Published on: December 29, 2021

ಕೀಟನಾಶಕಕ್ಕಿಂತ ಕಳೆನಾಶಕವೇ ಹೆಚ್ಚು ಅಪಾಯಕಾರಿ

ಕೀಟನಾಶಕಕ್ಕಿಂತ ಕಳೆನಾಶಕವೇ ಹೆಚ್ಚು ಅಪಾಯಕಾರಿ

ಸುದ್ಧಿಯಲ್ಲಿ ಏಕಿದೆ ? ಕೃಷಿಯಲ್ಲಿ ಕಳೆನಾಶಕ್ಕೆ ಬಳಸುತ್ತಿರುವ ಕಳೆನಾಶಕದಲ್ಲಿರುವ ಟಾಕ್‌ಸೈಡ್‌, ಆರ್ಗಾನೋ ಪಾಸ್ಪರಸ್‌, ಪಾಸ್ಪನೇಟ್‌ ಇಡೀ ಜೀವ ಸಂಕುಲಕ್ಕೆ ಅಪಾಯಕಾರಿ ಎಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಮತ್ತು ರಾಜ್ಯದ ಇತರ ಕೃಷಿ ವಿವಿಗಳ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಅಪಾಯ ಹೇಗೆ ?

  • ಹೊಲ, ತೋಟದಲ್ಲಿ ಬೆಳೆಯುವ ಅನವಶ್ಯಕ ಸಸ್ಯಗಳನ್ನು ಕಳೆನಾಶಕ ಬಳಸಿ ನಾಶಪಡಿಸಲಾಗುತ್ತಿದೆ. ಕೀಟನಾಶಕ ಕೇವಲ ಸಸ್ಯಕ್ಕೆ ಅಂಟುವ ಸೂಕ್ಷ್ಮಾಣಿ ಜೀವಿಗಳನ್ನು ಮಾತ್ರ ಕೊಂದು ಸಸ್ಯವನ್ನು ಉಳಿಸಿದರೆ, ಕಳೆನಾಶಕ ಇಡೀ ಸಸ್ಯವನ್ನೇ ಕೊಂದು ಭೂಮಿಯನ್ನೂ ಸುಡುತ್ತಿದೆ.
  • ರೇಷ್ಮೆ ನಾಡಿನ ಮಣ್ಣು ಸೇರಿದಂತೆ ಬಯಲು ಸೀಮೆಯ ಸಾಕಷ್ಟು ಜಿಲ್ಲೆಗಳಲ್ಲಿಇಂತಹ ವಿಷಕಾರಿ ರಾಸಾಯನಿಕಗಳು ಸದ್ದಿಲ್ಲದೆ ಮಣ್ಣು ಸೇರುತ್ತಿದೆ. ಆ ಮೂಲಕ ಮನುಷ್ಯ ಇಡೀ ಜೀವಸಂಕುಲವನ್ನು ವಿನಾಶದ ಕೂಪಕ್ಕೆ ತಳ್ಳುತ್ತಿದ್ದಾನೆ.

ಭೂಮಿಯಲ್ಲಿ ಕರಗುತ್ತಿಲ್ಲ:

  • ಕಳೆದ 25 ವರ್ಷಗಳಲ್ಲಿ ಕೀಟನಾಶಕಗಳು ಭೂಮಿಗೆ ಎಷ್ಟು ಹಾನಿ ಎಸಗಿವೆಯೋ ಅದಕ್ಕಿಂತಲೂ ಹೆಚ್ಚು ಹಾನಿಯನ್ನು ಕಳೆದ ಐದು ವರ್ಷಗಳಲ್ಲಿ ಬಳಸಿದ ಕಳೆ ನಾಶಕಗಳು ಮಾಡಿವೆ. ಕಳೆನಾಶಕದ ರಾಸಾಯನಿಕ ಕಣಗಳು ಭೂಮಿ ಸೇರಿದರೆ ಜೈವಿಕ ವಿಘಟನೆ ಆಗದೆ ಭೂಮಿಯಲ್ಲಿಯೇ ಉಳಿದು ಕೆರೆ, ನದಿಗೆ ಸೇರ್ಪಡೆಗೊಂಡು ಮನುಷ್ಯನ ದೇಹ ಸೇರಿ ಕ್ಯಾನ್ಸರ್‌, ಚರ್ಮರೋಗ, ಬುದ್ದಿಮಾಂಧ್ಯತೆ, ಬಂಜೆತನ ತರುತ್ತಿವೆ. ಗುಬ್ಬಿ, ಪಾರಿವಾಳ ಸೇರಿದಂತೆ ಇತರ ಪಕ್ಷಿ ಸಂಕುಲಕ್ಕೂ ಕಂಟಕವಾಗುತ್ತಿವೆ.

ಜಾನುವಾರುಗಳಿಗೂ ಅಪಾಯ:

  • ಕಳೆನಾಶಕ ಸಿಂಪಡಿಸಿರುವ ಹುಲ್ಲನ್ನು ಹಸು, ಎಮ್ಮೆ, ಕುರಿ, ಮೇಕೆಗಳು ತಿನ್ನುತ್ತಿವೆ. ಇದರಿಂದ ವಿಷ ಪ್ರಾಣಿಗಳ ಹಾಲಿನ ಮೂಲಕ ಮನುಷ್ಯನ ದೇಹ ಸೇರುತ್ತಿದೆ. ವಿಷ ತಿಂದ ಹಸುಗಳು ಅನಾರೋಗ್ಯಕ್ಕೆ ತುತ್ತಾಗುವುದರ ಜತೆಗೆ ಅವುಗಳ ಹಾಲು ಕುಡಿದ ಜನರೂ ಕಾಯಿಲೆ ಬೀಳುತ್ತಿದ್ದಾರೆ

ಬಯಲು ಸೀಮೆ ಜಿಲ್ಲೆಗಳಲ್ಲೇ ಹೆಚ್ಚು

  • ರಾಮನಗರ ಹಾಗೂ ಇತರೆ ಬಯಲು ಸೀಮೆ ಜಿಲ್ಲೆಗಳು, ಕರಾವಳಿ ಜಿಲ್ಲೆಗಳು ಸೇರಿದಂತೆ ಧಾರವಾಡ, ಹಾವೇರಿ, ಬೆಳಗಾವಿ, ಮೈಸೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮುಂತಾದ ಜಿಲ್ಲೆಗಳಲ್ಲಿ ಕಳೆ ನಾಶಕ ಹೆಚ್ಚು ಬಳಕೆಯಲ್ಲಿದೆ.