ್ತಿಗಳು ಹೊಸ ಹೊಸ ಮಾರ್ಗೋಪಾಯಗಳನ್ನು ನೀಡುತ್ತಿವೆ.
- ಒಪ್ಪಂದದಿಂದ ಕ್ರಿಯೆಗೆ: ಜೀವವೈವಿಧ್ಯವನ್ನು ಮರಳಿ ನಿರ್ಮಿಸಿ’ ಎಂಬುದು ಈ ಬಾರಿಯ ಜೀವವೈವಿಧ್ಯ ದಿನದ ವಿಷಯ.
ಉದ್ದೇಶ
- ಕಾನ್ಫರೆನ್ಸ್ ಆಫ್ ಪಾರ್ಟೀಸ್ನಲ್ಲಿ (ಸಿಒಪಿ–15) ಒಪ್ಪಿಗೆ ನೀಡಲಾಗಿದ್ದ ‘ಜಾಗತಿಕ ಜೀವವೈವಿಧ್ಯ ಕಾರ್ಯಚೌಕಟ್ಟು’ (ಜಿಬಿಎಫ್) ಅನ್ನು ಕಾರ್ಯರೂಪಕ್ಕೆ ತರುವ ವಿಶ್ವಾಸದೊಂದಿಗೆ ಈ ಬಾರಿಯ ಜೀವವೈವಿಧ್ಯ ದಿನವನ್ನು ಆಚರಿಸಲಾಗುತ್ತಿದೆ.
ಒಪ್ಪಂದ
- ಈ ಒಪ್ಪಂದವು ಜೀವವೈವಿಧ್ಯವನ್ನು ಕಾಪಾಡುವ ಮಹತ್ವದ 23 ಗುರಿಗಳನ್ನು ಪ್ರಸ್ತಾಪಿಸಿದ್ದು, ಅದರ ಕಾರ್ಯಾರಂಭಕ್ಕೆ ಈ ಬಾರಿ ಒತ್ತುನೀಡಲಾಗಿದೆ. ಒಪ್ಪಂದವನ್ನು ಯಾವ ದೇಶಗಳು ಇನ್ನೂ ಜಾರಿ ಮಾಡಿಲ್ಲವೋ, ಅವು ಮೇ 22ರಂದು ಜಾರಿಗೆ ಮುಂದಾಗಬೇಕು ಎಂದು ಮನವರಿಕೆ ಮಾಡಲಾಗಿದೆ. ಈಗಾಗಲೇ ಜಾರಿ ಮಾಡಿರುವ ದೇಶಗಳು ಅನುಷ್ಠಾನದ ಮಾಹಿತಿಯನ್ನು ಪ್ರಕಟಿಸಬೇಕು ಎಂದು ತಿಳಿಸಲಾಗಿದೆ.
ಜೀವವೈವಿಧ್ಯ ಸಂರಕ್ಷಣಾ ಗುರಿಗಳು
- ಜೀವವೈವಿಧ್ಯ ಸಮೃದ್ಧ ಸ್ಥಳಗಳ ಭೂ ಹಾಗೂ ಜಲಪ್ರದೇಶಗಳ ಸಂರಕ್ಷಣೆ ಕಾರ್ಯ ಚುರುಕುಗೊಳಿಸುವುದು ನಿರ್ಲಕ್ಷ್ಯಕ್ಕೆ ಗುರಿಯಾಗಿರುವ ಜೀವವೈವಿಧ್ಯ ಮಹತ್ವ ಹೊಂದಿರುವ ಭೂಪ್ರದೇಶ, ಒಳನಾಡು ಜಲಸಂಪನ್ಮೂಲ, ಕರಾವಳಿ ಹಾಗೂ ಕಡಲ ಪರಿಸರದ ಶೇ. 30ರಷ್ಟು ಪ್ರದೇಶವನ್ನು 2030ರೊಳಗೆ ಮತ್ತೆ ಜೀವವೈವಿಧ್ಯದ ತಾಣವಾಗಿ ಪರಿವರ್ತಿಸುವುದು
- ಜೀವವೈವಿಧ್ಯದ ತಾಣಗಳ ಸಂರಕ್ಷಣೆಯ ವೇಳೆ ಅಲ್ಲಿನ ಮೂಲನಿವಾಸಿಗಳು, ಸ್ಥಳೀಯ ಸಮುದಾಯಗಳ ಸಾಂಪ್ರದಾಯಿಕ ಭೂ ಒಡೆತನದ ಹಕ್ಕನ್ನು ಗೌರವಿಸಿ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು
- ಮಾನವ ಹಸ್ತಕ್ಷೇಪದಿಂದ ಅಪಾಯದ ಅಂಚು ತಲುಪಿರುವ ಜೀವಪ್ರಭೇದಗಳ ಸಂರಕ್ಷಣೆಗೆ ತುರ್ತು ಕ್ರಮಗಳನ್ನು ಖಾತರಿಪಡಿಸುವುದು. ಮಾನವ–ಪ್ರಾಣಿ ಸಂಘರ್ಷವನ್ನು ಆದಷ್ಟೂ ತಗ್ಗಿಸುವುದು
- ವನ್ಯ ಪ್ರಬೇಧಗಳ ಸುಸ್ಥಿರ, ಸುರಕ್ಷಿತ ಹಾಗೂ ಕಾನೂನುಬದ್ಧ ಮಾರಾಟವನ್ನು ಖಚಿತಪಡಿಸಿಕೊಳ್ಳುವುದು
- ನಿರ್ಧಿಷ್ಟ ಜೀವವೈವಿಧ್ಯ ಪ್ರದೇಶದ ಮೇಲೆ ವಲಸೆ ಪ್ರಬೇಧಗಳು ಉಂಟುಮಾಡುವ ಪರಿಣಾಮವನ್ನು ತಗ್ಗಿಸುವುದು ಅಥವಾ ನಿರ್ಬಂಧಿಸುವುದು. ಅವುಗಳನ್ನು ಜೀವವೈವಿಧ್ಯದ ಪ್ರದೇಶಕ್ಕೆ ಪರಿಚಯಿಸದಂತೆ ತಡೆಯುವುದು
- ಪ್ಲಾಸ್ಟಿಕ್ ಮಾಲಿನ್ಯ, ರಸಗೊಬ್ಬರಗಳು ಹಾಗೂ ಹಾನಿಕಾರಕ ರಾಸಾಯನಿಕಗಳ ಬಳಕೆಯನ್ನು ಅರ್ಧದಷ್ಟು ತಗ್ಗಿಸುವುದರ ಮೂಲಕ ಜೀವವೈವಿಧ್ಯ ಪ್ರದೇಶದ ಮೇಲೆ ಆಗುವ ಮಾಲಿನ್ಯ ಪರಿಣಾಮವನ್ನು ತಡೆಯುವುದು ಹವಾಮಾನ ಬದಲಾವಣೆ ಹಾಗೂ ಸಮುದ್ರದಲ್ಲಿಆಮ್ಲೀಯ ಪ್ರಮಾಣ ಹೆಚ್ಚಾಗುವುದನ್ನು ತಡೆಯುವುದು ಹಾಗೂ ಅದರ ಪರಿಣಾಮವನ್ನು ನೈಸರ್ಗಿಕ ವಿಧಾನದಲ್ಲಿ ಕಡಿಮೆಗೊಳಿಸುವುದು
- ಕೃಷಿ, ಮೀನುಗಾರಿಕೆ, ಅರಣ್ಯೀಕರಣವನ್ನು ಜೀವವೈವಿಧ್ಯಸ್ನೇಹಿ ಕ್ರಮಗಳ ಮೂಲಕ ಸುಸ್ಥಿರ ನಿರ್ವಹಣೆಗೆ ಒಳಪಡಿಸಬೇಕು
- ನೀರು, ಗಾಳಿ, ಪರಿಸರ, ಮಣ್ಣಿನ ಆರೋಗ್ಯದಂತಹ ಪ್ರಾಕೃತಿಕ ಅಂಶಗಳ ನಿರ್ವಹಣೆ, ರೋಗಗಳ ಅಪಾಯ ತಗ್ಗಿಸುವುದು, ನೈಸರ್ಗಿಕ ಪರಿಹಾರದ ಮೂಲಕ ಪ್ರಾಕೃತಿಕ ವಿಕೋಪಗಳನ್ನು ತಡೆಯುವುದರಿಂದ ಮನುಷ್ಯ ಹಾಗೂ ಪ್ರಕೃತಿಗೆ ನೆರವಾಗುವುದು
- ಸುಸ್ಥಿರ ನಗರೀಕರಣ, ಜೀವವೈವಿಧ್ಯ ಆದ್ಯತೆಯಾಗಿರುವ ನಗರ ಯೋಜನೆಯಂತಹ ಕ್ರಮಗಳನ್ನು ಅಳವಡಿಸಿಕೊಳ್ಳುವುದು
- ಆನುವಂಶಿಕ ಸಂಪನ್ಮೂಲಗಳ ಸರಿಯಾದ ಹಂಚಿಕೆ ಹಾಗೂ ಬಳಕೆಗೆ ಕಾನೂನಾತ್ಮಕ, ಆಡಳಿತಾತ್ಮಕ ಕ್ರಮಗಳನ್ನು ಎಲ್ಲಹಂತಗಳಲ್ಲಿಜಾರಿ ಮಾಡುವುದು
- ತ್ಯಾಜ್ಯ ಉತ್ಪಾದನೆಯನ್ನು ಆದಷ್ಟೂ ಕಡಿಮೆ ಮಾಡುವುದು ಹಾಗೂ ಅತಿಯಾದ ಬಳಕೆಯನ್ನು ತಡೆಯುವುದು; ಇದನ್ನು ಸಾಧ್ಯವಾಗಿಸುವ ನೀತಿಗಳು ಹಾಗೂ ಕಾನೂನುಗಳನ್ನು ರೂಪಿಸುವುದು
- ಜೀವವೈವಿಧ್ಯಕ್ಕೆ ಹಾನಿಮಾಡಬಲ್ಲಉತ್ಪನ್ನಗಳಿಗೆ ನೀಡುತ್ತಿರುವ ಸಬ್ಸಿಡಿಯನ್ನು 2025ರೊಳಗೆ ತೆಗೆದುಹಾಕುವುದು ಸೇರಿದಂತೆ ವಿವಿಧ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳುವುದು
- ರಾಷ್ಟ್ರೀಯ ಜೀವವೈವಿಧ್ಯ ಕಾರ್ಯಯೋಜನೆ ಜಾರಿಗೆ ಬೇಕಾಗಿರುವ ಅಗತ್ಯ ಹಣಕಾಸು ಸಂಪನ್ಮೂಲವನ್ನು (ಸ್ಥಳೀಯ, ಅಂತರರಾಷ್ಟ್ರೀಯ, ಖಾಸಗಿ ಮೂಲಗಳು) ಕ್ರೋಡೀಕರಿಸುವುದು
- ಮಾರ್ಗಸೂಚಿಯ ಗುರಿಗಳನ್ನು ತಲುಪಲು ಜೀವವೈವಿಧ್ಯ ಸಂರಕ್ಷಣೆ ಯೋಜನೆಗಳ ಅನುಷ್ಠಾನಕ್ಕೆ ತಂತ್ರಜ್ಞಾನದ ಜಂಟಿ ಅಭಿವೃದ್ಧಿ, ವಿನಿಮಯ ಹಾಗೂ ಸಹಕಾರ ಅಗತ್ಯ
- ಜೀವವೈವಿಧ್ಯ ರಕ್ಷಣೆ ನಿಟ್ಟಿನಲ್ಲಿಲಭ್ಯವಿರುವ ಮಾಧ್ಯಮಗಳ ಮೂಲಕ ಜನಜಾಗೃತಿ, ಶಿಕ್ಷಣ, ಮೇಲ್ವಿಚಾರಣೆ, ತರಬೇತಿ ಕಡ್ಡಾಯಗೊ ಳಿಸುವುದು.