Published on: March 27, 2023
ಒನ್ ವೆಬ್ ಇಂಡಿಯಾ 2 ಮಿಷನ್
ಒನ್ ವೆಬ್ ಇಂಡಿಯಾ 2 ಮಿಷನ್
ಸುದ್ದಿಯಲ್ಲಿ ಏಕಿದೆ? ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬ್ರಿಟನ್ ಮೂಲದ 36 ಸ್ಯಾಟಲೈಟ್‌ಗಳೊಂದಿಗೆ ಭಾರತದ ಅತಿದೊಡ್ಡ ಲಾಂಚ್ ವೆಹಿಕಲ್ ಮಾರ್ಕ್-III (ಎಲ್.ವಿ.ಎಮ್3) ರಾಕೆಟ್/ ಒನ್ ವೆಬ್ ಇಂಡಿಯಾ -2 ಮಿಷನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಮುಖ್ಯಾಂಶಗಳು
- ಇಸ್ರೊದ ವಾಣಿಜ್ಯ ಘಟಕ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ಬ್ರಿಟನ್ನ ನೆಟ್ವರ್ಕ್ ಆಕ್ಸೆಸ್ ಅಸೋಸಿಯೇಟ್ಸ್ ಲಿಮಿಟೆಡ್ (ಒನ್ವೆಬ್ ಗ್ರೂಪ್ ಕಂಪನಿ) ಸಂಸ್ಥೆಯೊಂದಿಗಿನ ಒಪ್ಪಂದದಂತೆ ನಡೆಸಿದ ಎರಡನೇ ಉಡಾವಣಾ ಕಾರ್ಯಾಚರಣೆ ಇದಾಗಿದೆ.
- ಇದೇ ಯೋಜನೆ ಅಡಿಯಲ್ಲಿ 2022 ರ ಅಕ್ಟೋಬರ್ ತಿಂಗಳಲ್ಲಿ 36 ಉಪಗ್ರಹಗಳನ್ನು ಉಡ್ಡಯನ ಮಾಡಲಾಗಿತ್ತು. ಈ ಮೂಲಕ ಭೂಮಿಗೆ ಸಮೀಪದ ಕಕ್ಷೆಗೆ (ಎಲ್ಇಒ) ಒಟ್ಟು 72 ಸಂವಹನ ಉಪಗ್ರಹಗಳನ್ನು ಸೇರಿಸಲಾಗಿದೆ.
LMV-3 ರಾಕೆಟ್
- ಈ ರಾಕೆಟ್ ಒಟ್ಟು 3 ಹಂತಗಳನ್ನು ಹೊಂದಿದ್ದು, ಮೊದಲ ಹಂತವು ಘನ ಇಂಧನ, ಎರಡನೇ ಹಂತವು ದ್ರವ ಇಂಧನದಲ್ಲಿ ಚಲಿಸುತ್ತದೆ. ಮೂರನೇ ಹಂತಕ್ಕಾಗಿ ಕ್ರಯೋಜೆನಿಕ್ ಎಂಜಿನ್ ಅಳವಡಿಸಲಾಗಿದೆ. 43.5 ಮೀಟರ್ ಎತ್ತರವಿದೆ. ಈ ಎಲ್ ವಿ ಎಮ್ 3 ರಾಕೆಟ್ ಉಪಗ್ರಹಗಳನ್ನು ಭೂಸ್ಥಿರ ವರ್ಗಾವಣೆ ಕಕ್ಷೆಗೆ ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
ವರ್ಷಾಂತ್ಯಕ್ಕೆ ಇಂಟರ್ನೆಟ್ ಸೇವೆ:
- ಉಪಗ್ರಹದಿಂದ ಇಂಟರ್ನೆಟ್ ಸೇವೆ ಒದಗಿಸುವ ಯೋಜನೆಯಡಿ ಒನ್‌ವೆಬ್ ಕಂಪನಿ ಜಗತ್ತಿನ ಬೇರೆ ಬೇರೆ ದೇಶಗಳಿಂದ 616 ಉಪಗ್ರಹಗಳನ್ನು ಈಗಾಗಲೇ ಬಾಹ್ಯಾಕಾಶಕ್ಕೆ ಕಳುಹಿಸಿದೆ. ಜಗತ್ತಿನಾದ್ಯಂತ ಈ ವರ್ಷಾಂತ್ಯಕ್ಕೆ ಉಪಗ್ರಹ ಇಂಟರ್ನೆಟ್ ಸೇವೆ ಆರಂಭಿಸಲು ಇಷ್ಟುಉಪಗ್ರಹಗಳು ಸಾಕು ಎಂದು ಕಂಪನಿ ಹೇಳಿಕೊಂಡಿದೆ. ಭಾರತದಲ್ಲಿ ಏರ್‌ಟೆಲ್ ಕಂಪನಿಯು ಒನ್‌ವೆಬ್ ಅಂತರ್ಜಾಲ ಸೇವೆ ಒದಗಿಸುವ ಹೊಣೆ ವಹಿಸಿಕೊಂಡಿದೆ.
ಒನ್ ವೆಬ್
- ಒನ್ ವೆಬ್ ಎಂಬುದು ಬಾಹ್ಯಾಕಾಶದಿಂದ ಕಾರ್ಯನಿರ್ವಹಿಸುವ ಜಾಗತಿಕ ಸಂವಹನ ಜಾಲವಾಗಿದ್ದು, ಸರ್ಕಾರಗಳು, ವ್ಯವಹಾರಗಳು ಮತ್ತು ಸಮುದಾಯಗಳಿಗೆ ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ. ಇದು ಲೋ ಅರ್ಥ್ ಆರ್ಬಿಟ್ (LEO) ಉಪಗ್ರಹಗಳ ಸಮೂಹವನ್ನು ನಿರ್ವಹಿಸುತ್ತಿದೆ. ಭಾರತದ ಭಾರತಿ ಎಂಟರ್‌ಪ್ರೈಸಸ್ ಒನ್‌ವೆಬ್‌ನಲ್ಲಿ ಪ್ರಮುಖ ಹೂಡಿಕೆದಾರರಾಗಿ ಮತ್ತು ಷೇರುದಾರರಾಗಿ ಕಾರ್ಯನಿರ್ವಹಿಸುತ್ತದೆ.