Published on: May 2, 2023
ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ
ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ
ಸುದ್ದಿಯಲ್ಲಿ ಏಕಿದೆ? ಪ್ರತಿ ವರ್ಷ ಮೇ 1 ರಂದು ‘ಮೇ ದಿನ’ ಎಂದೂ ಕರೆಯಲ್ಪಡುವ ಅಂತರಾಷ್ಟ್ರೀಯ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ.
ಮುಖ್ಯಾಂಶಗಳು
- ಕೆಲವು ದೇಶಗಳಲ್ಲಿ ಬೇರೆ ದಿನಾಂಕಗಳಂದೂ ಇದನ್ನು ಆಚರಿಸುತ್ತಾರೆ. ಆದರೆ ಬಹುತೇಕ ರಾಷ್ಟ್ರಗಳಲ್ಲಿ ಮೇ 1 ರಂದು ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ.
ಉದ್ದೇಶ
- ಕಾರ್ಮಿಕ ವರ್ಗದ ಸಾಧನೆಗಳನ್ನು ಆಚರಿಸಲು ಕಾರ್ಮಿಕರ ದಿನ ಅಥವಾ ಅಂತರರಾಷ್ಟ್ರೀಯ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ. ಕಾರ್ಮಿಕರ ದಿನವು ಸಂಪೂರ್ಣವಾಗಿ ಕಾರ್ಮಿಕ ವರ್ಗಕ್ಕೆ ಮೀಸಲಾದ ವಿಶೇಷ ದಿನ.
- ಕಾರ್ಮಿಕ ದಿನ 2023 ರ ವಿಷಯ : “ಕಾರ್ಮಿಕರ ದಿನದ ವಿಕಾಸ”(Evolvement of Labour Day)
ಕಾರ್ಮಿಕರ ಸಾಮಾಜಿಕ ಕೊಡುಗೆಯನ್ನು ಗುರುತಿಸುವುದು ಮತ್ತು ನ್ಯಾಯಯುತ ಪ್ರಪಂಚಕ್ಕಾಗಿ ಭರವಸೆಗಳನ್ನು ನವೀಕರಿಸುವುದನ್ನು ಕಾರ್ಮಿಕ ದಿನದಂದು ಪ್ರೋತ್ಸಾಹಿಸಲಾಗುತ್ತದೆ.
ಇತಿಹಾಸ
- ಅಮೇರಿಕಾದಲ್ಲಿ ಕೈಗಾರಿಕಾ ಕ್ರಾಂತಿಯ ನಂತರ ಕಾರ್ಮಿಕರನ್ನು ವಿಪರೀತ ದುಡಿಸಿಕೊಳ್ಳಲಾಗುತ್ತಿತ್ತು. ಇದನ್ನು ವಿರೋಧಿಸಲು 1886ರಲ್ಲಿ ಕಾರ್ಮಿಕರ ಒಕ್ಕೂಟವು ಒಂದು ದಿನಕ್ಕೆ 16 ಗಂಟೆಗಳ ಕೆಲಸದ ಬದಲಿಗೆ 8 ಗಂಟೆಗಳ ಕೆಲಸಕ್ಕಾಗಿ ಮುಷ್ಕರವನ್ನು ಘೋಷಿಸಿತು. ಜನಸಂದಣಿಯನ್ನು ನಿಯಂತ್ರಿಸಲು, ಪೊಲೀಸರು ಶೆಲ್ ದಾಳಿಯನ್ನು ನಡೆಸಿದರು. ಅನೇಕ ಕಾರ್ಮಿಕರು ಸಾವನ್ನಪ್ಪಿದರು ಮತ್ತು ಕೆಲವರು ಗಾಯಗೊಂಡರು. ಈ ಘಟನೆಯ ನಂತರ ಕಾರ್ಮಿಕರ ಹಕ್ಕುಗಳಿಗಾಗಿ ಸಾಗರೋತ್ತರ ಚಳುವಳಿ ಪ್ರಾರಂಭವಾಯಿತು. ಕೊನೆಗೆ 1916ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನವು 8 ಗಂಟೆಗಳ ಕೆಲಸದ ಅವಧಿಯನ್ನು ಘೋಷಿಸಿತು.
- ಮೊದಲ ಆಚರಣೆ: ಕಾರ್ಮಿಕರ ಹಕ್ಕುಗಳ ಹೋರಾಟಕ್ಕೆ ಹಾಗೂ ಕಾರ್ಮಿಕರ ಪ್ರಭುತ್ವದ ನೆನಪಿಗೆ 1889ರಲ್ಲಿ ಮೊದಲ ಬಾರಿಗೆ ಮೇ 1 ರಂದು ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು. ಪ್ಯಾರಿಸ್ಸಿನಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾಜವಾದಿ ಪ್ರಥಮ ಅಧಿವೇಶನದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ಭಾರತದಲ್ಲಿ ಮೊದಲ ಬಾರಿಗೆ ಕಾರ್ಮಿಕರ ದಿನ ಆಚರಣೆ
- ಭಾರತದಲ್ಲಿ ಮೊದಲ ಮೇ ದಿನವನ್ನು ಮದ್ರಾಸ್ನಲ್ಲಿ (ಈಗಿನ ಚೆನ್ನೈ) ‘ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದೂಸ್ತಾನ್’ 1923ರ ಮೇ 1ರಂದು ಆಯೋಜಿಸಿತು.
- ಪ್ರಸ್ತುತ ಕಾರ್ಮಿಕರ ದಿನವನ್ನು ಭಾರತದಾದ್ಯಂತ ವಿವಿಧ ಹೆಸರುಗಳಿಂದ ಆಚರಿಸಲಾಗುತ್ತದೆ. ಕನ್ನಡದಲ್ಲಿ ‘ಕಾರ್ಮಿಕರ ದಿನಾಚರಣೆ’ ಎಂದು ಆಚರಿಸಿದರೆ, ಹಿಂದಿಯಲ್ಲಿ ‘ಕಾಮ್ಗರ್ ದಿನ್’ ಅಥವಾ ‘ಅಂತರಾಷ್ಟ್ರೀಯ ಶ್ರಮಿಕ್ ದಿವಸ್’, ತಮಿಳಿನಲ್ಲಿ ‘ಉಝೋಪಾಲರ್ ನಾಲ್’ ಮತ್ತು ಮರಾಠಿಯಲ್ಲಿ ‘ಕಾಮ್ಗರ್ ದಿವಸ್’ ಸೇರಿದಂತೆ ವಿವಿಧ ಹೆಸರುಗಳಲ್ಲಿ ಆಚರಿಸಲಾಗುತ್ತದೆ.
- ಭಾರತದಲ್ಲಿ ಕಾರ್ಮಿಕರ ದಿನವು ರಾಷ್ಟ್ರೀಯ ರಜಾದಿನವಲ್ಲದ ಕಾರಣ, ರಾಜ್ಯ ಸರ್ಕಾರದ ವಿವೇಚನೆಯಿಂದ ಕಾರ್ಮಿಕರ ದಿನವನ್ನು ಸಾರ್ವಜನಿಕ ರಜಾದಿನವಾಗಿ ಆಚರಿಸಲಾಗುತ್ತದೆ. ಅನೇಕ ಭಾಗಗಳಲ್ಲಿ ವಿಶೇಷವಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಇದು ಸಾರ್ವಜನಿಕ ರಜಾದಿನವಲ್ಲ.
ಕಾರ್ಮಿಕರ ದಿನಾಚರಣೆಯ ಮಹತ್ವ:
- ಮೇ ದಿನವು ಸಮಾಜಕ್ಕೆ ಮತ್ತು ಕಾರ್ಮಿಕರ ಕೊಡುಗೆ ಮತ್ತು ತ್ಯಾಗವನ್ನು ತಿಳಿಸಿಕೊಡುವ, ಅರಿವು ಮೂಡಿಸುವ ದಿನವಾಗಿದೆ. ಹಾಗೆಯೇ ಕಾರ್ಮಿಕರ ಕಾನೂನುಗಳು, ಕಾರ್ಮಿಕರ ಹಕ್ಕುಗಳ ಉಲ್ಲಂಘನೆ, ಕೆಲಸದ ಅವಧಿ ಮೊದಲಾದವುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಸಲಾಗುತ್ತದೆ.
ನಿಮಗಿದು ತಿಳಿದಿರಲಿ
- ಮಹಾರಾಷ್ಟ್ರ ಮತ್ತು ಗುಜರಾತ್ ದಿನ: ಹಿಂದಿನ ಬಾಂಬೆ ರಾಜ್ಯವನ್ನು ಭಾಷಾವಾರು ಆಧಾರದಲ್ಲಿ ವಿಂಗಡಿಸಿದ ನಂತರ 1960ರಲ್ಲಿ ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯದ ಸ್ಥಾನಮಾನ ಪಡೆದವು. ಆ ದಿನಾಂಕವನ್ನು ಗುರುತಿಸಲು ಮೇ 1 ಅನ್ನು ‘ಮಹಾರಾಷ್ಟ್ರ ದಿನ’ ಮತ್ತು ‘ಗುಜರಾತ್ ದಿನ’ ಎಂದು ಆಚರಿಸಲಾಗುತ್ತದೆ.