Published on: April 23, 2022

ಕ್ರಿಮಿನಲ್ ಪ್ರೊಸೀಜರ್ ಮಸೂದೆ

ಕ್ರಿಮಿನಲ್ ಪ್ರೊಸೀಜರ್ ಮಸೂದೆ

ಸುದ್ಧಿಯಲ್ಲಿ ಏಕಿದೆ?  ಅಪರಾಧಿಗಳ ಮತ್ತು ಆರೋಪಿಗಳ ದೈಹಿಕ ಹಾಗೂ ಜೈವಿಕ ಮಾದರಿಗಳನ್ನು ಪಡೆಯಲು ಪೊಲೀಸರಿಗೆ ಅಧಿಕಾರ ನೀಡುವ ಕ್ರಿಮಿನಲ್ ಪ್ರೊಸೀಜರ್ (ಗುರುತು) ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಹಾಕಿದ್ದಾರೆ.

ಹಿನ್ನಲೆ

  • ಕೇಂದ್ರ ಸರ್ಕಾರ ಈ ಕ್ರಿಮಿನಲ್ ಪ್ರೊಸೀಜರ್ ಐಡೆಂಟಿಫಿಕೇಷನ್ ಬಿಲ್-2022 ಅನ್ನು ಏಪ್ರಿಲ್ 4 ರಂದು ಲೋಕಸಭೆಯಲ್ಲಿ ಮತ್ತು ಏಪ್ರಿಲ್ 6 ರಂದು ರಾಜ್ಯಸಭೆಯಲ್ಲಿ ಅಂಗೀಕರಿಸಿತ್ತು. ಅದಕ್ಕೆ ರಾಷ್ಟ್ರಪತಿಗಳು ಏಪ್ರಿಲ್ 18 ರಂದು ಅಂಕಿತ ಹಾಕಿದ್ದು, ಮಸೂದೆ ಈಗ ಕಾನೂನು ರೂಪ ಪಡೆದುಕೊಂಡಿದೆ.

ಏನಿದು ಕ್ರಿಮಿನಲ್ ಪ್ರೊಸೀಜರ್ ಐಡೆಂಟಿಫಿಕೇಷನ್ ಬಿಲ್-2022?

  • ಈ ಹೊಸ ಕಾನೂನಿಂದ ಬಂಧಿತ ವ್ಯಕ್ತಿಗೆ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿಯನ್ನು ಅಂದರೆ ರೆಟಿನಾ, ಪಾದದ ಗುರುತುಗಳು ಮತ್ತು ಬ್ರೈನ್ ಮ್ಯಾಪಿಂಗ್‌ನಿಂದ ಮಾಹಿತಿ ಸಂಗ್ರಹಿಸುವ ಅಧಿಕಾರ ಪೊಲೀಸರಿಗೆ ದೊರೆಯಲಿದೆ.
  • ಬಂಧನಕ್ಕೊಳಗಾದ ಯಾವುದೇ ವ್ಯಕ್ತಿಯ ವೈಯಕ್ತಿಕ ಜೈವಿಕ ದತ್ತಾಂಶವನ್ನು ಸಂಗ್ರಹಿಸಲು ಈ ಮಸೂದೆ ಅನುಮತಿ ನೀಡಿದೆ. ಇದರಲ್ಲಿ ಬೆರಳಚ್ಚು, ರೆಟಿನಾ ಸ್ಕ್ಯಾನ್, ಭೌತಿಕ ಹಾಗೂ ಜೈವಿಕ ಮಾದರಿಗಳು ಮತ್ತು ಅವುಗಳ ವಿಶ್ಲೇಷಣೆ, ಸಹಿ, ಕೈಬರಹ ಅಥವಾ ಇತರ ರೀತಿಯ ಡೇಟಾವನ್ನು ಸಂಗ್ರಹಿಸಲು ಪೊಲೀಸರಿಗೆ ಅವಕಾಶ ನೀಡಲಾಗುತ್ತಿದೆ.
  • ಖೈದಿಗಳ ಗುರುತಿಸುವಿಕೆ ಕಾಯಿದೆ-1920ರ ಬದಲಾಗಿ ಕ್ರಿಮಿನಲ್ ಪ್ರೊಸೀಜರ್ (ಗುರುತು) ಕಾಯ್ದೆ ಜಾರಿಗೆ ತರಲಾಗಿದೆ. ಹಳೆ ಕಾಯ್ದೆ ಕೇವಲ ಶಿಕ್ಷೆಗೊಳಗಾದ ಅಥವಾ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ಬಗ್ಗೆ ಸೀಮಿತ ಮಾಹಿತಿಯನ್ನು ಮಾತ್ರ ಸಂಗ್ರಹಿಸುವ ಅವಕಾಶ ಇತ್ತು. ಅಂದರೆ ಕೇವಲ ಬೆರಳಚ್ಚು ಮತ್ತು ಹೆಜ್ಜೆ ಗುರುತುಗಳನ್ನು ಮಾತ್ರ ತೆಗೆದುಕೊಳ್ಳಲಾಗುತ್ತಿತ್ತು.