Published on: September 24, 2021

ಉದ್ಯೋಗಶೀಲತೆ ಶ್ರೇಣಿ

ಉದ್ಯೋಗಶೀಲತೆ ಶ್ರೇಣಿ

ಸುದ್ಧಿಯಲ್ಲಿ ಏಕಿದೆ? ಕ್ಯೂಎಸ್‌ ಪದವೀಧರರ ಉದ್ಯೋಗಶೀಲತೆ ಶ್ರೇಣಿ 2022’ ಪಟ್ಟಿಯ ಉನ್ನತ 500 ಸಂಸ್ಥೆಗಳಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಆರು ಐಐಟಿಗಳು ಒಳಗೊಂಡು ದೇಶದ 12 ಸಂಸ್ಥೆಗಳು ಸ್ಥಾನ ಪಡೆದಿವೆ. ಭಾರತದ ಸಂಸ್ಥೆಗಳ ಪೈಕಿ ಐಐಟಿ (ಬಾಂಬೆ) ಮೊದಲ ಸ್ಥಾನದಲ್ಲಿದೆ.

ವರದಿಯಲ್ಲಿ ಏನಿದೆ ?

  • ದೆಹಲಿ, ಮುಂಬೈ ಮತ್ತು ಕೋಲ್ಕತ್ತದಲ್ಲಿನ ಮೂರು ಕೇಂದ್ರೀಯ ವಿಶ್ವವಿದ್ಯಾಲಯಗಳೂ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಗಮನಾರ್ಹ. ಉಳಿದಂತೆ ಖಾಸಗಿ ವಿಶ್ವವಿದ್ಯಾಲಯಗಳಾದ ಒ.ಪಿ.ಜಿಂದಾಲ್‌ ಗ್ಲೋಬಲ್‌ ಯೂನಿವರ್ಸಿಟಿ, ಸೋನೆಪತ್ ಮತ್ತು ಬಿಟ್ಸ್ ಪಿಳನಿ ಕೂಡ ಮೊದಲ 500ರ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
  • ಪಟ್ಟಿಯಲ್ಲಿರುವ ದೇಶದ ಆರು ಐಐಟಿಗಳಲ್ಲಿ ಐಐಟಿ ಬಾಂಬೆ 101–110ನೇ ಶ್ರೇಣಿ, ಐಐಟಿ ದೆಹಲಿ (131–40), ಐಐಟಿ ಮದ್ರಾಸ್‌ (151–60), ಐಐಟಿ ಕರಗ್‌ಪುರ (201–50), ಐಐಟಿ ಕಾನ್ಪುರ (251–300) ಮತ್ತು ಐಐಟಿ ರೂರ್ಕಿ (500) ಸೇರಿವೆ.
  • ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಒ.ಪಿ.ಜಿಂದಾಲ್‌ ಗ್ಲೋಬಲ್‌ ಯೂನಿವರ್ಸಿಟಿಯು 301–500ರ ವರ್ಗದಲ್ಲಿ ಸ್ಥಾನ ಪಡೆದಿವೆ.
  • ಅಂತೆಯೇ, ಬಿರ್ಲಾ ತಂತ್ರಜ್ಞಾನ ಮತ್ತು ವಿಜ್ಞಾನ ಸಂಸ್ಥೆ (ಬಿಐಟಿಎಸ್‌) ಪಿಳನಿ ಮತ್ತು ಮುಂಬೈ ಯೂನಿವರ್ಸಿಟಿಯು 251–300ರ ವರ್ಗದಲ್ಲಿದೆ.
  • ಕೋವಿಡ್‌ ಪರಿಣಾಮದಿಂದ ಜಗತ್ತು ಹೊರಬರುತ್ತಿರುವ ಈ ಸಂದರ್ಭದಲ್ಲಿ ಕೌಶಲಯುಕ್ತ ಪದವೀಧರರ ಪ್ರಾಮುಖ್ಯತೆ ಹೆಚ್ಚುತ್ತಿದೆ. ಉದ್ಯೋಗದಾತರು ಇಂಥ ಕೌಶಲಯುಕ್ತ ಪದವೀಧರರನ್ನೇ ಬಯಸುತ್ತಿದ್ದಾರೆ ಎಂದು ಶ್ರೇಣಿಯನ್ನು ಪ್ರಕಟಿಸಿರುವ ಲಂಡನ್‌ ಮೂಲದ ಕ್ವಾಕ್ವರೆಲಿ ಸೈಮಂಡ್ಸ್‌ (ಕ್ಯೂಎಸ್) ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಯಾವುದನ್ನು ಆದರಿಸಿ ಶ್ರೇಣಿಯನ್ನು ನೀಡಲಾಗಿದೆ ?

  • ಕೌಶಲಯುಕ್ತ ಪದವೀಧರರನ್ನು ರೂಪಿಸುವ ಸಾಮರ್ಥ್ಯವನ್ನು ಆಧರಿಸಿ ವಿಶ್ವವಿದ್ಯಾಲಯಗಳಿಗೆ ಶ್ರೇಣಿ ನೀಡಲಾಗಿದೆ. ವಿವಿಧೆಡೆ ಇರುವ ಸ್ಪರ್ಧೆಯನ್ನು ಗಮನದಲ್ಲಿ ಇಟ್ಟುಕೊಂಡು ವಿದ್ಯಾರ್ಥಿಗಳು ಕೂಡಾ ಶಿಕ್ಷಣ ಸಂಸ್ಥೆಗಳು ತಮ್ಮನ್ನು ಹೇಗೆ ರೂಪಿಸುತ್ತಿವೆ ಎಂಬುದನ್ನು ಗಮನಿಸುತ್ತಾರೆ.

ಮಾನದಂಡಗಳು

  • ಕ್ಯೂಎಸ್‌ ಸಂಸ್ಥೆಯು ಶ್ರೇಣಿ ನಿಗದಿಪಡಿಸುವ ಮೊದಲು ಉದ್ಯೋಗದಾತರ ವರ್ಚಸ್ಸು (ಶೇ 30), ಸಂಸ್ಥೆಯಿಂದ ಪದವೀಧರರಾಗುವವರ ಸಂಖ್ಯೆ (ಶೇ 25), ಉದ್ಯೋಗದಾತ ಸಂಸ್ಥೆಗಳು ಮತ್ತು ವಿವಿಧ ವಿಭಾಗಗಳ ನಡುವಣ ಸಹಭಾಗಿತ್ವ (ಶೇ 25), ಉದ್ಯೋಗದಾತರು ಮತ್ತು ವಿದ್ಯಾರ್ಥಿಗಳ ನಡುವಣ ಸಂಪರ್ಕ (ಶೇ 10) ಹಾಗೂ ಪದವೀಧರ ಉದ್ಯೋಗಿಗಳ ಪ್ರಮಾಣ (ಶೇ 10) ಅಂಶಗಳನ್ನು ಆಧಾರವಾಗಿ ಪರಿಗಣಿಸಿದೆ.