Published on: July 13, 2022

ಅಪಾಚೆ ಫ್ಯೂಸ್ಲೇಜ್

ಅಪಾಚೆ ಫ್ಯೂಸ್ಲೇಜ್

ಸುದ್ದಿಯಲ್ಲಿ ಏಕಿದೆ?

ಭಾರತದ ನಾಗರಿಕ ವಾಯುಯಾನ ಉದ್ಯಮ ತನ್ನ ಶೈಶವಾವಸ್ಥೆಯಿಂದ ಬೆಳವಣಿಗೆಯತ್ತ ಮುನ್ನುಗ್ಗುತ್ತಿದೆ. ಭಾರತ ಮುಂದಿನ ನಾಲ್ಕರಿಂದ ಐದು ವರ್ಷಗಳ ಅವಧಿಯಲ್ಲಿ ದೇಶದಲ್ಲಿರುವ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 138 ರಿಂದ 220ಕ್ಕೆ ಏರಿಸುವ ಗುರಿಯನ್ನು ಹೊಂದಿದೆ.

ಮುಖ್ಯಾಂಶಗಳು

  • ಭಾರತ ಈಗ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಬೇಕಾದ ವಿಮಾನಗಳ ನಿರ್ಮಾಣದಲ್ಲಿ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಸಾಧಿಸುತ್ತಿದೆ.

ಸರ್ಕಾರ ತೆಗೆದು ಕೊಂಡಿರುವ ಕ್ರಮಗಳು

  • ವಿದೇಶಗಳ ಅವಲಂಬನೆಯನ್ನು ನಿವಾರಿಸಲು ಸರಿಯಾದ ಹೆಜ್ಜೆಯಿಡುತ್ತಿರುವ ಭಾರತ ತನ್ನದೇ ಸ್ವಂತ ಹಣಕಾಸು ಹೂಡಿಕೆ ಮಾಡುವ ಮೂಲಕ, ಪ್ರಸ್ತುತ ಭಾರತ ಆರು ನಾಗರಿಕ ವಾಯುಯಾನದ ವಿಮಾನಗಳನ್ನು ನಿರ್ಮಿಸುತ್ತಿದೆ. ಅದರೊಡನೆ ಭಾರತ ಈಗ 19 ಸೀಟುಗಳನ್ನು ಹೊಂದಿರುವ ಹಗುರ ನಾಗರಿಕ ವಿಮಾನವನ್ನೂ ನಿರ್ಮಿಸುತ್ತಿದೆ.
  • ಈಗ ಭಾರತದಲ್ಲಿ ವಿಮಾನ ಯಾನ ಕ್ಷೇತ್ರದ ಅಭಿವೃದ್ಧಿಗೆ ಬೇಕಾದ ಹಾಗೆ, ಬೋಯಿಂಗ್ ಹಾಗೂ ಟಾಟಾ ಸಂಸ್ಥೆಗಳ ಜಂಟಿ ಉದ್ಯಮವಾದ ಟಾಟಾ ಬೋಯಿಂಗ್ ಸ್ಪೇಸ್ ಲಿಮಿಟೆಡ್ ಸಂಸ್ಥೆಯು ಭಾರತದಲ್ಲಿ ಅಪಾಚೆ ಫ್ಯೂಸ್ಲೇಜನ್ನು ನಿರ್ಮಾಣಗೊಳಿಸುತ್ತಿದೆ. ಇದು ಕೇವಲ ಭಾರತದ ಉಪಯೋಗಕ್ಕೆ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಮಾರುಕಟ್ಟೆಗೂ ಲಭ್ಯವಾಗಲಿದೆ. ಈ ವಿಮಾನಗಳು ಈಗ ಭಾರತದಿಂದ ವಿದೇಶಗಳಿಗೆ ರಫ್ತಾಗಲಿವೆ.
  • ಇದೇ ಸಂದರ್ಭದಲ್ಲಿ ಏರ್‌ಬಸ್ ಸಂಸ್ಥೆಯು ಟಾಟಾ ಅಡ್ವಾನ್ಸ್ ಸಿಸ್ಟಂ ಸಂಸ್ಥೆಯೊಡನೆ ಕಾರ್ಯಾಚರಿಸುತ್ತಿದ್ದು, ಭಾರತೀಯ ವಾಯುಪಡೆ ಬಳಸುತ್ತಿರುವ ಅವ್ರೋ ವಿಮಾನದ ಬದಲಿಗೆ ಬಳಸುವಂತೆ ಏರ್ಬಸ್ ಸಿ295 ನಿರ್ಮಾಣಗೊಳಿಸಲು ಸನ್ನದ್ಧವಾಗಿದೆ.
  • ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸಹ ವಿಮಾನ ನಿರ್ಮಾಣದಲ್ಲಿ ಬಹಳ ಮುಖ್ಯವಾದ ಹೆಜ್ಜೆಗಳನ್ನಿಟ್ಟಿದ್ದು, ಡಾರ್ನಿಯರ್ – 228 ವಿಮಾನದ ಭಾರತೀಯ ಆವೃತ್ತಿಯಾದ ಹಿಂದುಸ್ತಾನ್ – 228 ವಿಮಾನದ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ.
  • ಭಾರತ ಸರ್ಕಾರದ ಮಹತ್ವಾಕಾಂಕ್ಷಿ ನಾಗರಿಕ ವಾಯುಯಾನ ಯೋಜನೆಯಾದ ಉಡಾನ್ ಯೋಜನೆ ಅತ್ಯಂತ ಯಶಸ್ವಿ ಯೋಜನೆ ಎನಿಸಿಕೊಂಡಿದೆ. ಈ ಯೋಜನೆ ಇಲ್ಲಿಯತನಕ ವಾಯುಯಾನ ವ್ಯವಸ್ಥೆ ಹೊಂದಿರದಿದ್ದ ಅಥವಾ ಸರಿಯಾದ ವಿಮಾನಯಾನ ವ್ಯವಸ್ಥೆ ಇರದಿದ್ದ ಪ್ರದೇಶಗಳನ್ನು ವಿಮಾನಗಳು ತಲುಪುವಂತೆ ಮಾಡಿದೆ.
  • ಉಡಾನ್ ಯೋಜನೆಯಡಿ 63 ವಿಮಾನ ನಿಲ್ದಾಣಗಳು, ಹೆಲಿಪೋರ್ಟ್ಗಳು ಹಾಗೂ ನೀರಿನ ಮೇಲಿನ ಏರೋಡ್ರೋಮ್‌ಗಳ ನಿರ್ಮಾಣವಾಗಿದೆ. ಕಳೆದ ಏಳು ವರ್ಷಗಳ ಅವಧಿಯಲ್ಲಿ ಭಾರತ ವಿಮಾನ ನಿಲ್ದಾಣಗಳ ಸಂಖ್ಯೆಯಲ್ಲೂ ದುಪ್ಪಟ್ಟಾಗುವುದನ್ನು ಗಮನಿಸಿದೆ. 2014ರಲ್ಲಿ 74 ಇದ್ದ ವಿಮಾನ ನಿಲ್ದಾಣಗಳ ಜಾಗದಲ್ಲಿ ಈಗ ಭಾರತದಲ್ಲಿ 138 ವಿಮಾನ ನಿಲ್ದಾಣಗಳಿವೆ.
  • ವಾಯುಯಾನಕ್ಕಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) 36 ಆಸನಗಳುಳ್ಳ 80 ಅವ್ರೋ ವಿಮಾನಗಳನ್ನು ಹಾಗೂ 19 ಆಸನಗಳ ಹಿಂದುಸ್ತಾನ್ 228 – 201 ವಿಮಾನವನ್ನು ನಿರ್ಮಿಸಿದ್ದು, ಇದು ದೇಶದೊಳಗಿನ ಪ್ರಾದೇಶಿಕ ಸಂಪರ್ಕಕ್ಕೆ ಹೊಸ ಒತ್ತು ನೀಡಲಿದೆ.

ಉದ್ದೇಶ

  • ಭಾರತ ಇನ್ನು ಮುಂದಿನ ನಾಲ್ಕರಿಂದ ಐದು ವರ್ಷಗಳ ಅವಧಿಯಲ್ಲಿ ದೇಶದಲ್ಲಿನ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 220ಕ್ಕೆ ಏರಿಸುವ ಗುರಿಯನ್ನು ಹೊಂದಿದೆ.
  • ವಿಮಾನಯಾನ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಕಡ್ಡಾಯವಾಗಿದೆ.

ಉಡಾನ್ ಯೋಜನೆ

  • ದೇಶೀಯ ವಿಮಾನಯಾನ ಕ್ಷೇತ್ರದಲ್ಲಿ ಮಹತ್ತರ ಸುಧಾರಣೆ ತರುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆ ಜಾರಿಗೆ ತಂದಿದೆ.
  • ಈ ಯೋಜನೆಯಡಿ ದೇಶಾದ್ಯಂತ ಪ್ರಾದೇಶಿಕ ವಾಯುಯಾನ ಸೌಲಭ್ಯಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಪ್ರತಿ 800 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಮಾನ ಯಾನ ಕಲ್ಪಿಸುವ ಮೂಲಕ ಪ್ರಾದೇಶಿಕ ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತರಲಾಗುತ್ತಿದೆ.
  • ಉಡಾನ್‌ ಯೋಜನೆಯಡಿ ಎಂಟು ಅಂತಾರಾಷ್ಟ್ರೀಯ ಮಾರ್ಗಗಳಲ್ಲೂ ವಿಮಾನ ಸಂಚಾರ ಆರಂಭಿಸಲು ಸರಕಾರ ನಿರ್ಧರಿಸಿದೆ.
  • ನೆರೆಯ ದೇಶಗಳಿಗೆ ಜನಸಾಮಾನ್ಯರೂ ಕಡಿಮೆ ದರದಲ್ಲಿ ಹಾರಾಟ ನಡೆಸಲು ಸಾಧ್ಯವಾಗುವಂತೆ ಸರಕಾರ ಈ 8 ಮಾರ್ಗಗಳನ್ನು ಗುರುತಿಸಿದೆ. ಗುವಾಹಟಿಯಿಂದ ಢಾಕಾ, ಕಠ್ಮಂಡು, ಯಾಂಗೂನ್, ಕೌಲಾಲಂಪುರ, ಸಿಂಗಾಪುರ ಮತ್ತು ಬ್ಯಾಂಕಾಕ್‌ ಮಾರ್ಗಗಳಲ್ಲಿ ಉಡಾನ್‌ (ಉಡೇ ದೇಶ್‌ ಕಾ ಆಮ್‌ ನಾಗರಿಕ್) ಯೋಜನೆ ಜಾರಿಯಾಗಲಿದೆ. ಅಲ್ಲದೆ ವಿಜಯವಾಡದಿಂದ ಸಿಂಗಾಪುರ ಮತ್ತು ದುಬೈಗಳಿಗೂ ಉಡಾನ್‌ ವಿಮಾನಗಳು ಹಾರಲಿವೆ.
  • ಯೋಜನೆಯ ಉದ್ದೇಶ: ಭಾರತದ ವಿವಿಧ ರಾಜ್ಯಗಳು ಮತ್ತು ಆಯ್ದ ಅಂತಾರಾಷ್ಟ್ರೀಯ ತಾಣಗಳ ನಡುವೆ ಅಂತಾರಾಷ್ಟ್ರೀಯ ವೈಮಾನಿಕ ಸಂಪರ್ಕವನ್ನು ಹೆಚ್ಚಿಸುವುದು ವಿಮಾನ ಉಡಾನ್‌ ಯೋಜನೆಯ ಉದ್ದೇಶ. ದೇಶೀಯ ಮಟ್ಟದಲ್ಲಿ ಉಡಾನ್ ಯೋಜನೆಯ ಸಕಾರಾತ್ಮಕ ಫಲಿತಾಂಶದ ಹಿನ್ನೆಲೆಯಲ್ಲಿ ಇದನ್ನು ಅಂತಾರಾಷ್ಟ್ರೀಯ ಯಾನಗಳಿಗೂ ವಿಸ್ತರಿಸಲಾಗುತ್ತಿದೆ.