Published on: December 20, 2022
ಆಸಿಡ್ ದಾಳಿ ಪ್ರಕರಣ
ಆಸಿಡ್ ದಾಳಿ ಪ್ರಕರಣ
ಸುದ್ದಿಯಲ್ಲಿ ಏಕಿದೆ? ದೆಹಲಿಯಲ್ಲಿ ನಡೆದ 17 ವರ್ಷದ ಬಾಲಕಿಯ ಮೇಲಿನ ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಇ–ಕಾಮರ್ಸ್ ವೇದಿಕೆಗಳಾದ ಫ್ಲಿಪ್ಕಾರ್ಟ್, ಅಮೆಜಾನ್ಗೆ ದೆಹಲಿ ಪೊಲೀಸರು ಮತ್ತು ದೆಹಲಿ ಮಹಿಳಾ ಆಯೋಗವು ನೋಟಿಸ್ ನೀಡಿದೆ.
ಮುಖ್ಯಾಂಶಗಳು
- ಸುಪ್ರೀಂ ಕೋರ್ಟ್ ನಿಷೇಧದ ಹೊರತಾಗಿಯೂ, ಆನ್ಲೈನ್ ವೇದಿಕೆಯಲ್ಲಿ ಆಸಿಡ್ ಮಾರಾಟ ಮಾಡುತ್ತಿರುವ ಬಗ್ಗೆ ಸ್ಪಷ್ಟನೆ ನೀಡುವಂತೆ ದೆಹಲಿ ಮಹಿಳಾ ಆಯೋಗವು ನೋಟಿಸ್ ಜಾರಿ ಮಾಡಿದೆ.
- ದೇಶದಲ್ಲಿ ನಡೆದ ಬಹುತೇಕ ಆ್ಯಸಿಡ್ ದಾಳಿಗಳಲ್ಲಿ, ಶೌಚಾಲಯ ಶುಚಿಗೊಳಿಸಲು ಬಳಸುವ ದ್ರಾವಣಗಳನ್ನು ಆ್ಯಸಿಡ್ನಂತೆ ಬಳಸಲಾಗಿದೆ.
- ದೇಶದಲ್ಲಿ ಮಾರಾಟವಾಗುತ್ತಿರುವ ಇಂತಹ ದ್ರಾವಣದಲ್ಲಿ ಮೂಲವಸ್ತುವಾಗಿ ಹೈಡ್ರೊಕ್ಲೋರಿಕ್ ಆ್ಯಸಿಡ್ ಮತ್ತು ಸಲ್ಫ್ಯೂರಿಕ್ ಆ್ಯಸಿಡ್ ಅನ್ನು ಬಳಸಲಾಗುತ್ತದೆ. ಇವು ಕಿರಾಣಿ ಅಂಗಡಿಗಳಲ್ಲಿ ಮತ್ತು ಆನ್ಲೈನ್ ಪ್ಲಾಟ್ಫಾರಂ ಗಳಲ್ಲಿ ಮುಕ್ತವಾಗಿ ಲಭ್ಯವಿವೆ. ಇವುಗಳ ಮಾರಾಟಕ್ಕಿರುವ ಯಾವ ನಿರ್ಬಂಧವೂ ಪಾಲನೆಯಾಗುತ್ತಿಲ್ಲ.
ಆ್ಯಸಿಡ್ ಮಾರಾಟದ ಮೇಲೆ ನಿರ್ಬಂಧ
- ದೇಶದಲ್ಲಿ ಆ್ಯಸಿಡ್ ಮಾರಾಟ ನಿರ್ಬಂಧಕ್ಕೆ ಹಲವು ಕಾನೂನುಗಳಿವೆ. 1919ರಿಂದಲೇ ‘ವಿಷ ಕಾಯ್ದೆ’ಯನ್ನು ಜಾರಿಗೆ ತರಲಾಗಿದೆ. ಅಪಾಯಕಾರಿಯಾದ ಎಲ್ಲಾ ಸ್ವರೂಪದ ಆ್ಯಸಿಡ್ಗಳನ್ನು ‘ವಿಷ’ ಎಂದು ಪರಿಗಣಿಸುತ್ತದೆ.
‘ವಿಷ ಕಾಯ್ದೆ’ 1919
- ಆ್ಯಸಿಡ್ ಸಂಗ್ರಹ, ಮಾರಾಟ ಮತ್ತು ಖರೀದಿ ಮೇಲೆ ಇರುವ ನಿರ್ಬಂಧವನ್ನು ಈ ಕಾಯ್ದೆಯು ವಿವರಿಸುತ್ತದೆ.
- 1919ರಲ್ಲಿ ಈ ಕಾಯ್ದೆಯನ್ನು ರಚಿಸಲಾಗಿದ್ದರೂ, ಹಲವು ಬಾರಿ ತಿದ್ದುಪಡಿ ತರುವ ಮೂಲಕ ಅದರ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ.
- ಈ ಕಾಯ್ದೆಯು ಆ್ಯಸಿಡ್ ಅನ್ನು ವಿಷ ಎಂದು ಪರಿಗಣಿಸುವುದರಿಂದ, ವಿಷಕ್ಕೆ ಅನ್ವಯವಾಗುವ ಎಲ್ಲಾ ನಿಯಮಗಳು ಆ್ಯಸಿಡ್ಗೂ ಅನ್ವಯವಾಗುತ್ತವೆ.
- ಕಾಯ್ದೆಯ ನಿರ್ಬಂಧಗಳು →ಹೆಚ್ಚು ಅಪಾಯಕಾರಿಯಾದ ಹೈಡ್ರೊಕ್ಲೋರಿಕ್ ಆ್ಯಸಿಡ್ ಮತ್ತು ಗಂಧಕದ ಆ್ಯಸಿಡ್ಗಳನ್ನು ಈ ಕಾಯ್ದೆಯು ‘ವಿಷ’ ಎಂದು ವರ್ಗೀಕರಿಸಿದೆ
- ಶೌಚಾಲಯ ಶುಚಿ ದ್ರಾವಣದಲ್ಲಿ ಆ್ಯಸಿಡ್ ಪ್ರಮಾಣ ಶೇ 5ಕ್ಕಿಂತಲೂ ಹೆಚ್ಚು ಇದ್ದರೆ, ಅವನ್ನು ಮುಕ್ತವಾಗಿ ಮಾರುವಂತಿಲ್ಲ
- ಆ್ಯಸಿಡ್ ದ್ರಾವಣದಲ್ಲಿ ಆ್ಯಸಿಡ್ಗಳ ಪ್ರಮಾಣ ಶೇ 5ಕ್ಕಿಂತಲೂ ಹೆಚ್ಚು ಇದ್ದರೆ, ಅದನ್ನು ಲೇಬಲ್ ಮೇಲೆ ಮುದ್ರಿಸಬೇಕು. ಇದು ಅಪಾಯಕಾರಿ ಎಂದು ಲೇಬಲ್ ಮೇಲೆ ಘೋಷಿಸಿರಬೇಕು
- ಇಂತಹ ಆ್ಯಸಿಡ್ ಮತ್ತು ದ್ರಾವಣವನ್ನು ಸಂಗ್ರಹಿಸಲು ಮತ್ತು ಮಾರಾಟ ಮಾಡಲು ಪರವಾನಗಿ ಪಡೆಯಬೇಕು. ಇವುಗಳನ್ನು ಖರೀದಿಸುವ ವ್ಯಕ್ತಿಯು ಆ್ಯಸಿಡ್ ಖರೀದಿಯ ಉದ್ದೇಶ, ವೈಯಕ್ತಿಕ ವಿಳಾಸ ಮತ್ತಿತರ ವಿವರಗಳನ್ನು ನೀಡಬೇಕು
ಲಕ್ಷ್ಮೀ ಅಗರ್ವಾಲ್ ಪ್ರಕರಣ :
- ಸುಪ್ರೀಂ ಕೋರ್ಟ್ ಮಾರ್ಗಸೂಚಿ ಆ್ಯಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮೀ ಅಗರ್ವಾಲ್ ಮತ್ತು ಕೇಂದ್ರ ಸರ್ಕಾರದ ನಡುವಣ ಪ್ರಕರಣವು, ಆ್ಯಸಿಡ್ ಮಾರಾಟದ ಮೇಲಿನ ನಿರ್ಬಂಧಕ್ಕೆ ಸಂಬಂಧಿಸಿದಂತೆ ಮಹತ್ವದ ಮೈಲುಗಲ್ಲಾಗಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆಗೆ ಹೆಚ್ಚಿನ ಪರಿಹಾರ ಘೋಷಿಸಿದ್ದ ಸುಪ್ರೀಂ ಕೋರ್ಟ್, ಆ್ಯಸಿಡ್ ಮಾರಾಟಕ್ಕೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿತ್ತು. 2014ರಿಂದಲೇ ಈ ಮಾರ್ಗಸೂಚಿಗಳು ಜಾರಿಯಲ್ಲಿವೆ.
ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳು
- ಯಾವುದೇ ರೀತಿಯ ಆ್ಯಸಿಡ್ ಅನ್ನು ಮುಕ್ತವಾಗಿ ಮಾರಾಟ ಮಾಡುವಂತಿಲ್ಲ. ಮಾರಾಟ ಮಾಡುವ ವ್ಯಕ್ತಿಯು, ಖರೀದಿಸುವವರ ವಿವರವನ್ನು ದಾಖಲಿಸಿಕೊಳ್ಳಬೇಕು.
- ಗುರುತಿನ ಚೀಟಿ ತೋರಿಸುವ ಗ್ರಾಹಕರಿಗೆ ಮಾತ್ರ ಆ್ಯಸಿಡ್ ಮಾರಾಟ ಮಾಡಬೇಕು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಆ್ಯಸಿಡ್ ಮಾರಾಟ ಮಾಡಬಾರದು.
- ಆ್ಯಸಿಡ್ ಅನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತದೆ ಎಂಬುದರ ವಿವರವನ್ನು ಮಾರಾಟ ದಾಖಲಾತಿಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕು.
- ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳು ತಮ್ಮಲ್ಲಿರುವ ವಿವಿಧ ಆ್ಯಸಿಡ್ ಸಂಗ್ರಹದ ಮೇಲ್ವಿಚಾರಣೆಗೆ ವ್ಯಕ್ತಿಯನ್ನು ನಿಯೋಜಿಸಬೇಕು.
- ಮಾನವನ ಚರ್ಮವನ್ನು ಸುಡುವ ಮತ್ತು ದೇಹಕ್ಕೆ ಹಾನಿ ಮಾಡುವ ಎಲ್ಲಾ ಸ್ವರೂಪದ ಆ್ಯಸಿಡ್ಗಳನ್ನು ರಾಜ್ಯ ಸರ್ಕಾರಗಳೇ ಗುರುತಿಸಿ, ನಿರ್ಬಂಧಿತ ಆ್ಯಸಿಡ್ಗಳ ಪಟ್ಟಿಗೆ ಸೇರಿಸಬೇಕು.