Published on: September 16, 2023

ಕೋನಾರ್ಕ್ ಚಕ್ರದ ಭಿತ್ತಿಚಿತ್ರ

ಕೋನಾರ್ಕ್ ಚಕ್ರದ ಭಿತ್ತಿಚಿತ್ರ

ಸುದ್ದಿಯಲ್ಲಿ  ಏಕಿದೆ? ಭಾರತದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಪರಂಪರೆಯನ್ನು ಪ್ರದರ್ಶಿಸುವ ಭಾಗವಾಗಿ, ಒಡಿಶಾದ ಸೂರ್ಯ ದೇವಾಲಯದ ಐತಿಹಾಸಿಕ ಕೋನಾರ್ಕ್ ಚಕ್ರದ ಭಿತ್ತಿಚಿತ್ರವನ್ನು ಚಿತ್ರಿಸುವ ಗೋಡೆಯನ್ನು G20 ಶೃಂಗಸಭೆಯ ಸ್ಥಳದಲ್ಲಿ ವಿಶ್ವ ನಾಯಕರನ್ನು ಸ್ವಾಗತಿಸಲು ಹಿನ್ನೆಲೆಯಾಗಿ ಇರಿಸಲಾಗಿತ್ತು.

ಮುಖ್ಯಾಂಶಗಳು

  • 18 ನೇ G20 ಶೃಂಗಸಭೆಯು ಭಾರತದ ಹೊಸದಿಲ್ಲಿಯಲ್ಲಿ 9 ರಿಂದ 10 ಸೆಪ್ಟೆಂಬರ್ 2023 ರಂದು ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ವಿಷಯದ ಅಡಿಯಲ್ಲಿ ನಡೆಯಿತು.
  • ಶೃಂಗಸಭೆಯ ಸ್ಥಳವು ನವದೆಹಲಿಯ ಪ್ರಗತಿ ಮೈದಾನದಲ್ಲಿರುವ ಭಾರತ್ ಮಂಡಪಂ ಕನ್ವೆನ್ಷನ್ ಸೆಂಟರ್ ಆಗಿತ್ತು.

ಕೋನಾರ್ಕ್ ಸೂರ್ಯ ದೇವಾಲಯದ ಸಂಗತಿಗಳು

  • ಭಾರತದ ವಿಶಿಷ್ಟವಾದ ದೇವಾಲಯಗಳಲ್ಲಿ ಈ ಕೋನಾರ್ಕ್‌ ಸೂರ್ಯ ದೇವಾಲಯವು ಒಂದು.
  • ಕೋನಾರ್ಕ್ ಎಂಬ ಶಬ್ಧ ಸಂಸ್ಕೃತದ ಕೋನ(angle) ಹಾಗೂ ಅರ್ಕ(ಸೂರ್ಯ) ಎಂಬುದರಿಂದ ಬಂದಿದೆ.
  • ಭಾರತದ ಒಡಿಶಾದ ಪುರಿ ಜಿಲ್ಲೆಯ ಕರಾವಳಿಯಲ್ಲಿರುವ ಕೋನಾರ್ಕ್‌ನಲ್ಲಿರುವ 13 ನೇ ಶತಮಾನದ ಸೂರ್ಯ ದೇವಾಲಯವಾಗಿದೆ.
  • 1238-1250 ರ ಸುಮಾರಿಗೆ ಇಲ್ಲಿನ ದೇವಾಲಯವನ್ನು ಗಂಗಾ ರಾಜಮನೆತನದ ರಾಜ ನರಸಿಂಹದೇವ ಅಭಿವೃದ್ಧಿಪಡಿಸಿದ ಎಂಬುದು ಇತಿಹಾಸ ಎನ್ನುತ್ತಾರೆ.
  • ಶ್ರೀ ಕೃಷ್ಣನ ಪುತ್ರ ಸಾಂಬ ಕೋನಾರ್ಕ್ನ ಸೂರ್ಯ ದೇವಾಲಯವನ್ನು ಸೂರ್ಯನಿಗೆ  ಗೌರವ ಸಲ್ಲಿಸಲು ನಿರ್ಮಿಸಿದ ಎಂಬುದು ಐತಿಹ್ಯ ಹಾಗೂ ಪುರಾಣಗಳಿಂದ ಬಂದಿರುವ ನಂಬಿಕೆ.
  • ಹಿಂದೂ ಸೂರ್ಯ ದೇವರಾದ ಸೂರ್ಯನಿಗೆ ಸಮರ್ಪಿತವಾಗಿರುವ ಈ ದೇವಾಲಯದ ಸಂಕೀರ್ಣವು 100-ಅಡಿ ರಥದ ಆಕಾರದಲ್ಲಿದ್ದು, ನಾಗಾಲೋಟದ ಕುದುರೆಗಳನ್ನು ಹೊಂದಿದೆ.
  • ದೇವಾಲಯದ ವಾಸ್ತುಶಿಲ್ಪವು ಕಳಿಂಗ ಶೈಲಿಯ ವಾಸ್ತುಶಿಲ್ಪಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಹಿಂದೂ ಪುರಾಣಗಳ ದೃಶ್ಯಗಳನ್ನು ಚಿತ್ರಿಸುವ ವಿಸ್ತಾರವಾದ ಕಲ್ಲಿನ ಕೆತ್ತನೆಗಳನ್ನುಇಲ್ಲಿ ನೋಡಬಹುದು.
  • ಈ ದೇವಾಲಯವು UNESCO ವಿಶ್ವ ಪರಂಪರೆಯ ತಾಣವಾಗಿದೆ ಮತ್ತು ಹಿಂದೂಗಳ ಪ್ರಮುಖ ಯಾತ್ರಾ ಸ್ಥಳವಾಗಿದೆ ಮತ್ತು 10 ರೂಪಾಯಿಗಳ ಭಾರತೀಯ ಕರೆನ್ಸಿ ನೋಟಿನ ಹಿಮ್ಮುಖ ಭಾಗದಲ್ಲಿ ಚಿತ್ರಿಸಲಾಗಿದೆ.
  • 1676 ರಲ್ಲಿ ಯುರೋಪಿಯನ್ ನಾವಿಕರು ಈ ದೇವಾಲಯವನ್ನು “ಕಪ್ಪು ಪಗೋಡಾ” ಎಂದು ಕರೆಯುತ್ತಿದ್ದರು ಏಕೆಂದರೆ ಅದು ಕಪ್ಪು ಬಣ್ಣದಲ್ಲಿ ಕಾಣುವ ದೊಡ್ಡ ಶ್ರೇಣೀಕೃತ ಗೋಪುರದಂತೆ ಕಾಣುತ್ತದೆ. ಅದೇ ರೀತಿ, ಪುರಿಯ ಜಗನ್ನಾಥ ದೇವಾಲಯವನ್ನು “ವೈಟ್ ಪಗೋಡ” ಎಂದು ಕರೆಯಲಾಗುತ್ತಿತ್ತು.

ಪ್ರಮುಖ ಲಕ್ಷಣಗಳು:

  • ದೇವಾಲಯವು ಸೂರ್ಯ ದೇವರ ರಥವನ್ನು ಪ್ರತಿನಿಧಿಸುತ್ತದೆ, ಏಳು ಕುದುರೆಗಳಿಂದ ಎಳೆಯಲ್ಪಟ್ಟ ಹನ್ನೆರಡು ಜೋಡಿ ಚಕ್ರಗಳು ಸ್ವರ್ಗದಾದ್ಯಂತ ಅದರ ಚಲನೆಯನ್ನು ಪ್ರಚೋದಿಸುತ್ತದೆ.
  • ಈ ದೇವಾಲಯದ ಪ್ರಮುಖ ಆಕರ್ಷಣೆ ಎಂದರೆ ಅದು ಜಗತ್ತಿನ ಅತಿ ದೊಡ್ಡ, ಗಡಿಯಾರವನ್ನು ಹೋಲುವ ನೆರಳಿನ ಗಡಿಯಾರ (ಸನ್ ಡಯಲ್),   12 ಜೊತೆ ಚಕ್ರಗಳನ್ನು ಹೊಂದಿದ್ದು, ಸಮಯವನ್ನು ನಿಖರವಾಗಿ ಹೇಳುತ್ತದೆ.  ಸೂರ್ಯನ ಮೊದಲ ಕಿರಣಗಳು ದೇವಾಲಯದ ಮುಖ್ಯ ದ್ವಾರದ ಮೇಲೆ ಬೀಳುತ್ತದೆ.
  • ದೇವಾಲಯದಲ್ಲಿ ಬಳಕೆ ಮಾಡಲಾಗಿರುವ ಮ್ಯಾಗ್ನೆಟ್ ನ(ಅಯಸ್ಕಾಂತ)ದ ವ್ಯವಸ್ಥೆಯ ಮೂಲಕ ದೇವಾಲಯದಲ್ಲಿರುವ ಮುಖ್ಯ ವಿಗ್ರಹ ತೇಲುವಂತೆ ಮಾಡಲಾಗಿದೆ. ಇದರೊಂದಿಗೆ ದೇವಾಲಯದಲ್ಲಿನ ವಿಗ್ರಹವನ್ನು ಸೂರ್ಯ ರಶ್ಮಿ ನೇರವಾಗಿ ಚುಂಬಿಸುವಂತಹ ನಿಪುಣ ವಾಸ್ತುಶಿಲ್ಪವನ್ನು ಇಲ್ಲಿ ಕಾಣಬಹುದು

ನಿಮಗಿದು ತಿಳಿದಿರಲಿ

  • ಭಾರತದಲ್ಲಿರುವ ಕೆಲವೇ ಕೆಲವು ಸೂರ್ಯ ದೇವಾಲಯಗಳಲ್ಲಿ ಕೋರ್ನಾಕ್‌ ಆಲಯವು ಒಂದಾಗಿದೆ. ಗುಜರಾತ್‌ನ ಮೊಧೇರಾ ಸೂರ್ಯ ದೇವಾಲಯ ಮತ್ತು ಕಾಶ್ಮೀರದ ಮಾರ್ತಾಂಡ್ ಸೂರ್ಯ ದೇವಾಲಯಗಳು ಕೂಡ ಹೆಚ್ಚು ಜನಪ್ರಿಯವಾಗಿವೆ.